ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿಯ ನಟಿ ಸಂಜನಾ ಬುರ್ಲಿ ಅವರು ಹೇಳಿರುವ ಮಾತಿದು. ಧಾರಾವಾಹಿಯಲ್ಲಿ ಇವರ ಪಾತ್ರ ಈಗಾಗಲೇ ಅಂತ್ಯವಾಗಿದೆ. ಸ್ನೇಹಾ ಪಾತ್ರಕ್ಕೆ ವಿದಾಯ ಹೇಳಿ ಹೊರಬಂದಿದ್ದಾರೆ ಸಂಜನಾ. ಮೂರು ವರ್ಷಗಳಿಂದ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹ ಪಾತ್ರದಲ್ಲಿ ಅಭಿನಯಿಸುತ್ತಿದ್ದರು. ಈಗ ಕಾರಣಾಂತರಗಳಿಂದ ಹೊರಬಂದಿದ್ದಾರೆ. ಆದರೆ ಸ್ನೇಹಾ ಸತ್ತ ನಂತರ ನಡೆದ ವಿಧಿವಿಧಾನಗಳ ದೃಶ್ಯ ಚಿತ್ರೀಕರಣ ಸಮಯದಲ್ಲಿ ತಮಗಾದ ಅನುಭವದ ಬಗ್ಗೆ ಮಾತನಾಡಿದ್ದಾರೆ ಸಂಜನಾ.
ಧಾರಾವಾಹಿಗಳು ಎನ್ನುವುದು ಒಂದು ಕಥೆ ಅಥವಾ ಪಾತ್ರ ಅಷ್ಟೇ ಆಗಿರೋದಿಲ್ಲ. ಕೆಲವು ಧಾರಾವಾಹಿಗಳು ಮತ್ತು ಪಾತ್ರಗಳು ವೀಕ್ಷಕರ ಮನಸ್ಸಿಗೆ ತುಂಬಾ ಹತ್ತಿರ ಆಗಿರುತ್ತದೆ. ಮನೆಯಲ್ಲೇ ವೀಕ್ಷಕರು ಧಾರಾವಾಹಿ ನೋಡುವ ಕಾರಣ, ಅವರ ಕಥೆಯೇ ಏನೋ, ಅವರ ಸುತ್ತಲೂ ನಡೆಯುತ್ತಿರುವ ಕಥೆಯೇ ಇರಬಹುದೇನೋ ಎಂದುಕೊಂಡಿರುತ್ತಾರೆ. ಪಾತ್ರಗಳಿಗೆ ಅಷ್ಟು ಅಟ್ಯಾಚ್ಡ್ ಆಗಿರುತ್ತಾರೆ. ವೀಕ್ಷಕರು ಮಾತ್ರವಲ್ಲ ಕಲಾವಿದರು ಕೂಡ ಅದೇ ರೀತಿ ಎನ್ನಬಹುದು. ವರ್ಷಗಳ ಕಾಲ ಒಂದು ಪಾತ್ರವಾಗಿ ನಟಿಸಿ, ಆ ಪಾತ್ರದ ಪರಕಾಯ ಪ್ರವೇಶ ಮಾಡಿರುತ್ತಾರೆ.

ನಟಿ ಸಂಜನಾ ಅವರಿಗೂ ಹಾಗೆ ಆಗಿದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ದಿಟ್ಟೆಯ ಪಾತ್ರ ಸ್ನೇಹ. ತಾಯಿ ಪುಟ್ಟಕ್ಕನಿಗೆ ಬೆನ್ನೆಲುಬಾಗಿ, ಅನ್ಯಾಯದ ವಿರುದ್ಧ ಸಿಡಿದು ನಿಲ್ಲುವ ಪಾತ್ರ. ಚಿಕ್ಕ ವಯಸ್ಸಿನಿಂದ ಐಎಎಸ್ ಅಧಿಕಾರಿ ಆಗಬೇಕು ಎಂದುಕೊಂಡು, ಛಲದಿಂದ ಓದಿ, ಕೊನೆಗೂ ಡಿಸಿ ಆದ ಸ್ನೇಹ ಪಾತ್ರವೇ ಅಂತ್ಯವಾಗಿದೆ. ಇದು ವೀಕ್ಷಕರಿಗೆ ಬಹಳ ನೋವು ತಂದಿತ್ತು. ಸಂಜನಾ ಅವರಿಗೂ ಅಷ್ಟೇ ಬೇಸರ ತಂದಿದೆ. ಇತ್ತೀಚೆಗೆ ನೀಡಿರುವ ಸಂಜನಾ ಅವರು ನಾನು ಬಹಳ ಬೇಸರದಿಂದ ಹೊರಬಂದಿದ್ದೇನೆ, 3 ತಿಂಗಳ ನೋಟಿಸ್ ಪೀರಿಯೆಡ್ ಕೊಟ್ಟಿದ್ದೆ ಎಂದಿದ್ದಾರೆ..
ಸ್ನೇಹ ಸತ್ತ ನಂತರ, ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗುವ ದೃಶ್ಯಗಳಲ್ಲಿ ನಟಿ ಉಮಾಶ್ರೀ ಅವರ ಅಭಿನಯ ನೋಡಿ, ಎಲ್ಲರೂ ಕಣ್ಣಲ್ಲಿ ನೀರು ಹಾಕಿದ್ದರು. ಅಲ್ಲಿದ್ದ ಸಂಜನಾ ಅವರಿಗೂ ಅದೇ ರೀತಿ ಆಗಿತ್ತಂತೆ. ತಾವು ಪಾತ್ರವಾಗಿ ಸತ್ತಿದ್ದ ಕಾರಣ ಕಣ್ಣುಗಳನ್ನು ಅಲುಗಾಡಿಸುವ ಹಾಗೂ ಇರಲಿಲ್ಲ, ಆದರೆ ಉಮಾಶ್ರೀ ಅಮ್ಮನವರ ಅಭಿನಯ ಸತ್ತಿದ್ದ ಜಾಗದಲ್ಲೇ ಕಣ್ಣೀರು ತರಿಸಿಬಿಟ್ಟಿತ್ತು ಎಂದಿದ್ದಾರೆ. ಡಿಸಿ ಪಾತ್ರ ಆಗಿದ್ದ ಕಾರಣ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಬೇಕಿತ್ತು. ಆ ಸಮಯದಲ್ಲಿ ಉಮಾಶ್ರೀ ಅಮ್ಮ ಹಾಗೂ ಎಲ್ಲರೂ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡರು ಎಂದಿದ್ದಾರೆ.

ಉಮಾಶ್ರೀ ಅವರು ಅತ್ಯಂತ ಪ್ರತಿಭಾನ್ವಿತ ನಟಿ, ಇವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ, ಎಂಥದ್ದೇ ಪಾತ್ರ ಆದರೂ ಅದ್ಭುತವಾಗಿ ಅಭಿನಯಿಸುತ್ತಾರೆ. ಪುಟ್ಟಕ್ಕನಾಗಿ ಕೂಡ ಅದೇ ರೀತಿ ಎಲ್ಲರ ಪ್ರೀತಿ ಪಡೆದಿದ್ದಾರೆ. ಇವರ ಅಭಿನಯ, ತಾಯಿಯ ನೋವನ್ನು ವ್ಯಕ್ತಪಡಿಸಿದ ರೀತಿಯನ್ನು ವೀಕ್ಷಕರು ಎಂದಿಗೂ ಮರೆಯುವಂತಿಲ್ಲ. ಅದೇ ರೀತಿ ಸಂಜನಾ ಅವರನ್ನು ಇನ್ನುಮುಂದೆ ವೀಕ್ಷಕರು ಮಿಸ್ ಮಾಡಿಕೊಳ್ಳುತ್ತಾರೆ. ಬೇರೆ ಪ್ರಾಜೆಕ್ಟ್ ಗಳ ಮೂಲಕ ಅಭಿಮಾನಿಗಳ ಎದುರು ಆದಷ್ಟು ಬೇಗ ಬರುತ್ತೇನೆ ಎಂದಿದ್ದಾರೆ ಸಂಜನಾ. ನಾಯಕಿಯ ಪಾತ್ರವೇ ಆಗಬೇಕು ಎಂದೇನು ಇಲ್ಲ, ಮನಸ್ಸಿಗೆ ತೃಪ್ತಿ ಕೊಡುವ ಪಾತ್ರಗಳು ಸಿಗಬೇಕು, ಈಗಾಗಲೇ ನಟಿಸಿರುವ ಕೆಲವು ಪ್ರಾಜೆಕ್ಟ್ ತೆರೆಕಾಣಬೇಕಿದೆ ಎಂದು ತಮ್ಮ ಭವಿಷ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.