ಬೆಂಗಳೂರಿನ ಬಹುನಿರೀಕ್ಷಿತ ಹಳದಿ ಮಾರ್ಗ ಮೆಟ್ರೋ ರೈಲು ಇದೇ ವರ್ಷದ ಮೇ ತಿಂಗಳಲ್ಲಿ ಕಾರ್ಯ ಪ್ರಾರಂಭಿಸಲಿದೆ. ಆರ್ವಿ ರಸ್ತೆ ಹಾಗೂ ಬೊಮ್ಮಸಂದ್ರದ ನಡುವೆ ಸಂಚಾರ ಸೇವೆ ಒದಗಿಸಲಿರುವ ಈ ಮೆಟ್ರೋ ಲೈನ್, ನಗರದ ಐಟಿ ಹಬ್ ಎಂದೇ ಗುರುತಿಸಿಕೊಂಡಿರುವ ಎಲೆಕ್ಟ್ರಾನಿಕ್ ಸಿಟಿಗೂ ಸಹ ಸಂಪರ್ಕ ಕಲ್ಪಿಸಲಿದೆ.
ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಈ ಕುರಿತು ಸದನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ “ಆರ್ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ 19.1 ಕಿ.ಮೀ. ವ್ಯಾಪ್ತಿ ಸಂಚರಿಸುವ ಹಳದಿ ಮಾರ್ಗದ ರೈಲು ಮೇ 2025ರಿಂದ ಸಾರ್ವಜನಿಕ ಸೇವೆಗೆ ತೆರೆದುಕೊಳ್ಳಲಿದೆ” ಎಂದು ಹೇಳಿದ್ದಾರೆ.

ಇದೇ ವೇಳೆ, ಪಿಂಕ್ ಲೈನ್ ಕಾಮಗಾರಿ ಕುರಿತು ಸಹ ಮಾತನಾಡಿದ ಶಿವಕುಮಾರ್ “ಕಾಳೆನ ಅಗ್ರಹಾರದಿಂದ ತಾವರೆಕೆರೆ/ಸ್ವಾಗತ ಕ್ರಾಸ್ವರೆಗಿನ 7.5 ಕಿ.ಮೀ. ಎತ್ತರದ ವಿಭಾಗ(ಎಲೆವೇಟೆಡ್ ಸೆಕ್ಷನ್) ಡಿಸೆಂಬರ್ 2025ರಿಂದ ಪ್ರಾರಂಭಗೊಳ್ಳಲಿದೆ. ಹಾಗೆಯೇ, ಡೈರಿ ಸರ್ಕಲ್ನಿಂದ ನಾಗಾವರದವರೆಗಿನ 13.7 ಕಿ.ಮೀ. ಅಂಡರ್ಗ್ರೌಂಡ್ ವಿಭಾಗವು ಡಿಸೆಂಬರ್ 2026ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ” ಎಂದು ತಿಳಿಸಿದರು.
ರೋಲಿಂಗ್ ಸ್ಟಾಕ್ ಕೊರತೆಯಿಂದ ನಿಧಾನಗೊಂಡ ಹಳದಿ ಮಾರ್ಗ:
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್(ಬಿಎಂಆರ್ಸಿಎಲ್) ರೋಲಿಂಗ್ ಸ್ಟಾಕ್ ಕೊರತೆಯನ್ನು ಎದುರಿಸುತ್ತಿದೆ. ಆದ್ದರಿಂದಲೇ ಹಳದಿ ಮಾರ್ಗದ ಕಾಮಗಾರಿ ವಿಳಂಬಗೊಂಡಿದ್ದು, ಉದ್ಘಾಟನೆ ತಡವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಸಂಚಾರ ಪ್ರಾರಂಭಗೊಳಿಸಲು ತಯಾರಿ ನಡೆಸಿರುವ ಬಿಎಂಆರ್ಸಿಎಲ್ 30 ನಿಮಿಷಗಳ ಫ್ರಿಕ್ವೆನ್ಸಿಯಲ್ಲಿ 3 ರೈಲುಗಳನ್ನು ಓಡಿಸಲು ಯೋಜಿಸಿದೆ. ಏಪ್ರಿಲ್ 2025ರ ವೇಳೆಗೆ ಮೂರನೇ ರೈಲು ಹಾಗೂ ನಂತರ ನಾಲ್ಕನೇ ರೈಲು ಪೂರ್ಣ ಪ್ರಮಾಣದ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷಿಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಕ್ರಿಯವಾಗಿರುವ ಪ್ರಾಯೋಗಿಕ ಓಡಾಟ, ಕೋಚ್ ಪರಿಶೀಲನೆ:
2024 ಮಾರ್ಚ್ 7ರಂದು ಬಿಎಂಆರ್ಸಿಎಲ್ ನಿಧಾನಗತಿಯಲ್ಲಿ ಹಳದಿ ಮಾರ್ಗದ ಮೆಟ್ರೋ ರೈಲನ್ನು ಓಡಿಸಲು ಪ್ರಾರಂಭಿಸಿತ್ತು. ಫೆಬ್ರವರಿ 2025ರಲ್ಲಿ ಮೆಟ್ರೋ ರೈಲು ಸುರಕ್ಷತಾ ಆಯುಕ್ತ ಎ.ಎಂ.ಚೌಧರಿ ಎರಡು CRRC ನಾನ್ಜಿಂಗ್ ಫುಜಿನ್ ರೈಲುಗಳನ್ನು ಪರಿಶೀಲಿಸಿದರು. ಒಂದನ್ನು ಚೀನಾದಿಂದ ಆಮದು ಮಾಡಿಕೊಂಡಿದ್ದು, ಮತ್ತೊಂದನ್ನು ಕೊಲ್ಕತ್ತಾ ಮೂಲದ ಟಿಟರ್ಹ್ ರೈಲ್ ಸಿಸ್ಟಮ್ಸ್ನಲ್ಲಿ ಸಂಯೋಜಿಸಲಾಗಿದೆ.
ಭಾರತ-ಚೀನಾ ಗಡಿ ಬಿಕ್ಕಟ್ಟಿನಿಂದ ವಿಳಂಬ:
ಹಳದಿ ಮಾರ್ಗವು ಡಿಸೆಂಬರ್ 2021ರಲ್ಲಿಯೇ ಪ್ರಾರಂಭಗೊಳಿಸಲು ಯೋಜಿಸಲಾಗಿತ್ತು. ಆದರೆ, ಕೋಚ್ ವಿತರಣೆಗಳು ಸೇರಿದಂತೆ ಹಲವಾರು ಅಂಶಗಳಿಂದಾಗಿ ಹಿನ್ನಡೆಯನ್ನು ಎದುರಿಸಿದ್ದವು. ಪ್ರಮುಖವಾಗಿ 2020 ಜೂನ್ನಲ್ಲಿ ತಲೆದೂರಿದ್ದ ಭಾರತ-ಚೀನಾ ಗಡಿ ಬಿಕ್ಕಟ್ಟೂ, CRRC ನಾನ್ಜಿಂಗ್ ಫುಜಿನ್ ರೈಲು ಆಮದುಗೊಳ್ಳುವಿಕೆ ಮೇಲೆ ಪರಿಣಾಮ ಬೀರಿತು. ಇನ್ನು ಮೇಕ್ ಇನ್ ಇಂಡಿಯಾ ಉಪಕ್ರಮದ ಅಡಿಯಲ್ಲಿ 75% ಸ್ಥಳೀಯ ಉತ್ಪಾದನಾ ಅಗತ್ಯವನ್ನು ಪೂರೈಸಲು ಸ್ಥಳೀಯ ಪಾಲುದಾರರನ್ನು ಆಯ್ಕೆ ಮಾಡುವಲ್ಲಿಯೂ ಸಹ ಸಮಯವಿಡಿಯಿತು. ಹಾಗೆಯೇ, ಕೋವಿಡ್-19 ಅಡಚಣೆ, ವಿದೇಶಿ ನೇರ ಹೂಡಿಕೆ ನೀತಿ ಹಾಗೂ ಚೀನಾದೊಂದಿಗಿನ ವ್ಯಾಪಾರ ನಿರ್ಬಂಧಗಳೆಲ್ಲಾ ಸೇರಿ ಹಳದಿ ಮಾರ್ಗ ಮೆಟ್ರೋ ರೈಲು ಪ್ರಾರಂಭಕ್ಕೆ ತೊಡಕಾಗಿದ್ದವು ಎಂದು ಮೂಲಗಳು ತಿಳಿಸಿವೆ.

ಒಟ್ಟಾರೆ, ಹಳದಿ ಮಾರ್ಗದ ಮೆಟ್ರೋ ರೈಲು ಪ್ರಸ್ತುತ ಪ್ರಾಯೋಗಿಕ ಸಂಚಾರದಲ್ಲಿದ್ದು, ಮೇ ತಿಂಗಳಿನಲ್ಲಿ ಅಧಿಕೃತವಾಗಿ ಕಾಯಾರಂಭಗೊಳ್ಳಲಿವೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಜನನಿಭಿಡ ಪ್ರದೇಶ ಹಾಗೂ ಸಂಚಾರ ದಟ್ಟಣೆಗೆ ತುತ್ತಾಗುವ ಪ್ರದೇಶಗಳ ಪೈಕಿ ಎಲೆಕ್ಟ್ರಾನಿಕ್ ಸಿಟಿಯು ಒಂದಾಗಿದ್ದು, ಸ್ಥಳೀಯರು ಇನ್ನಾದರೂ ಇಲ್ಲಿ ಟ್ರಾಫಿಕ್ ಸಮಸ್ಯೆ ಬಗೆ ಹರಿಯುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಹಳದಿ ಬಣ್ಣದ ರೈಲು ಮಾರ್ಗ ಸಂಚಾರ ಪ್ರಾರಂಭಿಸಿದರೆ ಕೆಲಸಕ್ಕೆ ಹೋಗುವವರಿಗೆ ಸಮಯ ಉಳಿತಾಯವಾಗುವುದು ಲಾಭವೇ ಸರಿ.