ಏನು ಬೆಂಗಳೂರಿನಿಂದ ಚೆನ್ನೈಗೆ 3೦ ನಿಮಿಷದಲ್ಲಿ ತಲುಪಬಹುದಾ….? ಎಂದು ಉದ್ಘಾರ ತೆಗೆಯುತ್ತಿದ್ದರೆ ಅದಕ್ಕೆ ಉತ್ತರ ಹೌದು. ಕೇವಲ ಅರ್ಧಗಂಟೆಯಲ್ಲಿ ಬೆಂಗಳೂರಿನಿಂದ ಚೆನ್ನೈ ತಲುಪಬಹುದಾಗಿದೆ. ಎರಡು ಮಹಾನಗರಗಳನ್ನು ಕ್ರಮಿಸಲು ಇಷ್ಟೇ ಸಮಯ ಸಾಕು ಎಂದು ಹೇಳುತ್ತಿದೆ ಹೈಪರ್ಲೂಪ್ ಹೈಟೆಕ್ ಸಾರಿಗೆ ತಂತ್ರಜ್ಞಾನ.
ಕೇಂದ್ರ ರೈಲ್ವೆ ಇಲಾಖೆಯ ಬೆಂಬಲದೊಂದಿಗೆ ಐಐಟಿ ಮದ್ರಾಸ್ 422 ಮೀಟರ್ ಪರೀಕ್ಷಾ ಟ್ರ್ಯಾಕನ್ನು ರಚಿಸಿ, ವಾಣಿಜ್ಯ ಸಾರಿಗೆಗಾಗಿ 5೦ ಕಿ.ಮೀ. ಹೈಪರ್ಲೂಪ್ ಕಾರಿಡಾರ್ ಅಭಿವೃದ್ಧಿಗೊಳಿಸುವಲ್ಲಿ ಕಾರ್ಯನಿರತವಾಗಿದೆ. ಈ ಮೂಲಕ ವಿಶ್ವದ ಅತಿ ಉದ್ದದ ಹೈಪರ್ಲೂಪ್ ಟ್ಯಾçಕ್ ನಿರ್ಮಿಸುವಲ್ಲಿ ಭಾರತ ನಿರತವಾಗಿದೆ. ಗಂಟೆಗೆ 1,2೦೦ ಕಿ.ಮೀ. ವೇಗ ಕ್ರಮಿಸುವ ಮೂಲಕ ಸಾರಿಗೆ ವ್ಯವಸ್ಥೆಯಲ್ಲಿ ಹೈಟೆಕ್ ತಂತ್ರಜ್ಞಾನ ಕ್ರಾಂತಿಯನ್ನುಂಟು ಮಾಡಬಹುದಾಗಿದೆ.

ಕಡಿಮೆ ಸಮಯ, ಅತಿ ಹೆಚ್ಚು ದೂರ
ದೇಶದ ಸಂಪರ್ಕದಲ್ಲಿ ಕ್ರಾಂತಿಯನ್ನುಂಟು ಮಾಡಲು ಹೊರಟಿರುವ ಭಾರತದ ಮೊದಲ ಹೈಪರ್ಲೂಪ್ ಯೋಜನೆ ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಹೈಪರ್ಲೂಪ್ ಒಂದು ಕ್ರಾಂತಿಕಾರಿ ಸಾರ್ವಜನಿಕ ಹೈಟೆಕ್ ಸಾರಿಗೆ ವ್ಯವಸ್ಥೆಯಾಗಿದೆ. ಈ ತಂತ್ರಜ್ಞಾನದಲ್ಲಿ ಪಾಡ್ ರೀತಿಯ ಕ್ಯಾಪ್ಸಲ್ಗಳನ್ನು ಕಡಿಮೆ ಒತ್ತಡದ ಕೊಳವೆಯೊಳಗೆ ತಳಲ್ಪಡಲಾಗುತ್ತದೆ. ಇದರ ವಿಶೇಷತೆ ಎಂದರೆ ಹಳಿಗಳನ್ನು ಬಳಸುವ ಬದಲು ಪಾಡ್ಗಳನ್ನು ಮ್ಯಾಗ್ನೆಟಿಕ್ ಫೋರ್ಸ್ ಬಳಸಿಕೊಂಡು ಗಾಳಿಯಲ್ಲಿ ತೇಲಿಬಿಡಲಾಗುತ್ತದೆ. ಇದನ್ನೇ ಮ್ಯಾಗ್ನೆಟಿಕ್ ಲೆವಿಟೇಶನ್ ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆಯು ಘರ್ಷಣೆ ಹಾಗೂ ಗಾಳಿಯ ಪ್ರತಿರೋಧವನ್ನು ನಿವಾರಿಸಿ, ಪಾಡ್ ಅನ್ನು ಗಂಟೆಗೆ 1೦೦೦ ಕಿಲೋ ಮೀಟರ್ಗಿಂತ ಹೆಚ್ಚಿನ ವೇಗದಲ್ಲಿ ಚಲಿಸುವಂತೆ ಮಾಡುತ್ತದೆ.

ಐಐಟಿ ಮದ್ರಾಸ್ನ ಸಂಶೋಧನೆ:
ಐಐಟಿ ಮದ್ರಾಸ್ ಈ ತಂತ್ರಜ್ಞಾನದ ಬಗ್ಗೆ ಸಂಶೋಧನೆ ನಡೆಸಿ ತಿಂಗಳುಗಳೇ ಕಳಿದಿದ್ದು, ಈಗ ಅದರ ಮೂಲ ಮಾದರಿಯನ್ನು ಅಭಿವೃದ್ಧಿಪಡಿಸಿದೆ. ಈ ಯೋಜನೆಗೆ ಕೇಂದ್ರ ಸರ್ಕಾರದ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಈ ಯೋಜನೆಯು ಪ್ರಸ್ತುತ ಪ್ರಾಯೋಗಿಕ ಹಂತದಲ್ಲಿದ್ದು, ಭವಿಷ್ಯದಲ್ಲಿ ಭಾರತದಲ್ಲಿನ ಸಾರಿಗೆ ವ್ಯವಸ್ಥೆಗೆ ಹೊಸ ವ್ಯಾಖ್ಯಾನ ನೀಡಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಶನಿವಾರ ಚೆನ್ನೈನಲ್ಲಿ ಹೈಪರ್ಲೂಪ್ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿ ಆದಷ್ಟು ಬೇಗ ಬೆಂಗಳೂರು ಹಾಗೂ ಚೆನ್ನೈ ನಡುವಿನ ಪ್ರಯಾಣ ಸಮಯ ಕೇವಲ 30 ನಿಮಿಷಕ್ಕೆ ಇಳಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೈಪರ್ಲೂಪ್ ತಂತ್ರಜ್ಞಾನದ ಕ್ರಾಂತಿ:
ಈ ತಂತ್ರಜ್ಞಾನವು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದರ ಮೂಲಕ ಪ್ರಯಾಣದಲ್ಲಿ ಕ್ರಾಂತಿಯನ್ನುಂಟು ಮಾಡುವ ಗುರಿಯನ್ನು ಹೊಂದಿದೆ. ಇದು ಸಾಂಪ್ರದಾಯಿಕ ರೈಲು ಹಾಗೂ ವಾಯು ಸಾರಿಗೆಗಳ ಪರ್ಯಾಯವಾಗಿ ಕೆಲಸ ಮಾಡಲಿದೆ. 1970ರ ದಶಕದಲ್ಲಿ ಸ್ವಿಸ್ ಪ್ರಾಧ್ಯಾಪಕ ಮಾರ್ಸೆಲ್ ಜುಫರ್ ಮೊಟ್ಟ ಮೊದಲ ಬಾರಿಗೆ ಈ ಪರಿಕಲ್ಪನೆಯನ್ನು ಪ್ರಾಸ್ಥಪಿಸಿದ್ದರು. ಹಾಗೆಯೇ, 1992ರಲ್ಲಿ ಸ್ವಿಸ್ಮೆಟ್ರೋ ಎಸ್ಎ ಕಂಪನಿ ಕಡೆಯಿಂದ ಆರಂಭಿಕ ಪ್ರಯತ್ನವು ಕಂಡುಬಂದಿತ್ತು.