ತೀವ್ರ ಕುತೂಹಲ ಕೆರಳಿಸಿದ್ದ ಹಿಜಾಬ್ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದಿದ್ದು, ಇಬ್ಬರೂ ನ್ಯಾಯಾಧೀಶರು ವಿಭಿನ್ನ ತೀರ್ಪು ನೀಡಿದ್ದಾರೆ. ಹೀಗಾಗಿ ಈ ಪ್ರಕರಣ ಸಿಜೆಐ ಪೀಠಕ್ಕೆ ವರ್ಗಾಯಿಸಲಾಗಿದೆ.
ನ್ಯಾಯಮೂರ್ತಿ ಹೇಮಂತ್ ಗುಪ್ತಾ, ಮುಸ್ಲಿಂ ವಿದ್ಯಾರ್ಥಿನಿಯರ ಮೇಲ್ಮನವಿ ವಜಾಗೊಳಿಸಿದರೆ ಮತ್ತೊಬ್ಬ ನ್ಯಾಯಾಧೀಶರಾದ ಹಿಮಾಂಶು, ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಹಿಜಾಬ್ ಪ್ರಕರಣ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನ ಅಂತಿಮ ತೀರ್ಪು ಬಹಳ ಮುಖ್ಯವಾಗಿದೆ. ಇದು ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಇಡೀ ದೇಶದಲ್ಲಿರುವ ವಿಚಾರ. ಹೀಗಾಗಿ ಅಂತಿಮ ತೀರ್ಪು ಬರುವವರೆಗೂ ನಾವು ಕಾದು ನೋಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ಮಾಧ್ಯಮದವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದರು.
ಹಿಜಾಬ್ ಪ್ರಕರಣ ನ್ಯಾಯಾಂಗದ ವಿಚಾರವಾಗಿದೆ. ಇಬ್ಬರು ನ್ಯಾಯಮೂರ್ತಿಗಳು ತೀರ್ಪನ್ನು ಕೊಟ್ಟಿದ್ದಾರೆ. ನ್ಯಾಯಮೂರ್ತಿಗಳ ತೀರ್ಪನ್ನು ಲಿಖಿತವಾಗಿ ನೋಡಿ ಪ್ರತಿಕ್ರಿಯೆ ಕೊಡಬೇಕಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಹಿಜಾಬ್ ವಿಚಾರದಲ್ಲಿ ಹತ್ತು ಹಲವಾರು ಆಯಾಮಗಳಿವೆ. ವಿದ್ಯಾರ್ಥಿಗಳ ಬೇಡಿಕೆ, ಸರ್ಕಾರದ ಆಜ್ಞೆ ಬೇರೆ ಬೇರೆಯಾಗಿದೆ. ರಾಷ್ಟ್ರ, ಅಂತರಾಷ್ಟ್ರೀಯ ವಿಚಾರಗಳು ಇದರಲ್ಲಿ ಆಳವಡಿಕೆ ಆಗಿರುವುದರಿಂದ ಸ್ಪಷ್ಟವಾದ ತೀರ್ಪನ್ನು ನಾವು ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.



