ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂದು ಎಷ್ಟೋ ಕಲಾವಿದರ ಕನಸಾಗಿರುತ್ತದೆ. ಆದರೆ ಅದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅದೃಷ್ಟ ಅನ್ನೋದು ಜೊತೆಗಿದ್ದರೆ ಒಂದೇ ಒಂದು ಧಾರಾವಾಹಿ ಮೂಲಕ ಮನೆ ಮಾತಾಗಬಹುದು. ಇಂತಹ ಎಷ್ಟೋ ಕಲಾವಿದರು ಇದ್ದಾರೆ. ಅವರಲ್ಲಿ ವಿಕಾಶ್ ಉತ್ತಯ್ಯ ಕೂಡಾ ಒಬ್ಬರು. ಈ ಸ್ಫುರದ್ರೂಪಿ ನಟ, ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 7.30ಕ್ಕೆ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ನಾಯಕ ಮಾರಿಗುಡಿ ಶಿವಣ್ಣನಾಗಿ ನಟಿಸುತ್ತಿದ್ದಾರೆ.
ಮಾರಿಗುಡಿ ಎಂಬ ಊರು. ಆ ಊರಿಗೆ ನಾಯಕ ವೀರಭದ್ರ, ಆತ ಹಾಗೂ ಅವನ ಮಗ ಮುಖವಾಡ ಹಾಕಿಕೊಂಡು ಬದುಕುತ್ತಿರುವ ರಾಕ್ಷಸರು. ಶಿವು ಎಲ್ಲರಿಗೂ ಇಷ್ಟವಾಗುವ ವ್ಯಕ್ತಿ. ಶಿವುಗೆ ಮೂವರು ತಂಗಿಯರು. ಪ್ರತಿ ವರ್ಷ ಜಾತ್ರೆಯ ಸಮಯದಲ್ಲಿ ಶಿವು ಮೈ ಮೇಲೆ ಮಾಕಾಳವ್ವ ಬಂದು ಊರ ಜನರಿಗೆ ಸಂದೇಶ ಹೇಳುತ್ತಾಳೆ. ಅದರಿಂದಲೇ ಶಿವು ಎಂದರೆ ಎಲ್ಲರಿಗೂ ಭಕ್ತಿ, ಗೌರವ. ಆಕಸ್ಮಿಕವಾಗಿ ವೀರಭದ್ರನ ಮಗಳು ಪಾರ್ವತಿ , ಶಿವುನನ್ನು ಮದುವೆ ಆಗುತ್ತಾಳೆ. ಹೇಗಾದರೂ ಮಾಡಿ ಎಲ್ಲರ ಪಾಲಿಗೆ ಹೀರೋ ಆಗಿರುವ ಶಿವುನನ್ನು ಮುಗಿಸಬೇಕು ಅನ್ನೋದು ವೀರಭದ್ರ ಹಾಗೂ ತಂಡದ ದುರುದ್ದೇಶ. ಕಥೆ ಹೀಗೆ ಮುಂದೆ ಸಾಗುತ್ತದೆ. ಮಾರಿಗುಡಿ ಶಿವು ಆಗಿ ವಿಕಾಶ್ ಉತ್ತಯ್ಯ ಅದ್ಭುತವಾಗಿ ಅಭಿನಯಿಸುತ್ತಿದ್ದಾರೆ.

ಇತ್ತೀಚೆಗೆ ಶಿವು ಮೈ ಮೇಲೆ ಮಾಕಾಳವ್ವ ಬರುವ ದೃಶ್ಯಗಳಲ್ಲಂತೂ ವಿಕಾಶ್ ತಮ್ಮ ಅಭಿನಯದಿಂದ ತಮ್ಮದೇ ಫ್ಯಾನ್ ಫಾಲೋಯಿಂಗ್ ಗಿಟ್ಟಿಸಿಕೊಂಡಿದ್ದಾರೆ. ಲಾ ಓದುವಾಗಲೇ ವಿಕಾಶ್ ನಟನೆ ಆರಂಭಿಸಿದ್ದರು. ಜೊತೆಗೆ ರಂಗಭೂಮಿಯಲ್ಲಿ ಕೂಡಾ ತರಬೇತಿ ಪಡೆದಿದ್ದಾರೆ. ತಮ್ಮ ತಂಡದೊಂದಿಗೆ ಅನೇಕ ಶೋಗಳನ್ನು ಕೂಡಾ ನೀಡಿದ್ದಾರೆ. ಕನಸಿನ ಮಳೆಯಾದಳು ಕಿರುಚಿತ್ರದಿಂದ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ವಿಕಾಶ್ ಉತ್ತಯ್ಯ ನಂತರ ಆನ ಚಿತ್ರದಲ್ಲಿ ನಟಿಸಿದರು. ಮೇರಿ ಹಾಗೂ ಅಪಾಯವಿದೆ ಎಚ್ಚರಿಕೆ ಚಿತ್ರಗಳಲ್ಲಿ ವಿಕಾಶ್ ಅಭಿನಯಿಸಿದ್ದಾರೆ. ಸದ್ಯಕ್ಕೆ ಕಿರುತೆರೆಪ್ರಿಯರ ಮೆಚ್ಚಿನ ಶಿವಣ್ಣ ಆಗಿ ಮನೆ ಮಾತಾಗಿದ್ದಾರೆ. ಮೇರಿ ಚಿತ್ರದಲ್ಲಿ ವಿಕಾಶ್, ಇನ್ಸ್ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಶಾಂತಂ ಪಾಪಂ ಕ್ರೈಂ ಸೀರಿಸ್ನಲ್ಲಿ ಕೂಡಾ ವಿಕಾಶ್ ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು.

ಅಂದಹಾಗೆ ವಿಕಾಶ್ ಉತ್ತಯ್ಯ ಮೂಲತ: ಮಡಿಕೇರಿಯವರು. ಮಂಗಳೂರಿನ ಎಸ್ಡಿಎಂ ಲಾ ಕಾಲೇಜಿನಲ್ಲಿ ಎಲ್ಎಲ್ಬಿ ಓದಿ, ಬೆಂಗಳೂರಿನ ಸಿಎಂಆರ್ ಲಾ ಸ್ಕೂಲ್ನಲ್ಲಿ Constituion Law ವಿಭಾಗದಲ್ಲಿ ಮಾಸ್ಟರ್ ಆಫ್ ಲಾ ಮಾಡಿದ್ದಾರೆ. ವೃತ್ತಿಯಲ್ಲಿ ಇವರು ವಕೀಲರು. ವಿಕಾಶ್, ದಿ ಲೀಗಲ್ ಗಾರ್ಡಿಯನ್ ಲಾ ಫರ್ಮ್ ಸಂಸ್ಥಾಪಕರಾಗಿದ್ದಾರೆ. ವೃತ್ತಿಯಲ್ಲಿ ವಕೀಲರಾದರೂ ಪ್ರವೃತ್ತಿಯಲ್ಲಿ ಓದು ಮುಗಿಸಿ ಬಣ್ಣದ ಲೋಕದ ಸೆಳೆತದಿಂದ ತಮ್ಮ ಲಾಯರ್ ಕೆಲಸದ ಜೊತೆ ಜೊತೆಗೆ ನಟನೆಯನ್ನೂ ಮಾಡುತ್ತಿದ್ದಾರೆ. ವಿಕಾಶ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗುವ ಮಿಂಚುವ ಎಲ್ಲಾ ಲಕ್ಷಣಗಳೂ ಇವೆ.
ಅಪಾಯವಿದೆ ಎಚ್ಚರಿಕೆ ಸಿನಿಮಾ ಮುಗಿಯುತ್ತಿದ್ದಂತೆ ಅಣ್ಣಯ್ಯ ಧಾರಾವಾಹಿಯಲ್ಲಿ ನನಗೆ ಆಫರ್ ಬಂತು. ಕಥೆ ಕೇಳುತ್ತಿದ್ದಂತೆ ಇಂಪ್ರೆಸ್ ಆದೆ. ಇಂಥ ಒಳ್ಳೆ ಪಾತ್ರವನ್ನು ಬಿಡಬಾರದು ಎಂದು ಒಪ್ಪಿಕೊಂಡೆ. ಪಾತ್ರವನ್ನು ಇಷ್ಟಪಟ್ಟು ಮಾಡುತ್ತಿದ್ದೇನೆ, ಅದೇ ರೀತಿ ಜನರು ನನಗೆ ಪ್ರೀತಿ, ಆಶೀರ್ವಾದ ನೀಡುತ್ತಿದ್ದಾರೆ ಎಂದು ವಿಕಾಶ್, ಸಂದರ್ಶನಗಳಲ್ಲಿ ಹೇಳಿದ್ದಾರೆ. ವಿಕಾಶ್ ಉತ್ತಯ್ಯ ಅವರಿಗೆ ಇನ್ನಷ್ಟು ಉತ್ತಮ ಅವಕಾಶಗಳು ಬರಲಿ, ಅವರು ಕಿರುತೆರೆಯಲ್ಲಿ, ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಲಿ ಎಂದು ಹಾರೈಸೋಣ.



