ಜಯಾ ಬಚ್ಚನ್ ಮತ್ತು ಐಶ್ವರ್ಯಾ ಬಚ್ಚನ್ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ ಜಯಾ ತಮ್ಮ ಸೊಸೆಯ ಬಗ್ಗೆ ಮಾತನಾಡಿದ್ದಾರೆ. ಬಳಕೆದಾರರು ಈ ವಿಡಿಯೋ ನೋಡಿ ತರಹೇವಾರಿ ಕಾಮೆಂಟ್ ಮಾಡುತ್ತಿದ್ದು, ಪೂರ್ತಿ ವಿಡಿಯೋ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ…
ಜಯಾ ಬಚ್ಚನ್ ಮತ್ತು ಐಶ್ವರ್ಯಾ ಬಚ್ಚನ್ ಆಗಾಗ್ಗೆ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲಿ, ಸುದ್ದಿ ವಾಹಿನಿಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅತ್ತೆ ಮತ್ತು ಸೊಸೆಯ ಬಗ್ಗೆ ಕೇಳಿಬರುತ್ತಲೇ ಇರುತ್ತದೆ. ಏತನ್ಮಧ್ಯೆ, ಈಗ ಜಯಾ ಮತ್ತು ಐಶ್ವರ್ಯಾ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಜಯಾ ಬಚ್ಚನ್ ತಮ್ಮ ಸೊಸೆ ಐಶ್ ಬಗ್ಗೆ ಮಾತನಾಡುತ್ತಿರುವುದು ಕಂಡುಬರುತ್ತದೆ.
ಐಶ್ವರ್ಯಾ ಮತ್ತು ಜಯಾ ಅವರ ವಿಡಿಯೋ
ಅಂದಹಾಗೆ ಈ ವಿಡಿಯೋವನ್ನು ಐಶ್ವರ್ಯಾ ಅವರ ಫ್ಯಾನ್ಸ್ ಪೇಜ್ನಲ್ಲಿ ಹಂಚಿಕೊಳ್ಳಲಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋದಲ್ಲಿ “ನಾನು ತುಂಬಾ ಸಿಹಿ ಮತ್ತು ಮುದ್ದಾದ ಹುಡುಗಿಗೆ ಅತ್ತೆಯಾಗಲಿದ್ದೇನೆ, ಆಕೆ ಹೆಚ್ಚಿನ ಮೌಲ್ಯ, ಘನತೆ ಮತ್ತು ಸುಂದರವಾದ ನಗುವನ್ನು ಹೊಂದಿರುವುದನ್ನು ಕಾಣಬಹುದು. ನಾನು ನಿನ್ನನ್ನು ಕುಟುಂಬಕ್ಕೆ ಸ್ವಾಗತಿಸುತ್ತೇನೆ, ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಪ್ರಶಂಸಿಸುತ್ತಿದ್ದಾರೆ. ಜಯಾ ಅವರ ಈ ಮಾತುಗಳನ್ನು ಕೇಳಿ, ಐಶ್ವರ್ಯಾ ಭಾವುಕರಾಗುತ್ತಾರೆ ಮತ್ತು ಅವರ ಕಣ್ಣುಗಳಿಂದ ನೀರು ಹರಿಯಲು ಪ್ರಾರಂಭಿಸುತ್ತದೆ.
ಜಯಾ ಬಚ್ಚನ್ ಹೇಳಿದ್ದೇನು?
ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ಈ ವಿಡಿಯೋ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ವಿವಾಹಕ್ಕೂ ಮುಂಚೆಯದ್ದಾಗಿದ್ದು, ಇದರಲ್ಲಿ ಅವರು ಐಶ್ವರ್ಯಾ ಅವರನ್ನು ತಮ್ಮ ಕುಟುಂಬಕ್ಕೆ ಸ್ವಾಗತಿಸುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಫಿಲ್ಮ್ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಜಯಾ ಪ್ರಶಸ್ತಿ ಸ್ವೀಕರಿಸಲು ವೇದಿಕೆಯ ಮೇಲೆ ಹೋದಾಗ ತೆಗೆದದ್ದು. ಈಗ, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಬಳಕೆದಾರರು ಇದರ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ.
ಜನರ ಕಾಮೆಂಟ್ ಹೀಗಿದೆ ನೋಡಿ..
ಈ ಪೋಸ್ಟ್ಗೆ ಕಾಮೆಂಟ್ ಮಾಡುತ್ತಾ ಓರ್ವ ಬಳಕೆದಾರರು “ನೀವು ಅವರಿಗೆ ಯಾವಾಗಲೂ ಇಷ್ಟೊಂದು ಪ್ರೀತಿ ಮತ್ತು ಗೌರವವನ್ನು ಕೊಟ್ಟಿದ್ದೀರಿ ಎಂದು ನಾನು ಅಂದುಕೊಳ್ಳುತ್ತೇನೆ” ಎಂದು ಹೇಳಿದರೆ, ಮತ್ತೊಬ್ಬ ಬಳಕೆದಾರರು “ಇದು ಹಳೆಯ ವಿಡಿಯೋ” ಎಂದು ಹೇಳಿದ್ದಾರೆ. ಮೂರನೇ ಬಳಕೆದಾರರು “ಇದೇ ಸಂಭಾಷಣೆಯನ್ನು ಕರಿಷ್ಮಾ ಕಪೂರ್ಗೂ ಹೇಳಲಾಗಿದೆ” ಎಂದು ಹೇಳಿದರೆ, ಕೆಲವರು “ಇದು ಕೇವಲ ಶೋ ಆಫ್ಗಾಗಿ”, “ಇದರಲ್ಲಿ ಅಳಲು ಏನಿದೆ” ಎಂದು ವಿಡಿಯೋ ನೋಡಿದ ನಂತರ ಜನರು ಕಾಮೆಂಟ್ಗಳನ್ನು ಮಾಡಿದ್ದಾರೆ.
ಐಶ್ವರ್ಯಾ ರೈ ಅವರನ್ನು ಮದುವೆಯಾಗುವ ಮುನ್ನ ಅಭಿಷೇಕ್ ಬಚ್ಚನ್ ಮತ್ತು ಕರಿಷ್ಮಾ ಕಪೂರ್ ವಿವಾಹವಾಗುವ ಬಗ್ಗೆ ಮಾತುಕತೆ ನಡೆದಿತ್ತು. ಜಯಾ ಬಚ್ಚನ್ ಸಹ ಕರಿಷ್ಮಾ ತಮ್ಮ ಸೊಸೆ ಎಂದು ಒಪ್ಪಿಕೊಂಡಿದ್ದರು. ಆದರೆ ಏಕೋ ಏನೋ ಈ ಮದುವೆ ನಡೆಯಲಿಲ್ಲ. ಈ ಹಿಂದೆ ಅಭಿಷೇಕ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವದಂತಿಗಳ ಮಧ್ಯೆ, ಜಯಾ ಬಚ್ಚನ್ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿತ್ತು. ಇದರಲ್ಲಿ ಅವರು ಕರಿಷ್ಮಾ ಕಪೂರ್ ಅವರನ್ನು ತನ್ನ ಸೊಸೆ ಎಂದು ಕರೆದು, ಅವರ ಮಗ ಅಭಿಷೇಕ್ ಬಚ್ಚನ್ ಅವರೊಂದಿಗೆ ನಿಶ್ಚಿತಾರ್ಥವನ್ನು ಘೋಷಿಸಿರುವುದನ್ನು ನೋಡಬಹುದು.

ಹರಿದಾಡುತ್ತಲೇ ಇತ್ತು ರೂಮರ್ಸ್
ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವಿನ ಭಿನ್ನಾಭಿಪ್ರಾಯಗಳ ಸುದ್ದಿ ಮೊದಲು ಬೆಳಕಿಗೆ ಬಂದದ್ದು ಅನಂತ್ ಅಂಬಾನಿ ಅವರ ಮದುವೆಯಲ್ಲಿ. ಅಂದು ಬಚ್ಚನ್ ಕುಟುಂಬದ ಜೊತೆ ಬರದೆ, ಮಗಳ ಜೊತೆ ಪ್ರತ್ಯೇಕವಾಗಿ ಬಂದಿದ್ದರು ಐಶ್ವರ್ಯಾ. ಅಂದಿನಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಹೆಚ್ಚುತ್ತಿದೆ ಎಂಬ ಸುದ್ದಿಯೂ ಹರಿದಾಡುತ್ತಿದ್ದು, ಶೀಘ್ರದಲ್ಲೇ ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎಂದು ಹೇಳಲಾಗಿತ್ತು. ಅಷ್ಟೇ ಅಲ್ಲ, ಐಶ್ವರ್ಯಾ ರೈ ಬಚ್ಚನ್ ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ ಐಶ್ವರ್ಯಾ ರೈ ಆಗಲಿ ಅಥವಾ ಬಚ್ಚನ್ ಕುಟುಂಬದ ಯಾವುದೇ ಸದಸ್ಯರಿಂದ ಈ ವಿಷಯದ ಬಗ್ಗೆ ಬಗ್ಗೆ ಯಾವುದೇ ಔಪಚಾರಿಕ ಹೇಳಿಕೆ ಹೊರಬಿದ್ದಿಲ್ಲ.