ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಭಾನುವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 720ರ ಎಪಿಸೋಡ್ ಕಥೆ ಇಲ್ಲಿದೆ. ಸಂಸಾರ ನಡೆಸಬೇಕು, ಮಗಳ ಹುಟ್ಟುಹಬ್ಬ ಆಚರಿಸಬೇಕು, ಅವಳಿಗೆ ಏನಾದರೂ ಗಿಫ್ಟ್ ಕೊಡಬೇಕು ಎಂದು ಭಾಗ್ಯಾ ಹೇಗೋ ಕಷ್ಟ ಪಟ್ಟು ಕೆಲಸ ಗಿಟ್ಟಿಸಿಕೊಳ್ಳುತ್ತಾಳೆ. ಯಾವ ಹೋಟೆಲ್ನಲ್ಲೂ ಅವಳಿಗೆ ಶೆಫ್ ಆಗಿ ಕೆಲಸ ಸಿಗುವುದಿಲ್ಲ. ಆದರೆ ಪಾರ್ಟಿಗಳಲ್ಲಿ ಬಣ್ಣ ಬಳಿದುಕೊಂಡು ಮಕ್ಕಳನ್ನು, ಹಿರಿಯರನ್ನು ರಂಜಿಸುವ ಜೋಕರ್ ಆಗಿ ಭಾಗ್ಯಾ ಕೆಲಸ ಮಾಡಲು ಶುರು ಮಾಡುತ್ತಾಳೆ. ಬದುಕು ನಡೆಸಲು ಹೇಗೋ ಒಂದು ಕೆಲಸ ಸಿಕ್ಕಿತಲ್ಲ, ಇದರಲ್ಲೇ ತೃಪ್ತಿ ಪಡೋಣ, ದೊರೆತ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡೋಣ ಎಂದುಕೊಳ್ಳುತ್ತಾಳೆ.
ಅದೇ ರೆಸಾರ್ಟ್ಗೆ ತಾಂಡವ್ ಹಾಗೂ ಶ್ರೇಷ್ಠಾ ಇಬ್ಬರೂ ತನ್ವಿ ಹುಟ್ಟುಹಬ್ಬ ಆಚರಿಸಲು ಬರುತ್ತಾರೆ. ಅದನ್ನು ನೋಡಿ ಭಾಗ್ಯಾ ದುಃಖದ ಕಟ್ಟೆ ಒಡೆಯುತ್ತದೆ. ಮನೆಯಲ್ಲಿ ಮಗಳ ಹುಟ್ಟುಹಬ್ಬ ಆಚರಿಸಲು ನಾನು ಇಷ್ಟು ಕಷ್ಟ ಪಡುತ್ತಿದ್ದರೆ ತನ್ವಿ ಇಲ್ಲ ಅಪ್ಪನ ಜೊತೆ ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದಾಳಲ್ಲ ಎಂದು ಭಾಗ್ಯಾ ಬೇಸರ ವ್ಯಕ್ತಪಡಿಸುತ್ತಾಳೆ. ತಾನೇ ಕೇಕ್ ತೆಗೆದುಕೊಂಡು ಅವರ ಮುಂದೆ ಇಡುತ್ತಾಳೆ. ಭಾಗ್ಯಾ, ಮುಖಕ್ಕೆ ಬಣ್ಣ ಬಳಿದುಕೊಂಡಿರುವುದರಿಂದ ಅವಳನ್ನು ಯಾರೂ ಕಂಡುಹಿಡಿಯುವುದಿಲ್ಲ. ಮಗಳಿಗೆ ವಿಶ್ ಮಾಡೋಣ, ಅವಳ ಜೊತೆ ಡ್ಯಾನ್ಸ್ ಮಾಡೋಣ ಎಂದುಕೊಂಡರೆ ಶ್ರೇಷ್ಠಾ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ.
ಕೆಲಸ ಮುಗಿಸಿಕೊಂಡು ಓನರ್ ಬಳಿ ಮನವಿ ಮಾಡಿ ಭಾಗ್ಯಾ ಅಡ್ವಾನ್ಸ್ ಪಡೆಯುತ್ತಾಳೆ. ಆತ ಕಂಡಿಷನ್ ಮಾಡಿ ಭಾಗ್ಯಾಗೆ ದುಡ್ಡು ಕೊಡುತ್ತಾನೆ. ಅದೇ ದುಡ್ಡಿನಲ್ಲಿ ಭಾಗ್ಯಾ, ಮಗಳಿಗೆ ಮೊಬೈಲ್ ಖರೀದಿಸುತ್ತಾಳೆ. ಅವಳ ಅಪ್ಪ ಗ್ರ್ಯಾಂಡ್ ಆಗಿ ಬರ್ತ್ಡೇ ಆಚರಿಸಿದ್ದಾರೆ, ದುಬಾರಿ ಡ್ರೆಸ್ ಕೊಡಿಸಿದ್ದಾರೆ, ದುಬಾರಿ ಗಿಫ್ಟ್ ಕೊಡಿಸಿದ್ದಾರೆ, ಅದರ ಮುಂದೆ ನನ್ನ ಮಗಳಿಗೆ ಇದೆಲ್ಲಾ ಇಷ್ಟವಾಗುವುದೋ ಇಲ್ಲವೋ ಎಂದು ಯೋಚಿಸುತ್ತಲೇ ಭಾಗ್ಯಾ ಮನೆ ಕಡೆ ಹೆಜ್ಜೆ ಹಾಕುತ್ತಾಳೆ. ಇತ್ತ ಮನೆಯವರೆಲ್ಲಾ ಭಾಗ್ಯಾ ಬರುವುದನ್ನೇ ಕಾಯುತ್ತಿರುತ್ತಾರೆ. ಭಾಗ್ಯಾ ಬಂದ ಕೂಡಲೇ ಪೂಜಾ ಹಾಗೂ ಕುಸುಮಾ ನೂರೆಂಟು ಪ್ರಶ್ನೆಗಳನ್ನು ಕೇಳುತ್ತಾರೆ. ಭಾಗ್ಯಾ ಕೆನ್ನೆ ಮೇಲಿನ ಬಣ್ಣವನ್ನು ನೋಡಿ ಪೂಜಾ ಆಶ್ಚರ್ಯಗೊಳ್ಳುತ್ತಾಳೆ.
ಅದನ್ನು ಭಾಗ್ಯಾ ಬಳಿ ಕೇಳಿದಾಗ ಅವಳು ಏನೋ ಸುಳ್ಳು ಹೇಳಿ ಮಾತು ಮರೆಸುತ್ತಾಳೆ. ಹುಟ್ಟುಹಬ್ಬ ಆಚರಣೆಗೆ ಎಲ್ಲಾ ತಯಾರಿ ಆಗಿದ್ಯಾ ಎಂದು ಭಾಗ್ಯಾ ಕೇಳುತ್ತಾಳೆ. ನಿನಗೆ ನಿಜವಾಗಿಯೂ ಕೆಲಸ ಸಿಕ್ಕಿದ್ಯಾ? ಏನು ಕೆಲಸ, ಎಲ್ಲಿ ಕೆಲಸ ಮಾಡುತ್ತಿರುವುದು ಎಂದು ಪೂಜಾ ಕೇಳುತ್ತಾಳೆ. ಅಷ್ಟರಲ್ಲಿ ಮಧ್ಯೆ ಬರುವ ಕುಸುಮಾ, ಇನ್ನಾವ ಕೆಲಸ? ನನ್ನ ಸೊಸೆಗೆ ಮೊದಲಿಗಿಂತ ದೊಡ್ಡ ಹೋಟೆಲ್ನಲ್ಲೇ ಶೆಫ್ ಆಗಿ ಕೆಲಸ ಸಿಕ್ಕಿರುತ್ತದೆ. ಅವಳ ಕೈಕೆಳಗೆ ಕೆಲಸ ಮಾಡಲು ಎಷ್ಟೋ ಜನ ಇರುತ್ತಾರೆ ಎನ್ನುತ್ತಾಳೆ. ಹೌದು ಅತ್ತೆ ನೀವು ಹೇಳುವುದು ಸರಿ, ಇದು ಒಂಥರಾ ಸುಲಭದ ಕೆಲಸ, ಕುಣಿದಾಡುತ್ತಾ ಮಾಡುವ ಕೆಲಸ ಎನ್ನುತ್ತಾಳೆ. ಭಾಗ್ಯಾ ಮಾತಿಗೆ ಕುಸುಮಾ ಸಮಾಧಾನಗೊಂಡರೂ ಪೂಜಾಗೆ ಮಾತ್ರ ಏನೋ ಅನುಮಾನ ಕಾಡುತ್ತದೆ.
ತನ್ವಿ ಹುಟ್ಟುಹಬ್ಬ ಆಚರಿಸಲು ಭಾಗ್ಯಾ ಎಲ್ಲಾ ತಯಾರಿ ಮಾಡುತ್ತಾಳೆ. ತನ್ವಿಗೆ ಹೊಸ ಬಟ್ಟೆ ತಂದಿದ್ದೀಯ ಎಂದು ಪೂಜಾ ಕೇಳುತ್ತಾಳೆ. ಅದರೆ ಮಗಳಿಗೆ ಬಟ್ಟೆ ತರಲು ಭಾಗ್ಯಾ ಬಳಿ ಅಷ್ಟು ಹಣ ಇರುವುದಿಲ್ಲ. ಹೊಸ ಬಟ್ಟೆ ಏಕೆ? ಕಳೆದ ಬಾರಿ ಸಂಕ್ರಾಂತಿಗೆ ಕೊಡಿಸಿರುವುದನ್ನೇ ಹಾಕಿಕೊಳ್ಳುತ್ತಾಳೆ. ಎಂದು ಕುಸುಮಾ ಹೇಳುತ್ತಾಳೆ. ಭಾಗ್ಯಾ ತನ್ನ ಕೈಯಾರಿ ಮಗಳಿಗೆ ಕೇಕ್ ತಯಾರಿಸುತ್ತಾಳೆ. ಅಷ್ಟರಲ್ಲಿ ತಾಂಡವ್, ತನ್ವಿಯನ್ನು ಕರೆತರುತ್ತಾನೆ. ಇಷ್ಟು ತಡವಾಗಿದೆ, ಅಜ್ಜಿ ನನಗೆ ಬೈಯ್ಯುತ್ತಾರೆ ಎಂದು ತನ್ವಿ ಭಯಗೊಳ್ಳುತ್ತಾಳೆ. ನಾನು ಬಂದು ಅಜ್ಜಿ ಬಳಿ ಮಾತನಾಡುತ್ತೇನೆ ಎಂದು ತಾಂಡವ್ ಮನೆ ಒಳಗೆ ತನ್ವಿ ಕರೆದೊಯ್ಯುತ್ತಾನೆ. ಅವನ ಜೊತೆಗೆ ಬರುವ ಶ್ರೇಷ್ಠಾಳನ್ನು ತಡೆದು ನೀನು ಇಲ್ಲೇ ಇರು ಎನ್ನುತ್ತಾನೆ.
ತನ್ವಿ ಹಾಗೂ ತಾಂಡವ್ ನೋಡಿ ಎಲ್ಲರೂ ಖುಷಿಯಾಗುತ್ತಾರೆ. ನೀನು ಇಲ್ಲಿ ಏಕೆ ಬಂದೆ? ಒಂದು ಬಾರಿ ಸಂಬಂಧ ಕಡಿದುಕೊಂಡು ಹೋದವನು ಪದೇ ಪದೆ ಇಲ್ಲಿಗೆ ಬರಬಾರದು ಎಂದು ಧರ್ಮರಾಜ್, ಮಗನಿಗೆ ರೇಗುತ್ತಾನೆ. ಭಾಗ್ಯಾ ಮಗಳ ಬರ್ತಡೇಯನ್ನು ಹೇಗೆ ಆಚರಿಸುತ್ತಾಳೆ ಎಂದು ನೋಡಲು ಬಂದೆ ಎನ್ನುತ್ತಾನೆ.
ಬರ್ತ್ಡೇ ಆಚರಣೆಯಿಂದ ತನ್ವಿ ಖುಷಿಯಾಗುತ್ತಾಳಾ? ಭಾಗ್ಯಾ ಅರೇಂಜ್ಮೆಂಟ್ ಬಗ್ಗೆ ತಾಂಡವ್ ಏನು ಹೇಳುತ್ತಾನೆ? ಬುಧವಾರದ ಎಪಿಸೋಡ್ನಲ್ಲಿ ತಿಳಿಯಲಿದೆ.