ಇನ್ನೇನು ನಾಡಹಬ್ಬ ದಸರಾ ಆರಂಭಕ್ಕೆ ಕೆಲವೇ ತಿಂಗಳು ಬಾಕಿ ಇದೆ. ಸಾಲು ಸಾಲು ಹಬ್ಬಗಳು ಈಗಾಗಲೇ ಶುರುವಾಗಿದೆ. ಈ ನಡುವೆ ಕರಾವಳಿ ಮೂಲದ ವಿಶೇಷ ಕಲೆ ಎಂದು ಪ್ರಸಿದ್ಧಿ ಪಡೆದಿರುವ ಹುಲಿವೇಷ ಆರಂಭವಾಗಿದೆ. ಮೈಮೇಲೆ ಹುಲಿಯ ಬಣ್ಣ ಬಳಿದು, ತಾಸೆಯ ಶಬ್ದಕ್ಕೆ ಕುಣಿಯಿವುದನ್ನು ನೋಡುವುದೇ ಒಂದು ಚಂದ. ಸದ್ಯ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಶಾಲಾ ಶಿಕ್ಷಕಿಯರು ಸೀರೆ ಉಟ್ಟು ಹುಲಿವೇಷದಾರಿಗಳ ಜೊತೆಗೆ ಭರ್ಜರಿ ಟೈಗರ್ ಡ್ಯಾನ್ಸ್ ಮಾಡಿದ್ದಾರೆ.
ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ನಿನ್ನೆ ಉಡುಪಿ ಜಿಲ್ಲೆಯ ಪಣಿಪಾಲ ಶಾಲೆಯಲ್ಲಿ ಕಾರ್ಯಕ್ರಮವಿತ್ತು. ಇದೇ ಕಾರ್ಯಕ್ರಮದಲ್ಲಿ ಹುಲಿ ಡ್ಯಾನ್ಸ್ ಆಯೋಜಿಸಲಾಗಿತ್ತು. ಹಲವು ವೇಷಧಾರಿಗಳು ತಾಸೆಯ ಶಬ್ದಕ್ಕೆ ರೊಚ್ಚಿಗೆದ್ದು ಹುಲಿ ನೃತ್ಯ ಮಾಡಿದ್ದಾರೆ. ಕೆಲ ಕ್ಷಣಗಳ ನಂತರ ವೇಷಧಾರಿಗಳೊಂದಿಗೆ ಆ ಶಾಲೆಯ ವಿದ್ಯಾರ್ಥಿಗಳು ಸೇರಿ ಹೆಜ್ಜೆ ಹಾಕಿದ್ದಾರೆ. ಬಳಿಕ ಇವರೊಂದಿಗೆ ಶಾಲಾ ಶಿಕ್ಷಕಿಯರು ಡ್ಯಾನ್ಸ್ ಮಾಡಿದ್ದಾರೆ.
ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹುಲಿ ಡ್ಯಾನ್ಸ್ ಇದೆ ಎಂಬುದನ್ನು ಕೇಳಿಯೇ ಶಿಕ್ಷಕಿಯರು ಥ್ರಿಲ್ ಆಗಿದ್ದರು. ಕೊನೆಗೆ ಮಕ್ಕಳು ಕೂಡ ಅವರೊಂದಿಗೆ ಕುಣಿಯುವುದನ್ನು ಕಂಡು ಶಿಕ್ಷಕಿಯರು ಕೂಡ ಅವರೊಂದಿಗೆ ಸೇರಿಕೊಂಡಿದ್ದಾರೆ. ತಾವು ಉಟ್ಟಿದ್ದ ಸೀರೆಯಲ್ಲೆ ಶಾಲಾ ಶಿಕ್ಷಕಿಯರು ಹುಲಿ ವೇಷಧಾರಿಗಳೊಂದಿಗೆ ಸೇರಿ ಸಕ್ಕತ್ ಸ್ಟೆಪ್ ಹಾಕಿದ್ದಾರೆ. ಸದ್ಯ, ಶಿಕ್ಷಕಿಯರ ಟೈಗರ್ ಡ್ಯಾನ್ಸ್ ವಿಡಿಯೋ ವೈರಲ್ ಆಗುತ್ತಿದೆ.