ವೇದ ಚಿತ್ರತಂಡದೊಂದಿಗೆ ಗುರುವಾರ ಹೊಸಪೇಟೆಯಲ್ಲಿ ಸಿನಿಮಾ ಪ್ರಚಾರ ಕೈಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ವೇದ ಸಿನಿಮಾದಲ್ಲಿ ಸಾಮಾಜಿಕ ಸಂದೇಶವಿದೆ. ಆಯಕ್ಷನ್, ಹಾಡು, ಮನರಂಜನೆ ಎಲ್ಲವೂ ಇದೆ. ಜೊತೆಗೆ ‘ಮಾಸ್-ಕ್ಲಾಸ್ ಫೀಲ್’ ಕೂಡ ಇದೆ. ಸಿನಿಮಾ ನೋಡಿದವರು ಯಾರೂ ಡಿಸಪಾಯಿಂಟ್ ಆಗಲ್ಲ’ ಇದು ಚಿತ್ರನಟ ಶಿವರಾಜಕುಮಾರ್ ಅವರು ಅವರ 125ನೇ ಚಿತ್ರ ‘ವೇದ’ದ ಕುರಿತಾಗಿ ಹೇಳಿರುವ ಭರವಸೆಯ ಮಾತುಗಳು. ವೇದ ನಾನು ನಟಿಸಿರುವ 125ನೇ ಚಿತ್ರ. ಸಿನಿಮಾ ರಂಗಕ್ಕೆ ನಾನು ಪದಾರ್ಪಣೆ ಮಾಡಿ 36 ವರ್ಷಗಳಾಗಿವೆ. ಸಿನಿಮಾ ಇಂಡಸ್ಟ್ರಿ ಸೇರಿದಂತೆ ಎಲ್ಲರೂ ಸೇರಿ ನನ್ನನ್ನು ಬೆಳೆಸಿದ್ದಾರೆ. ಗೀತಾ ಅವರ ಮೊದಲನೇ ಚಿತ್ರವಿದು.
ಎಲ್ಲರಿಗೂ ಈ ಚಿತ್ರ ಇಷ್ಟವಾಗುತ್ತದೆ ಎನ್ನುವ ಭರವಸೆ ಇದೆ. ಯುವಕರನ್ನು ಗಮನದಲ್ಲಿಟ್ಟು ಈ ಸಿನಿಮಾ ಮಾಡಲಾಗಿದೆ. ಡಿ. 23ರಂದು ಚಿತ್ರ ತೆರೆಕಾಣಲಿದ್ದು, ಎಲ್ಲರೂ ನೋಡಬೇಕೆಂದು ಮನವಿ ಮಾಡಿದರು. ವೇದ ಒಂದು ಪವಿತ್ರ ಗ್ರಂಥದಂತಿದೆ. ಪ್ರೀತಿ, ಬೆಳಕು, ಸಂತೋಷ, ನಂಬಿಕೆಯ ಅಂಶಗಳಿವೆ. ಇದು ತುಂಬಾ ವಿಭಿನ್ನವಾದ ಚಿತ್ರ. ಇದರಲ್ಲಿ ಮೂರು ಹಾಡು, ಮೂರು ಬಿಟ್ಸ್ ಸಾಂಗ್ಗಳಿವೆ.
ಬೆಂಗಳೂರು, ಮೈಸೂರು, ಕೇರಳದ ಕೆಲವು ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದರು. ನೆರೆ ರಾಜ್ಯದವರು ಈಗ ಕ್ಲಾಸ್ ಸಿನಿಮಾ ಮಾಡುತ್ತಿದ್ದಾರೆ. ನಾವು ಹಿಂದೆಯೇ ಮಾಡಿದ್ದೇವೆ. ‘ಜೈಭೀಮ್’ ತರಹದ ಸಿನಿಮಾ ಸಿಕ್ಕರೆ ಖಂಡಿತ ಮಾಡುವೆ. ಆ ಪ್ರಯತ್ನದಲ್ಲಿರುವೆ. ಥಿಯೇಟರ್ ಹಾಗೂ ಒಟಿಟಿಯಲ್ಲಿ ಸಿನಿಮಾಗಳು ಬಿಡುಗಡೆ ಕಾಣುತ್ತಿವೆ. ಆದರೆ, ಪಾಪ್ಕಾರ್ನ್ ತಿನ್ನುತ್ತ ಜನರೊಟ್ಟಿಗೆ ಸಿನಿಮಾ ನೋಡುವ ಮಜಾನೇ ಬೇರೆ. ಅದರ ಅನುಭವವೇ ಭಿನ್ನ ಎಂದು ಪ್ರಶ್ನೆಗೆ ಉತ್ತರಿಸಿದರು.
ನಿರ್ಮಾಪಕಿ ಗೀತಾ ಶಿವರಾಜಕುಮಾರ್ ಮಾತನಾಡಿ, ಸದ್ಯ ವೇದ ಸಿನಿಮಾದ ಪ್ರಚಾರಕ್ಕೆ ಬಂದಿರುವೆ. ಹಾಗಾಗಿ ರಾಜಕೀಯದ ಕುರಿತು ನಾನೇನೂ ಮಾತನಾಡಲಾರೆ. ಶಿವರಾಜಕುಮಾರ್ ಅವರ 100ನೇ ಚಿತ್ರ ನಾನು ಮಾಡಬೇಕೆಂದು ಅಂದುಕೊಂಡಿದ್ದೆ. ಆದರೆ, ಆಗಿರಲಿಲ್ಲ. ಈಗ 125ನೇ ಚಿತ್ರ ಮಾಡುವ ಅವಕಾಶ ಒಲಿದು ಬಂದಿದೆ ಎಂದು ಹೇಳಿದರು.ನಾನು ರಾಜಕೀಯಕ್ಕೆ ಖಂಡಿತವಾಗಿ ಬರುವುದಿಲ್ಲ. ಸಿನಿಮಾ ರಂಗದಲ್ಲಿಯೇ ಮುಂದುವರೆಯುತ್ತೇನೆ ಎಂದು ಚಿತ್ರನಟ ಶಿವರಾಜಕುಮಾರ್ ಹೇಳಿದರು.
ಹೊಸಪೇಟೆ ನನಗೆ ಹೊಸತಲ್ಲ. ಮೈಲಾರಿ, ಟಗರು ಚಿತ್ರದ ಚಿತ್ರೀಕರಣ ಈ ಭಾಗದಲ್ಲಿ ಮಾಡಿರುವೆ. ಟಗರು ಆಡಿಯೊ ಲಾಂಚ್ ಕೂಡ ಇಲ್ಲೇ ಮಾಡಲಾಗಿತ್ತು. ಕುಟುಂಬ ಸಮೇತ ತುಂಗಭದ್ರಾ ಜಲಾಶಯದ ಅತಿಥಿ ಗೃಹದಲ್ಲಿ ತಂಗಿದ್ದೆ. ಇಲ್ಲಿನ ನೆನಪುಗಳು ಜಾಸ್ತಿ ಇದೆ. ಹೊಸಪೇಟೆ ಜನ ತೋರುವ ಪ್ರೀತಿ, ಅಭಿಮಾನದ ಆರ್ಭಟ ಹೆಚ್ಚು. ಅಪ್ಪು ಹಾಗೂ ನನ್ನ ಚಿತ್ರಗಳ ಚಿತ್ರೀಕರಣ, ಯಶಸ್ಸು ಕಂಡಿದ್ದು ಹೊಸಪೇಟೆಯಲ್ಲಿ. ನಾವು ಪುಣ್ಯ ಮಾಡಿದ್ದೇವೆ’ ಎಂದು ಶಿವಣ್ಣ ಹೇಳಿದರು.