ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 758ರ ಎಪಿಸೋಡ್ ಕಥೆ ಇಲ್ಲಿದೆ. ಭಾಗ್ಯಾ ನನ್ನ ಮುಂದೆ ಸೋಲಬೇಕು, ನಾನು ಸಹಾಯ ಮಾಡದಿದ್ದರೆ ಅವಳ ಕೈಲಿ ಏನೂ ಸಾಧ್ಯವಿಲ್ಲದಂಥ ಪರಿಸ್ಥಿತಿ ಬರಬೇಕೆಂದು ತಾಂಡವ್ ಬಹಳ ಒದ್ದಾಡುತ್ತಿದ್ಧಾನೆ. ಹೇಗಾದರೂ ಮಾಡಿ ಈ ಬಾರಿ ನಾನೇ ತನ್ಮಯ್ ಸ್ಕೂಲ್ ಫೀಸ್ ಕಟ್ಟಿ ಭಾಗ್ಯಾ ನನ್ನ ಮುಂದೆ ತಲೆ ಬಗ್ಗಿಸುವಂಥ ಪರಿಸ್ಥಿತಿ ಬರಬೇಕು ಎಂದು ತಾಂಡವ್ ಶ್ರೇಷ್ಠಾ ಜೊತೆ ಹೇಳಿಕೊಳ್ಳುತ್ತಾನೆ.
ನಾನು ಇರುವುದೇ ನಿನ್ನನ್ನು ಖುಷಿಯಾಗಿಡಲು, ನೀನು ಏನೂ ಯೋಚನೆ ಮಾಡಬೇಡ ಎಂದ ಶ್ರೇಷ್ಠಾ, ತನ್ನ ಗೆಳತಿ ಸಹಾಯದಿಂದ ಫೇಕ್ ಫುಡ್ ಆರ್ಡರ್ ಕೊಡಿಸುತ್ತಾಳೆ. 200 ಜನರಿಗೆ ಊಟ ಬೇಕು, ನಮ್ಮ ಮನೆಯಲ್ಲಿ ಫಂಕ್ಷನ್ ಇದೆ ಎಂದು ಶ್ರೇಷ್ಠಾ ಗೆಳತಿ ಭಾಗ್ಯಾಗೆ ಕರೆ ಮಾಡುತ್ತಾಳೆ. ಭಾಗ್ಯಾ ಅದನ್ನು ನಂಬಿ ಮಗನ ಸ್ಕೂಲ್ ಫೀಸ್ಗಾಗಿ ತೆಗೆದಿಟ್ಟಿದ್ದ ದುಡ್ಡಿನಿಂದ ರೇಷನ್ ತಂದು ಅಡುಗೆ ಮಾಡಿ ಅದನ್ನು ಡೆಲಿವರಿ ಮಾಡಲು ಕೊಂಡೊಯ್ಯುತ್ತಾಳೆ. ಆದರೆ ಆರ್ಡರ್ ಕೊಟ್ಟ ಯುವತಿ ಹೇಳಿದ ಮನೆಯಲ್ಲಿ ಯಾರೂ ಇರುವುದಿಲ್ಲ. ಭಾಗ್ಯಾ ಎಷ್ಟು ಬೆಲ್ ಮಾಡಿದರೂ ಆಕೆ ಬಾಗಿಲು ತೆಗೆಯುವುದಿಲ್ಲ. ಕಾಲ್ ಮಾಡೋಣ ಎಂದು ತನಗೆ ಆರ್ಡರ್ ಬಂದ ನಂಬರಿಗೆ ಕರೆ ಮಾಡುತ್ತಾಳೆ. ನಿಮಗೆ ಹೇಳೋದು ಮರೆತೆ, ಮನೆಯಲ್ಲಿ ಫಂಕ್ಷನ್ ಕ್ಯಾನ್ಸಲ್ ಆಗಿದೆ ನಿಮ್ಮ ಊಟ ನನಗೆ ಬೇಡ ಎಂದು ಫೋನ್ ಡಿಸ್ಕನೆಕ್ಟ್ ಮಾಡುತ್ತಾಳೆ.
ಭಾಗ್ಯಾ ಆ ಮನೆ ಮುಂದೆ ತಲೆ ಮೇಲೆ ಕೈ ಹೊತ್ತು ಕುಳಿತಿರುವ ವಿಡಿಯೋವನ್ನು ಆ ಯುವತಿ, ಶ್ರೇಷ್ಠಾಗೆ ಕಳಿಸುತ್ತಾಳೆ. ಅದನ್ನು ನೋಡಿ ಶ್ರೇಷ್ಠಾ ಖುಷಿಯಾಗುತ್ತಾಳೆ. ಇತ್ತ ತಾಂಡವ್ ಖುಷಿ ಖುಷಿಯಾಗಿ ತನ್ಮಯ್ ಸ್ಕೂಲ್ ಫೀಸ್ ಕಟ್ಟಲು ಬರುತ್ತಾನೆ. ಶಿಕ್ಷಕಿ ರೆಕಾರ್ಡ್ ಪುಸ್ತಕ ನೋಡಿ, ನೀವು ಫೀಸ್ ಕಟ್ಟುವ ಅವಶ್ಯಕತೆ ಇಲ್ಲ, ಆಗಲೇ ಫೀಸ್ ಪೇ ಆಗಿದೆ ಎನ್ನುತ್ತಾರೆ. ಅದನ್ನು ಕೇಳಿ ತಾಂಡವ್ ಶಾಕ್ ಆಗುತ್ತಾನೆ. ಯಾರು ಕಟ್ಟಿರಬಹುದು ಎಂದು ಯೋಚಿಸುತ್ತಾ ಹೊರಗೆ ಬರುತ್ತಾನೆ. ತನ್ಮಯ್ ಸ್ಕೂಲ್ ಫೀಸ್ ಕಟ್ಟಿದ್ದು ಅವನಮ್ಮ ಎಂದು ಭಾಗ್ಯಾ ಹೇಳುತ್ತಾಳೆ. ಹೆಂಡತಿಯನ್ನು ನೋಡಿ ತಾಂಡವ್ ಶಾಕ್ ಆಗುತ್ತಾನೆ. ಆಗ ಭಾಗ್ಯಾ ತಾನು ಫುಡ್ ಡೆಲಿವರಿ ಕೊಡಲು ಹೋದಾಗ ನಡೆದ ಘಟನೆಯನ್ನು ನೆನಪಿಸಿಕೊಳ್ಳುತ್ತಾಳೆ.
ಮಾಡಿದ ಅಡುಗೆ ಎಲ್ಲಾ ವ್ಯರ್ಥವಾಯ್ತು, ತನ್ಮಯ್ ಸ್ಕೂಲ್ ಫೀಸ್ ಕಟ್ಟೋಕೆ ಏನು ಮಾಡೋದು ಎಂದು ಯೋಚಿಸುತ್ತಲೇ ಭಾಗ್ಯಾ ಅಲ್ಲಿಂದ ಹೊರಡಲು ಮುಂದಾಗುತ್ತಾಳೆ. ಅಷ್ಟರಲ್ಲಿ ಮನೆ ಒಳಗಿಂದ ಏನೋ ಸದ್ದಾಗುತ್ತದೆ. ಅದನ್ನು ಕೇಳಿಸಿಕೊಂಡು ಭಾಗ್ಯಾ ಮತ್ತೆ ಮನೆ ಬಳಿ ಬಂದು ಕಿಟಕಿಯಿಂದ ನೋಡಿ ಮತ್ತೆ ವಾಪಸ್ ಹೋಗುತ್ತಾಳೆ. ಭಾಗ್ಯಾ ವಾಪಸ್ ಹೋಗಿದ್ಧಾಳಾ, ಇಲ್ಲವಾ ನೋಡೋಣ ಎಂದು ಆ ಯುವತಿ ಮನೆ ಬಾಗಿಲು ತೆಗೆದು ಹೊರಗೆ ನೋಡುತ್ತಾಳೆ. ಅಷ್ಟರಲ್ಲಿ ಭಾಗ್ಯಾ ಮತ್ತೆ ವಾಪಸ್ ಬರುತ್ತಾಳೆ. ನೀವು ಒಳಗೆ ಇದ್ದುಕೊಂಡು ಈ ರೀತಿ ಏಕೆ ಮಾಡಿದಿರಿ ಎಂದು ಭಾಗ್ಯಾ ಮೊದಲು ತಾಳ್ಮೆಯಿಂದ ಕೇಳುತ್ತಾಳೆ. ಆದರೆ ಆಕೆ ಏನೂ ಉತ್ತರಿಸುವುದಿಲ್ಲ. ಮತ್ತೊಮ್ಮ ಏರುದನಿಯಲ್ಲಿ ಕೇಳಿದಾಗ ಆಕೆ ಎಲ್ಲವನ್ನೂ ಹೇಳುತ್ತಾಳೆ.
ಭಾಗ್ಯಾ ಕೋಪದಿಂದ ಶ್ರೇಷ್ಠಾ ಮನೆಗೆ ಹೋಗಿ ಅವಳ ಕೆನ್ನೆಗೆ ಬಾರಿಸಿ ಇನ್ನೂ ನನ್ನ ಜೀವನದಲ್ಲಿ ಏನು ಮಾಡಬೇಕೆಂದುಕೊಂಡಿದ್ದೀಯ? ನನ್ನ ಬಿಸ್ನೆಸ್ ಹಾಳು ಮಾಡಲು ಪ್ರಯತ್ನಿಸುತ್ತಿದ್ದೀಯ ಎಂದು ರೇಗುತ್ತಾಳೆ. ಅವಳ ಪರ್ಸ್ ಕಿತ್ತುಕೊಂಡು ಅದರಲ್ಲಿ ಒಂದಿಷ್ಟು ಹಣ ತೆಗೆದುಕೊಂಡು, ಇದು ನಾನು ಮಾಡಿದ ಅಡುಗೆಗೆ ಬರಬೇಕಿದ್ದ ಹಣ, ಇವತ್ತೇ ಅಲ್ಲ ಇನ್ಮುಂದೆ ಕೂಡಾ ಅಷ್ಟೇ ನನಗೆ ಬೇಕಿದ್ದನ್ನು ನಾನು ತೆಗೆದುಕೊಂಡೇ ತೀರುತ್ತೇನೆ ಎಂದು ಎಚ್ಚರಿಸಿ ಅಲ್ಲಿಂದ ಸ್ಕೂಲ್ಗೆ ಬಂದು ಫೀಸ್ ಕಟ್ಟುತ್ತಾಳೆ. ಅದನ್ನು ಕೇಳಿ ತಾಂಡವ್ ಕೋಪಗೊಳ್ಳುತ್ತಾನೆ. ಶ್ರೇಷ್ಠಾಗೆ ಹೊಡೆಯೋಕೆ ನಿನಗೆ ಎಷ್ಟು ಧೈರ್ಯ ಎಂದು ತಾಂಡವ್ ಕೇಳುತ್ತಾನೆ. ಅಯ್ಯೋ ಶ್ರೇಷ್ಠಾ , ನನ್ನ ಕೈಲಿ ಒದೆ ತಿನ್ನೋದು ಇದೇ ಮೊದಲ ಬಾರಿ ಅಲ್ಲ ತಾನೇ ಎಂದು ಭಾಗ್ಯಾ ಹೇಳುತ್ತಾಳೆ.
ಒಂದು ಸಾರಿ ಗೆದ್ದೆ ಎಂದು ಬೀಗಬೇಡ ಎಂದು ತಾಂಡವ್ ಹೇಳುತ್ತಾನೆ. ಒಂದೇ ಸಾರಿನಾ? ತಾಂಡವ್ ಅವರೇ ನಿಮಗೆ ಲೆಕ್ಕ ಬರುವುದಿಲ್ಲವಾ? ನಾನು ನಿಮ್ಮ ಮುಂದೆ ಎಷ್ಟು ಸಾರಿ ಗೆದ್ದಿದ್ದೇನೆ ಎಂದು ನೀವು ನಿಮ್ಮ ಹೆಂಡತಿ ಶ್ರೇಷ್ಠಾ ಇಬ್ಬರೂ ಒಮ್ಮೆ ಒಟ್ಟಿಗೆ ಕುಳಿತು ಲೆಕ್ಕ ಹಾಕಿ, ಇನ್ಮುಂದೆ ಕೂಡಾ ನೀವು ನನ್ನನ್ನು ಏನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ಭಾಗ್ಯಾ ಖಡಕ್ ಮಾತುಗಳನ್ನಾಡಿ ಮಗನನ್ನು ಕರೆದುಕೊಂಡು ಅಲ್ಲಿಂದ ಹೊರಡುತ್ತಾಳೆ. ಭಾಗ್ಯಾ ಈ ಬಾರಿಯೂ ಗೆದ್ದಿದ್ದನ್ನು ನೋಡಿ ತಾಂಡವ್ಗೆ ಮತ್ತೊಮ್ಮೆ ಮುಖಭಂಗವಾಗುತ್ತದೆ.
ಇನ್ನಾದರೂ ಶ್ರೇಷ್ಠಾ-ತಾಂಡವ್ ಭಾಗ್ಯಾಳಿಂದ ದೂರ ಇರುತ್ತಾರಾ ಕಾದು ನೋಡಬೇಕು.