ಜಗತ್ತು ಬದಲಾವಣೆಯ ಪಥದಲ್ಲಿದೆ. ಡಿಜಿಟಲಿಕರಣ ವ್ಯಾಪಕವಾಗಿ ಮನುಕುಲವನ್ನು ಆವರಿಸುತ್ತಿದೆ. ಇದರೊಂದಿಗೆ ಎಲೆಕ್ಟ್ರಿಕ್ ವಾಹನಗಳು ನವಯುಗಕ್ಕೆ ಮುನ್ನುಡಿ ಬರೆಯುತ್ತಿದ್ದು, ಸದ್ದಿಲ್ಲದೇ ಇವುಗಳು ಇಂಧನ ಚಾಲಿತ ವಾಹನಗಳನ್ನು ಮೂಲೆ ಗುಂಪಾಗಿಸುತ್ತಿವೆ. ಸದ್ಯ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅತೀ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ಅಲ್ಲಿನ ಹೆದ್ದಾರಿಗಳನ್ನು ಆಳುತ್ತಿವೆ. ಇದೇ ಹೊತ್ತಿನಲ್ಲಿ ದೆಹಲಿ ಸಿ.ಎಂ. ಅರವಿಂದ್ ಕೇಜ್ರಿವಾಲ್ ‘ದೆಹಲಿ ಎಲೆಕ್ಟ್ರಿಕ್ ವಾಹನಗಳ ರಾಜಧಾನಿಯಾಗಲಿದೆ’ ಎಂದಿರು ಮಾತು ಸಾಕಷ್ಟು ಸಂಚಲನ ಸೃಷ್ಟಿಸಿದೆ.

ದಿನಗಳ ಹಿಂದಷ್ಟೇ, ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್ ಉದ್ಘಾಟಿಸಿ ಮಾದ್ಯಮ ಮಿತ್ರರೊಂದಿಗೆ ಮಾತಿಗಿಳಿದ ಅರವಿಂದ್ ಕೇಜ್ರಿವಾಲ್, ‘ ವರ್ಷಗಳ ಹಿಂದೆ 100 ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸುವ ಘೋಷಣೆ ಮಾಡಿದ್ದ ದೆಹಲಿ ಸರ್ಕಾರ ಇಂದು 42ನೇ ಸ್ಟೇಷನ್ ಉದ್ಘಾಟನೆ ಮಾಡುತ್ತಿದೆ. ಇದರೊಂದಿಗೆ ದೆಹಲಿಯಲ್ಲಿ ಒಟ್ಟಾರೆ 52 ಚಾರ್ಜಿಂಗ್ ಸ್ಟೇಷನ್ ಗಳು ಈಗಾಗಲೇ ಸ್ಥಾಪನೆಯಾಗಿದೆ. ಶೀಘ್ರದಲ್ಲೇ ಇನ್ನಷ್ಟು ಸ್ಟೇಷನ್ ಗಳನ್ನು ಸ್ಥಾಪಿಸಿ ನಾವು ಗುರಿ ತಲುಪುತ್ತೇವೆ’ ಎಂದಿದ್ದಾರೆ.
ಜೊತೆಗೆ ದೆಹಲಿಯಾದ್ಯಂತ ಎಲೆಕ್ಟ್ರಿಕ್ ವಾಹನಗಳ ಓಡಾಟದಿಂದಾಗಿ ಕಳೆದ 8 ವರ್ಷಗಳಿಗೆ ಹೋಲಿಸಿದರೆ ವಾಯು ಮಾಲಿನ್ಯ ಪ್ರಮಾಣ ಶೇ.30ರಷ್ಟು ಇಳಿಮುಖವಾಗಿದೆ. ಮೊಟ್ಟ ಮೊದಲ ಇವಿ ನೀತಿಯನ್ನು ದೆಹಲಿ ರಾಜ್ಯ ಜಾರಿ ಮಾಡಿದೆ. 25ರಷ್ಟು ಇವಿ ವಾಹನಗಳ ಖರೀದಿ ನಮ್ಮ ಗುರಿಯಾಗಿತ್ತು. ಈ ವಿಚಾರದಲ್ಲೂ ದೆಹಲಿ ಸರ್ಕಾರ ದಾಪುಗಾಲಿಡುತ್ತಿದೆ’ ಎಂದು ತಿಳಿಸಿದ್ದಾರೆ.
ಇದಿಷ್ಟೇ ಅಲ್ಲದೇ ದೆಹಲಿಯಲ್ಲಿರುವ ಮುಖ್ಯ ನಗರ ಪ್ರದೇಶದಲ್ಲಿ ಇನ್ನಷ್ಟು ಇವಿ ಚಾರ್ಜಿಂಗ್ ಸ್ಟೇಷನ್ ತೆರೆಯಲು ನಾವು ಚಿಂತನೆ ನಡೆಸಿದ್ದೇವೆ. ಹಾಗೆಯೇ ಇಡೀ ಪ್ರೊಂಚದಲ್ಲೇ ಅತ್ಯಂತ ಕಡಿಮೆ ಬೆಲೆಗೆ ಪ್ರತಿ ಯೂನಿಟ್ ಚಾರ್ಜ್ ಮಾಡಲಾಗುವುದು. ಪ್ರತಿ ಯೂನಿಟ್ ಗೆ ಕೇವಲ 3ರೂಪಾಯಿ ಖರ್ಚು ಬೀಳಲಿದೆ. ಈ ಕ್ಷೇತ್ರದ ಈ ಎಲ್ಲ ಸಾಧನೆಗಳನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಶೀಘ್ರವೇ ದೆಹಲಿ ಎಲೆಕ್ಟ್ರಿಕ್ ವಾಹನಗಳ ರಾಜಧಾನಿಯಾಗಲಿದೆ’ ಎಂದು ಕೇಜ್ರಿವಾಲ್ ಅಭಿಪ್ರಾಯಪಟ್ಟಿದ್ದಾರೆ.