ಜೀವನದಲ್ಲಿ ಏನಾದರೂ ಕಷ್ಟಗಳು ಬಂದರೆ, ಮನಸ್ಸಿಗೆ ನೆಮ್ಮದಿ ಇಲ್ಲವೆಂದರೆ ಬಹಳಷ್ಟು ಜನರು ದೇವರೆ ಮೊರೆ ಹೋಗುತ್ತಾರೆ. ದೇವಸ್ಥಾನಕ್ಕೆ ತೆರಳಿ ಕಷ್ಟಗಳನ್ನು ಪರಿಹರಿಸುವಂತೆ ಪ್ರಾರ್ಥಿಸಿ ಪೂಜೆ ಮಾಡುತ್ತಾರೆ. ಮದುವೆ ನಿಶ್ಚಯವಾದ ಜೋಡಿ ಕೂಡಾ ಮೊದಲ ಆಹ್ವಾನ ಪತ್ರಿಕೆಯನ್ನು ದೇವಸ್ಥಾನಕ್ಕೆ ಕಳಿಸಿ ದೇವರ ಆಶೀರ್ವಾದ ಪಡೆಯುತ್ತಾರೆ. ನಮ್ಮ ವೈವಾಹಿಕ ಜೀವನ ಸುಖ, ಸಂತೋಷದಿಂದ ಕೂಡಿರಲಿ ಎಂದು ಪ್ರಾರ್ಥಿಸುತ್ತಾರೆ. ಒಟ್ಟಿಗೆ ಕುಟುಂಬದೊಂದಿಗೆ ದೇವಸ್ಥಾನಕ್ಕೆ ಹೋಗಿ ಬರುತ್ತಾರೆ. ಹಾಗೇ ಪ್ರೇಮಿಗಳು ಕೂಡಾ ನಮ್ಮ ಪ್ರೀತಿ ಸಕ್ಸಸ್ ಆಗಲಿ ಎಂದು ದೇವರ ಮೊರೆ ಹೋಗುತ್ತಾರೆ. ಆದರೆ ಮದುವೆ ಗೊತ್ತಾಗಿರುವ ಜೋಡಿ ಈ ದೇವಸ್ಥಾನಕ್ಕೆ ಒಟ್ಟಿಗೆ ಹೋದರೆ ಅವರ ನಡುವೆ ಬಿರುಕು ಉಂಟಾಗಿ ದೂರವಾಗುತ್ತಾರಂತೆ. ಯಾವುದು ಆ ದೇವಸ್ಥಾನ? ಇದರ ಹಿಂದಿನ ಕಾರಣ ಏನು? ಇಲ್ಲಿದೆ ಮಾಹಿತಿ.
ಒಡಿಶಾದ ಪುರಿ ದೇವಸ್ಥಾನದ ಹೆಸರನ್ನು ಎಲ್ಲರೂ ಕೇಳಿದ್ದೇವೆ. ಈ ದೇವಸ್ಥಾನದಲ್ಲಿ ಜಗನ್ನಾಥ, ಸುಭದ್ರಾ, ಬಲಭದ್ರ ಮೂವರನ್ನೂ ಪೂಜಿಸಲಾಗುತ್ತದೆ. ಪ್ರತಿ ವರ್ಷ ಅದ್ದೂರಿಯಾಗಿ ಜರುಗುವ ರಥಯಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿ ಜಗನ್ನಾಥನ ಕೃಪೆಗೆ ಒಳಗಾಗುತ್ತಾರೆ. ಈ ಬಾರಿ ಜುಲೈನಲ್ಲಿ ರಥಯಾತ್ರೆ ಆಯೋಜಿಸಲಾಗಿತ್ತು. ಈ ಬಾರಿ ಕೂಡಾ ಭಕ್ತರು ರಥಯಾತ್ರೆಯಲ್ಲಿ ಪಾಲ್ಗೊಂಡು ಜಗನ್ನಾಥನ ದರ್ಶನ ಪಡೆದಿದ್ದರು. ಪುರಿ ಜಗನ್ನಾಥ ದೇವಾಲಯ ರಥಯಾತ್ರೆಗೆ ಮಾತ್ರವಲ್ಲ ನಿಗೂಢತೆಗಳಿಂದಲೇ ಖ್ಯಾತಿ ಪಡೆದಿದೆ. ಈ ದೇವಸ್ಥಾನವನ್ನು ನಿರ್ಮಾಣ ಮಾಡಿರುವ ರೀತಿ ವಿಜ್ಞಾನಿಗಳಿಗೂ ಆಶ್ಚರ್ಯ ಉಂಟು ಮಾಡುವ ರೀತಿಯಲ್ಲಿದೆ. ಇಲ್ಲಿ ಭಕ್ತರಿಗೆ ಪ್ರಸಾದ ತಯಾರಿಸುವ ರೀತಿ, ದೇವಸ್ಥಾನದ ಮೇಲ್ಭಾಗದಲ್ಲಿರುವ ಸುದರ್ಶನ ಚಕ್ರ, ಪಕ್ಕದಲ್ಲೇ ಸಮುದ್ರ ಇದ್ದರೂ ದೇವಸ್ಥಾನದ ಒಳಗೆ ಕೇಳದ ಸಮುದ್ರದ ಅಲೆ, ಮೊರೆತದ ಸದ್ದು, ಪ್ರವೇಶ ದ್ವಾರದ ಶಬ್ದ ತರಂಗಗಳು, ಭೂಮಿ ಮೇಲೆ ನೆರಳೇ ಬೀಳದ ದೇವಸ್ಥಾನದ ಗೋಪುರ ಹೀಗೆ ಅನೇಕ ನಿಗೂಢ ವಿಚಾರಗಳನ್ನು ಈ ದೇವಸ್ಥಾನದಲ್ಲಿ ನೋಡಬಹುದು.

ಆದರೆ ಮದುವೆ ಆಗದ ಜೋಡಿ ಈ ದೇವಸ್ಥಾನವನ್ನು ಪ್ರವೇಶಿಸಿದರೆ ಅವರಿಗೆ ಜೀವನ ಪೂರ್ತಿ ಒಬ್ಬರಿಗೊಬ್ಬರ ಪ್ರೀತಿ ಸಿಗುವುದಿಲ್ಲವಂತೆ. ಇದರ ಹಿಂದೆ ಒಂದು ಕಥೆ ಇದೆ. ಒಮ್ಮೆ ರಾಧಾ ರಾಣಿ ಈ ದೇವಸ್ಥಾನಕ್ಕೆ ಹೋಗುತ್ತಾಳೆ. ಆದರೆ ಪ್ರವೇಶದ್ವಾರದಲ್ಲಿ ಅರ್ಚಕರು ರಾಧಾ ರಾಣಿಯನ್ನು ತಡೆದು ದೇವಸ್ಥಾನಕ್ಕೆ ನಿನಗೆ ಪ್ರವೇಶವಿಲ್ಲ ಎಂದು ಹೇಳುತ್ತಾರೆ. ಈ ಮಾತನಿಂದ ರಾಧಾಗೆ ಕೋಪವುಂಟಾಗುತ್ತದೆ. ಕಾರಣ ಏನು ಎಂದು ಕೇಳಿದಾಗ, ನೀನು ಶ್ರೀಕೃಷ್ಣನ ಪ್ರೇಯಸಿ, ಹೆಂಡತಿ ಅಲ್ಲ. ಆದ್ದರಿಂದ ನಿನಗೆ ಒಳಗೆ ಪ್ರವೇಶವಿಲ್ಲ ಎನ್ನುತ್ತಾನೆ. ಇದಕ್ಕೆ ಸಿಟ್ಟಾದ ರಾಧಾ ರಾಣಿ, ಹಾಗಾದರೆ ಇನ್ಮುಂದೆ ಮದುವೆ ಗೊತ್ತಾಗಿರುವ ಜೋಡಿ ಈ ದೇವಾಲಯವನ್ನು ಪ್ರವೇಶಿಸಿದರೆ ಅವರಿಗೆ ಜೀವನ ಪೂರ್ತಿ ಒಬ್ಬರ ಪ್ರೀತಿ ಮತ್ತೊಬ್ಬರಿಗೆ ಸಿಗುವುದಿಲ್ಲ ಎಂದು ಶಾಪ ನೀಡುತ್ತಾಳೆ. ಅಂದಿನಿಂದ ಮದುವೆ ಗೊತ್ತಾಗಿರುವ ಜೋಡಿ ಈ ದೇವಸ್ಥಾನಕ್ಕೆ ಬರಲು ಹೆದರುತ್ತಾರೆ.
ಈ ದೇವಸ್ಥಾನದಲ್ಲಿ ಪ್ರಸಾದ ತಯಾರಿಸುವಾಗ ಯಾವುದೇ ಕಾರಣಕ್ಕೂ ಆಲೂಗಡ್ಡೆ, ಟೊಮೆಟೋ, ಹೂಕೋಸು, ಎಲೆಕೋಸು ಬಳಸಲಾಗುವುದಿಲ್ಲವಂತೆ, ಅಡುಗೆ ಮಾಡುವಾಗ ದೊಡ್ಡ ದೊಡ್ಡ ಪಾತ್ರೆಗಳನ್ನು ಒಲೆ ಮೇಲೆ ಇಡದೆ ಒಂದು ಮಡಿಕೆ ಮೇಲೆ ಮತ್ತೊಂದು ಮಡಿಕೆ ಇಡುತ್ತಾರೆ. ಹೀಗೆ ಒಟ್ಟು 7 ಮಣ್ಣಿನ ಮಡಿಕೆಗಳನ್ನು ಇಟ್ಟು ಸೌದೆ ಒಲೆ ಬಳಸಿ ಪ್ರಸಾದ ತಯಾರಿಸಲಾಗುತ್ತದೆ. ಇಲ್ಲಿನ ಅಡುಗೆಯನ್ನು ಸ್ವತಃ ಲಕ್ಷ್ಮೀದೇವಿಯೇ ನೋಡಿಕೊಳ್ಳುವುದರಿಂದ ಪ್ರಸಾದ ಬಹಳ ರುಚಿಯಾಗಿರುತ್ತದೆ ಹಾಗೂ ಒಂದು ದಿನವೂ ರುಚಿಯಲ್ಲಿ ವ್ಯತ್ಯಾಸವಾಗುವುದೇ ಇಲ್ಲವಂತೆ.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಶಾಸ್ತ್ರ, ಪುರಾಣ ಕಥೆಗಳನ್ನು ಆಧರಿಸಿದ್ದು, ನಿಮ್ಮ ನಂಬಿಕೆ, ವಿವೇಚನೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ.