ಪ್ರೀತಿ ಕುರುಡು ಎನ್ನುತ್ತಾರೆ ಆದರೆ ಬಿಹಾರದಲ್ಲಿ ಯುವತಿಯೊಬ್ಬಳು ಇಡೀ ಊರನ್ನೇ ಕುರುಡಾಗಿಸಿ ರಾತ್ರಿಯ ಹೊತ್ತು ತನ್ನ ಪ್ರಿಯಕರನನ್ನು ಭೇಟಿಯಾಗುತ್ತಿದ್ದಳು. ತನ್ನ ಪ್ರೇಮಿಯನ್ನು ಭೇಟಿಯಾಗುವ ಉದ್ದೇಶದಿಂದ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬೆತಿಯಾ ಗ್ರಾಮದ ಯುವತಿಯೊಬ್ಬಳು ಇಡೀ ಊರಿನ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತಿದ್ದಳು.ಅದು ಕೂಡ ಒಂದೆರಡು ಬಾರಿಯಲ್ಲ. ಈ ಸ್ಪೆಷಲ್ ಲವ್ ಸ್ಟೋರಿ ಓದಿ ನೋಡಿ ಎಲ್ಲವೂ ನಿಮಗೂ ಅರ್ಥವಾಗುತ್ತೆ.

ಬೆತಿಯಾ ಗ್ರಾಮದ ಯುವತಿ ಪ್ರೀತಿ ಕುಮಾರಿ ಎಂಬವಳು ಪಕ್ಕದೂರಿನ ಯುವಕ ರಾಜಕುಮಾರ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಆತನನ್ನು ಭೇಟಿಯಾಗಲು ಹೋದರೆ ಲವ್ ಸ್ಟೋರಿ ಇಡೀ ಊರಿಗೆ ತಿಳಿಯುತ್ತದೆ ಎಂಬ ಕಾರಣದಿಂದ ಆತನನ್ನು ರಾತ್ರಿಯ ಹೊತ್ತಲ್ಲಿ ಮಾತ್ರ ಭೇಟಿಯಾಗಲು ನಿರ್ಧರಿಸುತ್ತಾಳೆ. ಇದಕ್ಕಾಗಿ ರಾಜಕುಮಾರನನ್ನು ಭೇಟಿಯಾಗಲು ಆಕೆ ಬಯಸಿದಾಗೆಲ್ಲ ಇಡೀ ಬೆತಿಯಾ ಗ್ರಾಮವನ್ನು ಕರೆಂಟ್ ಸಂಪರ್ಕ ಕಡಿತಗೊಳಿಸಿ ಕತ್ತಲಿಗೆ ದೂಡುತ್ತಿದ್ದಳು. ಇವರ ಪ್ರಣಯ ಗೀತೆ ಮುಗಿಯುವ ತನಕ ಇಡೀ ಗ್ರಾಮ ಕತ್ತಲಲ್ಲೇ ಇರಬೇಕಿತ್ತು.
ಹೀಗೆ ಪ್ರತಿ ಬಾರಿ ವಿದ್ಯುತ್ ಕಡಿತವಾದಾಗಲೂ ಊರಿನ ಜನ ವಿದ್ಯುತ್ ಇಲಾಖೆಗೆ ಕರೆ ಮಾಡಿ ಕಿರಿಕಿರಿ ಮಾಡುತ್ತಿದ್ದರು. ಆದರೆ ಅಧಿಕಾರಿಗಳಿಗೂ ಯಾಕೆ ಹೀಗಾಗುತ್ತಿದೆ ಎಂದು ತಿಳಿಯುತ್ತಿರಲಿಲ್ಲ. ಎಲ್ಲಾ ಗ್ರಾಮದಲ್ಲಿ ಕರೆಂಟ್ ಇದ್ದರೂ ನಮ್ಮಲ್ಲಿ ಯಾಕಿಲ್ಲ ಎಂಬ ಪ್ರಶ್ನೆ ಬೆತಿಯಾ ಗ್ರಾಮಸ್ಥರನ್ನು ಕಾಡುತ್ತಿತ್ತು. ಇತ್ತೀಚೆಗೆ ರಾತ್ರಿಯ ಹೊತ್ತು ಪ್ರೀತಿ ವೆಡ್ಸ್ ರಾಜ್ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ರಾಜಕುಮಾರನನ್ನು ಹಿಡಿದು ಗ್ರಾಮದ ಜನ ಥಳಿಸಿದಾಗ ‘ವಿದ್ಯುತ್ ಕಡಿತದ’ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಸದ್ಯ, ಅಂತಿಮವಾಗಿ ಇವರಿಬ್ಬರ ಗಾಢ ಪ್ರೀತಿಗೆ ಮನಸೋತ ಗ್ರಾಮಸ್ಥರು ಮನೆಯವರನ್ನು ಒಪ್ಪಿಸಿ ಇಬ್ಬರ ವಿವಾಹ ನೆರವೇರಿಸಿದ್ದಾರೆ.