“ಕಮಲಿ” ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನವಿದ್ದ ನಟ ನಿರಂಜನ್ ಸುಮಾರು ಎರಡು ವರ್ಷಗಳ ನಂತರ ಇದೀಗ ಮತ್ತೆ ಕಿರುತೆರೆಗೆ ವಾಪಸ್ ಆಗಿದ್ದಾರೆ. ಹೌದು, “ಕಮಲಿ” ಧಾರಾವಾಹಿಯಲ್ಲಿ ರಿಷಿ ಪಾತ್ರದ ಮೂಲಕ ಜನಮನ ಗೆದ್ದ ನಟ ನಿರಂಜನ್, ತಮ್ಮ ಅಭಿನಯದ ಮೂಲಕ ಹೆಂಗಳೆಯರ ಮನಕದ್ದಿದ್ದರು.
“ಕಮಲಿ” ಧಾರಾವಾಹಿಯ ನಂತರ ಪರಭಾಷೆಯ ಕಿರುತೆರೆಗೆ ಕಾಲಿಟ್ಟು ಅಲ್ಲಿ ನಟನಾ ಕಂಪನ್ನು ಪಸರಿಸಿದ ನಿರಂಜನ್ ಇದೀಗ ಅಜಿತ್ ಪಾತ್ರದ ಮೂಲಕ ಕನ್ನಡ ಕಿರುತೆರೆಗೆ ಮರಳಿದ್ದಾರೆ. ಅಂದ್ರೆ ಸುಮಾರು ಒಂದು ವರ್ಷಗಳ ಕಾಲ ಕನ್ನಡ ಕಿರುತೆರೆಯಿಂದ ಬಹುದೊಡ್ಡ ಬ್ರೇಕ್ ಅನ್ನು ತೆಗೆದುಕೊಂಡಿರುವ ನಿರಂಜನ್ ಇದೀಗ ಹೊಚ್ಚ ಹೊಸ ಕಥೆಯೊಂದಿಗೆ ಮತ್ತೆ ಕಿರುತೆರೆಗೆ ಕಾಲಿಟ್ಟಿದ್ದಾರೆ.

ಹೌದು, “ನಿನ್ನ ಜೊತೆ ನನ್ನ ಕಥೆ” ಎಂಬ ಧಾರಾವಾಹಿ ಮೂಲಕ ಧಾರಾವಾಹಿ ಪ್ರಪಂಚಕ್ಕೆ ಮತ್ತೆ ಕಾಲಿಟ್ಟಿರುವ ನಟ ನಿರಂಜನ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಅಂದಹಾಗೆ ಒಂದು ಮುಕ್ಕಾಲು ವರ್ಷಗಳ ಬಹುದೊಡ್ಡ ಬ್ರೇಕನ್ನು ತೆಗೆದುಕೊಂಡಿರುವುದರ ಹಿಂದಿನ ಕಾರಣವನ್ನು ತಿಳಿಸಿದ್ದಾರೆ ನಟ ನಿರಂಜನ್.
” ಕಮಲಿ ಧಾರಾವಾಹಿ ಆದ ನಂತರ ನನಗೆ ಬಹುದೊಡ್ಡ ಬ್ರೇಕ್ ಬೇಕು ಎಂದು ಬಹಳ ಗಟ್ಟಿಯಾಗಿ ಅನಿಸಿತ್ತು. ದಾರಾವಾಹಿ ಶೂಟಿಂಗ್ ಪ್ರಕ್ರಿಯೆ ನನಗೆ ಬಹಳ ರಿಪಿಟೇಟಿವ್ ಅನಿಸಿದ್ದ ಕಾರಣ ನನಗೆ ಈ ಫೀಲ್ಡ್ ನಿಂದ ತುಸು ಸಮಯದ ಕಾಲ ದೂರವಿರುವುದು ಕ್ಷೇಮ ಎಂದೆನಿಸಿತು. ಮುಂದೆ ಯಾವುದೇ ಪಾತ್ರವೂ ವಿಭಿನ್ನವಾಗಿದ್ದರೆ ಮಾತ್ರ ತೆಗೆದುಕೊಳ್ಳಬೇಕು ಎಂಬ ನಿರ್ಧಾರವನ್ನು ಮಾಡಿದ್ದೆ. ಅದಕ್ಕೆ ಸರಿಯಾಗಿ ಇದೀಗ ಪೊಲೀಸ್ ಆಫೀಸರ್ ಪಾತ್ರವನ್ನು ನಿಭಾಯಿಸುವ ಅವಕಾಶ ಸಿಕ್ಕಿರುವುದು ನನಗೆ ಬಹಳ ಸಂತಸ ತಂದಿದೆ. ಹಾಗಾಗಿ ನಿನ್ನ ಜೊತೆ ನನ್ನ ಕಥೆ ಧಾರಾವಾಹಿಗೆ ಒಪ್ಪಿಕೊಂಡು ಮತ್ತೆ ಕಿರುತೆರೆಗೆ ಮರಳಿದ್ದೇನೆ. ಮತ್ತೆ ನಟನೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳಲು ಬಹಳ ಸಂತೋಷವಿದೆ. ” ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ನಟ ನಿರಂಜನ್.

“ಪೊಲೀಸ್ ಆಫೀಸರ್ ಪಾತ್ರಕ್ಕೆ ಸರಿಯಾಗಿ ನ್ಯಾಯ ಒದಗಿಸುವ ಸಲುವಾಗಿ ನಾನು ನನ್ನದೇ ಆದ ಹೋಂವರ್ಕನ್ನು ಮಾಡಿದ್ದೇನೆ. ದೈಹಿಕವಾಗಿ ಫಿಟ್ ಆಗಿರುವುದಷ್ಟೇ ಅಲ್ಲದೆ, ಒಬ್ಬ ಪೊಲೀಸ್ ಆಫೀಸರ್ ಗೆ ಇರಬೇಕಾದ ಶಿಸ್ತು ಹಾಗೂ ಖಡಕ್ ಲುಕ್ ಅನ್ನು ಪಡೆಯಲು ನಾನು ಒಬ್ಬ ಐಪಿಎಸ್ ಆಫೀಸರ್ ಅನ್ನು ಭೇಟಿಯಾಗಿ ಮಾತನಾಡಿದ್ದಲ್ಲದೆ ಅವರಿಂದ ಒಂದಷ್ಟು ವಿಚಾರಗಳನ್ನು ತಿಳಿದುಕೊಂಡೆ. ಪೊಲೀಸ್ ಆಫೀಸರ್ ಗಳಿಗೆ ಇರುವ ಚಾಲೆಂಜ್ ಗಳ ಬಗ್ಗೆಯೂ ಅವರು ನನಗೆ ಒಳ್ಳೆಯ ಮಾಹಿತಿ ನೀಡಿದರು. ಎಲ್ಲಾ ಮಾಹಿತಿ ಹಾಗೂ ಸೂಕ್ಷ್ಮ ವಿಚಾರಗಳನ್ನು ಪಡೆದು ನನ್ನ ಪಾತ್ರಕ್ಕೆ ಜೀವ ತುಂಬುವ ಪ್ರಯತ್ನದಲ್ಲಿದ್ದೇನೆ. ಈ ಪಾತ್ರಕ್ಕಾಗಿ ನಾನು ಪೊಲೀಸ್ ಉನಿಫಾರ್ಮ್ ಹೊಲಿಸುವಾಗಲು ಸಹ ತಪ್ಪು ಆಗಬಾರದೆಂಬ ಕಾರಣಕ್ಕೆ ಕರ್ತವ್ಯ ನಿರತ ಅಧಿಕಾರಿಗಳು ಯೂನಿಫಾರ್ಮ್ ಹೋಲಿಸುವ ಜಾಗದಲ್ಲಿಯೇ ನಾನು ನನ್ನ ಕಾಸ್ಟೂಮ್ ಹೊಲಿಸಿದ್ದೇನೆ. ಈ ರೀತಿಯ ಸಣ್ಣಪುಟ್ಟ ಸೂಕ್ಷ್ಮ ವಿಚಾರಗಳನ್ನು ಗಮನಿಸುತ್ತಾ ನನ್ನ ಪಾತ್ರಕ್ಕೆ ನ್ಯಾಯ ಒದಗಿಸುವ ಎಲ್ಲಾ ಪ್ರಯತ್ನದಲ್ಲೂ ನಾನಿದ್ದೇನೆ” ಎಂದು ನಿರಂಜನ್ ಅವರು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡುವಾಗ ಹಂಚಿಕೊಂಡಿದ್ದಾರೆ.
“ಪೊಲೀಸ್ ಅಧಿಕಾರಿಯ ನನ್ನ ಪಾತ್ರಕ್ಕೆ ನನಗೆ ಅಭಿಮಾನಿಗಳು ಪ್ರೇಕ್ಷಕರು ಹಾಗೂ ನನ್ನ ಸಹ ನಟರಿಂದ ಬಹಳ ಒಳ್ಳೆಯ ಸಪೋರ್ಟ್ ಸಿಗುತ್ತಿದೆ. ಈ ಪಾತ್ರ ಹಾಗೂ ಧಾರಾವಾಹಿಯ ಮೂಲಕ ಇನ್ನಷ್ಟು ಹೊಸ ಅವಕಾಶಗಳನ್ನು ಮುನ್ನೋಡುತ್ತಿದ್ದೇನೆ. ” ಎಂದು ತಮ್ಮ ಸದ್ಯದ ಯೋಜನೆ ಹಾಗೂ ಮುಂದಿನ ಯೋಚನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ ನಟ ನಿರಂಜನ್.
ಒಟ್ಟಿನಲ್ಲಿ ನಟನೆಗೆ ವಾಪಸ್ಸಾಗಿರುವ ನಟ ನಿರಂಜನ್ ಕುರಿತು ಅವರ ಅಭಿಮಾನಿಗಳಂತೂ ಬಹಳ ಖುಷಿಪಟ್ಟಿದ್ದು, “ನಿನ್ನ ಜೊತೆ ನನ್ನ ಕಥೆ” ಧಾರಾವಾಹಿ ಕಥೆ ಯಾವ ರೀತಿ ಮುನ್ನಡೆಯಲ್ಲಿದೆ ಎಂಬುದನ್ನು ಕಾದು ನೋಡಬೇಕಿದೆ.