ಇದು ಡಿಜಿಟಲ್ ಯುಗ. ಬೆರಳ ತುದಿಯಲ್ಲಿ ಮಾಹಿತಿ ಪಡೆಯಬಹುದು. ಬೇಕಾಗಿರುವುದನ್ನು ಕುಳಿತಲ್ಲಿ ಕೊಂಡುಕೊಳ್ಳಬಹುದು. ಹಾಗೆಯೇ, ಕ್ಷಣ ಮಾತ್ರದಲ್ಲಿ ಹಣ ಪಾವತಿಸಲೂ ಬಹುದು. ಇಷ್ಟೆಲ್ಲಾ ಸೌಲಭ್ಯಗಳಿದ್ದರು ಸಹ ಕೆಲವರು ಲಭ್ಯವಿರುವ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಹಿಂದೆ ಬೀಳುತ್ತಾರೆ. ಇದಕ್ಕೆ ಕಾರಣ ಅದನ್ನು ಬಳಸಲು ಬರುವುದಿಲ್ಲ ಎಂಬ ಮಾತು. ಹೌದು, ಎಲ್ಲೆಡೆಯೂ ಹಣ ಕೊಂಡೊಯ್ಯಲು ಸಾಧ್ಯವಿಲ್ಲ ಎನ್ನುವುದಕ್ಕೆ ಸುಲಭ ಪರಿಹಾರವಾಗಿ ಯುಪಿಐ ಪೇಮೆಂಟ್ ಆಪ್ಶನ್ ಜಾರಿಯಲ್ಲಿದೆ. ಆದರೆ, ಓದಲು ಹಾಗೂ ಬರೆಯಲು ಬಾರದ ಕೆಲವು ಮಂದಿ ಈ ಸೌಲಭ್ಯವನ್ನು ಬಳಸಿಕೊಳ್ಳುವುದರಿಂದ ಹಿಂದೆ ಉಳಿದಿದ್ದಾರೆ ಎಂದರೆ ತಪ್ಪಿಲ್ಲ. ಆದರೀಗ ಇದಕ್ಕೆ ಪರಿಹಾರವಾಗಿ ಗೂಗಲ್ ಪೇ ಹೊಸ ವೈಶಿಷ್ಟ್ಯವೊಂದನ್ನು ಜಾರಿಗೆ ತರಲು ತಯಾರಿ ನಡೆಸಿದೆ. ಏನು ಎಂದು ಯೋಚಿಸುತ್ತೀದ್ದೀರಾ? ಕೆಳಗೆ ಆ ಕುರಿತ ಮಾಹಿತಿಯಿದೆ ಒಮ್ಮೆ ಕಣ್ಣಾಡಿಸಿ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂದರೆ ಕೃತಕ ಬುದ್ಧಿಮತ್ತೆ ಎಂಬ ಟ್ರೆಂಡಿಂಗ್ ಕಾನ್ಸೆಪ್ಟ್ ಇದೀಗ ಗೂಗಲ್ ಪೇ ಮೇಲು ತನ್ನ ಜಾದು ಪ್ರಾರಂಭಿಸಿದ್ದು, ಸದ್ಯದಲ್ಲಿಯೇ ಗೂಗಲ್ ಪೇನಲ್ಲಿ ಧ್ವನಿ ಮುಖೇನ ಹಣ ಪಾವತಿಸುವ ಹೊಸ ವಿಧಾನ ಜಾರಿಗೊಳ್ಳಲಿದೆ. ಈ ಮೂಲಕ ಗೂಗಲ್ ಪೇ ಮಾಡಲು ಹಿಂದೇಟಾಕುತ್ತಿದ್ದ ಅನಕ್ಷರಸ್ಥರು ಸಹ ದೈರ್ಯವಾಗಿ ಸುರಕ್ಷಿತ ಪಾವತಿಗಳನ್ನು ಮಾಡಬಹುದಾಗಿದೆ.
ಈ ಕುರಿತು ಭಾರತದಲ್ಲಿ ಗೂಗಲ್ ಪೇನ ಪ್ರಮುಖ ಉತ್ಪನ್ನ ನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಶರತ್ ಬುಲುಸು ಮಾಹಿತಿ ಹಂಚಿಕೊ0ಡಿದ್ದು, ಧ್ವನಿ ಆಜ್ಞೆಯ ಮೂಲಕ ಗೂಗಲ್ ಪೇನಲ್ಲಿ ಪಾವತಿ ಮಾಡಲು ಅನುಕೂಲವಾಗುವಂತೆ ಎಐ ತಂತ್ರಜ್ಞಾನ ತಯಾರುಗೊಳ್ಳುತ್ತಲ್ಲಿದೆ. ಮಾತನಾಡುವ ಮುಖೇನ ಪಾವತಿ ಮಾಡಲು ಎಲ್ಲರಿಗೂ ಸುಲಭವಾಗಲಿದ್ದು, ಈ ಮಹತ್ತರ ಬದಲಾವಣೆಯನ್ನು ಶೀಘ್ರದಲ್ಲಿ ಗೂಗಲ್ ಪೇನಲ್ಲಿ ಕಾಣಬಹದಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದಕ್ಕೆ ಪೂರಕವಾಗಿ, ಜನರು ತಮ್ಮ ಪ್ರಾದೇಶಿಕ ಭಾಷೆಗಳ ಮೂಲಕವೇ ಧ್ವನಿ ಆಜ್ಞೆ ಹೊರಡಿಸಿ ಪಾವತಿ ಮಾಡಲು ಅನುಕೂಲವಾಗುವಂತೆ ಗೂಗಲ್ ಸಂಸ್ಥೆಯು ಭಾಷಿನಿ ಎಐ ತಂತ್ರಜ್ಞಾನದ ಕುರಿತು ಕೇಂದ್ರ ಸರ್ಕಾರದೊಂದಿಗೆ ಕೆಲಸ ಮಾಡುತ್ತಿದೆ. ಇನ್ನೂ ಹೆಚ್ಚಾಗುತ್ತಿರುವ ಸೈಬರ್ ವಂಚನೆಯಂತಹ ಅಪರಾಧಗಳನ್ನು ತಡೆಯಲು ಸಹ ಗೂಗಲ್, ಮಷಿನ್ ಲರ್ನಿಂಗ್ ಹಾಗೂ ಕೃತಕ ಬುದ್ಧಿಮತ್ತೆ ಬಳಸಿಕೊಂಡು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ.
ಗೂಗಲ್ ಪೇಗೆ ಬೃಹತ್ ಮಾರುಕಟ್ಟೆ ಒದಗಿಸಿರುವ ಭಾರತ
ಅಮೇರಿಕ ಮೂಲದ ಗೂಗಲ್ ಸಂಸ್ಥೆಗೆ ಭಾರತ ದೊಡ್ಡ ಮಟ್ಟದ ಆನ್ಲೈನ್ ಮಾರುಕಟ್ಟೆಯಾಗಿದೆ. ಆದ್ದರಿಂದ ಭಾರತದ ಪ್ರಾದೇಶಿಕ ಭಾಷೆಗಳಲ್ಲಿಯೂ ಧ್ವನಿ ವೈಶಿಷ್ಟ್ಯತೆ ಜಾರಿಗೆ ತರಲು ಗೂಗಲ್ ತಯಾರಿ ನಡೆಸಿದೆ ಎಂದರೆ ಸುಳ್ಳಾಗುವುದಿಲ್ಲ. ಭಾರತೀಯರು ಆನ್ಲೈನ್ ಪೇಮೆಂಟ್ಗೆಂದು ಅತಿ ಹೆಚ್ಚಾಗಿ ಬಳಸುವುದು ಗೂಗಲ್ ಪೇ ಹಾಗೂ ಫೋನ್ ಪೇ ಗಳೆಂಬ ಎರಡು ಮಾಧ್ಯಮಗಳನ್ನು. ೨೦೨೪ರಲ್ಲಿ ಬಿಡುಗಡೆಗೊಂಡ ವರದಿಯ ಅನುಸಾರ ಭಾರತದಲ್ಲಿ ಯುಪಿಐ ಪೇಮೆಂಟ್ಗೆಂದು ಹೆಚ್ಚಾಗಿ ಬಳಸುವ ಆನ್ಲೈನ್ ವೇದಿಕೆಗಳ ಪೈಕಿ ಶೇ. ೩೭ರಷ್ಟು ಪಾಲು ಗೂಗಲ್ ಪೇಯದ್ದಾಗಿದ್ದರೆ, ಶೇ.೪೭.೮ರಷ್ಟು ಪಾಲು ಫೋನ್ ಪೇಯದ್ದಾಗಿದೆ. ಒಟ್ಟಾರೆ ಹೇಳುವುದಾದರೆ, ಭಾರತದ ಯುಪಿಐ ಮಾರುಕಟ್ಟೆಯಲ್ಲಿ ಶೇ.೮೦ರಷ್ಟು ಪಾಲನ್ನು ಈ ಎರಡು ಕಂಪನಿಗಳು ಹೊಂದಿವೆ.