ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲಾ ಬಿಟ್ಟು ಹೋದ ದಿನವನ್ನು ನಾವೆಲ್ಲರೂ ಹೇಗೆ ಮರೆಯೋದಕ್ಕೆ ಸಾಧ್ಯ? 2021 ರ ಅಕ್ಟೋಬರ್ 29ರ ಬೆಳಗ್ಗೆ ಕೇಳಿಬಂದ ಆ ಆಘಾತಕಾರಿ ಸುದ್ದಿಯನ್ನ ಅರಗಿಸಿಕೊಳ್ಳೋದಕ್ಕೆ ಅಭಿಮಾನಿಗಳು ಈಗಲೂ ಕಷ್ಟಪಡುತ್ತಾ ಇದ್ದಾರೆ. ಅಪ್ಪು ಅವರು ಹೋಗಿ ಮೂರೂವರೆ ವರ್ಷ ಕಳೆದು ಹೋಗಿದೆ, ಈಗಲೂ ಅವರ ನೆನಪುಗಳು ಮಾಸಿಲ್ಲ. ಪುನೀತ್ ರಾಜ್ ಕುಮಾರ್ ಅವರು ಇನ್ನು ಇದ್ದಾರೆ ಅನ್ನೋ ಹಾಗೆ ನಮ್ಮ ರಾಜ್ಯದ ಜನರು ಫೀಲ್ ಆಗೋ ಹಾಗೆ ಮಾಡಿದ್ದಾರೆ. ಎಲ್ಲಾ ಕಡೆ ಅಪ್ಪು ಅವರೇ ಕಾಣುತ್ತಾರೆ ನಮಗೆ. ಇದೆಲ್ಲವೂ ಇಂದಿನ ನೋವಿನ ವಿಷಯ, ಆದರೆ ಅಂದು ಅಪ್ಪು ಅವರಿಗೆ ಆ ರೀತಿ ಆದ ಹಿಂದಿನ ದಿವಸ ನಿಜಕ್ಕೂ ನಡೆದಿದ್ದು ಏನು? ಅಪ್ಪು ಅವರ ಆರೋಗ್ಯ ಆಗ ಹೇಗಿತ್ತು? ಗುರುಕಿರಣ್ ಅವರು ತಿಳಿಸಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರು ಹೋದ ಆ ದಿವಸ ಇಡೀ ಕರ್ನಾಟಕಕ್ಕೆ ಒಂದು ರೀತಿ ಬರಸಿಡಿಲು ಬಡಿದ ಹಾಗೆ ಆಗಿತ್ತು ಎಂದರೆ ತಪ್ಪಲ್ಲ. ಅಂಥ ವ್ಯಕ್ತಿ ಆ ರೀತಿ ದಿಢೀರ್ ಎಂದು ಹೊರಟು ಹೋಗುತ್ತಾರೆ ಎಂದು ಯಾರು ಕೂಡ ನೆನೆಸಿರಲಿಲ್ಲ. ಅಪ್ಪು ಅವರು ಫಿಟ್ನೆಸ್ ಗೆ ಹೆಸರುವಾಸಿ ಆದವರು, ಅವರ ವರ್ಕೌಟ್ ವಿಡಿಯೋಗಳ ಮೂಲಕ ಎಲ್ಲರೂ inspire ಆಗುವ ಹಾಗೆ ಮಾಡುತ್ತಿದ್ದರು ಅಪ್ಪು. ಯುವ ಜನತೆಗೆ ಫಿಟ್ನೆಸ್ ಬಗ್ಗೆ ಹೆಚ್ಚು ಆಸಕ್ತಿ ಬರೋದಕ್ಕೆ ಶುರುವಾಗಿದ್ದು ಅಪ್ಪು ಅವರಿಂದ ಎಂದು ಹೇಳಿದರು ತಪ್ಪಲ್ಲ. ಇಂಥ ಅಪ್ಪು ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಆಯ್ತು, ಹಾಗಾದ ಕೆಲವೇ ಸಮಯದಲ್ಲಿ ಹೋಗಿ ಬಿಟ್ರು ಅನ್ನೋದು ಇವತ್ತಿಗೂ ನಂಬುವುದಕ್ಕೆ ಕಷ್ಟ ಅನ್ನಿಸೋ ವಿಷಯ. ಯಾಕೆಂದ್ರೆ ಅಷ್ಟು ಆರೋಗ್ಯವಾಗಿ ಇದ್ದ ವ್ಯಕ್ತಿ ಅವರು.

ಪುನೀತ್ ಅವರು ಆ ದಿನ ಆಸ್ಪತ್ರೆಗೆ ಹೋಗುವುದಕ್ಕಿಂತ ಮೊದಲು ಮನೆಯಿಂದ ಹೊರಗಡೆ ಬಂದು, ಓಡಾಡಿಕೊಂಡು ಕಾರ್ ಹತ್ತಿಕೊಂಡು ಹೋದ ವಿಡಿಯೋವನ್ನು ನಾವೆಲ್ಲರೂ ಮರೆಯುವುದಕ್ಕೆ ಸಾಧ್ಯವಿಲ್ಲ. ಆದರೆ ಆಸ್ಪತ್ರೆಗೆ ಹೋಗಿ ಸ್ವಲ್ಪ ಹೊತ್ತಲ್ಲೇ, ಅವರು ಇಲ್ಲ ಅನ್ನೋ ಸುದ್ದಿ ವೈರಲ್ ಆಗುವುದಕ್ಕೆ ಶುರುವಾಯಿತು. ಅಪ್ಪು ಅವರು ಬದುಕಿ ಬಂದುಬಿಡಲಿ ಇದೆಲ್ಲವೂ ಒಂದು ಕನಸಷ್ಟೇ ಆಗಲಿ ಎನ್ನುವುದೇ ಎಲ್ಲರ ಪ್ರಾರ್ಥನೆ ಆಗಿತ್ತು, ದೇವರು ಅಪ್ಪು ಅವರಿಗೆ ಒಂದೇ ಒಂದು ಅವಕಾಶ ಕೊಟ್ಟುಬಿಡಲಿ ಎಂದು ಅಭಿಮಾನಿಗಳು, ಜನರು ಎಲ್ಲರೂ ಬಯಸಿದ್ದರು. ಆದರೆ ನಾವಂದುಕೊಂಡ ಹಾಗೆ ಯಾವುದು ನಡೆಯಲಿಲ್ಲ. ಅಪ್ಪು ಅವರು ಅಂದು ವಿಧಿವಶರಾದರು. ಆ ಘಟನೆ ನಡೆದೇ ಇಲ್ಲವೇನೋ, ಅಪ್ಪು ಅವರು ವಿದೇಶಕ್ಕೆ ಶೂಟಿಂಗ್ ಗೆ ಹೋಗಿದ್ದಾರೆನೋ ಎಂದೇ ಅಭಿಮಾನಿಗಳು ಫೀಲ್ ಮಾಡ್ತಾರೆ..

ಪುನೀತ್ ಅವರು ನಮ್ಮನ್ನು ಬಿಟ್ಟು ಹೋದ ಆ ಹಿಂದಿನ ದಿನ ಗುರುಕಿರಣ್ ಅವರ ಮನೆಯಲ್ಲಿ ಅವರ ಬರ್ತ್ ಡೇ ಪಾರ್ಟಿ ಅಟೆಂಡ್ ಮಾಡಿದ್ದರು. ಆ ದಿವಸ ನಡೆದಿದ್ದು ಏನು ಎನ್ನುವುದನ್ನು ಗುರುಕಿರಣ್ ಅವರು ಇತ್ತೀಚಿನ ಸಂದರ್ಶನದಲ್ಲಿ ತಿಳಿಸಿದ್ದಾರೆ. ಗುರುಕಿರಣ್ ಅವರು ಹುಟ್ಟಿದ್ದು 1970ರ ಆಕ್ಟೊಬರ್ 28ರಂದು. 2021ರಲ್ಲಿ ಅವರದ್ದು 51ನೇ ವರ್ಷದ ಹುಟ್ಟುಹಬ್ಬ. ಅಂಬರೀಶ್ ಅವರು ತೀರಿಹೋದ ನಂತರ, ಗುರುಕಿರಣ್ ಅವರಿಗೆ ಬೇಸರವಾಗಿ ಹುಟ್ಟುಹಬ್ಬ ಆಚರಣೆ ಮಾಡುವುದನ್ನೇ ನಿಲ್ಲಿಸಿದ್ದರಂತೆ. ಆದರೆ ಆ ವರ್ಷ ಎಲ್ಲರ ಒತ್ತಾಯಕ್ಕೆ ಬರ್ತ್ ಡೇ ಸೆಲೆಬ್ರೇಟ್ ಮಾಡೋದಕ್ಕೆ ಪಾರ್ಟಿ ಅರೇಂಜ್ ಮಾಡಿದ್ದರು. ಆ ಪಾರ್ಟಿಗೆ ಅಪ್ಪು ಸರ್ ಹಾಗೂ ಅಶ್ವಿನಿ ಮೇಡಂ ಇಬ್ಬರು ಜೊತೆಯಾಗಿ ಹೋಗಿದ್ದರಂತೆ.. ಅಂದು ಗುರುಕಿರಣ್ ಅವರ ಬ್ಯುಸಿನೆಸ್ ಫ್ರೆಂಡ್ಸ್ ಕೂಡ ಬಂದಿದ್ದರಂತೆ.
ಎಲ್ಲರೊಡನೆ ಸಂತೋಷದಿಂದ ಮಾತನಾಡಿದ್ದ ಅಪ್ಪು ಅವರು, ಫ್ಯುಚರ್ ಪ್ರಾಜೆಕ್ಟ್ ಎಂದು ಹೇಳಿ ಗಂಧದಗುಡಿಯ ಕೆಲವು ವಿಡಿಯೋ ಕ್ಲಿಪ್ಸ್ ಗಳನ್ನು ಎಲ್ಲರಿಗೂ ತೋರಿಸಿದ್ದರಂತೆ. ಬಹಳ ಸಂತೋಷದಿಂದ ಎಲ್ಲರೊಡನೆ ಮಾತನಾಡಿ, ಗುರುಕಿರಣ್ ಅವರ ಬ್ಯುಸಿನೆಸ್ ಫ್ರೆಂಡ್ಸ್ ಗಳನ್ನು ಸಹ ತಾವೇ ಹೋಗಿ ಮಾತನಾಡಿಸಿ, ಹಲೋ ಐ ಆಮ್ ಪುನೀತ್ ಎಂದು ಹೇಳಿದ್ದರಂತೆ. 11:30 ಕ್ಕೆ ಕೇಕ್ ಕಟ್ ಮಾಡಿದ ನಂತರವೇ ಅಪ್ಪು ಅವರು ಮತ್ತು ಅಶ್ವಿನಿ ಅವರು ಮನೆಗೆ ಹೊರಟಿದ್ದಂತೆ. ಒಂದು ವಾರದಿಂದ ಅಪ್ಪು ಅವರಿಗೆ ಬೆನ್ನು ನೋವಿತ್ತು ಅನ್ನೋದು ನಂತರ ಗೊತ್ತಾಯಿತಂತೆ. ಅಲ್ಲಿದ್ದಷ್ಟು ಸಮಯ ಅದೇನನ್ನು ಯಾರ ಮುಂದೆಯೂ ಅಪ್ಪು ಅವರು ತೋರಿಸಿಕೊಂಡಿಲ್ಲ. ಮರುದಿನ ಗುರುಕಿರಣ್ ಅವರು ತುಂಬಾ ಲೇಟ್ ಆಗಿ ಎದ್ದಿದ್ದಂತೆ.

ಎದ್ದ ತಕ್ಷಣ ಆ ವಿಚಾರಗಳ ಬಗ್ಗೆ ಸುದ್ದಿಗಳು ಕೇಳಿಬಂದಾಗ, ಇದೆಲ್ಲಾ ಸುಳ್ಳಿರಬಹುದು, ಗಾಸಿಪ್ ಅಷ್ಟೇ ಎಂದುಕೊಂಡರಂತೆ. ಬಳಿಕ ಸ್ನಾನ ಕೂಡ ಮಾಡುವುದಕ್ಕೆ ಆಗದೇ, ತಕ್ಷಣವೇ ಹೊರಟರಂತೆ. ಅಲ್ಲಿ ಹೋಗಿ ಅವರನ್ನು ನೋಡುವವರೆಗೂ ನಂಬುವುದಕ್ಕೆ ಆಗಿರಲಿಲ್ಲ ಎನ್ನುತ್ತಾರೆ ಗುರುಕಿರಣ್. ಹಿಂದಿನ ದಿನ ಮೀಟ್ ಮಾಡಿದ್ದ ವ್ಯಕ್ತಿ ಮರುದಿನ ಇಲ್ಲ ಅಂದ್ರೆ ಹೇಗಾಗುತ್ತೆ? ಆ ಥರ ಎಕ್ಸ್ಪೀರಿಯನ್ಸ್ ಯಾರಿಗೂ ಆಗಬಾರದು ಎಂದು ಗುರುಕಿರಣ್ ಅವರು ಇಂಟರ್ವ್ಯೂ ನಲ್ಲಿ ತಿಳಿಸಿದ್ದಾರೆ. ಅದು ನಿಜವೇ, ಈ ಘಟನೆಗಿಂತ ಹಿಂದೆ ಯಶ್ ಅವರು, ಶಿವಣ್ಣ ಅವರು, ಅಪ್ಪು ಅವರು ಎಲ್ಲರೂ ದುನಿಯಾ ವಿಜಯ್ ಅವರ ಸಿನಿಮಾ ಪ್ರೊಮೋಷನ್ ನಲ್ಲಿ ಕಾಣಿಸಿಕೊಂಡಿದ್ದರು. ಎಲ್ಲವೂ ಈಗ ನೆನಪು ಮಾತ್ರ. ಅಪ್ಪು ಅವರನ್ನು ಆ ಸಮಯದಲ್ಲಿ ಭೇಟಿ ಮಾಡಿದ ಎಲ್ಲರಿಗೂ ಈ ನೋವು ಕಾಡುತ್ತಲೇ ಇರುತ್ತದೆ.
ಈ ಘಟನೆಗಳು ನಡೆದು 3 ವರ್ಷವೇ ಆಗಿ ಹೋಗಿದೆ, ಆದರೆ ಅಭಿಮಾನಿಗಳು ಮಾತ್ರ, ಇವತ್ತಿಗೂ ಅಪ್ಪು ಅವರು ವಾಪಸ್ ಬಂದು ಬಿಡಲಿ ಎಂದು ಕಾಯುತ್ತಿದ್ದಾರೆ. ಆ ನಗು, ಆ ಮಾತುಗಳು ಎಲ್ಲವೂ ಇಂದಿಗೂ ಎಲ್ಲರ ಫೇವರೆಟ್. ಇತ್ತೀಚೆಗೆ ಪುನೀತ್ ಅವರ 50ನೇ ವರ್ಷದ ಹುಟ್ಟುಹಬ್ಬದ ವೇಳೆಗೆ ಅವರ ಮೊದಲ ಸಿನಿಮಾ ಅಪ್ಪು ರೀರಿಲೀಸ್ ಮಾಡಲಾಯಿತು. ಈ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಓಪನಿಂಗ್ ಪಡೆದುಕೊಂಡಿತು ಎಂದು ನಮಗೆಲ್ಲಾ ಗೊತ್ತೇ ಇದೆ. ಮರುಬಿಡುಗಡೆಯಲ್ಲಿ ಅಪ್ಪು ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ. ಅಪ್ಪು ಅವರು ಈ ದಿನ ಇದ್ದಿದ್ದರೆ ಇದನ್ನೆಲ್ಲಾ ನೋಡಿ ಎಷ್ಟು ಸಂತೋಷ ಪಡುತ್ತಿದ್ರೋ, ಎಷ್ಟು ಹೊಸ ಸಿನಿಮಾಗಳಲ್ಲಿ ನಟಿಸುತ್ತಿದ್ದರೋ ಎಂದು ಒಂದು ಕ್ಷಣ ನಮಗೆಲ್ಲಾ ಅನ್ನಿಸದೆ ಇರದು.