ಡಾ. ರಾಜ್ ಕುಮಾರ್ ಈ ಹೆಸರನ್ನ ಕೇಳಿದರೆ ಯಾರಿಗೆ ತಾನೇ ಸಂತೋಷ ಆಗೋದಿಲ್ಲ ಹೇಳಿ. ಕನ್ನಡ ಚಿತ್ರರಂಗ ಮತ್ತು ಕರ್ನಾಟಕದ ಜನತೆ ಸದಾ ನೆನಪಿನಲ್ಲಿ ಇಡುವಂಥ ಹೆಸರು ಇದು. ರಾಜ್ ಕುಮಾರ್ ಅವರ ಸಿನಿಮಾಗಳೇ ಆಗಲಿ, ಅವರ ವ್ಯಕ್ತಿತ್ವವೇ ಆಗಲಿ. ಎಲ್ಲಾ ವಿಷಯದಲ್ಲಿ ಅಣ್ಣಾವ್ರು ಅಭಿಮಾನಿಗಳ ಆರಾಧ್ಯ ದೈವವೇ ಆಗಿದ್ದಾರೆ. ಡಾ. ರಾಜ್ ಕುಮಾರ್ ಅವರಿಗೆ ಅಭಿಮಾನಿಗಳು ಸಾಕಷ್ಟು ಬಿರುಧುಗಳನ್ನು ನೀಡಿದ್ದಾರೆ. ಹೆಸರನ್ನು ಕೊಟ್ಟಿದ್ದಾರೆ. ಆದರೆ ಅಂದು ಬೇಡರ ಕಣ್ಣಪ್ಪ ಸಿನಿಮಾ ಚಿತ್ರೀಕರಣ ಆದ ನಂತರ ರಾಜ್ ಕುಮಾರ್ ಎಂದು ತಮಗೆ ಹೊಸ ಹೆಸರು ಇಡಲಾಗಿದೆ ಎಂದು ಗೊತ್ತಾದಾಗ ಅಣ್ಣಾವ್ರ ರಿಯಾಕ್ಷನ್ ಹೇಗಿತ್ತು? ಏನೆಂದು ಹೇಳಿದ್ರು? ಅವರ ಮಾತುಗಳಲ್ಲೇ ಹಳೆಯ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು. ಆ ಬಗ್ಗೆ ಪೂರ್ತಿ ವಿಚಾರ ತಿಳಿಸಿಕೊಡುತ್ತೇವೆ ನೋಡಿ..
ನಮ್ಮೆಲ್ಲರ ಪ್ರೀತಿಯ ಡಾ. ರಾಜ್ ಕುಮಾರ್ ಅವರು ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ ಮೊದಲ ಸಿನಿಮಾ ಬೇಡರ ಕಣ್ಣಪ್ಪ. ಅದಕ್ಕಿಂತ ಮೊದಲು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಎಲ್ಲಾ ಥರದ ಪಾತ್ರಗಳಲ್ಲಿ ಕೂಡ ಅಣ್ಣಾವ್ರು ನಟಿಸಿ ಸೈ ಅನ್ನಿಸಿಕೊಂಡಿದ್ದರು. ಅದೇ ರೀತಿಯಲ್ಲಿ ಅವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಹ ಸಿಕ್ಕಿತ್ತು. ಮೊದಲ ಸಿನಿಮಾದ ಚಿತ್ರೀಕರಣ ಎಲ್ಲವೂ ಮುಗಿದ ನಂತರ ನ್ಯೂಸ್ ಪೇಪರ್ ನಲ್ಲಿ ಸಿನಿಮಾ ಬಗ್ಗೆ ಜಾಹಿರಾತು ಬಂದಾಗ, ನಾಯಕ ಡಾ. ರಾಜ್ ಕುಮಾರ್ ಎಂದು ಇತ್ತಂತೆ, ಅದನ್ನು ನೋಡಿ ಅಣ್ಣಾವ್ರಿಗೆ ಗಾಬರಿ ಆಗಿತ್ತಂತೆ. ಯಾರಿದು ರಾಜ್ ಕುಮಾರ್? ಒಂದು ತಿಂಗಳು ನಾನು ಕೆಲಸ ಮಾಡಿದ್ದೀನಿ, ನನ್ನ ಕೆಲಸ ಇಷ್ಟವಾಗದೆ ಬೇರೆಯವರನ್ನು ಹಾಕಿಕೊಂಡು ಬಿಟ್ಟಿದ್ದಾರಾ ಎಂದು ಅಣ್ಣಾವ್ರಿಗೆ ಗಾಬರಿಯಾಗಿ ನಿರ್ದೇಶಕರನ್ನೇ ಕೇಳಿಬಿಡಬೇಕು ಎಂದು ಹೊರಟರಂತೆ. ಬೇಡರ ಕಣ್ಣಪ್ಪ ಸಿನಿಮಾದ ನಿರ್ದೇಶಕರು ಹೆ.ಎಲ್.ಎನ್ ಸಿಂಹ ಅವರು.

ಅವರ ಬಳಿ ಹೋದ ಅಣ್ಣಾವ್ರು, ನಾಯಕ ರಾಜ್ ಕುಮಾರ್ ಅಂತ ಇದೆ, ಯಾರಿದು ಎಂದು ಕೇಳಿದರಂತೆ. ಆಗ ನಿರ್ದೇಶಕರು, ಅದು ನಿನ್ನ ಹೆಸರೇ ಕಣಯ್ಯ, ಪ್ರೇರಣೆ ಆಯ್ತು, ಆ ಹೆಸರು ಚೆನ್ನಾಗಿದೆ, ಒಳ್ಳೆಯದಾಗಿದೆ ಅನ್ನಿಸಿತು ನಿನಗೆ ಇಟ್ಟಿದ್ದೇವೆ ಎಂದು ಹೇಳಿದರಂತೆ. ಆದರೆ ಅಣ್ಣಾವ್ರಿಗೆ ಆ ಮಾತನ್ನ ಕೇಳಿ ರಾಜ್ ಕುಮಾರ್ ಅನ್ನೋ ಹೆಸರು ಬೇಡ ಎಂದು ಅನ್ನಿಸಿತಂತೆ. ನನ್ನ ತಂದೆ ಆಂಜನೇಯ ಸ್ವಾಮಿ ಭಕ್ತರು, ದೇವರ ಮೇಲಿನ ಭಕ್ತಿಯಿಂದ ಆ ಹೆಸರನ್ನು ಇಟ್ಟಿದ್ದಾರೆ, ಅದನ್ನ ಬದಲಾಯಿಸುವುದು ಬೇಡ ಎಂದು ನಿರ್ದೇಶಕರ ಬಳಿ ಕೇಳಿಕೊಂಡರಂತೆ. ಜೊತೆಗೆ ಅಣ್ಣಾವ್ರಿಗೆ ಒಂದು ರೀತಿ ನಾಚಿಕೆ ಕೂಡ ಇತ್ತು ಎಂದು ಹೇಳಿದ್ದಾರೆ. ಅದು ಯಾಕೆ ಎಂದರೆ, ರಾಜ್ ಕುಮಾರ್ ಎಂದು ಹೆಸರಿಟ್ಟುಕೊಂಡು, ಸಿನಿಮಾ ಬಿಡುಗಡೆಯಾಗಿ ಒಳ್ಳೇ ರೀತಿಯಲ್ಲಿ ಜನರು ನೋಡಿದರೆ ಆ ಹೆಸರು ಇಟ್ಟಿದ್ದಕ್ಕೂ ಸಾರ್ಥಕ ಆಗುತ್ತದೆ, ಒಳ್ಳೆಯದಾಗುತ್ತದೆ. ಒಂದು ವೇಳೆ ಸಿನಿಮಾ ಚೆನ್ನಾಗಿ ಓಡಲಿಲ್ಲ ಎಂದರೆ, ಅಂಥ ಹೆಸರಿಟ್ಟುಕೊಂಡು ಸಿನಿಮಾ ಚೆನ್ನಾಗಿ ಹೋಗ್ಲಿಲ್ಲ ಅಂತ ಆಗ್ತದೆ ಎಂದು ಅಣ್ಣಾವ್ರ ಮನಸ್ಸಲ್ಲಿತ್ತು.
ಅದೇ ಕಾರಣಕ್ಕೆ ನಾಚಿಕೆ ಕೂಡ ಆಗಿತ್ತಂತೆ. ಹಾಗಾಗಿ ಅವರು ರಾಜ್ ಕುಮಾರ್ ಎಂದು ಹೆಸರು ಇಡೋದು ಬೇಡ ಎಂದು ಹೇಳಿದರಂತೆ. ಆದರೆ ನಿರ್ದೇಶಕರು ಅದೇ ಹೆಸರು ಇರಬೇಕು ಎಂದು ಹೇಳಿದರಂತೆ, ಕೊನೆಗೆ ದೊಡ್ಡವರ ಮಾತಿಗೆ ಎದುರು ಮಾತಾಡೋದು ಬೇಡ ಎಂದು ರಾಜ್ ಕುಮಾರ್ ಎನ್ನುವ ಹೆಸರು ಇರಲಿ ಎಂದು ಒಪ್ಪಿಕೊಂಡು ಸುಮ್ಮನಾದರಂತೆ ಅಣ್ಣಾವ್ರು. ಅದೇ ಹೆಸರಿನಲ್ಲಿ ಬೇಡರ ಕಣ್ಣಪ್ಪ ಸಿನಿಮಾ ಇಂದ ಕನ್ನಡಿಗರಿಗೆ ನಾಯಕನಾಗಿ ಪರಿಚಿತರಾದರು. ಹೆಸರಿನ ವಿಚಾರಕ್ಕೆ ಇದೆಲ್ಲವನ್ನು ಸಹ ಅಣ್ಣಾವ್ರು 1977ರಲ್ಲಿ ನಡೆದ ರೇಡಿಯೋ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು. ಇನ್ನು ತಮಗೆ ಮುತ್ತುರಾಜ್ ಎಂದು ಅವರ ತಂದೆಯವರು ಹೆಸರನ್ನು ಇಟ್ಟಿದ್ದು ಯಾಕೆ ಎಂದು ಸಹ ಹೇಳಿದ್ದರು. ಅವರ ಊರಿನ ಬಳಿ ಮುತ್ತತ್ತಿರಾಯನ ದೇವಸ್ಥಾನ ಇತ್ತಂತೆ. ಆಂಜನೇಯ ಸ್ವಾಮಿಯ ಭಕ್ತನಾಗಿದ್ದ ಅಣ್ಣಾವ್ರ ತಂದೆ ದೇವರ ಕಥೆಯನ್ನು ಹೇಳುತ್ತಿದ್ದರಂತೆ.

ರಾಮಾಯಣದ ಕಾಲಾದಲ್ಲಿ, ಸೀತಾಮಾತೆ ಒಂದು ಸಾರಿ ತಮ್ಮ ಸ್ನಾನ ಮಾಡುವಾಗ, ತಮ್ಮ ಮೂಗುತಿಯನ್ನು ನೀರಿನಲ್ಲಿ ಬೀಳಸಿಕೊಂಡರಂತೆ. ಅದು ಅವರಿಗೆ ಇಷ್ಟವಾಡ್ಸ್ ಮೂಗುತಿ ಆಗಿದ್ದು, ಕಳೆದುಕೊಂಡಿದ್ದಕ್ಕೆ ಬೇಸರದಲ್ಲಿ ಅಳುತ್ತಾ ಕುಳಿತಿದ್ದರಂತೆ, ಸೀತಾಮಾತೆ ಅಳುತ್ತಿದ್ದನ್ನು ನೋಡಿದ ಆಂಜನೇಯ ಸ್ವಾಮಿ, ತಕ್ಷಣವೇ ಬಂದು, ಏನಾಯಿತು ಎಂದು ಕೇಳಿ, ಮೂಗುತಿ ಕಳೆದು ಹೋಗಿದೆ ಎನ್ನುವ ವಿಷಯವನ್ನು ತಿಳಿದು, ತನ್ನ ಬಾಲದಿಂದ ನೀರಿನಲ್ಲಿ ಇದ್ದ ಎಲ್ಲವನ್ನು ಹೊರಗಡೆ ತೆಗೆದು, ಅದರಿಂದ ಸೀತಾಮಾತೆಯ ಮೂಗುತಿಯನ್ನು ಹುಡುಕಿ, ಅದನ್ನು ಅವರಿಗೆ ತೋರಿಸಿ ಇದೇನಾ ಎಂದು ಕೇಳಿದರಂತೆ. ತನ್ನ ಇಷ್ಟದ ಮೂಗುತಿಯನ್ನು ಆಂಜನೇಯ ಹುಡುಕಿ ಕೊಟ್ಟಿದ್ದಕ್ಕೆ ಸಂತೋಷಪಟ್ಟ ಸೀತಾಮಾತೆ, ಆಂಜನೇಯ ಸ್ವಾಮಿಗೆ ಆಶೀರ್ವದಿಸಿದರಂತೆ..
ನನ್ನ ಮೂಗುತಿಯನ್ನು ಹುಡುಕಿ ಕೊಟ್ಟ ಹಾಗೆ ನೀನು ಜನರ ಕೋರಿಕೆಗಳನ್ನು ಈಡೇರಿಸಿ, ಅವರನ್ನು ಅನುಗ್ರಹಿಸಬೇಕು ಎಂದು ಹರಸಿದರಂತೆ. ಮೂಗುತಿಯ ಮುತ್ತನ್ನು ಹುಡುಕಿಕೊಟ್ಟ ಹಾಗೆ, ಎಲ್ಲರ ಕೋರಿಕೆಗಳನ್ನು ಈಡೇರಿಸು ಎಂದು ಹೇಳಿದ್ದಕ್ಕೆ, ಆ ಜಾಗದ ಹೆಸರು ಮುತ್ತತ್ತಿ ಎಂದು ಆಯಿತು. ಆ ಸ್ಥಳದ ಮಹಿಮೆಯ ಕಾರಣಕ್ಕೆ ಅಣ್ಣಾವ್ರ ತಂದೆ ಆಂಜನೇಯ ಸ್ವಾಮಿಯ ಭಕ್ತರಾಗಿದ್ದ ಕಾರಣ ಅಣ್ಣಾವ್ರಿಗೆ ಮುತ್ತುರಾಜ ಎಂದು ಹೆಸರನ್ನು ಇಟ್ಟರಂತೆ. ಇದು ಅಣ್ಣಾವ್ರ ನಿಜವಾದ ಹೆಸರಿನ ಹಿಂದೆ ಇರುವ ಕಥೆ ಆಗಿದೆ. ಮುತ್ತುರಾಜನಾಗಿ ಹುಟ್ಟಿ, ರಾಜ್ ಕುಮಾರ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ನಂತರ ವರನಟನಾಗಿ, ಡಾ. ರಾಜ್ ಕುಮಾರ್ ಆಗಿ, ಕರ್ನಾಟಕ ರತ್ನನಾಗಿ ಎಂಥಾ ಸಾಧನೆ ಮಾಡಿದರು ಅಣ್ಣಾವ್ರು. ಇವರನ್ನು ಪಡೆದ ಕರ್ನಾಟಕದ ಜನತೆ ಪುಣ್ಯ ಮಾಡಿದ್ದರು ಎಂದು ಹೇಳಿದರೆ ತಪ್ಪಲ್ಲ. ಇರುವಷ್ಟು ದಿವಸವು, ಕನ್ನಡಕ್ಕಾಗಿ ಕರ್ನಾಟಕಕ್ಕಾಗಿ ಇದ್ದವರು ಅಣ್ಣಾವ್ರು..

ಡಾ. ರಾಜ್ ಕುಮಾರ್ ಅನ್ನುವ ಹೆಸರು ಎಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತು, ಪ್ರಸಿದ್ಧಿ ಪಡೆಯಿತು ಎಂದು ನಮಗೆಲ್ಲಾ ಗೊತ್ತೇ ಇದೆ. ಅವರ ಒಂದೊಂದು ಸಿನಿಮಾ ಸಹ ಜನರಿಗೆ ಬದುಕಿನ ಪಾಠ ಹೇಳಿಕೊಡುವ ಹಾಗಿತ್ತು. ಅಂಥ ಒಳ್ಳೆಯ ಪಾತ್ರಗಳಲ್ಲಿ ಅಣ್ಣಾವ್ರು ನಟಿಸಿದ್ದಾರೆ. ಸಿನಿಮಾದ ಜೊತೆಗೆ ಅವರ ವ್ಯಕ್ತಿತ್ವ ಸಹ ಅಷ್ಟೇ ಒಳ್ಳೆಯದು, ಒಳ್ಳೇತನ ಸರಳತೆ ಇದರಿಂದಲೇ ಅಣ್ಣಾವ್ರು ಅಷ್ಟು ಜನರಿಗೆ ಇಷ್ಟವಾಗಿದ್ದು, ವಿಶ್ವಮಟ್ಟದಲ್ಲಿ ಎಲ್ಲರೂ ಗುರುತಿಸುವಷ್ಟು ಎತ್ತರಕ್ಕೆ ಬೆಳೆದಿದ್ದು. ಅಷ್ಟೆಲ್ಲಾ ಸಾಧನೆ ಮಾಡಿದರೂ ಸಹ ಅಣ್ಣಾವ್ರು ಸದಾ ತಾವು ಏನನ್ನು ಸಾಧಿಸಿಲ್ಲ, ಎಲ್ಲರೂ ತಮ್ಮನ್ನು ಬೆಳೆಸಿದ್ದು ಎನ್ನುತ್ತಿದ್ದರು, ಅದೇ ಸರಳತೆ ಅವರನ್ನು ಅಷ್ಟು ಎತ್ತರಕ್ಕೆ ಕರೆದುಕೊಂಡು ಹೋಗಿದ್ದು.



