ಮನುಷ್ಯ ಜೀವಿ ಮಂಗನಿಂದ ಮಾನವನಾಗಿ ಲಕ್ಷಗಳಷ್ಟು ವರ್ಷ ಕಳೆದಿದ್ದರೂ ಕೂಡ ಮನುಷ್ಯತ್ವ ಅನ್ನುವುದು ಇನ್ನೂ ಕೂಡ ಕೆಲವೊಂದು ಘಟನೆಗಳನ್ನು ಕಂಡಾಗ ಮರಿಚಿಕೆಯಾಗಿದೆ ಎನಿಸುತ್ತದೆ. ಅಷ್ಟೋಂದು ಕೀಳಾಗಿ ಕೆಲವೊಬ್ಬ ದುರಹಂಕಾರಿಗಳು ನಡೆದುಕೊಳ್ಳುತ್ತಾರೆ. ಜಾತಿ, ಧರ್ಮ ಅನ್ನುವ ಕೊಚ್ಚೆಯಲ್ಲಿ ಬಿದ್ದು ಒದ್ದಾಡುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಯುವಕನೊಬ್ಬ ಬುಡಕಟ್ಟು ವ್ಯಕ್ತಿಯು ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ವಿಡಿಯೋ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ಈ ಅಮಾನವೀಯ ಘಟನೆ ನಡೆದಿರುವುದು ಮಧ್ಯಪ್ರದೇಶ ಜಿಲ್ಲೆಯ ಸಿದ್ದಿ ಜಿಲ್ಲೆಯಲ್ಲಿ. ಇಲ್ಲಿನ ಪ್ರವೇಶ್ ಶುಕ್ಲ ಎಂಬ ಯುವಕ ಬುಡಕಟ್ಟು ಕಾರ್ಮಿಕನಾಗಿ ದುಡಿಯುತ್ತಿದ್ದ ಪಲೆಕೋಲ್ ಎಂಬಾತನ ಮೇಲೆ ಮೂತ್ರ ವಿಸರ್ಜನೆ ಮಾಡಿ ಅದನ್ನು ವಿಡಿಯೋ ಕೂಡ ಮಾಡಿದ್ದಾನೆ. ಇದು 6 ತಿಂಗಳ ಹಿಂದಿನ ವಿಡಿಯೋ ಆಗಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಘಟನೆ ಮಧ್ಯಪ್ರದೇಶದ ಸಿ.ಎಂ. ಶಿವರಾಜ್ ಸಿಂಗ್ ಚೌಹಾಣ್ ಅವರ ಗಮನಕ್ಕೂ ಬಂದಿದ್ದು, ಆರೋಪಿಯನ್ನು ಬಂಧಿಸಲು ಪೊಲೀಸ್ ಇಲಾಖೆಗೆ ಆದೇಶ ನೀಡಿದ್ದಾರೆ. ಪೊಲೀಸರು ತಕ್ಷಣವೇ ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಈತ ಬಿಜೆಪಿ ಶಾಸಕ ಕೇದಾರ್ ಶುಕ್ಲ ಅವರ ಆಪ್ತ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಆದರೆ ಬಿಜೆಪಿ ಈ ಆರೋಪ ಸತ್ಯಕ್ಕೆ ದೂರವಾದುದು ಎಂದು ಹೇಳಿಕೊಂಡಿದೆ.
‘ಯಾರೇ ಆಗಿದ್ದರೂ ಒಬ್ಬ ಅಮಾಯಕ ಬುಡಕಟ್ಟು ಜನಾಂಗದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡುವಷ್ಟು ಕೀಳು ಮಟ್ಟಕ್ಕೆ ಯಾರೂ ಕೂಡ ಇಳಿಯಬಾರದು. ಇಂತಹಾ ಅಮಾನವೀಯ ವರ್ತನೆ ತೋರಿ ಮನುಷ್ಯ ಜಾತಿಗೆ ಅವಮಾನ ಮಾಡುವಂತಹ ದುರಹಂಕಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು’ ಎಂದು ಈ ವೈರಲ್ ವಿಡಿಯೋ ನೋಡಿರುವ ನೆಟ್ಟಿಗರು ಮಧ್ಯಪ್ರದೇಶ ಸರ್ಕಾರವನ್ನು ಆಗ್ರಹಿಸಿದ್ದಾರೆ.