ಕನ್ನಡ ಕಿರುತೆರೆಯ ನಟಿ ರಂಜನಿ ರಾಘವನ್ ಅವರು ಈಗ ಮನರಂಜನಾ ಮಾಧ್ಯಮದ ಹಲವು ಆಯಾಮಗಳಲ್ಲಿ ಪ್ರಯೋಗ ಮಾಡುವುದಕ್ಕೆ ಶುರು ಮಾಡಿದ್ದಾರೆ. ನಟಿಯಾಗಿದ್ದ ಇವರು ಈಗ ನಿರ್ದೇಶಕೀಯಾಗಿದ್ದಾರೆ. ಢಿ ಢಿ ಢಿಕ್ಕಿ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ಈ ಸಿನಿಮಾದ ಪ್ರೊಮೋಷನ್ ಗಳಲ್ಲಿ ಹೆಚ್ಚು ನಿರತರಾಗಿದ್ದಾರೆ ರಂಜನಿ ಅವರು. ಒಂದೆರಡು ದಿನಗಳ ಹಿಂದೆ ಇವರು ಕಮಲ್ ಹಾಸನ್ ಅವರಿಗೆ ಕನ್ನಡ ಪುಸ್ತಕಗಳನ್ನು ಕೊಟ್ಟಿರುವ ಒಂದು ಫೋಟೋ ಶೇರ್ ಮಾಡಿದ್ದರು, ಈ ಫೋಟೋ ಸಿಕ್ಕಾಪಟ್ಟೆ ವಿವಾದಗಳನ್ನು ಸೃಷ್ಟಿಸಿತ್ತು. ರಂಜನಿ ಅವರನ್ನು ಬಹಳಷ್ಟು ಜನರು ಟ್ರೋಲ್ ಮಾಡಿದರು. ಅದೆಲ್ಲದಕ್ಕೂ ಈಗ ರಂಜನಿ ಅವರೇ ಉತ್ತರ ಕೊಟ್ಟಿದ್ದಾರೆ, ತಾವು ಫೋಟೋ ಹಾಕಿದ್ದರ ಹಿಂದಿನ ಉದ್ದೇಶ ಏನು ಎಂದು ತಿಳಿಸಿದ್ದಾರೆ..
ರಂಜನಿ ಅವರು ಎಷ್ಟು ಚೆನ್ನಾಗಿ ಕನ್ನಡ ಮಾತಾಡ್ತಾರೆ, ಅವರಿಗೆ ಕನ್ನಡದ ಬಗ್ಗೆ ಎಷ್ಟು ಗೌರವ ಪ್ರೀತಿ ಇದೆ ಎಂದು ನಮಗೆಲ್ಲಾ ಗೊತ್ತೇ ಇದೆ. ಕನ್ನಡತಿ ಧಾರಾವಾಹಿಯ ಮೂಲಕ ರಂಜನಿ ಅವರು ಮನೆಮಾತಾದರು, ಆ ಧಾರಾವಾಹಿಯ ಪ್ರತಿ ಸಂಚಿಕೆಯ ಕೊನೆಯಲ್ಲಿ ಅವರು ಹೇಳಿಕೊಡುತ್ತಿದ್ದ ಕನ್ನಡ ಪಾಠ ಎಲ್ಲರ ಮೆಚ್ಚುಗೆ ಗಳಿಸಿತ್ತು. ಪ್ರತಿದಿನ ಒಂದು ಕನ್ನಡ ಪದದ ಬಗ್ಗೆ ರಂಜನಿ ಅವರು ತಿಳಿಸುತ್ತಿದ್ದರು. ಹಾಗೆಯೇ ಧಾರಾವಾಹಿಯಲ್ಲಿ ಇವರು ಮಾತನಾಡುವ ಸ್ಪಷ್ಟವಾದ ಕನ್ನಡ ಸಹ ಎಲ್ಲರಿಗೂ ತುಂಬಾ ಇಷ್ಟವಾಗಿತ್ತು. ಕನ್ನಡದ ಬಗ್ಗೆ ಇರುವ ಪ್ರೀತಿ ಹೇಗಿದೆ ಅಂದ್ರೆ ರಂಜನಿ ಅವರು ಕನ್ನಡದಲ್ಲಿ ಎರಡು ಪುಸ್ತಕಗಳನ್ನು ಸಹ ಬರೆದಿದ್ದಾರೆ. ಕತೆ ಡಬ್ಬಿ ಮತ್ತು ಸ್ವೈಪ್ ರೈಟ್. ಒಂದು ಕಾದಂಬರಿ, ಒಂದು ಸಣ್ಣ ಕಥೆಗಳ ಪುಸ್ತಕ. ಹೀಗೆ ರಂಜನಿ ರಾಘವನ್ ಅವರಿಗೆ ಕನ್ನಡ ಪ್ರೇಮ ತುಂಬಾ ಇದೆ.

ರಂಜನಿ ಅವರು ಕಿರುತೆರೆಯಲ್ಲಿ ನಟಿಯಾಗಿ ಮಿಂಚಿದರು, ಆಕಾಶ ದೀಪ, ಪುಟ್ಟಗೌರಿ ಮದುವೆ, ಕನ್ನಡತಿ ಧಾರಾವಾಹಿಗಳಲ್ಲಿ ನಟಿಸಿದರು. ಈ ಮೂರು ಧಾರಾವಾಹಿಗಳು ಕೂಡ ಸೂಪರ್ ಹಿಟ್ ಆದವು, ಇವರ ಅಭಿನಯ ಮತ್ತು ಆ ಕಥೆ ಎಲ್ಲವೂ ಸಹ ಜನರಿಗೆ ಬಹಳ ಇಷ್ಟವಾಯಿತು. ಸ್ಯಾಂಡಲ್ ವುಡ್ ಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದು ಆಗಿದೆ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾದಲ್ಲಿ ರಂಜನಿ ರಾಘವನ್ ಅವರು ದಿಗಂತ್ ಅವರಿಗೆ ನಾಯಕಿಯಾಗಿ ನಟಿಸಿದರು. ಈ ಸಿನಿಮಾ ಬಳಿಕ ರಂಜನಿ ಅವರು ಒಂದು ಬ್ರೇಕ್ ಪಡೆದು ಈಗ ತೆರೆ ಮುಂದೆ ಅಲ್ಲದೇ, ತೆರೆ ಹಿಂದೆ ನಿರ್ದೇಶಕಿಯಾಗಿ ಕೆಲಸ ಶುರು ಮಾಡಿದ್ದಾರೆ. ಇವರು ನಿರ್ದೇಶನ ಮಾಡುತ್ತಿರುವ ಸಿನಿಮಾ ಹೆಸರು ಢಿ ಢಿ ಢಿಕ್ಕಿ. ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಸಿನಿನ ಆಗಿದೆ. ಸಿನಿಮಾ ಮೇಲೆ ಭಾರಿ ನಿರೀಕ್ಷೆ ಕೂಡ ಇದೆ.
ಈ ಸಿನಿಮಾದಲ್ಲಿ ನೆನಪಿರಲಿ ಪ್ರೇಮ್ ಅವರು ನಾಯಕನಾಗಿ ನಟಿಸುತ್ತಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಅವರ ಮಗ ಢಿ ಢಿ ಢಿಕ್ಕಿ ಸಿನಿಮಾ ಮೂಲಕ ಬಾಲನಟನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾನೆ. ಮೊದಲ ಸಿನಿಮಾಗೆ ಬಹಳ ವಿಶೇಷವಾದ ಕಾನ್ಸೆಪ್ಟ್ ಅನ್ನೇ ಇಟ್ಟುಕೊಂಡಿದ್ದಾರೆ ರಂಜನಿ ಅವರು. ಇವರ ಸಿನಿಮಾಗೆ ಭಾರತ ಚಿತ್ರರಂಗದ ಮಾಂತ್ರಿಕ ಸಂಗೀತ ನಿರ್ದೇಶಕ ಇಳಯರಾಜ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ, ಇದು ಎಂಥಾ ಒಳ್ಳೇ ವಿಷಯ ಅಲ್ವಾ.. ಇದೆಲ್ಲವೂ ಚೆನ್ನಾಗಿ ನಡೆಯುತ್ತಿರುವ ವೇಳೆ ರಂಜನಿ ಅವರು ನಟ ಕಮಲ್ ಹಾಸನ್ ಅವರಿಗೆ ತಾವು ಬರೆದ ಕನ್ನಡ ಪುಸ್ತಕ ಕೊಡುತ್ತಿರುವ ಫೋಟೋ ಒಂದನ್ನು ಶೇರ್ ಮಾಡಿದ್ದು ಬಹಳ ವಿವಾದಕ್ಕೆ ಕಾರಣವಾಯಿತು. ಕೆಲವು ದಿನಗಳಿಂದ ಕಮಲ್ ಹಾಸನ್ ಅವರು ಕನ್ನಡದ ವಿಚಾರಕ್ಕೆ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಕನ್ನಡಿಗರ ಕೋಪಕ್ಕೆ ತುತ್ತಾಗಿದ್ದಾರೆ.
ಹೀಗಿರುವಾಗ ರಂಜನಿ ಅವರಿಗೆ ಪುಸ್ತಕ ಕೊಟ್ಟಿದ್ದರ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು, ಇಲ್ಲಿ ಜಾತಿ ಭಾಷೆ ಇದೆಲ್ಲವು ಬಂದಿತು. ಈ ಎಲ್ಲಾ ಟ್ರೋಲ್ ಗಳು ನಡೆಯುವ ಸಮಯದಲ್ಲಿ ರಂಜನಿ ಅವರು ತಾವು ಆ ಫೋಟೋ ಹಂಚಿಕೊಂಡಿದ್ದು ಯಾಕೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿ ಕಾರಣ ತಿಳಿಸಿದ್ದಾರೆ. ರಂಜನಿ ಅವರು ಹೇಳಿರುವ ಅನುಸಾರ, ಅದು ಈಗಿನ ಫೋಟೋ ಅಲ್ಲ. ಕನ್ನಡದ ಯಾರಾದರೂ ಒಬ್ಬರು ಈಗ ಕಮಲ್ ಹಾಸನ್ ಅವರನ್ನು ಭೇಟಿ ಮಾಡಿ, ಪುಸ್ತಕ ಕೊಡಬೇಕು ಸಿನಿಮಾ ಬಗ್ಗೆ ಮಾತಾಡಬೇಕು ಎಂದರೆ ಅವರು ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ, ಇದು ಮೂರ್ನಾಲ್ಕು ತಿಂಗಳ ಹಿಂದೆ ಭೇಟಿ ಮಾಡಿದ್ದು ಎಂದಿದ್ದಾರೆ ರಂಜನಿ ಅವರು. ತಮ್ಮ ಸಿನಿಮಾ ಪ್ರೊಮೋಷನ್ ಗಾಗಿ ಕಮಲ್ ಅವರನ್ನು ಭೇಟಿ ಮಾಡಿದ್ದರಂತೆ.
ರಂಜನಿ ಅವರು ತಮ್ಮ ಇಡೀ ತಂಡದ ಜೊತೆಗೆ ಕಮಲ್ ಹಾಸನ್ ಅವರನ್ನು ಭೇಟಿ ಮಾಡಿದ್ದು, ರಂಜನಿ ಅವರ ಸಿನಿಮಾ ಕಾನ್ಸೆಪ್ಟ್ ಕಮಲ್ ಅವರಿಗೂ ತುಂಬಾ ಇಷ್ಟ ಆಯ್ತಂತೆ, ಆ ವೇಳೆ ಒಬ್ಬ ಅಭಿಮಾನಿಯಾಗಿ ತಾವು ಬರೆದ ಕನ್ನಡ ಪುಸ್ತಕಗಳನ್ನು ಕಮಲ್ ಹಾಸನ್ ಅವರಿಗೆ ನೀಡಿದರು ರಂಜನಿ ಅವರು. ಅಷ್ಟೇ ಆಗಿದ್ದು ಎಂದು ತಿಳಿಸಿದ್ದಾರೆ. ಈ ಎಲ್ಲಾ ವಿವಾದಗಳು ನಡೆದಾಗ, ಎಲ್ಲರಿಗೂ ಭಾಷಾಭಿಮಾನ ಇರುತ್ತದೆ, ತಾವು ಆ ಫೋಟೋ ಶೇರ್ ಮಾಡಿದ್ದು, ತಮ್ಮ ವಿರೋಧ ಭಾವನೆ ಹಂಚಿಕೊಳ್ಳುವುದಕ್ಕೆ ಎಂದು ರಂಜನಿ ಅವರು ಹೇಳಿದ್ದಾರೆ. ಭಾಷೆಯ ಬಗ್ಗೆ ಮಾತನಾಡಿ, ಕ್ಷಮೆಯನ್ನು ಕೇಳೋದಿಲ್ಲ ಎನ್ನುವುದು ಭಾಷಾಭಿಮಾನಕ್ಕೆ ಅವಮಾನಿಸುವ ಹಾಗೆ ಎಂದು ರಂಜನಿ ಅವರು ಹೇಳಿದ್ದಾರೆ. ಇದರಲ್ಲಿ ಜಾತಿ, ಮನೆಯಲ್ಲಿ ಮಾತನಾಡುವ ಭಾಷೆ ಇದೆಲ್ಲವನ್ನು ಸಹ ಹೊತ್ತು ತಂದಿದ್ದು ಸರಿಯಲ್ಲ ಎಂದು ಸಹ ಹೇಳಿದ್ದಾರೆ ರಂಜನಿ.
ತಮ್ಮ ಸಿನಿಮಾ ಪ್ರೊಮೋಶನ್ ಗಾಗಿ ಇದೆಲ್ಲವನ್ನು ಮಾಡಿದ್ದು, ಈ ರೀತಿ ಆದಮೇಲೆ ಹಾಗೆಲ್ಲ ಪ್ರೊಮೋಷನ್ ಮಾಡುವುದು ಬೇಡ ಎಂದು ಎಲ್ಲವನ್ನು ಕ್ಯಾನ್ಸಲ್ ಮಾಡಿರುವುದಾಗಿ ರಂಜನಿ ರಾಘವನ್ ಅವರು ತಿಳಿಸಿದ್ದಾರೆ. ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟು, ಜಾತಿ ಮನೆಯಲ್ಲಿ ಮಾತನಾಡುವ ಭಾಷೆ ಇದೆಲ್ಲವನ್ನು ಬೇರೆ ರೀತಿಯಲ್ಲಿ ಬಳಸಿಕೊಳ್ಳುವುದು ಬೇಡ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.



