ಒಂದು ಕಡೆ ”ಕಾಂತಾರ-ಚಾಪ್ಟರ್ 1” ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದ್ದರೆ. ನಿರ್ಮಾಣ ಸಂಸ್ಥೆ ಹೊಂಬಾಳೆಯೇ ನೀಡಿರುವ ಲೆಕ್ಕದ ಪ್ರಕಾರ ವಿಶ್ವದೆಲ್ಲೆಡೆದಿಂದ ₹500 ಕೋಟಿಗೂ ಅಧಿಕ ಹಣ ಹರಿದು ಬಂದಿದೆ. ಪತ್ನಿ ಪ್ರಗತಿ ಜೊತೆ ರಿಷಬ್ ಶೆಟ್ಟಿ ಸಿನಿಮಾ ಪ್ರಚಾರ ಮುಂದುವರೆಸಿದ್ದಾರೆ.
‘ಕಾಂತಾರ’ ಸರಣಿ ಚಿತ್ರಗಳಿಗೆ ಪ್ರಗತಿ ಶೆಟ್ಟಿ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಪತಿ ಜೊತೆ ಸಿನಿಮಾ ಮೇಕಿಂಗ್ ಅನುಭವವನ್ನು ಸಂದರ್ಶನಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಪತಿ, ಪತ್ನಿ ಓಡಾಡುತ್ತಿರುವ ಫೋಟೊ, ವೀಡಿಯೋಗಳು ವೈರಲ್ ಆಗುತ್ತಿದೆ. ಇಬ್ಬರ ಲವ್ಸ್ಟೋರಿ, ಮದುವೆ ಫೋಟೊ, ವೀಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ರಿಷಬ್ ಶೆಟ್ಟಿ 8 ವರ್ಷಗಳ ಹಿಂದೆ ಇನ್ನು ನಿರ್ದೇಶಕನಾಗಿ ಮಾತ್ರ ಗುರ್ತಿಸಿಕೊಂಡಿದ್ದರು. ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದರೂ ಹೀರೊ ಆಗಿ ಬಡ್ತಿ ಪಡೆದಿರಲಿಲ್ಲ. ಪ್ರಗತಿ ಶೆಟ್ಟಿ ಅವರನ್ನು ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಮದುವೆ ಆಗಿದ್ದರು. ಆಗ ಪ್ರಗತಿ ಶೆಟ್ಟಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದರು.

ರಿಷಬ್ ಶೆಟ್ಟಿ ನಿರ್ದೇಶನದ ‘ರಿಕ್ಕಿ’ ಚಿತ್ರವನ್ನು ಸ್ನೇಹಿತೆಯರ ಜೊತೆ ಪ್ರಗತಿ ನೋಡಲು ಹೋಗಿದ್ದರು. ಆಗ ಚಿತ್ರತಂಡ ಕೂಡ ಚಿತ್ರಮಂದಿರಕ್ಕೆ ಭೇಟಿ ನೀಡಿತ್ತು. ಮೊದಲಬಾರಿಗೆ ರಿಷಬ್- ಪ್ರಗತಿ ಭೇಟಿ ಆಗಿತ್ತು. ಎಲ್ಲರೂ ರಕ್ಷಿತ್ ಶೆಟ್ಟಿ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು. ಅಲ್ಲೇ ಪಕ್ಕದಲ್ಲಿ ಇದ್ದ ರಿಷಬ್ ಶೆಟ್ಟಿ ಚಿತ್ರದ ನಿರ್ದೇಶಕ ಎಂದು ಗೊತ್ತಾಗಿ ಅವರೊಟ್ಟಿಗೆ ಪ್ರಗತಿ ಫೋಟೊ ಹಿಡಿದುಕೊಂಡಿದ್ದರು. ಬಳಿಕ ಫೇಸ್ಬುಕ್ನಲ್ಲಿ ಪ್ರಗತಿ ಶೆಟ್ಟಿ ಅವರನ್ನು ಹುಡುಕಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ರಿಷಬ್ ಶೆಟ್ಟಿ ಪರಿಚಯ, ಸ್ನೇಹ ಮುಂದುವರೆಸಿದ್ದರು. ಒಂದೇ ವರ್ಷದಲ್ಲಿ ಪ್ರಪೋಸ್ ಮಾಡಿ ಇಬ್ಬರು ಪೋಷಕರಿಗೆ ವಿಷಯ ತಿಳಿಸಿ ಒಪ್ಪಿಸಿ ಹಸೆಮಣೆ ಏರಿದ್ದರು. ದಂಪತಿಗೆ ಒಂದು ಗಂಡು, ಒಂದು ಹೆಣ್ಣು ಮಗುವಿದೆ.
ಫೆಬ್ರವರಿ 9 2017 ರಂದು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಇಬ್ಬರ ಮದುವೆ ನಡೆದಿತ್ತು. ರಿಷಬ್ ಶೆಟ್ಟಿ ಆಪ್ತ ಸ್ನೇಹಿತರಾದ ರಕ್ಷಿತ್ ಶೆಟ್ಟಿ ಶೀತಲ್ ಶೆಟ್ಟಿ, ಪ್ರಮೋದ್ ಶೆಟ್ಟಿ ಕಿಚ್ಚ ಸುದೀಪ್ ಕೂಡ ಈ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನವ ಜೋಡಿಗೆ ಶುಭ ಕೋರಿದ್ದರು.

ಸಾಫ್ಟ್ವೇರ್ ಕಂಪನಿ ಕೆಲಸ ಬಿಟ್ಟ ಪ್ರಗತಿ ಶೆಟ್ಟಿ, ‘ಕಾಂತಾರ’ ಚಿತ್ರಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಸೈ ಎನಿಸಿಕೊಂಡಿದ್ದಾರೆ. ಅವರ ಕೆಲಸದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪತಿ ರಿಷಬ್ ಶೆಟ್ಟಿ ಕಲ್ಪನೆಯ ಚಿತ್ರಕ್ಕ. ನಟ, ನಟಿ, ಪೋಷಕ ಪಾತ್ರಗಳು ಸೇರಿದಂತೆ ನೂರಾರು ಸಹ ಕಲಾವಿದರಿಗೆ ಕಾಸ್ಟ್ಯೂಮ್ ಡಿಸೈನ್ ಮಾಡಿ ಸೈ ಎನಿಸಿಕೊಂಡಿದ್ದಾರೆ.



