ಕನ್ನಡ ಸಿನಿರಂಗದ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 37 ವರ್ಷದ ಸ್ಪಂದನಾ ದಿಢೀರ್ ಅಸುನೀಗಿದ್ದು, ವಿಜಯ ರಾಘವೇಂದ್ರ ಅವರಿಗೆ ಅರಗಿಸಿಕೊಳ್ಳಲಾಗದ ತುತ್ತಾಗಿ ಪರಿಣಮಿಸಿದೆ. ಇಡೀ ಕುಟುಂಬ ದುಃಖದ ಮಡುವಿಲ್ಲಿ ಮುಳುಗಿದೆ. ಇದೇ ವೇಳೆ ಸದ್ಯ, ಸ್ಪಂದನಾ ಮೃತದೇಹ ದೂರದ ಬ್ಯಾಂಕಾಕ್ ನಲ್ಲಿದ್ದು, ಸ್ವಗೃಹಕ್ಕೆ ಮೃತದೇಹ ತರುವ ಪ್ರಕ್ರಿಯೆ ಹೇಗೆ? ಅಂತ್ಯಸಂಸ್ಕಾರ ಯಾವಾಗ? ಎಂಬುದನ್ನು ಈ ವರದಿಯಲ್ಲಿ ತಿಳಿಯೋಣ.

ಸ್ಪಂದನಾ ಚಿಕ್ಕಪ್ಪ, ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದೇನು?
ಈ ಬಗ್ಗೆ ಕಾಂಗ್ರೆಸ್ ನಾಯಕ ಹಾಗೂ ಸ್ಪಂದನಾ ಅವರ ಚಿಕ್ಕಪ್ಪ ಬಿ.ಕೆ ಹರಿಪ್ರಸಾದ್ ಮಾತನಾಡಿ, ‘ಸ್ಪಂದನಾ ಅವರ ಪೋಸ್ಟ್ ಮಾರ್ಟಂ ಆಗಿದೆ. ನಾಳೆ ರಾತ್ರಿ ಬ್ಯಾಂಕಾಕ್ನಿಂದ ಹೊರಟು ಸಾಯಂಕಾಲದ ಹೊತ್ತಿಗೆ ಮೃತದೇಹ ಬೆಂಗಳೂರಿಗೆ ಬರಲಿದೆ. ಸ್ಪಂದನಾ ತಂದೆಯ ಜೊತೆ ಮಾತುಕತೆ ನಡೆಸಲಾಗಿದೆ. ನಮ್ಮ ಹಿರಿಯರಂತೆ ಸ್ಪಂದನಾ ಅಂತ್ಯಕ್ರಿಯೆ ನಡೆಯಲಿದೆ. ಅಂತ್ಯಕ್ರಿಯೆ ಸ್ಥಳವನ್ನು ವಿಜಯ ರಾಘವೇಂದ್ರ ಅವರೆ ನಿರ್ಧರಿಸುತ್ತಾರೆ.
ಭಾರತೀಯ ಪ್ರಜೆಯಾಗಿರುವ ಸ್ಪಂದನಾ ವಿದೇಶದಲ್ಲಿ ಮೃತಪಟ್ಟಿದ್ದಾರೆ. ಆ ಕಾರಣ ವಿದೇಶದಿಂದ ಮೃತ ದೇಹ ತರಲು ಹಲವು ಪ್ರಕ್ರಿಯೆಗಳನ್ನು ಪಾಲಿಸಬೇಕಿದೆ. ಎಲ್ಲಾ ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಸ್ಪಂದನಾ ಮೃತದೇಹ ಭಾರತಕ್ಕೆ ಹಸ್ತಾಂತರಿಸುತ್ತಾರೆ. ಎಂದು ತಿಳಿಸಿದ್ದಾರೆ.



