ವಿಭಿನ್ನ ರೀತಿಯ ಧಾರಾವಾಹಿಗಳ ಜೊತೆಗೆ ವಿನೂತನ ರಿಯಾಲಿಟಿ ಶೋಗಳ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ವಾಹಿನಿಗಳ ಪೈಕಿ ಕಲರ್ಸ್ ಕನ್ನಡವೂ ಒಂದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ ದೃಷ್ಟಿಬೊಟ್ಟು ಕಿರುತೆರೆ ವೀಕ್ಷಕರನ್ನು ಸೆಳೆಯುತ್ತಿದೆ. ನಾಯಕ ದತ್ತಾಭಾಯ್ ಆಗಿ ಗುಳಿಕೆನ್ನೆಯ ಹುಡುಗ ವಿಜಯ್ ಸೂರ್ಯ ನಟಿಸುತ್ತಿದ್ದರೆ, ನಾಯಕಿ ದೃಷ್ಟಿಯಾಗಿ ಅರ್ಪಿತಾ ಮೋಹಿತೆ ಕಾಣಿಸಿಕೊಂಡಿದ್ದಾರೆ.

ಇನ್ನು ದೃಷ್ಟಿಬೊಟ್ಟು ಧಾರಾವಾಹಿಯಲ್ಲಿ ನಾಯಕ ದತ್ತಾಭಾಯ್ ಯ ಪ್ರಾಣಸ್ನೇಹಿತ ಭಜರಂಗಿ ಆಗಿ ನಟಿಸುತ್ತಿರುವ ಹ್ಯಾಂಡ್ ಸಮ್ ಹುಡುಗನ ಹೆಸರು ಸುಜಯ್ ಹೆಗಡೆ. ಭಜರಂಗಿ ಪಾತ್ರದ ಮೂಲಕ ಕಿರುತೆರೆಯಲ್ಲು ಬ್ಯುಸಿಯಾಗಿರುವ ಸುಜಯ್ ಹೆಗಡೆ ಎಂದಿಗೂ ನಟನಾಗಬೇಕು ಎಂದು ಬಯಸಿದವರಲ್ಲ. ಬಣ್ಣದ ಲೋಕದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಹಂಬಲವೂ ಇವರಿಗಿರಲಿಲ್ಲ. ಆದರೆ ಆಕಸ್ಮಿಕ ದೊರತಿರುವಂತಹ ಅವಕಾಶದಿಂದ ಇಂದು ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಂಡಿದ್ದಾರೆ ಸುಜಯ್ ಹೆಗಡೆ.
ಅಸಲಿಗೆ ಸುಜಯ್ ಅವರಿಗೆ ಆರಂಭದ ದಿನಗಳಲ್ಲಿ ನಟನೆ ಎಂದರೆ ಇಷ್ಟವಿರಲಿಲ್ಲ. ಮುಖ್ಯವಾಗಿ ಅವರಿಗೆ ಕೊಂಚ ಸ್ಟೇಜ್ ಫಿಯರ್ ಕೂಡಾ ಇತ್ತು. ಯಾರೋ ಒಬ್ಬರು ರೆಫರ್ ಮಾಡಿದರು ಎಂಬ ಕಾರಣಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ಆಡಿಶನ್ ಗೆ ಹೋಗಿದ್ದರು. ಅದು ಅವರ ಫಸ್ಟ್ ಆಡಿಶನ್ ಆಗಿತ್ತು. ಇನ್ನು ಸುಜಯ್ ಹೆಗಡೆ ಅವರ ತಂದೆಯ ಸ್ನೇಹಿತ ನಾಗರಾಜ್ ಉಪ್ಪುಂದ ಅವರು ಆಕಾಶದೀಪ ಧಾರಾವಾಹಿ ಡೈರೆಕ್ಟರ್ ಸಕ್ರೆಬೈಲು ಶ್ರೀನಿವಾಸ್ ಇಬ್ಬರೂ ಗೆಳೆಯರು. ನಾಗರಾಜ್ ಅವರು ಶ್ರೀನಿವಾಸ್ ಅವರಿಗೆ ಸುಜಯ್ ಅವರ ಪರಿಚಯವನ್ನು ಮಾಡಿಕೊಟ್ಟರು. ಸಕ್ರೆಬೈಲ್ ಶ್ರೀನಿವಾಸ್ ಅವರ “ಆಕಾಶದೀಪ” ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಸುಜಯ್ ಹೆಗಡೆ ನಂತರ ಹಿಂತಿರುಗಿ ನೋಡಿದ್ದಿಲ್ಲ.

ತದ ನಂತರ ‘ಗೋಕುಲದಲ್ಲಿ ಸೀತೆ’, ‘ಈ ಬಂಧನ’, ‘ಶನಿ’, ‘ಸತ್ಯಂ ಶಿವಂ ಸುಂದರಂ’ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ಸೀರಿಯಲ್ ಪ್ರಿಯರ ಮನ ಸೆಳೆದ ಸುಜಯ್ ಹೆಗಡೆ ನಂತರ ಭಡ್ತಿ ಪಡೆದುದು ನಾಯಕರಾಗಿ. ಹೌದು,
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಮನಸಾರೆ’ ಧಾರಾವಾಹಿಯಲ್ಲಿ ನಾಯಕ ಯುವರಾಜ್ ಆಗಿ ಕಾಣಿಸಿಕೊಂಡಿದ್ದರು ಸುಜಯ್ ಹೆಗಡೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಮನಸ್ಸೆಲ್ಲಾ ನೀನೆ’ ಧಾರಾವಾಹಿಯಲ್ಲಿಯೂ ನಾಯಕನಾಗಿ
ಅಭಿನಯಿಸಿರುವ ಸುಜಯ್ ಹೆಗಡೆ ಮುಂದೆ ಅದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ “ಕಥೆಯೊಂದು ಶುರುವಾಗಿದೆ” ಧಾರಾವಾಹಿಯಲ್ಲಿ ಯತಿರಾಜ್ ಬಹಾದ್ಧೂರ್ ಆಗಿ ಬಣ್ಣ ಹಚ್ಚಿದ್ದರು.
ನಟನೆಗೆ ಕಾಲಿಟ್ಟಿರುವುದು ನನಗೆ ಸಂತೋಷ ತಂದಿದೆ. ನಾನು ಏನೂ ಗೊತ್ತಿಲ್ಲದೇ ನಟನೆಗೆ ಕಾಲಿಟ್ಟೆ. ಇದರ ಜೊತೆಗೆ ಯಾವುದೇ ಒಂದು ರೀತಿಯ ಬ್ಯಾಕ್ ಗ್ರೌಂಡ್ ಇಲ್ಲದೇ ನಾನು ಈ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದೇನೆ. ಒಂದಾದ ಮೇಲೆ ಒಂದರಂತೆ ಅವಕಾಶಗಳನ್ನು ಕೂಡಾ ಪಡೆಯುತ್ತಿದ್ದೇನೆ. ನಾನಿಂದು ಪರಿಪೂರ್ಣ ನಟನಾಗಿ ಹೊರಹೊಮ್ಮಿದ್ದೇನೆ ಎಂದರೆ ಅದಕ್ಕೆ ಮನೆಯವರ ಪ್ರೋತ್ಸಾಹ, ಬೆಂಬಲವೇ ಮುಖ್ಯ ಕಾರಣ ಎಂದು ಹೇಳುತ್ತಾರೆ ಸುಜಯ್ ಹೆಗಡೆ.
ಸದ್ಯ ಭಜರಂಗಿಯಾಗಿ ಬ್ಯುಸಿಯಾಗಿರುವ ಸುಜಯ್ ಹೆಗಡೆ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ನಟನಾ ಛಾಪನ್ನು ಪಸರಿಸಿದ್ದಾರೆ.
ಮಾಣಿಕ್ಯ’, ‘ವಜ್ರಕಾಯ’, ‘ಮಿಸ್ಟರ್ ಎಲ್ಎಲ್ಬಿ’, ‘ಪ್ರೀತಿಯಲ್ಲಿ ಸಹಜ’ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.



