ಸಿನಿಮಾ ಕ್ಷೇತ್ರದ ಅಗ್ರಗಣ್ಯ ಪ್ರಶಸ್ತಿ ಎಂದರೆ ಅದು ಆಸ್ಕರ್. ಈ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯಲು ಕಲಾವಿದರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಈ ಪ್ರಶಸ್ತಿ ಪಡೆಯುವುದು ಅಷ್ಟು ಸುಲಭವಲ್ಲ, ಆಸೆ ಪಟ್ಟವರಿಗೆಲ್ಲ ಈ ಪ್ರಶಸ್ತಿ ದೊರೆಯುವುದು ಇಲ್ಲ. ಆಸ್ಕರ್ ಪ್ರಶಸ್ತಿ ಪಡೆದವರಂತು ಈ ಅತ್ಯುನ್ನತ ಪ್ರಶಸ್ತಿಯನ್ನು ಜೋಪಾನವಾಗಿಡುತ್ತಾರೆ. ಹೀಗಿರುವಾಗ ಆಸ್ಕರ್ ಪ್ರಶಸ್ತಿ ಪಡೆದ ನಟಿಯೊಬ್ಬಳು ಈ ಪ್ರಶಸ್ತಿಯನ್ನು ಬೇಕಾ ಬಿಟ್ಟಿಯಾಗಿ ಬಳಸಿ ವಿವಾದಕ್ಕೆ ಗುರಿಯಾಗಿದ್ದಾಳೆ.
ಹೌದು, ಹಾಲಿವುಡ್ ನಟಿ ಗ್ವಿನೆಲ್ ಪಾಲ್ಟ್ರೋ ಆಸ್ಕರ್ ಪ್ರಶಸ್ತಿಯನ್ನು ತನ್ನ ಮನೆಯ ಬಾಗಿಲ ಬಳಿ ಇಟ್ಟಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯ ಹರಿದಾಡುತ್ತಿದ್ದು, ನಟಿಯ ಬಗ್ಗೆ ಅನೇಕರು ಕೆಂಡಕಾರಿದ್ದಾರೆ. ಗ್ವಿನೆಲ್ ಪಾಲ್ಟ್ರೋ ಅವರು ಪ್ರತಿಷ್ಠಿತ ವೋಗ್ ಪತ್ರಿಕೆ ಸಂದರ್ಶನದ ವೇಳೆ ಆಸ್ಕರ್ ಪ್ರಶಸ್ತಿಯನ್ನ ತನ್ನ ಮನೆಯ ಬಾಗಿಲ ಡೋರ್ ಸ್ಟಾಪರ್ ಆಗಿ ಬಳಸುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ.
ಅಂದಹಾಗೆಯೇ, 1998ರಲ್ಲಿ ಗ್ವಿನೆಲ್ ಪಾಲ್ಟ್ರೋ ಅವರಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿತು. ಜಾನ್ ಮ್ಯಾಡೆನ್ ನಿರ್ದೇಶಿಸಿದ ಷೇಕ್ಸ್ ಪಿಯರ್ ಇನ್ ಲವ್ ಚಿತ್ರದ ನಟನೆಗಾಗಿ ಆಸ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆದರೆ ಈ ನಟಿ ಮಾತ್ರ ಅದೇ ಪ್ರಶಸ್ತಿಯನ್ನು ಬಳಸಿಕೊಂಡ ರೀತಿ ಕಂಡು ಕಲಾಭಿಮಾನಿಗಳು ಬಗೆ ಬಗೆಯ ಕಾಮೆಂಟ್ ಹಾಕುತ್ತಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.



