ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ ಕಾಂತಾರ ಸಿನಿಮಾದ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಕಾಂತಾರ ಬಿಡುಗಡೆಯಾಗಿ ಭರ್ತಿ ಒಂದು ವರ್ಷ ಕಳೆದಿದ್ದು, ಇತ್ತೀಚೆಗಷ್ಟೇ ಸಿನಿಮಾ ತಂಡ ಕಾಂತಾರದ ವರಹಾ ರೂಪಂ ಹಾಡಿನ ಹೊಸ ವಿಡಿಯೋ ಬಿಡುಗಡೆ ಮಾಡಿತ್ತು. ಕಾಂತಾರ ಹಾಡನ್ನು ವಿವಿಧ ಕಾರ್ಯಕ್ರಮಗಳಲ್ಲಿ ಥೀಮ್ ಆಗಿ ಬಳಸುವುದನ್ನೂ ಜನರು ಮುಂದುವರೆಸಿದ್ದಾರೆ. ಇತ್ತೀಚೆಗೆ ಗಣೇಶ ವಿಸರ್ಜನೆ ವೇಳೆ ಕಾಂತಾರ ಹಾಡನ್ನು ಮರು ಸೃಷ್ಟಿಸಲು ಹೋಗಿ ಮಕ್ಕಳು ಸೇರಿದಂತೆ 5 ಜನರು ಗಾಯಗೊಂಡ ಘಟನೆ ನಡೆದಿದ್ದು, ಈ ಘಟನೆಯ ಭಯಾನಕ ವಿಡಿಯೋ ವೈರಲ್ ಆಗುತ್ತಿದೆ.
ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಸುತ್ತಲೂ ಜನರು ಸೇರಿರುವ ಸಂದರ್ಭದಲ್ಲಿ ನಡುವೆ ವೃತ್ತಾಕಾರದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ದೈವ ನರ್ತನ ಮಾಡುವ ಸಂದರ್ಭದಲ್ಲಿ ಬೆಂಕಿ ಆಕಸ್ಮಿಕ ನಡೆದಿದೆ. ಈ ಕುರಿತು ವಿಡಿಯೋವನ್ನು ಎಕ್ಸ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಕಾಂತಾರ ಹಾಡನ್ನು ಮರು ಸೃಷ್ಟಿಸಲು ಪ್ರಯತ್ನಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ದೈವದ ಸುತ್ತಲೂ ಪೆಟ್ರೋಲ್ ಸುರಿಯಲಾಗಿದೆ. ನಡುವೆ ಕಾಂತಾರ ಸಿನಿಮಾದ ದೈವ ವೇಷಧಾರಿ ಕುಣಿಯಲು ರೆಡಿಯಾಗಿದ್ದಾರೆ. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದರಿಂದ ಒಮ್ಮೆಗೆ ಧಗ್ಗನೆ ಬೆಂಕಿ ಹತ್ತಿಕೊಂಡಿದೆ. ಒಂದು ಬದಿಯಲ್ಲಿ ನಿಂತವರಿಗೆ ಬೆಂಕಿಯ ಕೆನ್ನಾಲಗೆ ತಾಗಿದೆ. ಬೆಂಕಿಯ ಕಾವಿಗೆ ಕೆಲವು ಮಕ್ಕಳು ಬೆಂಕಿಯ ವೃತ್ತದೊಳಗೆ ಬೀಳುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು. ಯುವಕರು, ಮಕ್ಕಳು ಸೇರಿದಂತೆ ಐದು ಜನರು ಗಾಯಗೊಂಡಿದ್ದಾರೆ.