ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಭಾನುವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 729ರ ಎಪಿಸೋಡ್ ಕಥೆ ಇಲ್ಲಿದೆ. ಕೊನೆಗೂ ತಾಂಡವ್ ಹಾಗೂ ಶ್ರೇಷ್ಠಾ ಮದುವೆ ಆಗಿದ್ದಾರೆ. ಭಾಗ್ಯಾ ತಂಗಿ ಲಕ್ಷ್ಮೀ ಬಂದು ಶ್ರೇಷ್ಠಾ ಹಾಗೂ ತಾಂಡವ್ ಇಬ್ಬರಿಗೂ ಆರತಿ ಮಾಡುತ್ತಾಳೆ. ತನ್ನ ಅಕ್ಕ ತೆಗೆದುಕೊಂಡ ನಿರ್ಧಾರದ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾಳೆ. ಇಷ್ಟು ದಿನಗಳು ನನ್ನ ಅಕ್ಕ ನಿಮ್ಮನ್ನು ಸಹಿಸಿಕೊಂಡಿದ್ದೇ ಹೆಚ್ಚು. ಇವತ್ತು ನನಗೆ ಬಹಳ ಖುಷಿಯಾಗುತ್ತಿದೆ. ಗಂಡ ಇಲ್ಲದೆ ಹೆಂಡತಿ ಇರುವುದಿಲ್ಲ ಎಂದು ಅಂದುಕೊಳ್ಳುವುದು ನಿಮ್ಮ ಭ್ರಮೆ, ನನ್ನ ಅಕ್ಕನನ್ನು ಕಳೆದುಕೊಂಡ ಪಶ್ಚಾತಾಪ ನಿಮ್ಮನ್ನು ಖಂಡಿತ ಕಾಡುತ್ತದೆ ಎಂದು ಹೇಳಿ ಅಲ್ಲಿಂದ ಹೊರಡುತ್ತಾಳೆ.
ದೇವಸ್ಥಾನದ ಬಳಿ ಲಕ್ಷ್ಮೀ ಹಾಗೂ ಭಾಗ್ಯಾ ಇಬ್ಬರೂ ಭೇಟಿ ಆಗುತ್ತಾರೆ. ಅಕ್ಕ ತಂಗಿ ಇಬ್ಬರೂ ಕಷ್ಟ ಸುಖ ಮಾತನಾಡಿಕೊಳ್ಳುತ್ತಾರೆ. ಲಕ್ಷ್ಮೀ ಜೀವನ ಕೂಡಾ ಹಳಿ ತಪ್ಪಿರುವುದನ್ನು ಕೇಳಿ ಭಾಗ್ಯಾ ಬೇಸರಗೊಳ್ಳುತ್ತಾಳೆ. ನನ್ನ ಜೀವನದಲ್ಲಿ ನಿನ್ನ ರೀತಿ ಸಮಸ್ಯೆಗಳಿಲ್ಲ ಅಕ್ಕ, ವೈಷ್ಣವ್ಗೆ ನನ್ನ ಮೇಲೆ ಇನ್ನೂ ಪ್ರೀತಿ ಇದೆ. ಆದರೆ ಅದನ್ನು ಅವರು ತೋರ್ಪಡಿಸುತ್ತಿಲ್ಲ ಅಷ್ಟೇ, ಆದರೆ ನೀನು ತೆಗೆದುಕೊಂಡಿರುವ ನಿರ್ಧಾರದಿಂದ ಇಂದು ನನಗೆ ಬಹಳ ಖುಷಿಯಾಗುತ್ತಿದೆ. ನೀನು ಮಾಡಬೇಕಾದ ಕೆಲಸ ಬಹಳ ಇದೆ ಅಕ್ಕ, ಗಂಡ ಇಲ್ಲದೆ ನೀನು ಬದುಕಬಲ್ಲೆ ಅನ್ನೋದನ್ನು ತೋರಿಸು ಎಂದು ಧೈರ್ಯ ಹೇಳುತ್ತಾಳೆ. ಇನ್ಮುಂದೆ ನಾವು ಅಳುವುದನ್ನು ಬಿಟ್ಟು ಧೈರ್ಯದಿಂದ ಕಷ್ಟಗಳನ್ನು ಎದುರಿಸೋಣ ಎಂದು ಅಕ್ಕ-ತಂಗಿ ಇಬ್ಬರೂ ದೇವರ ಮುಂದೆ ಪ್ರಮಾಣ ಮಾಡುತ್ತಾರೆ.
ಇತ್ತ ಶ್ರೇಷ್ಠಾ, ಮದುವೆ ಆದ ಖುಷಿಯಲ್ಲಿ ತಾನೇ ಮೊದಲ ರಾತ್ರಿಯನ್ನು ಅರೇಂಜ್ ಮಾಡುತ್ತಾಳೆ. ಹಾಸಿಗೆಯನ್ನು ಗುಲಾಬಿ ಹೂಗಳಿಂದ ಶೃಂಗಾರ ಮಾಡುತ್ತಾಳೆ. ರೂಮ್ ಒಳಗೆ ಬರುವ ತಾಂಡವ್ಗೆ ಇದ್ಯಾವುದರ ಬಗ್ಗೆಯೂ ಗಮನ ಇರುವುದಿಲ್ಲ. ಭಾಗ್ಯಾ, ತಾಳಿ ತೆಗೆದುಕೊಟ್ಟಿದ್ದನ್ನೇ ತಾಂಡವ್ ಯೋಚಿಸಿ ಯೋಚಿಸಿ ಕೋಪ ಮಾಡಿಕೊಳ್ಳುತ್ತಾನೆ. ಜೊತೆಗೆ ಲಕ್ಷ್ಮೀ ಆಡಿದ ಮಾತುಗಳನ್ನು ಕೂಡಾ ಅವನಿಗೆ ಸಹಿಸಿಕೊಳ್ಳಲಾಗುವುದಿಲ್ಲ. ಅಷ್ಟರಲ್ಲಿ ಶ್ರೇಷ್ಠಾ, ಹಾಲಿನ ಲೋಟ ಹಿಡಿದುಕೊಂಡು ನಾಚುತ್ತಾ ರೂಮ್ ಒಳಗೆ ಬರುತ್ತಾಳೆ. ತಾಂಡವ್ ನನಗಾಗಿ ಕಾಯುತ್ತಿದ್ದಾನೆ ಎಂದುಕೊಳ್ಳುತ್ತಾಳೆ. ನನಗಾಗಿ ಕಾಯುತ್ತಿದ್ದೀಯ ತಾಂಡವ್? ಎಂದು ಕೇಳುತ್ತಾಳೆ. ಆದರೆ ತಾಂಡವ್ ಎಂದಿನಂತೆ ಇರುತ್ತಾನೆ. ನಿನಗಾಗಿ ಕಾಯುತ್ತಿಲ್ಲ, ನಾನು ಆ ಭಾಗ್ಯಾ ಬಗ್ಗೆ ಯೋಚಿಸುತ್ತಿದ್ದೆ, ನಾನು ಕಟ್ಟಿದ ತಾಳಿಯನ್ನು ಅವಳು ಅಷ್ಟು ಸುಲಭವಾಗಿ ಹೇಗೆ ತೆಗೆದುಕೊಟ್ಟಳು ನೋಡು, ಅದನ್ನು ನೆನಪಿಸಿಕೊಂಡು ನನಗೆ ಸಿಟ್ಟು ಬರುತ್ತಿದೆ ಎನ್ನುತ್ತಾನೆ. ಆ ಮಾತು ಕೇಳಿ ಶ್ರೇಷ್ಠಾ ಸಿಟ್ಟಾಗುತ್ತಾಳೆ. ಇಂದು ನಾವು ಮದುವೆ ಆದ ದಿನ, ಮೊದಲ ರಾತ್ರಿ, ಆದರೆ ನೀನು ಆ ಭಾಗ್ಯಾಳನ್ನು ನೆನಪಿಸಿಕೊಳ್ಳುತ್ತಿದ್ದೀಯ ಎಂದು ಶ್ರೇಷ್ಠಾ ಹಾಲಿನ ಲೋಟವನ್ನು ಎಸೆಯುತ್ತಾಳೆ. ರಭಸಕ್ಕೆ ಗ್ಲಾಸ್ ಚೂರು ಚೂರಾಗುತ್ತದೆ. ನಿನಗೆ ನನ್ನ ಪರಿಸ್ಥಿತಿ ಅರ್ಥವಾಗುತ್ತಿಲ್ಲ ಎಂದು ತಾಂಡವ್ ಅಲ್ಲಿಂದ ಹೊರ ಹೋಗುತ್ತಾನೆ.
ಮರುದಿನ ಭಾಗ್ಯಾ, ಕೆಲಸಕ್ಕೆ ಹೊರಡುತ್ತಾಳೆ. ಇಷ್ಟು ದಿನ ನಾನು ತಾಂಡವ್ ಎಂಬ ವ್ಯಕ್ತಿಯ ಹೆಂಡತಿಯಾಗಿ ಕೆಲಸಕ್ಕೆ ಹೋಗುತ್ತಿದ್ದೆ, ಆದರೆ ಇಂದು ಭಾಗ್ಯಲಕ್ಷ್ಮೀ ಆಗಿ ಹೋಗುತ್ತಿದ್ದೇನೆ ನನಗೆ ಆಶೀರ್ವಾದ ಮಾಡಿ ಎಂದು ಅತ್ತೆ, ಮಾವ ಹಾಗೂ ಅಮ್ಮನಿಗೆ ನಮಸ್ಕರಿಸುತ್ತಾಳೆ. ಅಮ್ಮನಿಗೆ ಮತ್ತೊಮ್ಮೆ ಧೈರ್ಯ ಹೇಳಿ ಮನೆಯಿಂದ ಹೊರಗೆ ಬರುತ್ತಾಳೆ. ಮನೆ ಬಳಿ ತಾಂಡವ್ ನಿಂತಿರುತ್ತಾನೆ. ಆದರೆ ಭಾಗ್ಯಾ, ಆತನನ್ನು ನೋಡಿಯೂ ನೋಡದಂತೆ ಅಲ್ಲಿಂದ ಹೋಗುತ್ತಾಳೆ. ಮಾತನಾಡಿಸಿದರೂ ಪ್ರತಿಕ್ರಿಯಿಸದ ಭಾಗ್ಯಾಳನ್ನು ನೋಡಿ ತಾಂಡವ್ ಸಿಟ್ಟಾಗುತ್ತಾನೆ. ಗಂಡ ಇಲ್ಲದೆ ಬದುಕುವುದು ಅಷ್ಟು ಸುಲಭ ಎಂದುಕೊಳ್ಳಬೇಡ, ಇನ್ನೆರಡು ದಿನಗಳಲ್ಲಿ ನಿನಗೆ ಎಲ್ಲವೂ ಅರ್ಥವಾಗುತ್ತದೆ ಎನ್ನುತ್ತಾನೆ. ಅಜ್ಜಿ ಕೋಳಿ ಕೂಗಿದರೇನೇ ಬೆಳಕು ಆಗುವುದು ಅಂತ ನೀವು ಅಂದುಕೊಂಡಿದ್ದೀರ, ಆ ಭ್ರಮೆಯಿಂದ ಹೊರ ಬನ್ನಿ ಎಂದು ಹೇಳಿ ಆಟೋ ಹತ್ತಿ ಹೊರಡುತ್ತಾಳೆ.
ಅಲ್ಲೇ ನಿಂತಿದ್ದ ತನ್ಮಯ್ ಅಪ್ಪನ ಬಳಿ ಬಂದು, ನೀವು ಅಮ್ಮನನ್ನು ಏಕೆ ವ್ಯಂಗ್ಯ ಮಾಡುತ್ತೀರ ಎಂದು ಕೇಳುತ್ತಾನೆ. ನಿನ್ನ ಅಮ್ಮನ ಸ್ಥಾನ ಮಾನ ಏನು ಎಂದು ತೋರಿಸಲು ಹಾಗೆ ಮಾಡುತ್ತಿದ್ದೇನೆ. ಅವಳು ನಿಮ್ಮನ್ನೆಲ್ಲಾ ಬೀದಿಗೆ ತರುತ್ತಾಳೆ. ನಿನ್ನ ಸ್ಕೂಲ್ ಫೀಸ್ ಕೂಡಾ ನಾನೇ ಕಟ್ಟಬೇಕು ಎನ್ನುತ್ತಾನೆ. ಬೇಡ, ನೀವು ನನ್ನ ಸ್ಕೂಲ್ ಫೀಸ್ ಕಟ್ಟಬೇಡಿ, ಅಮ್ಮನ್ನೇ ಕಟ್ಟುತ್ತಾರೆ ಎಂದು ಹೇಳಿ ತನ್ಮಯ್ ಸ್ಕೂಲ್ಗೆ ಹೋಗುತ್ತಾನೆ. ಭಾಗ್ಯಾ, ತನ್ಮಯ್ ಮಾತುಗಳನ್ನು ನೆನಪಿಸಿಕೊಂಡು ತಾಂಡವ್ ಸಿಟ್ಟಾಗುತ್ತಾನೆ. ಮನೆಗೆ ವಾಪಸ್ ಬರುತ್ತಾನೆ. ಅಷ್ಟರಲ್ಲಿ ಅವನಿಗೆ ಬ್ಯಾಂಕ್ನವರು ಕರೆ ಮಾಡಿ ಇಎಂಐ ಕಟ್ಟುವಂತೆ ಹೇಳುತ್ತಾರೆ. ಭಾಗ್ಯಾಗೆ ಟಾರ್ಚರ್ ಕೊಡಲು ಇದೇ ಸರಿಯಾದ ಸಮಯ ಎಂದುಕೊಂಡು ನಾನು ಇಎಂಐ ಕಟ್ಟುವುದಿಲ್ಲ ಅದೇನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ ಎನ್ನುತ್ತಾನೆ. ಇದು ಮಾತನಾಡುವ ರೀತಿಯಲ್ಲ ಎಂದು ಬ್ಯಾಂಕ್ನವರು ತಾಂಡವ್ಗೆ ಎಚ್ಚರಿಸುತ್ತಾರೆ.
ತಾಂಡವ್ ಮಾತಿನ ವರಸೆಗೆ ಕೋಪಗೊಂಡ ಬ್ಯಾಂಕ್ನವರು ಮನೆಗೆ ಹೋಗುತ್ತಾರೆ. ಯಾರು ನೀವು ಎಂದು ಪೂಜಾ ಕೇಳುತ್ತಾಳೆ. ನಾವು ಬ್ಯಾಂಕಿನಿಂದ ಬಂದಿದ್ದೇವೆ. 5 ತಿಂಗಳಿನಿಂದ ಈ ಮನೆ ಇಎಂಐ ಕಟ್ಟಿಲ್ಲ. ತಾಂಡವ್ಗೆ ಫೋನ್ ಮಾಡಿದರೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಆದ್ದರಿಂದ ಈ ಮನೆ ಸೀಜ್ ಮಾಡಲು ಬಂದಿದ್ದೇವೆ. ಎಲ್ಲರೂ ಮನೆಯಿಂದ ಹೊರಡಿ ಎಂದು ಬ್ಯಾಂಕ್ನವರು ಹೇಳುತ್ತಾರೆ. ಅದನ್ನು ಕೇಳಿ ಎಲ್ಲರೂ ಶಾಕ್ ಆಗುತ್ತಾರೆ. ತಾಂಡವ್ಗೆ ಕರೆ ಮಾಡಿ ವಿಚಾರಿಸು ಎಂದು ಪೂಜಾಗೆ ಕುಸುಮಾ ಹೇಳುತ್ತಾಳೆ. ಮನೆಯವರ ಕಾಲ್ಗೆ ಕಾಯುತ್ತಿದ್ದ ತಾಂಡವ್. ಇಂದು ನೀವು ಕಾಲ್ ಮಾಡುತ್ತೀರ ಎಂದು ನನಗೆ ಚೆನ್ನಾಗಿ ಗೊತ್ತು. ಅಷ್ಟಕ್ಕೂ ನಾನೇಕೆ ಆ ಮನೆ ಇಎಂಐ ಕಟ್ಟಬೇಕು. ಆ ಎಮ್ಮೆ ಭಾಗ್ಯಾ ಕಟ್ಟಲಿ ಎಂದು ವ್ಯಂಗ್ಯವಾಡುತ್ತಾನೆ. ನಮಗೆ ಈ ವಿಚಾರ ಗೊತ್ತಿಲ್ಲ, ದಯವಿಟ್ಟು ಸ್ವಲ್ಪ ಸಮಯ ಕೊಡಿ ಎಂದು ಭಾಗ್ಯಾ, ಬ್ಯಾಂಕ್ನವರ ಬಳಿ ಮನವಿ ಮಾಡಿಕೊಳ್ಳುತ್ತಾಳೆ. ಭಾಗ್ಯಾ ಮನವಿಗೆ ಸ್ಪಂದಿಸಿದ ಬ್ಯಾಂಕ್ನವರು ನಾಳೆವರೆಗೂ ಸಮಯ ಕೊಡುತ್ತೇವೆ. ನಾಳೆ ಎಲ್ಲಾ ಕ್ಲಿಯರ್ ಆಗಬೇಕು, ಇಲ್ಲದಿದ್ದರೆ ನೀವೆಲ್ಲಾ ಮನೆ ಬಿಟ್ಟು ಹೋಗಬೇಕು ಎಂದು ಎಚ್ಚರಿಸಿ ಹೊರಡುತ್ತಾರೆ.
ಇಎಂಐ ಹಣವನ್ನು ಭಾಗ್ಯಾ ಹೊಂದಿಸುತ್ತಾಳಾ? ಅಥವಾ ಹಣ ಕಟ್ಟಲಾಗದೆ ಎಲ್ಲರನ್ನೂ ಕರೆದುಕೊಂಡು ಮನೆ ಬಿಟ್ಟು ಹೋಗುತ್ತಾಳಾ? ಮುಂದಿನ ಎಪಿಸೋಡ್ನಲ್ಲಿ ಉತ್ತರ ದೊರೆಯಲಿದೆ.