ಸಿನಿಮಾ ನಟನಟಿಯರು ಎಂದರೆ ಜನರಿಗೆ ಎಲ್ಲಿಲ್ಲದ ಪ್ರೀತಿ. ಸಾಕಷ್ಟು ಜನ ಸೆಲೆಬ್ರಿಟಿಗಳನ್ನು ಭೇಟಿಯಾಗಬೇಕು, ಮಾತನಾಡಬೇಕು, ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು ಎಂದೆಲ್ಲ ಕನಸು ಕಾಣುತ್ತಾರೆ. ಆದರೆ ಅಚ್ಚುಮೆಚ್ಚಿನ ನಟರು ದಿಢೀರ್ ಆಗಿ ಸಾವಿಗೀಡಾದ ಬಹಳಷ್ಟು ನೋವಾಗುತ್ತದೆ. ಇತ್ತೀಚೆಗಂತೂ ಸಾಕಷ್ಟು ಸೆಲೆಬ್ರಿಟಿಗಳು ಹೃದಯಾಘಾತದಿಂದ ಚಿಕ್ಕ ವಯಸ್ಸಿನಲ್ಲೇ ನಿಧನರಾಗುತ್ತಿದ್ದಾರೆ. ಹೃದಯಾಘಾತದಿಂದ ಮೃತಪಟ್ಟ ಪ್ರಸಿದ್ಧ ನಟ-ನಟಿಯರು ಯಾರೆಲ್ಲ? ಎಂಬ ಮಾಹಿತಿ ಇಲ್ಲಿದೆ.

ಪುನೀತ್ ರಾಜ್ಕುಮಾರ್:
ಕನ್ನಡ ಮಾತ್ರವಲ್ಲದೇ, ಇಡೀ ಭಾರತೀಯ ಚಿತ್ರರಂಗಕ್ಕೆ ದೊಡ್ಡ ಶಾಕ್ ನೀಡಿದ್ದು ಕನ್ನಡ ಚಿತ್ರರಂಗದ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ದಿಢೀರ್ ಸಾವು. 2021ರ ಅಕ್ಟೋಬರ್ನಲ್ಲಿ ಪುನೀತ್ ಹೃದಯಾಘಾತದಿಂದ 46ನೇ ವಯಸ್ಸಿನಲ್ಲಿ ನಿಧನರಾದರು. ಜಿಮ್, ವರ್ಕೌಟ್ ಮಾಡುತ್ತಾ, ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಂಡು ಸ್ಪೂರ್ತಿ ಚಿಲುಮೆಯಂತಿದ್ದ ಅಪ್ಪು ಅಗಲುವಿಗೆ ಚಿತ್ರರಂಗಕ್ಕೆ ಬಹುದೊಡ್ಡ ನಷ್ಟವನ್ನುಂಟು ಮಾಡಿತು.

ಚಿರಂಜೀವಿ ಸರ್ಜಾ :
ಸರ್ಜಾ ಕುಟುಂಬದ ಕುಡಿ ಚಿರಂಜೀವಿ ಸರ್ಜಾ 2020ರ ಕೋವಿಡ್ ಸಮಯದಲ್ಲಿ ಹಠಾತ್ ಹೃದಯಾಘಾತದಿಂದ ನಿಧನರಾದರು. ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿದ್ದ ಇವರ ಸಾವಿಗೆ ಇಡೀ ರಾಜ್ಯವೇ ಕಂಬನಿ ಮಿಡಿದಿತ್ತು. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದ ಚಿರಂಜೀವಿ ಸರ್ಜಾ ಸಾವಿನಿಂದ ಅವರ ಕುಟುಂಬ ಹಾಗೂ ಆಪ್ತವಲಯ ಕಂಗಾಲಾಗಿತ್ತು.

ನಟ ನಿತಿನ್ ಗೋಪಿ :
ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರೊಂದಿಗೆ ಡ್ಯಾಡಿ ಸಿನಿಮಾದಲ್ಲಿ ಬಾಲನಟನಾಗಿ ನಟಿಸಿ ಖ್ಯಾತಿಗಳಿಸಿದ್ದ ನಟ ನಿತಿನ್ ಗೋಪಿ ಅನಂತರ ಸಿನಿಮಾ ಸೇರಿದಂತೆ ಹಲವು ಕಿರುತೆರೆ ಧಾರವಾಹಿಗಳಲ್ಲೂ ನಟಿಸಿದ್ದರು. ಆದರೆ 2023ರ ಜೂನ್ ನಲ್ಲಿ ಕೇವಲ 39ನೇ ಹೃದಯಾಘಾತದಿಂದ ನಿಧನರಾದರು. ಇದು ಕೂಡ ರಾಜ್ಯವನ್ನು ದುಃಖಕ್ಕೀಡು ಮಾಡಿತ್ತು.

ಸ್ಪಂದನಾ :
ಖ್ಯಾತ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಬ್ಯಾಂಕಾಕ್ ಪ್ರವಾಸದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದು ಇದೀಗ ಇಡೀ ರಾಜ್ಯವನ್ನು ಕಾಡುತ್ತಿದೆ. ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿದ್ದ ಸ್ಪಂದನಾ ಅವರ ದಿಢೀರ್ ಸಾವನ್ನು ಕುಟುಂಬ ಸೇರಿದಂತೆ ರಾಜ್ಯದ ಜನತೆಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಈ ರೀತಿ ಹಲವು ನಟ ನಟಿಯರು ಚಿಕ್ಕವಯಸ್ಸಿನಲ್ಲೇ ಹೃದಯಾಘಾತದಿಂದ ನಿಧನರಾಗುತ್ತಿರುವುದು ನೋವಿನ ಸಂಗತಿ.