ಬೆಂಗಳೂರು ಗ್ರಾಮಾಂತರ ಸಂಸದ ಸ್ಥಾನಕ್ಕೆ ನಿಂತು ಸೋತ ಡಿಕೆ ಸುರೇಶ್ ಈಗ ಮತ್ತೆ ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಡೋದಿಕ್ಕೆ ವೇದಿಕೆ ಸಿದ್ಧಮಾಡಿಕೊಂಡಿದ್ದಾರೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ ಮತ್ತೆ ಅಧಿಕಾರ ನಡೆಸೋದಕ್ಕೆ ಎಲ್ಲಾ ರೀತಿಯ ವೇದಿಕೆ ಸಿದ್ಧವಾಗಿದೆ ಎನ್ನುವುದು ಸದ್ಯ ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಆಗುತ್ತಿರುವ ವಿಚಾರ. ಡಿಕೆ ಸುರೇಶ್ ಅವರ ನಡೆಯನ್ನು ಕಾಂಗ್ರೆಸ್ ನಾಯಕರುಗಳು ಕೂಡ ಸಮರ್ಥ ಮಾಡಿಕೊಳ್ಳುತ್ತಿದ್ದಾರೆ.
ಇಷ್ಟು ದಿನ ಜನ ನನಗೆ ರೆಸ್ಟ್ ಕೊಟ್ಟಿದ್ದಾರೆ, ನಾನು ರೆಸ್ಟ್ ನಲ್ಲಿ ಇದ್ದೇನೆ. ಬೇರೆ ಯಾವುದೇ ಚುನಾವಣೆಗಳು ಕೂಡ ಹೋಗೋದಿಲ್ಲ ಅಂತಿದಂತಹ ಡಿಕೆ ಸುರೇಶ್ ದಿಢೀರ್ ಆಗಿ ಹಾಲು ಒಕ್ಕೂಟದ ರಾಜಕೀಯಕ್ಕೆ ಧುಮುಕಿದ್ದು ಅಚ್ಚರಿ ಮೂಡಿಸಿದೆ. ಬಮೂಲ್ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು ಅನೇಕ ಚರ್ಚೆ ಹಾಗೂ ಕುತೂಹಲಗಳಿಗೆ ಕಾರಣವಾಗಿದೆ. ಅವರ ನಡೆ ಅಚ್ಚರಿ ಅನಿಸಿದರೂ ಕೂಡ ಅನೇಕರ ಮಾತು. ಸೈಲೆಂಟ್ ಆಗಿದ್ದೆ ರಾಜ್ಯ ರಾಜಕೀಯದಲ್ಲಿ ಡಿಕೆ ಸುರೇಶ್ ಸಕ್ರೀಯರಾಗುತ್ತಿದ್ದಾರೆ.

ಬಮೂಲ್ ಮೂಲಕ ಸ್ಪರ್ಧಿಸಿ ಬಳಿಕ ಕೆಎಮ್ ಎಫ್ ಅಧ್ಯಕ್ಷ ಗಾಧಿಗೆ ಏರುವುದು ಅವರ ಪ್ಲಾನ್ ಅನ್ನೋದು ಕೂಡ ಚರ್ಚೆಯಲ್ಲಿ ಇರೋ ಮಾತು. ಬಮೂಲ್ ಚುನಾವಣೆಯಲ್ಲಿ ಕಾಂಗ್ರೆಸ್ 11 ಸ್ಥಾನಗಳನ್ನು ಗೆಲ್ಲುವ ಮೂಲಕ ಕೈವಶ ಮಾಡಿಕೊಂಡಿದೆ. ಇದರಲ್ಲಿ ಡಿಕೆ ಸುರೇಶ್ ರಾಜಕೀಯ ತಂತ್ರಗಾರಿಕೆ ಫಲ ನೀಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ಮಧ್ಯೆ ಕೆಎಮ್ ಎಫ್ ಅಧ್ಯಕ್ಷ ಗಾದಿ ಮೇಲೆ ಅವರ ಕಣ್ಣು ಅನ್ನೋದು ಚರ್ಚೆ ಆಗ್ತಾ ಇದೆ.
ಇದೀಗ ಇದೇ ಮಾತನ್ನ ಪರೋಕ್ಷವಾಗಿ ಶಾಸಕ ಸಿಪಿ ಯೋಗೇಶ್ವರ್ ಕೂಡ ಹೇಳಿದ್ದಾರೆ. ಕೆಎಂಎಫ್ ಗೆ ಬಲಿಷ್ಠ ಅಧ್ಯಕ್ಷ ಬೇಕು. ಈ ಬಾರಿ ಕೆಎಂಎಫ್ ಅಧ್ಯಕ್ಷ ಸ್ಥಾನ ನಮ್ಮ ಜಿಲ್ಲೆಗೆ ಸಿಗುವ ವಿಶ್ವಾಸ ಇದೆ ಅಂತ
ಚನ್ನಪಟ್ಟಣದಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ. ಅಷ್ಟೆ ಅಲ್ಲ, ಡಿ.ಕೆ.ಸುರೇಶ್ ಅವ್ರು ಅಧ್ಯಕ್ಷರಾದರೆ ತಪ್ಪೇನಿಲ್ಲ. ಡಿಕೆ ಸುರೇಶ್ ಸಾರ್ವಜನಿಕ ಸೇವೆ ಮಾಡುವ ಕಮಿಟ್ ಮೆಂಟ್ ಇರುವವರು.
ಕೆಎಂಎಫ್ ನಲ್ಲಿ ಸಾಕಷ್ಟು ಬದಲಾವಣೆ ಮಾಡಬೇಕಿದೆ. ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಹಾಲು ಉತ್ಪಾದನೆ ಆಗುತ್ತೆ ರಾಜ್ಯದಲ್ಲೇ ಚನ್ನಪಟ್ಟಣ ತಾಲೂಕು ಅತಿಹೆಚ್ಚು ಹಾಲು ಉತ್ಪಾದನೆ ಮಾಡುತ್ತೆ.
ಉತ್ತರ ಕರ್ನಾಟಕ ಭಾಗದ ಯಾರೋ ಅಧ್ಯಕ್ಷರಾದ್ರೆ ನಮ್ಮ ಸ್ಥಳೀಯ ಸಮಸ್ಯೆ ಅವರಿಗೆ ಗೊತ್ತಾಗಲ್ಲ. ಹಾಗಾಗಿ ಹಳೇ ಮೈಸೂರು ಭಾಗದ ಪ್ರಬಲ ನಾಯಕ ಅಧ್ಯಕ್ಷ ಆಗಬೇಕು ಎಂದಿದ್ದಾರೆ.

ಇನ್ನು ಮುಂದುವರೆದು ಮಾತನಾಡಿದ ಅವರು, ಚನ್ನಪಟ್ಟಣದಲ್ಲೇ ಸಹಕಾರ ಕ್ಷೇತ್ರದಲ್ಲಿ ಈ ಹಿಂದೆ ಸಾಕಷ್ಟು ಅಕ್ರಮ, ಅವ್ಯವಹಾರ ನಡೆದಿದೆ. ಈಗ ನೂತನ ನಿರ್ದೇಶಕರಾಗಿ ಲಿಂಗೇಶ್ ಕುಮಾರ್ ಆಯ್ಕೆ ಆಗಿದ್ದಾರೆ. ಎಲ್ಲಾ ಲೋಪದೋಷಗಳನ್ನ ಸರಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಚುನಾವಣೆಯಲ್ಲಿ ಅಧಿಕಾರ ದುರುಪಯೋಗ ಆರೋಪ ನಿರಾಧಾರ. ಸೋತವರು ಪಾಪ ಅವರ ಅಳಲನ್ನ ತೋಡಿಕೊಳ್ತಿದ್ದಾರೆ. ಏನೇ ಆರೋಪ ಮಾಡಿದ್ರು ಚುನಾವಣೆಯಲ್ಲಿ ಬಂದ ಮತಗಳಿಂದ ಕಾಂಗ್ರೆಸ್ ಗೆದ್ದಿರೋದು ಸ್ಪಷ್ಟ. ಹಾಗಾಗಿ ಜೆಡಿಎಸ್ ನವರ ಆರೋಪಕ್ಕೆ ಯಾವುದೇ ಮನ್ನಣೆ ಇಲ್ಲ ಅಂತ ಸಿಪಿವೈ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.



