ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಸಾವು ಎಲ್ಲೆಡೆ ಸುದ್ದಿಯಲ್ಲಿದೆ. ಕುಟುಂಬಸ್ಥರನ್ನು, ಅಭಿಮಾನಿಗಳನ್ನು ಜೊತೆಗೆ ಕನ್ನಡ ಚಿತ್ರರಂಗವನ್ನು ಸ್ಪಂದನಾ ಸಾವು ಕಾಡುತ್ತಿದೆ. ಸ್ಪಂದನಾ ಅವರ ಸ್ನೇಹಿತರು, ಒಡನಾಡಿಗಳು ಅವರ ಒಡನಾಟದ ಬಗ್ಗೆ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದು, ಇದೀಗ ಸೃಜನ್ ಲೋಕೇಶ್ ಈ ಬಗ್ಗೆ ಮಾತನಾಡಿದ್ದಾರೆ.

ಸ್ಪಂದನಾ ಬಗ್ಗೆ ಮಾತನಾಡಿರುವ ಸೃಜನ್, ‘ಸ್ಪಂದನಾ ಹಾಗೂ ನನ್ನದು ಉತ್ತಮವಾದ ಸಂಬಂಧ. ಚಿಕ್ಕಂದಿನಿಂದಲೇ ನಾವಿಬ್ಬರು ಪರಿಚಯಸ್ಥರು. ನಾವು ಸಿಕ್ಕಾಗೆಲ್ಲ ಗಲಾಟೆ ಮಾಡುತ್ತಿದ್ದೆವು. ನಮ್ಮ ಗಲಾಟೆ ಕಂಡು ವಿಜಯ ರಾಘವೇಂದ್ರ ‘ಚಿಕ್ಕ ಮಕ್ಕಳ ತರ ಆಡ್ತೀರಲ್ಲಾ’ ಎಂದು ಚೇಡಿಸುತ್ತಿದ್ದ. ಸ್ಪಂದನಾ ಹಾಗೂ ವಿಜಯ್ ಜೊತೆ ನಾನು ಸಾಕಷ್ಟು ಸಮಯ ಕಳೆದಿದ್ದೇನೆ, ಎಂಜಾಯ್ ಮಾಡಿದ್ದೇನೆ’ ಎಂದಿದ್ದಾರೆ.
ಮಾತು ಮುಂದುವರೆಸಿರುವ ಸೃಜನ್, ‘ಸ್ಪಂದನಾ ಸಾವಿನ ವಿಚಾರ ತಿಳಿದಾಗ ಶಾಕ್ ಆಗಿತ್ತು. ಸುಧಾರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಯಿತು. ಆಕೆಗೆ ಪ್ರೊಡಕ್ಷನ್ಸ ಹೌಸ್, ಧಾರವಾಹಿ, ರಿಯಾಲಿಟಿ ಶೋ ಮಾಡಬೇಕು ಎನ್ನುವ ಕನಸಿತ್ತು.ಇದೀಗ ಆಕೆಯನ್ನು ದಿಢೀರ್ ಆಗಿ ಕಳೆದುಕೊಂಡಿರುವುದು ಅತೀವ ನೋವು ತಂದಿದೆ.
ನನ್ನ ಮತ್ತು ಸ್ಪಂದನಾ ಹುಟ್ಟುಹಬ್ಬ ಒಂದೇ ದಿನ. ಜೀವನದಿಲ್ಲಿ ವಿಶ್ ಮಾಡಿದಾಗ ‘ವಿಶ್ ಯು ಸೇಮ್’ ಅನ್ನಲು ಇದ್ದ ಏಕೈಕ ವ್ಯಕ್ತಿ ಅಂದರೆ ಅದು ಸ್ಪಂದನಾ. ಆದರೆ ಇನ್ನು ಮುಂದೆ ಗಲಾಟೆ ಮಾಡಲು, ವಿಶ್ ಮಾಡಲು ಸ್ಪಂದನಾ ಅವರಂತ ಒಳ್ಳೆಯ ಗೆಳತಿ ಇಲ್ಲವಲ್ಲಾ ಎಂಬುದನ್ನು ನೆನೆದಾಗ ಬಹಳಷ್ಟು ಕಷ್ಟವಾಗುತ್ತಿದೆ. ಚಿತ್ರರಂಗದಲ್ಲಿ ಪದೇ ಪದೇ ಇಂತಹ ಅನಿರೀಕ್ಷಿತ ಸಾವುಗಳಾಗುತ್ತಿರುವುದು ನೋವಾಗಿದೆ’ ಎಂದು ಸೃಜನ್ ಹೇಳಿಕೊಂಡಿದ್ದಾರೆ.