ಸೌತ್ ಇಂಡಸ್ಟ್ರಿಯ ಫೇಮಸ್ ತಾರೆಯರಲ್ಲಿ ಒಬ್ಬರಾಗಿರುವ ಸುಂದರ ನಟಿ ಹನ್ಸಿಕಾ ಮೋಟ್ವಾನಿ ಸದ್ಯ ಭಾರೀ ಸುದ್ದಿಯಲ್ಲಿದ್ದಾರೆ. ಹೌದು, ಹನ್ಸಿಕಾ ಮದುವೆಯಾಗಲು ಸಜ್ಜಾಗಿದ್ದಾರೆ. ವರದಿಯ ಪ್ರಕಾರ, ಅವರ ಮದುವೆಯು ಡಿಸೆಂಬರ್ ನಲ್ಲಿ ನಡೆಯಲಿದೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅಷ್ಟಾಗಿ ಎಲ್ಲೂ ಮಾತನಾಡದ ಹನ್ಸಿಕಾ ಅವರು ರಾಜಕಾರಣಿಯ ಮಗನ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ನಟಿ ಮದುವೆಯಾಗಲು ಜೈಪುರದಲ್ಲಿ 450 ವರ್ಷಗಳಷ್ಟು ಹಳೆಯದಾದ ಮುಂಡೋಟಾ ಕೋಟೆ ಮತ್ತು ಅರಮನೆಯನ್ನು ಆಯ್ಕೆ ಮಾಡಿಕೊಂಡಿದ್ದು, ಮುಂಡೋಟಾ ಪ್ಯಾಲೇಸ್ನಲ್ಲಿರುವ ಹೋಟೆಲ್ನಲ್ಲಿ ಅತ್ಯಂತ ದುಬಾರಿ ಸೂಟ್ಗಳಲ್ಲಿ ತಂಗಲಿದ್ದಾರೆ. ಹೌದು, ಇಲ್ಲಿನ ಹೋಟೆಲ್ನಲ್ಲಿ ಪ್ರತಿ ರಾತ್ರಿಗೆ ಬರೋಬ್ಬರಿ 60,000 ರೂ.ಶುಲ್ಕ ವಿಧಿಸಲಾಗುತ್ತದೆ. ಹಂಸಿಕಾ ಅವರ ಮದುವೆಯಾಗುವ ಸ್ಥಳವು ಜೈಪುರ ನಗರದಿಂದ ಐದು ಗಂಟೆ ದೂರದಲ್ಲಿದೆ. ಹನ್ಸಿಕಾ ಮತ್ತು ಅವರ ಕುಟುಂಬ ಸದಸ್ಯರಿಗೆ ಅದ್ದೂರಿ ಸೂಟ್ಗಳನ್ನು ಬುಕ್ ಮಾಡಲಾಗುತ್ತದೆ.

ಇನ್ನು ಅರಮನೆಯ ಬಗ್ಗೆ ಮಾತನಾಡುವುದಾದರೆ ಅರಮನೆಯು ರಜಪೂತ-ಮೊಘಲ್ ವಾಸ್ತುಶಿಲ್ಪದಲ್ಲಿದೆ. 500 ವರ್ಷಗಳಷ್ಟು ಹಳೆಯದಾದ ಮುಂಡೋಟಾ ಕೋಟೆಯ ಸುತ್ತಮುತ್ತ ಅದ್ಭುತ ದೃಶ್ಯಗಳನ್ನು ನೋಡಬಹುದು. ಅರಮನೆಯು ದೊಡ್ಡ ಪ್ರಾಂಗಣಗಳು, ಮಂಟಪಗಳು ಮತ್ತು ಉದ್ಯಾನಗಳನ್ನು ಹೊಂದಿದೆ ಮತ್ತು ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 40 ಕಿಮೀ ದೂರದಲ್ಲಿದೆ. ಮುಂಡೋಟಾ ಅರಮನೆಯು ಐದು ವಿಭಿನ್ನ ಭವ್ಯವಾದ ಸೂಟ್ಗಳನ್ನು ಹೊಂದಿದೆ. ಪ್ರತಿಯೊಂದು ಸೂಟ್ ಪೂಲ್ ಮತ್ತು ಟೆರೇಸ್ ಅನ್ನು ಹೊಂದಿದೆ.
ಹನ್ಸಿಕಾ ಡಿಸೆಂಬರ್ನಲ್ಲಿ ವಿವಾಹವಾಗಲಿರುವುದರಿಂದ, ಹವಾಮಾನವು ಆಹ್ಲಾದಕರವಾಗಿರುತ್ತದೆ. ಮುಂಡೋಟಾ ಅರಮನೆಯು ವಿವಾಹಕ್ಕೆ ಅತ್ಯುತ್ತಮ ಸ್ಥಳವಾಗಿದೆ ಎನ್ನಲಾಗಿದೆ. ಹನ್ಸಿಕಾ ಅವರು ಮದುವೆಯಾಗಲು ಇದೇ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದೇ ಆದಲ್ಲಿ ಖಂಡಿತವಾಗಿಯೂ ಇದು ಸ್ಮರಣೀಯ ವಿವಾಹಗಳಲ್ಲಿ ಒಂದಾಗಿರುತ್ತದೆ. ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆ ಬಿಂದಾಸ್ ಚಿತ್ರದಲ್ಲಿ ನಟಿಸಿರುವ ಹನ್ಸಿಕಾ, ತೆಲುಗಿನಲ್ಲಿ ದೇಶಮುದುರು ಮತ್ತು ಸಿಂಗಂ 2 ನಂತಹ ಸೂಪರ್ಹಿಟ್ ಚಿತ್ರಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ತೋರಿಸಿದರು.
ಹನ್ಸಿಕಾ ಮೋಟ್ವಾನಿ ಅವರು ಶಕ ಲಕಾ ಬೂಮ್ ಬೂಮ್, ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಮತ್ತು ಸೋನ್ ಪರಿಯಂತಹ ಧಾರಾವಾಹಿಗಳಲ್ಲಿ ಬಾಲ ಕಲಾವಿದೆಯಾಗಿ ಪಾದಾರ್ಪಣೆ ಮಾಡಿದರು. ಅವರು ಹೃತಿಕ್ ರೋಷನ್ ಜೊತೆಗಿನ ಕೋಯಿ ಮಿಲ್ ಗಯಾ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು ಮತ್ತು ಮನಿ ಹೈ ತೋ ಹನಿ ಹೈ ಮುಂತಾದ ಚಲನಚಿತ್ರಗಳಲ್ಲಿ ನಟಿಸಿದರು. ಹನ್ಸಿಕಾ ಕೊನೆಯದಾಗಿ ಮಹಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಆಕೆಯ ಕೈಯ್ಯಲ್ಲಿ ಮೈ ನೇಮ್ ಈಸ್ ಶ್ರುತಿ, ರೌಡಿ ಬೇಬಿ ಮತ್ತು MY3 ಕೂಡ ಇದೆ.
ಇತ್ತೀಚಿನ ದಿನಗಳಲ್ಲಿ ಹೆಸರಿಡದ ಹಲವು ಸಿನಿಮಾಗಳಿಗೂ ಸಹಿ ಮಾಡಿದ್ದಾರೆ. ಹನ್ಸಿಕಾ ಮೋಟ್ವಾನಿ ಅವರು ತಮ್ಮ ಫೋಟೋಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸುದ್ದಿಯಾಗುತ್ತಾರೆ. ಆಕೆಯ ಫೋಟೋಗಳು ಇನ್ಸ್ಟಾಗ್ರಾಮ್ನಲ್ಲಿ ಸಖತ್ ವೈರಲ್ ಆಗುತ್ತವೆ. ಇನ್ಸ್ಟಾಗ್ರಾಮ್ನಲ್ಲಿ 5.6 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಹನ್ಸಿಕಾ ತಮ್ಮ ನಟನೆ ಮತ್ತು ಸೌಂದರ್ಯದ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.
ಈಗ ಅದ್ದೂರಿಯಾಗಿ ಮದುವೆಯಾಗುತ್ತಿರುವ ಬಗ್ಗೆ ಸುದ್ದಿಯಲ್ಲಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ಸಿದ್ಧತೆಗಳು ವೇಗವಾಗಿ ನಡೆಯುತ್ತಿರುವಂತೆ ತೋರುತ್ತಿದೆ. ಆನ್ಲೈನ್ನಲ್ಲಿ ಪ್ರಕಟವಾದ ವರದಿಗಳ ಪ್ರಕಾರ, ಮುಂಡೋಟಾ ಪ್ಯಾಲೇಸ್ನಲ್ಲಿರುವ ಹೋಟೆಲ್ ಸಿಬ್ಬಂದಿ ಹನ್ಸಿಕಾ ಮದುವೆಯನ್ನು ಆಯೋಜಿಸಲು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ.



