ನಮ್ಮ ಆರ್ಸಿಬಿ ತಂಡ 18 ವರ್ಷಗಳ ನಂತರ ಕೊನೆಗೂ ಐಪಿಎಲ್ ನಲ್ಲಿ ಕಪ್ ಗೆದ್ದು, ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ. ಇದು 18 ವರ್ಷಗಳ ಕನಸು, ಶ್ರಮ, ದೃಢತೆ, ತಾಳ್ಮೆ ಎಲ್ಲದರ ಪರಿಶ್ರಮ. ಐಪಿಎಲ್ ಶುರುವಾಗಿ, ವಿಜಯ್ ಮಲ್ಯ ಅವರು ಒಂದು ತಂಡ ಕಟ್ಟಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಹೆಸರಿಟ್ಟ ಸಮಯದಿಂದ ಈ ತಂಡದ ಜೊತೆಗೆ ಇರುವುದು ಕಿಂಗ್ ಕೊಹ್ಲಿ. ಅಂದು ಯುವ ಹುಡುಗನಾಗಿದ್ದ ಕಿಂಗ್ ಕೊಹ್ಲಿ ಇಂದು 18 ವರ್ಷಗಳ ನಂತರ ಐಪಿಎಲ್ ಗೆದ್ದಿದ್ದಾರೆ. ಇದು ವಿರಾಟ್ ಕೊಹ್ಲಿ, ಎಬಿಡಿ, ಕ್ರಿಸ್ ಗೇಯ್ಲ್, ಅನಿಲ್ ಕುಂಬ್ಳೆ ಹೀಗೆ ಅನೇಕ ಆಟಗಾರರ ಕನಸು. ನಿನ್ನೆಯ ಪಂದ್ಯ ಬರೀ ಗೆಲುವಲ್ಲ, ಐತಿಹಾಸಿಕ ಗೆಲುವು. ಇಡೀ ಕರ್ನಾಟಕ ಈ ಗೆಲುವಿಗಾಗಿ, 18 ವರ್ಷಗಳಿಂದ ಕಾದು ಕುಳಿತಿತ್ತು. ಕೊನೆಗೂ ಆ ಕನಸು ನನಸಾಗಿದೆ. 18 ಸೀಸನ್ ಗಳ ಬಳಿಕ ಆರ್ಸಿಬಿ ಕಪ್ ಗೆದ್ದಿದೆ.
ಇದು 18ನೇ ಸೀಸನ್, ವಿರಾಟ್ ಕೊಹ್ಲಿ ಅವರ ಜೆರ್ಸಿ ನಂಬರ್ 18, ಜೂನ್ 3, 2025 ಈ ನಂಬರ್ ಗಳನ್ನು ಕೂಡಿದರೆ 18 ಬರುತ್ತದೆ.. ಹೀಗೆ ಅಭಿಮಾನಿಗಳು ಸಾಕಷ್ಟು ಕ್ಯಾಲ್ಕ್ಯುಲೇಶನ್ ಗಳನ್ನು ಹಾಕಿಕೊಂಡಿದ್ದರು. ಎಲ್ಲರೂ ಈ ಒಂದು ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದರು. ಆ ಕ್ಷಣ ನಿನ್ನೆ ರಾತ್ರಿ ಸಂಭವಿಸಿತು. ಗೆಲುವು ಖಚಿತವಾಗುತ್ತಿದ್ದ ಹಾಗೆ ವಿರಾಟ್ ಕೊಹ್ಲಿ ಅವರು ಕಣ್ಣೀರು ಹಾಕಿದ್ದು, ಮಗುವಿನಂತೆ ಇಡೀ ತಂಡದ ಜೊತೆಗೆ ಸೇರಿ ಸೆಲೆಬ್ರೇಟ್ ಮಾಡಿದ್ದು, ಇದೆಲ್ಲವೂ ಎಂಥವರನ್ನೂ ಭಾವುಕರನ್ನಾಗಿ ಮಾಡಿತು. ಎಬಿಡಿ ಮತ್ತು ಕ್ರಿಸ್ ಗೇಯ್ಲ್ ತಂಡದ ಜೊತೆಗಿದ್ದು, ಪೋಡಿಯಮ್ ಮೇಲೆ ನಿಂತು ಎಲ್ಲರ ಜೊತೆ ಕಪ್ ಸ್ವೀಕರಿಸಿದ ಆ ಕ್ಷಣ ಅವಿಸ್ಮರಣೀಯ. ಆರ್ಸಿಬಿ ತಂಡದ ಬಳಿ ಕಪ್ ಇಲ್ಲ ಎನ್ನುವ ಕೊರಗು ಎರಡನೇ ಸಾರಿ ಕೊನೆಯಾಗಿದೆ.
ನಮ್ಮ ತಂಡದ ಎರಡನೇ ಕಪ್ ಇದು. ಕಳೆದ ವರ್ಷ ವುಮನ್ಸ್ ಪ್ರೀಮಿಯರ್ ಲೀಗ್ ನಲ್ಲಿ ಆರ್ಸಿಬಿ ತಂಡ ಮಹಾಲಕ್ಷ್ಮಿಯರು ಒಂದು ಕಪ್ ಅನ್ನು ಗೆದ್ದುಕೊಟ್ಟರು, ಇಂದು ಆರ್ಸಿಬಿ ಹುಡುಗರು ತಮ್ಮ ತಂಡಕ್ಕಾಗಿ ಎರಡನೇ ಕಪ್ ಅನ್ನು ಗೆದ್ದಿದ್ದಾರೆ. ಈ ವರ್ಷ ಆರ್ಸಿಬಿ ಮ್ಯಾನೇಜ್ಮೆಂಟ್ ಖರೀದಿ ಮಾಡಿದ ಆಟಗಾರರು, ಆಂಡಿ ಫ್ಲವರ್ ಮತ್ತು ಡಿಕೆ ಅವರ ಕೋಚಿಂಗ್ ಎಲ್ಲವೂ ಅದ್ಭುತವಾಗಿ ಒಗ್ಗೂಡಿತು. ಸೀಸನ್ ಶುರುವಿನಲ್ಲೇ ಈ ಸಲ ಕಪ್ ನಮ್ಮದೇ ಎನ್ನುವ ಉತ್ಸಾಹ ಇದ್ದಿದ್ದಂತೂ ನಿಜ, ಆದರೆ ಹೆಚ್ಚಿನ ನಿರೀಕ್ಷೆಯನ್ನು ಯಾರು ಕೂಡ ಇಟ್ಟುಕೊಂಡಿರಲಿಲ್ಲ. ಈ ಬಾರಿ ಆರ್ಸಿಬಿ ತಂಡ ಇದ್ದಿದ್ದು ಕೂಡ ಅದೇ ರೀತಿ, ಹೆಚ್ಚು ನಿರೀಕ್ಷೆ ಇಲ್ಲದೆಯೇ ಒಂದೊಂದೇ ಪಂದ್ಯವನ್ನು ಗೆಲ್ಲುತ್ತಾ ಹೋಗೋಣ ಎಂದು, ಒಂದೊಂದು ಪಂದ್ಯವನ್ನು ಗೆಲ್ಲುತ್ತಾ ಬಂದರೆ. ಕೊನೆಗೆ ಕಪ್ ಅನ್ನು ಗೆದ್ದರು. ನಿನ್ನೆ ಆರ್ಸಿಬಿ ಗೆದ್ದ ನಂತರ ಇಡೀ ಕರ್ನಾಟಕ ಸಂಭ್ರಮಿಸಿದೆ.
ಕರ್ನಾಟಕವಷ್ಟೇ ಅಲ್ಲ, ಪ್ರಪಂಚದ ಎಲ್ಲೆಡೆ ಇರುವ ಆರ್ಸಿಬಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಇಡೀ ಬೆಂಗಳೂರಿನಲ್ಲಿ ನಿನ್ನೆ ದೀಪಾವಳಿ ಹಬ್ಬ ನಡೆಯಿತು ಎಂದರೆ ತಪ್ಪಲ್ಲ. ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯ, ಸುಯಶ್, ಟಿಮ್ ಡೇವಿಡ್, ಫಿಲ್ ಸಾಲ್ಟ್ ಹೀಗೆ ಬಲಿಷ್ಠ ತಂಡ ಕೊನೆಗೂ ಬೆಂಗಳೂರಿಗೆ ಕಪ್ ಗೆದ್ದು ಕೊಟ್ಟಿದೆ. ನಿನ್ನೆಯ ಪಂದ್ಯ ನಡೆದಿದ್ದು ಅಹಮದಾಬಾದ್ ನಲ್ಲಿ, 1 ಲಕ್ಷಕ್ಕಿಂತ ಹೆಚ್ಚು ಜನರು ಸೇರಿದ್ದ ಸ್ಟೇಡಿಯಂ ನಲ್ಲಿ ಆರ್ಸಿಬಿ ಕೂಗು ಹೆಚ್ಚಿತ್ತು, ನಿನ್ನೆ ಗೆದ್ದ ಬಳಿಕ ಇಂದು ಆರ್ಸಿಬಿ ತಂಡ ಬೆಂಗಳೂರಿಗೆ ಬಂದು ಕನ್ನಡಿಗರ ಜೊತೆಗೆ ಸೆಲೆಬ್ರೇಟ್ ಮಾಡಲಿದೆ. ವಿಜಯಯಾತ್ರೆ ಇಂದು ಬೆಂಗಳೂರಿನಲ್ಲಿ ನಡೆಯಲಿದೆ. ಇಂದು ಅರ್ಧ ದಿವಸ ಸೆಲೆಬ್ರೇಷನ್ ಗಾಗಿಯೇ ಮೀಸಲು ಇಡಲಾಗಿದೆ. ಇಂದು ಬೆಳಗ್ಗೆ 10:45 ಕ್ಕೆ ಅಹಮದಾಬಾದ್ ಇಂದ ಹೊರಟ ಆರ್ಸಿಬಿ ತಂಡ ಮಧ್ಯಾಹ್ನ ಬೆಂಗಳೂರು ಹಳೆಯ ವಿಮಾನ ನಿಲ್ದಾಣವನ್ನ ತಲುಪಿದೆ.
ಬಳಿಕ ತಾಜ್ ವೆಸ್ಟನ್ಡ್ ಹೋಟೆಲ್ ನಲ್ಲಿ ಬಂದಿದ್ದಾರೆ. ಆರ್ಸಿಬಿ ತಂಡ ಬೆಂಗಳೂರಿಗೆ ಬರುತ್ತಿದ್ದ ಹಾಗೆ ಅವರನ್ನು ಕರ್ನಾಟಕದ ಡಿಸಿಎಂ ಡಿಕೆ ಶಿವ ಕುಮಾರ್ ಅವರು ಆರ್ಸಿಬಿ ತಂಡವನ್ನು ಬರಮಾಡಿಕೊಂಡಿದ್ದು, ಇದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಶೇಷವಾಗಿ ಒಂದು ಪೋಸ್ಟ್ ಸಹ ಶೇರ್ ಮಾಡಿಕೊಂಡಿದ್ದಾರೆ. “Welcome Home Boys♥🏆18 ವರ್ಷಗಳ ಕನಸನ್ನು 18ನೇ ಐಪಿಎಲ್ ಆವೃತ್ತಿಯಲ್ಲಿ ನನಸು ಮಾಡಿ, ನಮ್ಮ ಹುಡುಗ್ರು ತವರಿನ ಅಂಗಳಕ್ಕೆ ವಾಪಸ್ಸಾಗಿದ್ದಾರೆ. ಈ ಶುಭ ಸಂದರ್ಭದಲ್ಲಿ, ಇತಿಹಾಸ ಸೃಷ್ಟಿಸಿದ ಆರ್ಸಿಬಿ ತಂಡಕ್ಕೆ ಕರ್ನಾಟಕದ ಮಣ್ಣಿನಿಂದ ಪ್ರೀತಿಯ, ಭವ್ಯ ಸ್ವಾಗತ! Truly an honour to welcome you all to #NammaBengaluru!..” ಎಂದು ಬರೆದು, ವಿರಾಟ್ ಕೊಹ್ಲಿ ಅವರೊಡನೆ ಇರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ ಡಿಕೆ ಶಿವ ಕುಮಾರ್ ಅವರು. ವಿರಾಟ್ ಕೊಹ್ಲಿ ಅವರ ಕೈಗೆ ಕರ್ನಾಟಕದ ಬಾವುಟವನ್ನು ಕೊಟ್ಟಿದ್ದಾರೆ.
ಕರ್ನಾಟಕದ ದತ್ತು ಮಗನ ಕೈಯಲ್ಲಿ ಕರ್ನಾಟಕದ ಬಾವುಟ ನೋಡೋದಕ್ಕಿಂತ ಸಂತೋಷದ ಕ್ಷಣ ಇನ್ನೇನಿದೆ ಹೇಳಿ.. ಇನ್ನು ಸ್ಟೇಡಿಯಂ ನಲ್ಲಿ ಅಭಿಮಾನಿಗಳು ಯಾವ ರೀತಿ ಸೆಲೆಬ್ರೇಟ್ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ. ಎಲ್ಲಾ ಆರ್ಸಿಬಿ ಫ್ಯಾನ್ಸ್ ಕಾದು ಕುಳಿತಿದ್ದ ಕ್ಷಣ ಇದು. ಇನ್ನು ವಿಧಾನಸೌಧದ ಎದುರಲ್ಲಿ ಆರ್ಸಿಬಿ ತಂಡಕ್ಕೆ ಸಿಎಂ ಅವರಿಂದ ಮತ್ತು ಡಿಸಿಎಂ ಅವರಿಂದ ಹಾಗೆ ಸರ್ಕಾರದಿಂದ ಗೌರವಾರ್ಪಣೆ ನಡೆಯಲಿದ್ದು, ಈಗಾಗಲೇ ಎಲ್ಲವೂ ಸಿದ್ಧವಾಗಿದೆ. ಅಲ್ಲಿಂದ ಓಪನ್ ಬಸ್ ಪರೇಡ್ ಶುರುವಾಗಲಿದೆ. ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗು ಪರೇಡ್ ನಡೆಯಲಿದೆ. ಇಂದು ಸ್ಟೇಡಿಯಂ ಒಳಗೆ ಅಭಿಮಾನಿಗಳಿಗೆ ಉಚಿತ ಎಂಟ್ರಿ ಸ್ಟೇಡಿಯಂ ತುಂಬುವಷ್ಟು ಜನರನ್ನು ಒಳಗೆ ಉಚಿತವಾಗಿ ಬಿಡಲಾಗುತ್ತದೆ.
ಚಿನ್ನಸ್ವಾಮಿಯಲ್ಲಿ ಅಭಿಮಾನಿಗಳ ಜೊತೆಗೆ ಸೆಲೆಬ್ರೇಟ್ ಮಾಡಲಿದ್ದಾರೆ ಆರ್ಸಿಬಿ ಹುಲಿಗಳು. ಇದಕ್ಕಾಗಿ ಪ್ರತಿಯೊಬ್ಬ ಆರ್ಸಿಬಿ ಅಭಿಮಾನಿ ಕೂಡ ಕಾಯುತ್ತಿದ್ದಾನೆ. ಬಹಳಷ್ಟು ಜನರು ಕೆಲಸಕ್ಕೆ ರಜಾ ಹಾಕಿಕೊಂಡು, ಶಾಲೆ ಕಾಲೇಜು ಬಿಟ್ಟು ಆರ್ಸಿಬಿ ತಂಡವನ್ನು ನೋಡುವ ಸಲುವಾಗಿ ಜನರು ಅಭಿಮಾನಿಗಳು ಬಂದಿದ್ದಾರೆ. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳುವ ಪುಣ್ಯ ಅದೃಷ್ಟ ನಮ್ಮೆಲ್ಲರದ್ದು ಆಗಿದೆ.



