ಎಲ್ಲಾ ಕಡೆ ಈಗ ಕೃಷಿ ಭೂಮಿಗೆ ಬೆಲೆ ಜಾಸ್ತಿಯಾಗುತ್ತಿದೆ.. ನಗರಗಳಲ್ಲಿ ವಾಸ ಮಾಡುವವರು ಕೂಡಾ ಕೃಷಿ ಕಡೆ ಆಸಕ್ತಿ ತೋರಿಸುತ್ತಿದ್ದಾರೆ.. ಕಾನೂನು ಕೂಡಾ ಕೃಷಿ ಹಿನ್ನೆಲೆ ಇಲ್ಲದವರೂ ಭೂಮಿ ಖರೀದಿ ಮಾಡೋದಕ್ಕೆ ಅವಕಾಶ ಮಾಡಿಕೊಟ್ಟಿದೆ.. ಈ ಹಿನ್ನೆಲೆಯಲ್ಲಿ ಕೃಷಿ ಭೂಮಿಯ ಮಾರಾಟ ಹಾಗೂ ಖರೀದಿ ಜೋರಾಗಿ ನಡೆಯುತ್ತಿದೆ.. ಆದ್ರೆ ಈ ಕೃಷಿ ಭೂಮಿ ಖರೀದಿ ಮಾಡುವಾಗ ಹತ್ತು ಹಲವು ದಾಖಲೆಗಳನ್ನು ಪರಿಶೀಲನೆ ಮಾಡಬೇಕಾಗುತ್ತದೆ.. ಎಲ್ಲವೂ ಸರಿಯಾಗಿವೆ ಎಂದು ಖಾತ್ರಿಯಾದ ಮೇಲಷ್ಟೇ ಖರೀದಿ ಮಾಡಬೇಕಾಗುತ್ತದೆ.. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮೋಸ ಹೋಗಲೂ ಬಹುದು.. ಹಾಗಾದರೆ ಕೃಷಿ ಭೂಮಿ ಖರೀದಿ ಮಾಡುವಾಗ ಏನೆಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಬೇಕು..? ಯಾವ ಯಾವ ದಾಖಲೆಗಳನ್ನು ಜಮೀನಿನ ಮಾಲೀಕನ ಬಳಿ ಕೇಳಬೇಕು..? ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
1. ಆಕಾರ್ ಬಂದ್;
ಮೊದಲನೆಯದು ಆಕಾರ್ ಬಂದ್.. ಜಮೀನಿನ ಅಂತಿಮ ವಿಸ್ತೀರ್ಣವಿರುವ ದಾಖಲೆ ಪತ್ರವನ್ನು ನಾವು ಆಕಾರ್ ಬಂದ್ ಎಂದು ಕರೆಯುತ್ತೇವೆ.. ಜಮೀನಿಗೆ ಸಂಬಂಧಿಸಿದ ಪಹಣಿಯಲ್ಲಿರುವ ಅಳತೆ ಹಾಗೂ ಮಾಲೀಕನ ಹೆಸರು ಆಕಾರ್ ಬಂದ್ನಲ್ಲಿ ವ್ಯತ್ಯಾಸ ಇರಲೂ ಬಹುದು.. ಹೀಗಾಗಿ, ಪಹಣಿ ಒಂದನ್ನೇ ನೋಡದೇ ಆಕಾರ್ ಬಂದ್ ದಾಖಲೆಯನ್ನೂ ಪಡೆದು ಪರೀಕ್ಷೆ ಮಾಡಿದ ನಂತರ ಜಮೀನು ಖರೀದಿಗೆ ಮುಂದಾಗಬೇಕಾಗುತ್ತದೆ.. ನಮ್ಮ ಖರೀದಿ ಪ್ರಕ್ರಿಯೆ ಸಕ್ರಮವಾಗಿ ಇರಬೇಕು ಅಂದ್ರೆ ಮೊದಲಿಗೆ ಆಕಾರ್ ಬಂದ್ ಹಾಗೂ ಪಹಣಿಯನ್ನು ಪಡೆದು ಒಂದಕ್ಕೊಂದು ತಾಳೆ ಮಾಡಿ ನೋಡಬೇಕು. ಎರಡೂ ದಾಖಲೆಗಳಲ್ಲಿನ ಮಾಹಿತಿ ಒಂದೇ ರೀತಿ ಇದೆಯಾ ಎಂಬುದನ್ನು ಪರೀಕ್ಷೆ ಮಾಡಬೇಕು.. ಜಮೀನು ಖರೀದಿದಾರರು ಜಮೀನಿನ ಆಕಾರ್ ಬಂದ್ ಅನ್ನು ಕೂಲಂಕುಷವಾಗಿ ಪರೀಕ್ಷೆ ಮಾಡಬೇಕು.. ಯಾಕಂದ್ರೆ ಹಲವಾರು ಸಂದರ್ಭಗಳಲ್ಲಿ ಆಕಾರ್ ಬಂದ್ ನಲ್ಲಿರುವಂತೆ ಪಹಣಿಯಲ್ಲಿ ಮಾಹಿತಿ ಇರುವುದಿಲ್ಲ.. ಇನ್ನೂ ಕೆಲವು ಪಹಣಿಗಳಿಗೆ ಆಕಾರ್ ಬಂದೇ ಇರುವುದಿಲ್ಲ.. ಆಕಾರ್ ಬಂದ್ ಮಾಡಿಯೇ ಇರಲ್ಲ.. ಇದಕ್ಕೆ ಹಲವಾರು ತಾಂತ್ರಿಕ ತೊಂದರೆಗಳು ಕಾರಣವಾಗಿರುತ್ತವೆ.. ಇನ್ನು ಕೆಲವರು ಭೋಗಸ್ ಪಹಣಿಗಳನ್ನು ತಯಾರಿಸಿ ಅವುಗಳನ್ನು ತೋರಿಸಿ ಮೋಸ ಮಾಡುವುದೂ ಉಂಟು.. ಹೀಗಾಗಿ ಪಹಣಿಗಿಂತ ಆಕಾರ್ ಬಂದ್ ನೋಡಿ ಜಮೀನು ಖರೀದಿ ಮಾಡುವುದು ಒಳ್ಳೆಯದು..
೨. ಪಹಣಿ
ಎರಡನೇಯ ದಾಖಲೆ ಪಹಣಿ.. ಪಹಣಿಯಲ್ಲಿ ಮಾಲೀಕನ ಹೆಸರು, ವಿಳಾಸ, ಸರ್ವೇ ನಂಬರ್, ಹಿಸ್ಸಾ ನಂಬರ್ ಹಾಗೂ ಜಮೀನಿನ ವಿವರ ಅಂದರೆ ಎಷ್ಟು ಎಕರೆ, ಎಷ್ಟು ಗುಂಟೆ ಇದೆ ಎಂಬ ಮಾಹಿತಿ ಇರುತ್ತದೆ.. ಇದರ ಜೊತೆಗೆ ಜಮೀನು ಜೊತೆಗೆ ಖರಾಬು ಜಾಗ ಇದ್ದರೆ ಅದರ ಮಾಹಿತಿಯೂ ಇರುತ್ತದೆ.. ಪಹಣಿಯಲ್ಲಿ ಒಟ್ಟು ಎಷ್ಟು ಅ ಮತ್ತು ಬ ಖರಾಬು ಭೂಮಿ ಹೊಂದಿದೆ. ಜಮೀನನ ಮೇಲೆ ಸಾಲ ಇದ್ದರೆ ಎಷ್ಟು ಸಾಲ ಇದೆ ಎಂಬುದನ್ನು ಕೂಡಾ ಪಹಣಿಯಲ್ಲಿ ನಮೂದಿಸಲಾಗಿರುತ್ತದೆ.. ಯಾವ ರೂಪದಲ್ಲಿ ಹಕ್ಕುಗಳು ಬದಲಾವಣೆಯಾಗಿದೆ ಎಂಬುದನ್ನು ಕೂಡಾ ಇದರಲ್ಲಿ ಮಾಹಿತಿ ನೀಡಲಾಗಿರುತ್ತದೆ.. ಜಮೀನು ಖರೀದಿ ಮಾಡುವವರು ಪಹಣಿಯಲ್ಲಿರುವ ಸಾಗುವಳಿದಾರರ ಹೆಸರನ್ನು ಪರೀಕ್ಷೆ ಮಾಡಬೇಕು.. ಸದರಿ ಜಮೀನಿಗೆ ಎಷ್ಟು ಜನ ಸಾಗುವಳಿದಾರರು ಇದ್ದಾರೆ..? ಜಮೀನು ವಾಸ್ತವಿಕ ಹಕ್ಕುದಾರರು ಯಾರು ಯಾರು ಇದ್ದಾರೆ..? ಇದು ಪಿತ್ರಾರ್ಜಿತ ಆಸ್ತಿಯಾ ಅಥವಾ ಸ್ವಯಾರ್ಜಿತವಾ..? ಎಂಬುದರ ಬಗ್ಗೆಯೂ ತಿಳಿದುಕೊಳ್ಳಬೇಕಾಗುತ್ತದೆ.. ಜಮೀನಿನ ಮೇಲೆ ಯಾರಿಗೆಲ್ಲಾ ಹಕ್ಕು ಇರುತ್ತದೋ ಅವರೆಲ್ಲಾ ಸಹಿ ಹಾಕಲು ರೆಡಿ ಇದ್ದರೆ ಮಾತ್ರ ಜಮೀನು ಖರೀದಿಗೆ ಮುಂದಾಗಬೇಕು.. ಇಲ್ಲದಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ..
೩. ಸರ್ವೇ ಸ್ಕೆಚ್;
ಮೂರನೇಯದು ಸರ್ವೇ ಸ್ಕೆಚ್.. ಜಮೀನಿನ ಸಂಪೂರ್ಣ ಮಾಹಿತಿಯನ್ನು ಸ್ಕೆಚ್ ಮೂಲಕ ಪಡೆಯುವುದಕ್ಕೆ ಸರ್ವೇ ಸ್ಕೆಚ್ ಅಂತ ಕರೀತೀವಿ.. ಬಿಳಿ ಹಾಳೆಯ ಮೇಲೆ ಜಮೀನಿನ ರೇಖಾ ಚಿತ್ರ ರಚಿಸಿ, ಅದರಲ್ಲಿ ಬಂಡಿ ದಾರಿ, ಕಾಲು ಇದ್ದರೆ ಅದರ ಮಾಹಿತಿ ನೀಡಲಾಗಿರುತ್ತದೆ.. ಜೊತೆಗೆ ಅಕ್ಕಪಕ್ಕದ ಜಮೀನು ಮಾಲೀಕರ ಮಾಹಿತಿಯನ್ನು, ಖರಾಬು ಜಮೀನಿದ್ದರೆ ಅದರ ಮಾಹಿತಿಯನ್ನೂ ಈ ಸರ್ವೇ ಸ್ಕೆಚ್ ನಲ್ಲಿ ನೀಡಲಾಗಿರುತ್ತದೆ.. ಜಮೀನು ಖರೀದಿ ಮಾಡುವುದಕ್ಕಿಂತ ಮುಂಚೆ ಆ ಜಮೀನನ್ನು ಮಾರುವವರು ಸರ್ವೇ ಮಾಡಿಸಿ, ಸ್ಕೆಚ್ ಮಾಡಿಸಬೇಕಾಗುತ್ತದೆ.. ಯಾಕಂದ್ರೆ ದಾಖಲೆಗಳಲ್ಲಿ ಒಂದು ರೀತಿಯಲ್ಲಿ ನಮೂದಾಗಿದ್ದಾರೂ, ವಾಸ್ತವಿಕವಾಗಿ ಜಮೀನು ಅಳತೆ ಕಡಿಮೆ ಇದ್ದರೂ ಇರಬಹುದು. ಹೀಗೆ ಸುತ್ತಳತೆ ವ್ಯತ್ಯಾಸವಾದಾಗ ಸುತ್ತಮುತ್ತಲಿನ ಜಮೀನಿನ ಮಾಲೀಕರ ಜೊತೆ ಜಗಳ ಆದರೂ ಆಗಬಹುದು. ಹೀಗಾಗಿ ಮೊದಲೇ ಸರ್ವೇ ಸ್ಕೆಚ್ ಪಡೆದುಕೊಂಡು ಅದರೆ ಪ್ರಕಾರ ಕಲ್ಲುಗಳನ್ನು ಹಾಕಿಸಿ ಅನಂತರ ಖರೀದಿ ಮಾಡಿದರೆ ಒಳ್ಳೆಯದು.. ಜೊತೆಗೆ ರಿಜಿಸ್ಟ್ರೇಷನ್ ಮಾಡಿಸುವಾಗ ಸರ್ವೇ ಸ್ಕೆಚ್ ಸಲ್ಲಿಸುವುದು ಕಡ್ಡಾಯವಾಗಿದೆ..
೪. ೧೧ಇ ಸ್ಕೆಚ್
ನಾಲ್ಕನೇಯದು ೧೧ಇ ಸ್ಕೆಚ್.. ಒಂದು ಪೂರ್ಣ ಜಮೀನನ್ನು ವಿಂಗಡಣೆ ಮಾಡಿ ಅದನ್ನು ಮಾರುತ್ತಿದ್ದರೆ ಆ ಪೂರ್ಣ ಜಮೀನಿನಲ್ಲಿ ಪತ್ಯೇಕಗೊಂಡ ಜಮೀನಿಗೆ ೧೧ಇ ಸ್ಕೆಚ್ ನಕ್ಷೆ ಬೇಕಾಗುತ್ತದೆ.. ಅಂತಹ ಜಮೀನು ಕೊಂಡುಕೊಳ್ಳುವಾಗ ೧೧ಇ ಸ್ಕೆಚ್ ನಕ್ಷೆ ಕಂಪಲ್ಸರಿ. ಅಂದರೆ ಒಂದು ಸರ್ವೇ ನಂಬರ್ನಲ್ಲಿನ ಜಮೀನಿನಲ್ಲಿ ಸ್ವಲ್ಪ ಮಾತ್ರ ಮಾರಾಟ ಮಾಡುತ್ತಿದ್ದರೆ, ಅಥವಾ ಭಾಗವಾಗಿ ಕೊಡುತ್ತಿದ್ದರೆ ಅದರ ಮಾಹಿತಿಯನ್ನು ಈ ಸರ್ವೇ ಸ್ಕೆಚ್ನಲ್ಲಿ ನಮೂದಿಸಲಾಗುತ್ತದೆ..
೫ ಫಾರ್ಮ್ ನಂಬರ್ 10
ಐದನೇಯದು ಫಾರ್ಮ್ ನಂಬರ್ 10.. ಒಂದು ಜಮೀನಿನ ಪೂರ್ಣ ಸರ್ವೇ ನಂಬರಿನಲ್ಲಿ ಅನೇಕ ಹಿಸ್ಸಾ ಸಂಖ್ಯೆಗಳು ಒಳಗೊಂಡಿರಬಹುದು. ಇಲ್ಲಿ ಪ್ರತ್ಯೇಕವಾದ ಹಿಸ್ಸಾ ನಂಬರಿನ ಭಾಗ ವಿಸ್ತೀರ್ಣ ಹಾಗೂ ಮಾಲೀಕನ ಹೆಸರು ಒಳಗೊಂಡಿರುತ್ತದೆ. ಜಮೀನಿಗೆ ಫಾರ್ಮ್ ೧೦ ದಾಖಲೆ ಹೊಂದಿದ್ದರೆ ಸರಳವಾಗಿ ರಿಜಿಸ್ಟರ್ ಆಗುವುದಕ್ಕೆ ಸಹಾಯವಾಗುತ್ತದೆ.
೬ ವಂಶವೃಕ್ಷ
ಆರನೇ ದಾಖಲೆ ವಂಶವೃಕ್ಷ.. ಜಮೀನು ಖರೀದಿ ಮಾಡುವಾಗ ಆ ಜಮೀನಿನ ಹಕ್ಕುದಾರರು ಯಾರು ಯಾರು ಎಂಬುದನ್ನು ತಿಳಿದುಕೊಳ್ಳಬೇಕು.. ಯಾರಿಗೆಲ್ಲಾ ಆ ಜಮೀನಿನ ಮೇಲೆ ಹಕ್ಕು ಇರುತ್ತದೆಯೋ ಅವರೆಲ್ಲರ ಸಹಿಯೂ ಬೇಕಾಗುತ್ತದೆ.. ಯಾರೊಬ್ಬರನ್ನು ಬಿಟ್ಟು ರಿಜಿಸ್ಟರ್ ಮಾಡಿಸಿದರೂ ಕೂಡಾ ಮುಂದೆ ಕಾನೂನು ಸಂಕಷ್ಟ ಎದುರಿಸಬೇಕಾಗುತ್ತದೆ.. ಹೀಗಾಗಿ ಜಮೀನಿನ ಹಕ್ಕುದಾರರನ್ನು ಗುರುತಿಸುವುದಕ್ಕಾಗಿ ಜಮೀನು ಮಾಲೀಕರ ವಂಶವೃಕ್ಷ ರೆಡಿ ಮಾಡಬೇಕಾಗುತ್ತದೆ..
೭. ಮ್ಯುಟೇಷನ್ ರಿಪೋರ್ಟ್
ಏಳನೇಯದು ಮ್ಯುಟೇಷನ್ ರಿಪೋರ್ಟ್.. ಜಮೀನು ಮೊದಲಿನಿಂದ ಹಿಡಿದು ಇಲ್ಲಿಯವರೆಗೆ ಯಾರಿಂದ ಯಾರಿಗೆ ಹಕ್ಕು ಬದಲಾವಣೆಯಾಗಿದೆ. ಯಾವ ಯಾವ ರೂಪದಲ್ಲಿ ಹಕ್ಕು ಬದಲಾವಣೆಯಾಗಿದೆ..? ಅಂದರೆ ದಾನ, ಖರೀದಿ, ವಿಭಾಗ, ಕ್ರಯ ಹೀಗೆ ಯಾವ ರೂಪದಲ್ಲಿ ಹಕ್ಕು ಬದಲಾಗಿರುತ್ತದೋ ಅದರ ಎಲ್ಲಾ ಮಾಹಿತಿ ಇದರಲ್ಲಿ ಸಿಗುತ್ತದೆ. ಇದರಲ್ಲಿ ಪ್ರತಿಯೊಂದು ಹಂತದಲ್ಲಿ ಜಮೀನು ಯಾರಿಂದ ಯಾರಿಗೆ ಯಾವ ರೂಪದಲ್ಲಿ ಹೋಗಿದೆ ಎಂಬುದು ತಿಳಿಯುತ್ತದೆ. ಈ ಮ್ಯುಟೇಷನ್ ಕಾಪಿ ನೆಮ್ಮದಿ ಕೇಂದ್ರದ ಮೂಲಕ ತೆಗೆದುಕೊಳ್ಳಬಹುದು.. ಜಮೀನು ಮಾರಾಟ ಮಾಡುವವರು ಈ ಮ್ಯುಟೇಷನ್ ಕಾಪಿ ಪಡೆದುಕೊಳ್ಳಬೇಕು.. ಖರೀದಿ ಮಾಡುವವರು ಅದನ್ನು ಪರೀಕ್ಷೆ ಮಾಡಬೇಕು.. ಕಾನೂನು ಪಂಡಿತರ ಕೈಗೆ ಕೊಟ್ಟು ಪರೀಕ್ಷೆ ಮಾಡಿಸಬೇಕು..
೮. ಎನ್ಕಂಬ್ರೆನ್ಸ್ ಸರ್ಟಿಫಿಕೇಟ್ (ಇಸಿ)
ಇಸಿ ಅಂದರೆ ಎನ್ಕಂಬ್ರೆನ್ಸ್ ಸರ್ಟಿಫಿಕೇಟ್.. ಈ ಪ್ರಮಾಣ ಪತ್ರದಿಂದ ಸದರಿ ಭೂಮಿಯನ್ನು ಆಧಾರವಾಗಿಟ್ಟು ಎಷ್ಟು ಸಾಲ ಪಡೆಯಲಾಗಿದೆ..? ಈ ಭೂಮಿ ಋಣಭಾರಗಳು ಏನೆಲ್ಲಾ ಇವೆ..? ಮುಂತಾದ ಎಲ್ಲಾ ಮಾಹಿತಿ ಇದರಲ್ಲಿ ಸಿಗುತ್ತದೆ.. ನಿರ್ದಿಷ್ಟ ಹಕ್ಕುಗಳ ಬಗ್ಗೆಯೂ ಎಲ್ಲಾ ಮಾಹಿತಿ ಇರುತ್ತದೆ. ಇದನ್ನು ಉಪನೋಂದಣಾಧಿಕಾರಿ
ಕಚೇರಿಯಲ್ಲಿ ನಿಗದಿತ ಶುಲ್ಕ ಪಾವತಿ ಮಾಡಿ ಪಡೆದುಕೊಳ್ಳಬಹುದು. ಅಥವಾ ಕಾವೇರಿ ಆನ್ಲೈನ್ ವೆಬ್ಸೈಟ್ನಲ್ಲೂ ಪಡೆಯಬಹುದು..

೯.ಸೇಲ್ ಡೀಡ್
ಸೇಲ್ ಡೀಡ್ ಅಂದರೆ ಖರೀದಿ ಪತ್ರ. ಈ ಹಿಂದೆ ಜಮೀನು ಯಾರಿಂದ ಖರೀದಿಯಾಗಿದೆ? ಖರೀದಿದಾರರು ಯಾರು..? ಲ್ಯಾಂಡ್ ಸೇಲ್ ಮಾಡಿದವರು ಯಾರು..? ಹೀಗೆ ಹಲವಾರು ಮಾಹಿತಿ ಸೇಲ್ ಡೀಡ್ನಲ್ಲಿ ಇರುತ್ತದೆ.. ಖರೀದಿ ಮಾಡುತ್ತಿರುವ ಜಮೀನಿನ ಚೆಕ್ಕುಬಂದಿ ಕೂಡಾ ಇದರಲ್ಲಿ ನೋಡಬಹುದು. ಅಂದರೆ ಖರೀದಿ ಮಾಡುತ್ತಿರುವ ಜಮೀನಿನ ಅಕ್ಕಪಕ್ಕದಲ್ಲಿ ಏನೇನಿದೆ..? ರಸ್ತೆ ಇದೆಯೇ, ಬೇರೆಯವರ ಜಮೀನಿದೆಯೇ, ಸರ್ಕಾರಿ ಜಮೀನಿದೆಯೇ, ರಸ್ತೆ ಇದೆಯೇ ಎಂಬುದರ ಮಾಹಿತಿ ಇರುತ್ತದೆ.. ಇನ್ನು ಭೂಮಿ ಮಾರುವವರ ಬಳಿ ಸೇಲ್ ಡೀಡ್ ಜೆರಾಕ್ಸ್ ತೆಗೆದುಕೊಂಡು ಪರೀಕ್ಷೆ ಮಾಡಿಸಬೇಕು.. ಅದರಲ್ಲಿರುವ ಪ್ರಾಪರ್ಟಿ ಐಡೆಂಟಿಫಿಕೇಷನ್ ನಂಬರ್, ರಿಜಿಸ್ಟ್ರೇಷನ್ ನಂಬರ್, ದಾಕ್ಯುಮೆಂಟೇಷನ್ ನಂಬರ್ ಸಹಾಯದಿಂದ ಆ ಆಸ್ತಿಯ ಸೇಲ್ ಡೀಡ್ ಸರಿಯಾಗಿ ಇದೆಯಾ ಎಂಬುದನ್ನು ತಿಳಿಯಬೇಕು.. ಇದನ್ನು ತಿಳಿದುಕೊಳ್ಳಲು ಕರ್ನಾಟಕ ಸರ್ಕಾರದ ವೆಬ್ಸೈಟ್ ಆದ ಕಾವೇರಿಆನ್ಲೈನ್ ಡಾಟ್ ಜಿಒವಿ ಡಾಟ್ ಇನ್ ಗೆ ಭೇಟಿ ನೀಡಬಹುದು.. ಇದರ ಮೂಲಕ ಸೇಲ್ ಡೀಡ್ನಲ್ಲಿರುವ ಮಾಹಿತಿ ಸುಳ್ಳು ಇದೆಯೋ ಅಥವಾ ಸರಿ ಇದೆಯೋ ಗೊತ್ತಾಗುತ್ತದೆ.
೧೦. NTC; no tenancy certificate
ಈ ಜಮೀನು ಊಳುವವನೇ ಒಡೆಯ ಕಾನೂನು ಬಂದಾಗ ಊಳುವವನ ಹೆಸರಿಗೆ ಬಂದಿರುವುದೇ..? ಅಥವಾ ಈ ಜಮೀನಿಗೆ ಸಂಬಂಧಿಸಿದಂತೆ ಈ ಕಾನೂನಿನ ಅಡಿಯಲ್ಲಿ ಯಾರಾದರೂ ಅರ್ಜಿ ಸಲ್ಲಿಸಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಬೇಕು.. ಯಾರೂ ಅರ್ಜಿ ಸಲ್ಲಿಸದೇ ಇಲ್ಲ ಎಂದು ಖಾತ್ರಿ ಮಾಡಲು no tenancy certificate ಪಡೆದಿರಬೇಕು.. ಈ ಮಾಹಿತಿಯನ್ನು ತಾಲ್ಲೂಕು ಕಚೇರಿಯಲ್ಲಿ ಪಡೆಯಬಹುದಾಗಿದೆ..

೧೧. ಸಾಗುವಳಿ ಚೀಟಿ
ಒಂದು ವೇಳೆ ಜಮೀನು ಬಗರ್ ಹುಕುಂ ಅಥವಾ ಸರ್ಕಾರದ ಇತರೆ ಯಾವುದೇ ಯೋಜನೆಗಳಲ್ಲಿ ಮಂಜೂರಾಗಿದ್ದರೆ ತಹಸೀಲ್ದಾರರ ಮೂಲಕ ಜಮೀನು ಹೊಂದಿರುವವರು ಸಾಗುವಳಿ ಚೀಟಿ ಪಡೆದುಕೊಂಡಿರುತ್ತಾರೆ.. ಹೀಗೆ ಪಡೆದ ಜಮೀನುಗಳನ್ನು ೧೦ ರಿಂದ ೨೦ ವರ್ಷ ಯಾರಿಗೂ ಪರಭಾರೆ ಮಾಡುವಂತಿರುವುದಿಲ್ಲ. ಒಂದೊಂದು ಜಮೀನಿಗೂ ಒಂದೊಂದು ಕಾಲಮಿತಿ ಇರುತ್ತದೆ.. ಸಾಮಾನ್ಯವಾಗಿ 15 ವರ್ಷದವರೆಗೆ ಮಾರಾಟ ಮಾಡಲು ಸಾಧ್ಯವಿರುವುದಿಲ್ಲ.. ಅನಂತರ ಕೆಲ ಷರತ್ತುಗಳನ್ನು ಪೂರೈಸಿ ಮಾರಾಟ ಮಾಡಬಹುದು.. ಹೀಗಾಗಿ ಸಾಗುವಳಿ ಚೀಟಿ ಮೂಲಕ ಜಮೀನು ತಮ್ಮದಾಗಿಸಿಕೊಂಡವರು, ಮಾರಾಟ ಮಾಡಲು ಅರ್ಹತೆ ಪಡೆದಿದ್ದಾರೆಯೇ ಎಂಬುದನ್ನು ಪರೀಕ್ಷೆ ಮಾಡಬೇಕು.. ಆ ಸಾಗುವಳಿ ಚೀಟಿಯ ಜೊತೆಗೆ ತಹಸೀಲ್ದಾರ್ ಅವರಿಂದ ಎನ್ಒಸಿ ಪಡೆದುಕೊಂಡಿರಬೇಕಾಗುತ್ತದೆ. ಎನ್ಒಸಿ ಪಡೆದುಕೊಂಡ ನಂತರವಷ್ಟೇ ಮಾರಾಟ ಮಾಡೋದಕ್ಕೆ ಅವಕಾಶವಿರುತ್ತದೆ.
೧೨. ಪಿಟಿಸಿಎಲ್
ಪಿಟಿಸಿಎಲ್ ಅಂದರೆ ಪ್ರಿವೆನ್ಷನ್ ಆಫ್ ಟ್ರಾನ್ಸ್ಫರ್ ಆಫ್ ಸರ್ಟೈನ್ ಲ್ಯಾಂಡ್ಸ್ ಆಕ್ಟ್ ಎಂದರ್ಥ.. ಈ ಕಾನೂನಿನಡಿಯಲ್ಲಿ ಭೂಮಿ ಇದ್ದರೆ ಖರೀದಿದಾರರು ಭೂಮಿ ಖರೀದಿ ಮಾಡೋದಕ್ಕೆ ಬರುವುದಿಲ್ಲ. ಆದ್ದರಿಂದ ಇದನ್ನು ತಹಸೀಲ್ದಾರ್ ಕಚೇರಿಯಲ್ಲಿರುವ ಭೂಮಿ ಪಿಟಿಸಿಎಲ್ ಶಾಖೆಗೆ ಹೋಗಿ ಪರಿಶೀಲಿಸಿದ ನಂತರವೇ ಜಮೀನು ಖರೀದಿ ಮಾಡುವುದು ಒಳ್ಳೆಯದು.



