ಈಗಿನ ಕಾಲದಲ್ಲಿ ಮದುವೆ ಅನ್ನೋದು ಒಂದು ರೀತಿ ಭಯ ಹುಟ್ಟಿಸಿದೆ ಎಂದು ಹೇಳಿದರೆ ತಪ್ಪಲ್ಲ. ಈಗ ಜನರ ಮನಸ್ಥಿತಿ ಆ ರೀತಿ ಆಗಿದೆ. ಇಷ್ಟವಿಲ್ಲದೇ ಮದುವೆಯಾಗಿ, ಅದರಿಂದ ತೊಂದರೆ ಅನುಭವಿಸುವ ಹಾಗೆ ಆಗಿದೆ. ಹುಡುಗ ಅಥವಾ ಹುಡುಗಿಗೆ ಇಷ್ಟವಿಲ್ಲದೆ ಹೋದರು ಮದುವೆ ಮಾಡಿಸುವುದು ಎಲ್ಲಾ ಸಮಸ್ಯೆಗಳಿಗೂ ಕಾರಣ ಎಂದು ಹೇಳಬಹುದು. ಆದರೆ ಇದೆಲ್ಲವೂ ಕೂಡ ನಾವು ಅಂದುಕೊಂಡಷ್ಟು ಸುಲಭ ಖಂಡಿತ ಅಲ್ಲ. ತಂದೆ ತಾಯಿ ಒತ್ತಾಯ ಮಾಡಿ ಮದುವೆ ಮಾಡುವಂಥ ಕೆಲಸವನ್ನ ಸಹ ಮಾಡುತ್ತಾರೆ. ಇದೆಲ್ಲವೂ ಒಂದು ರೀತಿ ನಡೆಯುತ್ತಲೇ ಇರುವ ಘಟನೆ ಆಗಿದೆ. ಈಗ ಇದೇ ರೀತಿ ಒಂದು ಹನಿಮೂನ್ ಪ್ರಕರಣ ದಾಖಲಾಗಿದ್ದು, ಕನ್ನಡದ ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ನೆನಪಿಸುವ ಹಾಗಿದೆ ನಡೆದಿರುವ ಘಟನೆ. ಈ ಕೇಸ್ ಬಗ್ಗೆ ಫುಲ್ ಡೀಟೇಲ್ಸ್ ಇಲ್ಲಿದೆ..

ಈ ಘಟನೆ ನಡೆದಿರುವುದು ಮೇಘಾಲಯದಲ್ಲಿ, ಹೊಸದಾಗಿ ಮದುವೆ ಆಗಿರುವ ಜೋಡಿ ಹನಿಮೂನ್ ಗೆ ಹೋಗಿದ್ದ ವೇಳೆ ನಡೆದಿರುವ ಘಟನೆ ಇದಾಗಿದೆ. ಈ ಜೋಡಿಯ ಹೆಸರು ರಾಜ ರಘುವಂಶಿ ಮತ್ತು ಹುಡುಗಿಯ ಹೆಸರು ಸೋನಂ ರಘುವಂಶಿ. ಇವರಿಬ್ಬರದ್ದು ಅರೇಂಜ್ಡ್ ಮ್ಯಾರೇಜ್. ಇಬ್ಬರು ಮಧ್ಯಪ್ರದೇಶದ ಇಂದೋರ್ ನವರು. ಇತ್ತೀಚೆಗೆ, ಅಂದರೆ ಮೇ 11ರಂದು ಈ ಜೋಡಿಯ ಮದುವೆಯಾಗಿತ್ತು, ಬಳಿಕ ಮೇ 20ರಂದು ಈ ಜೋಡಿ ಹನಿಮೂನ್ ಗಾಗಿ ಮೇಘಾಲಯಕ್ಕೆ ತೆರಳಿದ್ದರು. ಅಲ್ಲಿಯೇ ಒಂದಷ್ಟು ದಿವಸ ಚೆನ್ನಾಗಿರುವ ಪ್ಲಾನ್ ಇತ್ತು. ಎಲ್ಲವೂ ಚೆನ್ನಾಗಿಯೇ ಇದೆ, ಇಬ್ಬರೂ ಚೆನ್ನಾಗಿಯೇ ಇದ್ದಾರೆ ಎಂದುಕೊಳ್ಳುವಷ್ಟರಲ್ಲೇ, ಯಾರು ಊಹಿಸದ ಘಟನೆ ನಡೆದು ಹೋಗಿದೆ. ಜೂನ್ 2ರಂದು ರಾಜ ರಘುವಂಶಿ ಮೃ*ತದೇಹ ಪತ್ತೆಯಾಗಿದೆ.
ಮೇಘಾಲಯದ ವೈಸಾವ್ಡಾಂಗ್ ಫಾಲ್ಸ್ ಹತ್ತಿರದ ಪಾರ್ಕಿಂಗ್ ಬಳಿ ಇರುವ ಕಂದಕದಲ್ಲಿ ರಾಜ ರಘುವಂಶಿ ಮೃ*ತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತನ ದೇಹ ಸಿಕ್ಕಿದ ಬಳಿಕ, ಪತ್ನಿ ಸೋನಂ ಕೂಡ ನಾಪತ್ತೆ ಆಗಿದ್ದಳು. ಎಲ್ಲರೂ ಅಂದುಕೊಂಡಿದ್ದು ಬಹುಶಃ ಆಕೆಯನ್ನು ಯಾರಾದರೂ ಕಿಡಿಗೇಡಿಗಳು ಕಿಡ್ನ್ಯಾಪ್ ಮಾಡಿರಬಹುದು ಎಂದು ಎಲ್ಲರೂ ಆತಂಕದಲ್ಲಿ ಇದ್ದರು, ಆದರೆ ನಂತರ ಅಸಲಿ ವಿಚಾರ ಏನು ಎನ್ನುವುದು ಗೊತ್ತಾಗಿದೆ. ಗಂಡನನ್ನು ಮುಗಿಸಲು ಆಕೆಯೇ ಮಾಡಿದ ಪ್ಲಾನ್ ಇದು ಎಂದು ತಿಳಿದುಬಂದಿದ್ದು, ಸೋನಂ ಅಲ್ಲಿಂದ ಎಸ್ಕೇಪ್ ಆಗಿದ್ದರು. ಆಕೆ ಸುಪಾರಿ ಕೊಟ್ಟಿದ್ದಳು, ಬಂದವರು ಆಕೆಯ ಗಂಡನನ್ನು ಮುಗಿಸಿದ್ದರು. ನಂತರ ಆಕೆ ಎಸ್ಕೇಪ್ ಆಗಿದ್ದಳು. ಬಳಿಕ ಪೊಲೀಸರು ಈ ಕೇಸ್ ನ ಜಾಡು ಕಂಡುಹಿಡಿದರು.

ಅಸಲಿ ವಿಷಯ ಗೊತ್ತಾಗುವ ವೇಳೆಗೆ ಸೋನಂ ತಾನಾಗಿಯೇ ಪೊಲೀಸರ ಬಳಿ ಬಂದು, ಶರಣಾಗಿದ್ದಳು. ತನ್ನ ತಪ್ಪನ್ನು ಒಪ್ಪಿಕೊಂಡಿದ್ದಳು. ಈ ಘಟನೆಯನ್ನು ನೋಡಿದರೆ, ಕನ್ನಡದ ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ನೆನಪಾಗುತ್ತದೆ. ಈ ಸಿನಿಮಾದಲ್ಲಿ ಕೂಡ ಕಥೆ ಈ ರೀತಿ ಇತ್ತು. ನಾಗತಿಹಳ್ಳಿ ಚಂದ್ರಶೇಖರ್ ಅವರು ಬಾ ನಲ್ಲೆ ಮಧುಚಂದ್ರಕೆ ಹೆಸರಿನಲ್ಲಿ ಒಂದು ಕಾದಂಬರಿ ಬರೆದಿದ್ದರು, ಬಳಿಕ ಅದೇ ಕಾದಂಬರಿಯನ್ನು ಸಿನಿಮಾ ಮಾಡಿದರು. ಈ ಸಿನಿಮಾವನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರೇ ನಿರ್ದೇಶನ ಮಾಡಿದರು. ಕೆ. ಶಿವರಾಂ ಅವರು ಮತ್ತು ನಂದಿನಿ ಅವರು ನಾಯಕ ಮತ್ತು ನಾಯಕಿ ಆಗಿದ್ದರು. ಈ ಸಿನಿಮಾದಲ್ಲಿ ಕೂಡ ಅದೇ ರೀತಿ, ನಾಯಕ ವಿವೇಕ್, ನಾಯಕಿ ಪ್ರೀತಿ. ವಿವೇಕ್ ಗೆ ಪ್ರೀತಿ ಮೇಲೆ ಬಹಳ ಪ್ರೇಮ ಇರುತ್ತದೆ. ಆಕೆಯನ್ನು ಪ್ರೀತಿಸಿ ಮದುವೆಯಾಗುತ್ತಾನೆ.
ಇಬ್ಬರು ಕಾಶ್ಮೀರಕ್ಕೆ ಹನಿಮೂನ್ ಗೆ ಹೋಗುತ್ತಾರೆ. ಆದರೆ ಅಲ್ಲೇ ಆಕೆಯನ್ನು ಪ್ಲಾನ್ ಮಾಡಿ ಮುಗಿಸಿ, ವಾಪಸ್ ತನ್ನ ಊರಿಗೆ ಬರುತ್ತಾನೆ ವಿವೇಕ್. ನಂತರ ಏನೂ ನಡೆದೇ ಇಲ್ಲ ಎನ್ನುವಂತೆ ಇರುತ್ತಾನೆ. ಪೊಲೀಸರು ಕೇಸ್ ತನಿಖೆ ಮಾಡುವಾಗ, ಒಂದೇ ಒಂದು ಕೆಲಸದಿಂದ ಕಂಡು ಹಿಡಿಯುತ್ತಾರೆ. ವಿವೇಕ್ ಹನಿಮೂನ್ ಟಿಕೆಟ್ ಅನ್ನು ಬುಕ್ ಮಾಡಿಸಿರುತ್ತಾನೆ. ಹೋಗುವಾಗ ಎರಡು ಟಿಕೆಟ್, ಆದರೆ ಬರುವಾಗ 1 ಟಿಕೆಟ್ ಮಾತ್ರ ಬುಕ್ ಮಾಡಿಸಿರುತ್ತಾರೆ. ಇದರಿಂದ ಪೊಲೀಸರಿಗೆ ಗೊತ್ತಾಗೋದು, ವಿವೇಕ್ ಪ್ಲಾನ್ ಮಾಡಿ ಈ ಕೆಲಸ ಮಾಡಿದ್ದಾನೆ ಎಂದು. ವಿವೇಕ್ ಆ ರೀತಿ ಮಾಡುವುದು ಯಾಕೆ ಎಂದರೆ, ತಾನು ಪ್ರೀತಿಸಿ, ಬಹಳ ಇಷ್ಟಪಟ್ಟು ಮದುವೆಯಾದ ಹುಡುಗಿಗೆಗೆ ಬೇರೊಬ್ಬರ ಜೊತೆಗೆ ಸಂಬಂಧ ಇರುತ್ತದೆ ಎಂದು.

ಇದೊಂದು ರೋಚಕ ಸಿನಿಮಾ ಕಥೆ, ಅದ್ಭುತವಾದ ಟ್ವಿಸ್ಟ್ ಗಳನ್ನು ಹೊಂದಿದ್ದ ಕಥೆ. ಸಿನಿಮಾ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಹನಿಮೂನ್ ಕೇಸ್ ನಲ್ಲಿ ಸಹ ಇದೇ ರೀತಿ, ಆದರೆ ಸ್ವಲ್ಪ ಬದಲಾವಣೆ ಆಗಿದೆ. ಇಲ್ಲಿ ಪತ್ನಿಯೇ ಗಂಡನನ್ನು ಸುಪಾರಿ ಕೊಟ್ಟು ಮುಗಿಸಿದ್ದಾಳೆ. ಹುಡುಗನ ತಾಯಿಯನ್ನು ವಿಚಾರಿಸಿದಾಗ, ಅವರು ಚೆಕ್ ಮಾಡಿ ತಿಳಿಸಿರುವುದು ಏನು ಎಂದರೆ, ಇಲ್ಲಿ ಕೂಡ ರಿಟರ್ನ್ ಟಿಕೆಟ್ ಬುಕ್ ಆಗಿರಲಿಲ್ಲ ಎಂದು. ಹಾಗೆಯೇ ಇಲ್ಲಿ ಸೋನಂ ಗೆ ಒಬ್ಬ ಬಾಯ್ ಫ್ರೆಂಡ್ ಇದ್ದ, ಆತನ ಹೆಸರು ರಾಜ್ ಕುಶ್ವಾಕ್, ಅವನೇ ಇದನ್ನೆಲ್ಲ ಪ್ಲಾನ್ ಮಾಡಿರುವ ವ್ಯಕ್ತಿ ಎಂದು ತಿಳಿದುಬಂದಿದೆ. ಈ ಕೇಸ್ ನಲ್ಲಿ ಕೂಡ ಸಿನಿಮಾ ಥರವೇ ದೊಡ್ಡ ದೊಡ್ಡ ಟ್ವಿಸ್ಟ್ ಗಳು ಕಾಣ ಸಿಗುತ್ತಿದೆ. ಈ ಕೇಸ್ ಬೇಧಿಸಿದ ಪೊಲೀಸರಿಗೆ ಹ್ಯಾಟ್ಸ್ ಆಫ್ ಹೇಳಬೇಕು.
ಇಂಥ ಕೇಸ್ ಗಳನ್ನ ನೋಡಿದಾಗ ಅನ್ನಿಸೋದು ಒಂದೇ.. ತಂದೆ ತಾಯಿಯರು ತಮ್ಮ ಮಕ್ಕಳಿಗೆ ಮದುವೆ ಮಾಡುವುದಕ್ಕಿಂತ ಮೊದಲು ಅವರಿಗೆ ಮದುವೆ ಇಷ್ಟ ಇದೆಯೋ, ಇಲ್ಲವೋ ಎನ್ನುವುದನ್ನ ಅರ್ಥ ಮಾಡಿಕೊಂಡು, ತಿಳಿದುಕೊಂಡು ಮುಂದುವರಿಯಬೇಕು.. ಇಲ್ಲದಿದ್ದರೆ ಪ್ರಾಣಕ್ಕೆ ಸಂಚಕಾರ ಬರಬಹುದು. ಇತ್ತ ಸೋನಂ ತಂದೆ ತಾಯಿ ತಮ್ಮ ಮಗಳು ಏನೂ ಮಾಡಿಲ್ಲ ಎನ್ನುತ್ತಿದ್ದಾರೆ. ಈ ಕೇಸ್ ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪುತ್ತದೆ ಎಂದು ಕಾದು ನೋಡಬೇಕಿದೆ.



