ಬೆಂಗಳೂರು ಜನನಿಭಿಡ ಪ್ರದೇಶ ಎಂಬುದು ಸುಳ್ಳಲ್ಲಾ. ಕೆಲಸ ಅರಸಿ ಬಂದಿರುವ ಲಕ್ಷಾಂತರ ಮಂದಿ ಸಿಲಿಕಾನ್ ಸಿಟಿಯಲ್ಲಿ ನೆಲೆಯೂರಿದ್ದಾರೆ. ಹಾಗೆಯೇ, ಬೆಂಗಳೂರಿನಲ್ಲಿ ಹಣವೊಂದಿದ್ದರೆ ಕಣ್ಣಿಗೆ ಕಂಡಿದ್ದನ್ನೆಲ್ಲಾ ಪಡೆದುಕೊಳ್ಳಬಹುದು ಎಂಬ ಮಾತಿದೆ. ಇಂತಿಪ್ಪ ಬೆಂಗಳೂರಿನಲ್ಲಿ ಕೆಲವು ವರ್ಷಗಳಿಂದೀಚೆಗೆ ಕುಡಿಯುವ ನೀರಿನ ಪೂರೈಕೆ ತಲೆಬಿಸಿಯಾಗಿ ಪರಿಣಮಿಸಿದೆ ಎಂದರೂ ತಪ್ಪಿಲ್ಲ. ಬೆಂಗಳೂರು ನೀರು ಸಂರಕ್ಷಣೆ ಅವಶ್ಯಕತೆ ಹೊಂದಿದ್ದು, ಕಾವೇರಿ ನೀರಿನ ಸೂಕ್ತ ಬಳಕೆ ಮತ್ತು ಬೃಹತ್ ನೀರು ಶೇಖರಣಾ ಕ್ರಮಗಳನ್ನು ಕೈಗೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ.
ಬಿಸಿಲಿನ ಬೇಗೆಗೆ ಬಣಗುಟ್ಟಿದ್ದ ಬೆಂಗಳೂರು
ಕಳೆದ ವರ್ಷ ಬೇಸಿಗೆ ಸಮಯದಲ್ಲಿ ಬೆಂಗಳೂರಿಗರು ನೀರಿನ ಸಮಸ್ಯೆಯನ್ನು ಎದುರಿಸಿದ್ದರು. ನೀರಿನ ಅಭಾವವನ್ನು ಸರಿದೂಗಿಸಲು ಬೆಂಗಳೂರು ಜಲಮಂಡಳಿಯೂ ಸಹ ನೀರು ಪೋಲು ಮಾಡದಂತೆ ಕೆಲವು ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರಿಗೆ ಸೂಚಿಸಿತ್ತು. ಮನೆಯ ಮುಂಭಾಗ ಸ್ವಚ್ಛಗೊಳಿಸಲು ಯಥೇಚ್ಛವಾಗಿ ನೀರು ಬಳಸಬಾರದು, ವಾಹನ ಸ್ವಚ್ಛಗೊಳಿಸುವ ಸರ್ವಿಸ್ ಸ್ಟೇಷನ್ಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆಯೂ ಮಾಡಲಾಗಿತ್ತು. ತರಕಾರಿ ಸೊಪ್ಪು ತೊಳೆದ ನೀರುಗಳನ್ನು ಗಿಡಗಳಿಗೆ ಹಾಕುವಂತೆ ಸೂಚಿಸಲಾಗಿತ್ತು. ಒಟ್ಟಾರೆ, ನೀರು ಪೋಲಾಗುವುದನ್ನು ತೆಡೆದು ಅತ್ಯವಶ್ಯಕಗಳಿಗೆ ಬಳಸಿಕೊಳ್ಳುವಂತೆ ಮಾಡಲು ನಾನಾ ದಾರಿ ಕಂಡುಕೊಳ್ಳಲಾಗಿತ್ತು. ಇದೀಗ ಮತ್ತೊಮ್ಮೆ ಅದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೆಂಗಳೂರಿಗರಿಗೆ ಮತ್ತೊಮ್ಮೆ ಎಚ್ಚರಿಕೆ ಕರೆಗಂಟೆ ರವಾನೆಯಾಗಿದೆ.

ಕಾವೇರಿ ನೀರು ಬೇಕಾಬಿಟ್ಟಿ ಬಳಸಿದರೆ ದಂಡ
ಕುಡಿಯುವ ನೀರಾದ ಕಾವೇರಿಯನ್ನು ಬೇಕಾಬಿಟ್ಟಿಯಾಗಿ ಗಿಡಗಳಿಗೆ ನೀರುಣಿಸಲು, ಕಾರು-ಬೈಕ್ಗಳನ್ನು ತೊಳೆಯಲು, ಮನೆಯ ಮುಂಭಾಗವನ್ನು ಸ್ವಚ್ಛಗೊಳಿಸಲು ಬಳಸಬಾರದು ಎಂದು ಬೆಂಗಳೂರು ಜಲಮಂಡಳಿಯು ಎಚ್ಚರಿಕೆ ನೀಡಿದೆ. ಒಂದು ವೇಳೆ ಕುಡಿಯುವ ನೀರಿನ ದುರ್ಬಳಕೆ ಕಂಡು ಬಂದಲ್ಲಿ ದಂಡ ವಿಧಿಸಲಾಗುವುದು ಎಂದೂ ಸಹ ಆದೇಶ ಹೊರಡಿಸಿದೆ. ಈ ಕುರಿತು ಜಲಮಂಡಳಿ ಪ್ರಕಟಣೆ ಹೊರಡಿಸಿದ್ದು “ವಾಹನ ತೊಳೆಯುವುದು, ಕಟ್ಟಡ ನಿರ್ಮಾಣ, ತೋಟಗಾರಿಕೆ, ಅಲಂಕಾರಿಕ ಕಾರಂಜಿಗಳು ಹಾಗೂ ಮನರಂಜನೆ ಉದ್ದೇಶಗಳಿಗಾಗಿ, ಸಿನಿಮಾ ಹಾಗೂ ಮಾಲ್ಗಳಲ್ಲಿ ಕುಡಿಯುವ ಅವಶ್ಯಕತೆಯ ಹೊರತಾಗಿ, ರಸ್ತೆ ನಿರ್ಮಾಣ ಹಾಗೂ ಶುಚಿಗೊಳಿಸುವಿಕೆಗೆ ಕುಡಿಯುವ ನೀರನ್ನು ಬಳಸುವಂತಿಲ್ಲಾ ಎಂದು ಸ್ಪಷ್ಟ ಪಡಿಸಿದೆ”.

೫೦೦೦ ದಂಡ ಕಟ್ಟಬೇಕು ಎಚ್ಚರ
ಇನ್ನು ಜಲಮಂಡಳಿಯ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಜಲಮಂಡಳಿ ಕಾಯ್ದೆಯ ಸೆಕ್ಷನ್ ೧೦೯ರ ಅಡಿಯಲ್ಲಿ ೫೦೦೦ ರೂ. ದಂಡ ವಿಧಿಸಲಾಗುವುದು. ಆದೇಶ ಉಲ್ಲಂಘನೆ ಪುನರಾವರ್ತನೆಯಾದಲ್ಲಿ ೫೦೦೦ರೂ. ಹೆಚ್ಚುವರಿ ದಂಡ ಹಾಗೂ ಪ್ರತಿ ದಿನಕ್ಕೆ ೫೦೦ರೂಪಾಯಿಯನ್ನು ದಂಡವಾಗಿ ಕಟ್ಟಬೇಕಾಗುತ್ತದೆ.
೧೯೧೬ಗೆ ದೂರು ದಾಖಲಿಸಿ
ಕೆಲವರು ಅಜಾಗರೂಕತೆಯಿಂದಲೋ ಅಥವಾ ಯಾರು ನೋಡುವುದಿಲ್ಲ ಎಂಬ ಮೊಂಡತನದಿAದಲೋ ಕುಡಿಯುವ ನೀರನ್ನು ತಮ್ಮ ಎಲ್ಲಾ ಕೆಲಸ-ಕಾರ್ಯಗಳಿಗೆ ಬಳಸಿಕೊಳ್ಳುತ್ತಿರುತ್ತಾರೆ. ಅಂತಹವರ ವಿರುದ್ಧ ದೂರು ದಾಖಲಿಸುವ ಮೂಲಕ ಕುಡಿಯುವ ನೀರಿನ ದುರ್ಬಳಕೆಯನ್ನು ತಡೆಯಲು ಜಲಮಂಡಳಿ ಕಾಲ್ ಸೆಂಟರ್ ತೆರೆದಿದ್ದು, ಆದೇಶ ಉಲ್ಲಂಘನೆ ಕಂಡುಬAದಲ್ಲಿ ಸಾರ್ವಜನಿಕರು ೧೯೧೬ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ.

ಟ್ಯಾಂಕರ್ ಮಾಲೀಕರ ಸುಲಿಗೆಗೆ ಬ್ರೇಕ್
ನೀರಿನ ಅಭಾವ ಹೆಚ್ಚಾದಂತೆ ಟ್ಯಾಂಕರ್ ಮಾಲೀಕರಿಗೆ ಭಾರಿ ಬೇಡಿಕೆ ಏರ್ಪಡುತ್ತದೆ. ಕೆಲವು ಟ್ಯಾಂಕರ್ ಮಾಲೀಕರು ಇದನ್ನೇ ಬಂಡವಾಳ ಮಾಡಿಕೊಂಡು ಸಾರ್ವಜನಿಕರನ್ನು ಸುಲಿಗೆ ಮಾಡಲು ಮುಂದಾಗುತ್ತಾರೆ. ಇಂತಹವರ ಸುಲಿಗೆಗೆ ಮೂಗುದಾರ ಹಾಕಲು ಕಿ.ಮೀಟರಿಗೆ ಇಂತಿಷ್ಟು ಮೊತ್ತವೆಂದು ಜಲಮಂಡಳಿಯು ನಿಗದಿಗೊಳಿಸಿ, ಕಳೆದ ವಾರ ಆದೇಶ ಹೊರಡಿಸಿದೆ. ಅದರನ್ವಯ ೫ರಿಂದ ೧೦ ಕಿ.ಮೀ ದೂರಕ್ಕೆ ೬೦೦೦ ಲೀಟರ್ ನೀರಿನ ಟ್ಯಾಂಕರ್ಗೆ ೭೫೦ರೂ., ೮೦೦೦ ಲೀಟರ್ಗೆ ೮೫೦ರೂ. ಹಾಗೂ ೧೨೦೦೦ ಲೀಟರ್ ನೀರು ಸರಬರಾಜಿಗೆ ೧೨೦೦ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.
ಬೆಂಗಳೂರು ಜನನಿಭಿಡ ಪ್ರದೇಶ ಎಂಬುದು ಸುಳ್ಳಲ್ಲಾ. ಕೆಲಸ ಅರಸಿ ಬಂದಿರುವ ಲಕ್ಷಾಂತರ ಮಂದಿ ಸಿಲಿಕಾನ್ ಸಿಟಿಯಲ್ಲಿ ನೆಲೆಯೂರಿದ್ದಾರೆ. ಹಾಗೆಯೇ, ಬೆಂಗಳೂರಿನಲ್ಲಿ ಹಣವೊಂದಿದ್ದರೆ ಕಣ್ಣಿಗೆ ಕಂಡಿದ್ದನ್ನೆಲ್ಲಾ ಪಡೆದುಕೊಳ್ಳಬಹುದು ಎಂಬ ಮಾತಿದೆ. ಇಂತಿಪ್ಪ ಬೆಂಗಳೂರಿನಲ್ಲಿ ಕೆಲವು ವರ್ಷಗಳಿಂದೀಚೆಗೆ ಕುಡಿಯುವ ನೀರಿನ ಪೂರೈಕೆ ತಲೆಬಿಸಿಯಾಗಿ ಪರಿಣಮಿಸಿದೆ ಎಂದರೂ ತಪ್ಪಿಲ್ಲ. ಬೆಂಗಳೂರು ನೀರು ಸಂರಕ್ಷಣೆ ಅವಶ್ಯಕತೆ ಹೊಂದಿದ್ದು, ಕಾವೇರಿ ನೀರಿನ ಸೂಕ್ತ ಬಳಕೆ ಮತ್ತು ಬೃಹತ್ ನೀರು ಶೇಖರಣಾ ಕ್ರಮಗಳನ್ನು ಕೈಗೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ.
ಒಟ್ಟಾರೆ, ತಾಪಮಾನ ಏರಿಕೆಯಿಂದ ಅಂತರ್ಜಲ ಮಟ್ಟ ಕುಸಿತಗೊಳ್ಳುತ್ತಿದ್ದು, ಕುಡಿಯುವ ನೀರಿನ ಮಟ್ಟವು ಕುಂಠಿತಗೊಳ್ಳುತ್ತಿದೆ. ಬೆಂಗಳೂರಿನ ಪ್ರತಿಯೊಬ್ಬರಿಗೂ ಕುಡಿಯುವ ನೀರನ್ನು ಪೂರೈಸುವ ಹೊಣೆಹೊತ್ತಿರುವ ಬಿಡಬ್ಯೂಎಸ್ಎಸ್ಬಿ ಈ ನಿಟ್ಟಿನಲ್ಲಿ ಕ್ರಮಕೈಗೊಂಡಿದೆ. ಸಣ್ಣಸಣ್ಣ ಹನಿಗಳು ಸಹ ಅತ್ಯಮೂಲ್ಯವಾಗಿದ್ದು, ಜೀವಜಲ ರಕ್ಷಣೆಗೆ ಕೈಜೋಡಿಸೋಣ!