ಭಾರತೀಯ ಕ್ರಿಕೆಟ್ ತಂಡದಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ. ಹಳೆ ಆಟಗಾರರಿಗೆ ವಿರಾಮ ನೀಡಿ, ಯುವ ಆಟಗಾರರಿಗೆ ನಾಯಕತ್ವದ ಮಣೆ ಹಾಕಲು ಬಿಸಿಸಿಐ ಅಣಿಯಾಗುತ್ತಿದೆ. ಸದ್ಯಕ್ಕೆ ಈ ಬದಲಾವಣೆ ಇರದಿದ್ದರೂ ಕೂಡ ವಿಶ್ವಕಪ್ ಮುಗಿದ ಬಳಿಕ ಟೀಂ ಇಂಡಿಯಾ ನಾಯಕತ್ವದಲ್ಲೂ ಬದಲಾವಣೆ ಖಚಿತ. ಈ ನಾಯಕತ್ವದ ಬದಲಾವಣೆ ಭಾರತೀಯ ಕ್ರಿಕೆಟ್ ತಂಡದ ಭವಿಷ್ಯದ ದೃಷ್ಟಿಯಿಂದಲೂ ಅನಿವಾರ್ಯ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಬಿಸಿಸಿಐ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದಂತಿದೆ.

ಹಿಂದೊಮ್ಮೆ ಹೀಗಿಯೇ ಆಗಿತ್ತು!
ಹೌದು, 2007ಕ್ಕೂ ಮುನ್ನ ಭಾರತೀಯ ಕ್ರಿಕೆಟ್ ತಂಡದಲ್ಲಿ ಈಗನಂತೆಯೇ ಪರಿಸ್ಥಿತಿ ಇತ್ತು. ಅಂದು ಐಸಿಸಿ ಟ್ರೋಫಿಯಲ್ಲಿ ಆಡಿದ ಟೀ ಇಂಡಿಯಾ ಹೀನಾಯವಾಗಿ ಸೋತಿತ್ತು. ಇದರಿಂದ ದೇಶದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕೆಂಡಾಮಂಡಲವಾಗಿದ್ದರು. ಇದರಿಂದ ಪಾಠ ಕಲಿತ ಬಿಸಿಸಿಐ ಅಂದಿನ ತಂಡದಲ್ಲಿ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಮುಂತಾದ ಅನುಭವಿ ಆಟಗಾರರಿದ್ದರೂ ಕೂಡ ಅವರೆಲ್ಲರನ್ನೂ ಬದಿಗಿರಿಸಿ ಯುವ ಆಟಗಾರ ಮಹೇಂದ್ರ ಸಿಂಗ್ ದೋನಿಯವರಿಗೆ ನಾಯಕತ್ವ ನೀಡಲಾಯಿತು.ಬಿಸಿಸಿಐ ಲೆಕ್ಕಾಚಾರ ಅಂದು ಫಲ ನೀಡಿತ್ತು. ಕ್ಯಾಪ್ಟನ್ ದೋನಿ ಇಡೀ ತಂಡವನ್ನು ಹೆಗಲ ಮೇಲೆ ಹೊತ್ತು ದಶಕಗಳ ಕಾಲ ಮೆರೆಸಿದ್ದು ಇಂದಿಗೆ ಇತಿಹಾಸ!
ಅಂದು ದೋನಿ ನಾಯಕತ್ವ ಹೊರುವ ಮುನ್ನ ಟೀ ಇಂಡಿಯಾದ ಪರಿಸ್ಥಿತಿ ಹೇಗಿತ್ತೋ ಇಂದು ಕೂಡ ಹಾಗೆಯೇ ಇದೆ. ಅದೇ ಕಾರಣಕ್ಕೆ ಬಿಸಿಸಿಐ ಯುವ ಆಟಗಾರರಿಗೆ ನಾಯಕತ್ವ ನೀಡಲು ಚಿಂತಿಸುತ್ತಿದೆ.ಮೂಲಗಳ ಪ್ರಕಾರ ಶುಭಮನ್ ಗಿಲ್ ನಾಯಕನಾಗುವ ಸಾಧ್ಯತೆಗಳಿವೆ. ಗಿಲ್ ಪ್ರತಿಭಾನ್ವಿತ ಮತ್ತು ಮೂರು ಮಾದರಿಯ ಕ್ರಿಕೆಟ್ ನಲ್ಲೂ ಅತ್ಯದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆದ್ದರಿಂದ ವಿಶ್ವಕಪ್ ಮುಗಿದ ಬಳಿಕ ಬಿಸಿಸಿಐ ಅದ್ದೂರಿಯಾಗಿ ಕ್ರಿಕೆಟ್ ಲೋಕದ ಯುವರಾಜ ಶುಭಮನ್ ಗಿಲ್ ಅವರಿಗೆ ಪಟ್ಟಾಭಿಷೇಕ ಮಾಡಿದರೂ ಅಚ್ಚರಿ ಪಡಬೇಕಿಲ್ಲ.