ಸುನಕ್, ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಭಾಷಣದಲ್ಲಿ ಪವಿತ್ರ ಹಿಂದೂ ‘ಕಲವಾ’ ದಾರವನ್ನು ತೋರಿಸುವ ಮೂಲಕ ತಮ್ಮ ಧಾರ್ಮಿಕ ನಂಬಿಕೆಗಳನ್ನು ಪ್ರದರ್ಶಿಸಿದ್ದಾರೆ. ಹಿಂದೂ ಪರಂಪರೆಯನ್ನು ಸ್ವೀಕರಿಸಿರುವ ರಿಷಿ ಬಗ್ಗೆ ಪ್ರಶಂಸೆ ಜತೆ ಟೀಕೆಗಳೂ ಕೇಳಿ ಬರುತ್ತಿವೆ. ಈ ನಡುವೆಯೇ ರಿಷಿ ಸುನಕ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲು ಹಿಂದೂ ಸನ್ಯಾಸಿಯ ಆಶೀರ್ವಾದ ಪಡೆದಿದ್ದಾರೆ ಎಂಬ ಫೋಟೊ, ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಕಾವಿ ಧರಿಸಿದ ವ್ಯಕ್ತಿಯ ಮುಂದೆ ಸುನಕ್ ಮಂಡಿಯೂರಿ ಕುಳಿತಿರುವ ವಿಡಿಯೊ ಇದಾಗಿದ್ದು ಇದರಲ್ಲಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ವಿವಿಧ ಜನರೊಂದಿಗೆ ಸಂವಹನ ನಡೆಸುತ್ತಿರುವುದನ್ನು ಕಾಣಬಹುದು. ಕೆಲವರು ಕೇಸರಿ ಬಟ್ಟೆಯನ್ನು ಸಹ ಧರಿಸಿದ್ದರು. ಆದರೆ ಈ ವಿಡಿಯೊ ಹಳೇದು ಎಂದು ಫ್ಯಾಕ್ಟ್ ಚೆಕ್ ಮಾಡಿ ಇಂಡಿಯಾ ಟುಡೇ ವರದಿ ಮಾಡಿದೆ.
ಸುನಕ್ ಅವರ ಭಕ್ತಿವೇದಾಂತ ಮ್ಯಾನರ್ಗೆ ಭೇಟಿ ನೀಡಿದ ಚಿತ್ರಗಳನ್ನು ಆಗಸ್ಟ್ 18 ರಂದು ದೇವಸ್ಥಾನವು ತನ್ನ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದೆ. ಈ ಫೋಟೋಗಳಲ್ಲಿ, ವೈರಲ್ ವಿಡಿಯೊದಲ್ಲಿ ಕಂಡುಬರುವ ಅದೇ ಜನರು ಇದ್ದಾರೆ.
ಸುನಕ್ ಅವರು ಮಾಡಿದ ಇತ್ತೀಚಿನ ದೇವಾಲಯ ಭೇಟಿಗಳ ಬಗ್ಗೆ ಕೀವರ್ಡ್ ಹುಡುಕಾಡಿದಾಗ 2022 ಆಗಸ್ಟ್ 18 ರಂದು ಅವರು ಮಾಡಿದ ಟ್ವೀಟ್ ಸಿಕ್ಕಿದೆ. ಈ ಟ್ವೀಟ್ ಸುನಕ್ ಮತ್ತು ಅವರ ಪತ್ನಿ ಕೇಸರಿ ಶಾಲುಗಳನ್ನು ಧರಿಸಿರುವ ಫೋಟೊ ಇದೆ. ಈ ಟ್ವೀಟ್ನ ಪ್ರಕಾರ, ಜನ್ಮಾಷ್ಟಮಿಯ ಮೊದಲು ಭಕ್ತಿವೇದಾಂತ ಮನೋರ್ ದೇವಸ್ಥಾನಕ್ಕೆ ಸುನಕ್ ಭೇಟಿ ನೀಡಿದ ಚಿತ್ರವಾಗಿದೆ ಇದು. ಭಕ್ತಿವೇದಾಂತ ಮ್ಯಾನರ್ ಯುಕೆ ವ್ಯಾಟ್ಫೋರ್ಡ್ನಲ್ಲಿರುವ ಇಸ್ಕಾನ್ ದೇವಾಲಯವಾಗಿದೆ. ಅವರು ಅದೇ ಫೋಟೋವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.