ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಮಾರ್ಚ್ 19ರ ಎಪಿಸೋಡ್ ಕಥೆ ಹೀಗಿದೆ. ಅಜ್ಜಿಗೆ ಪ್ರಜ್ಞೆ ಬಂದಿದೆ ಎಂದು ತಿಳಿದಾಗಿನಿಂದ ಅಲ್ಲಿಗೆ ಹೋಗಲು ಜಯಂತ್ ಹರಸಾಹಸ ಮಾಡುತ್ತಿದ್ಧಾನೆ. ಅದರೆ ಗಂಡನನ್ನು ಕಳಿಸಲು ಜಾಹ್ನವಿ ಒಪ್ಪುತ್ತಿಲ್ಲ. ಹೆಂಡತಿ ವಿಚಿತ್ರವಾಗಿ ವರ್ತಿಸುತ್ತಿದ್ದಾಳೆ ಎಂದು ಜಯಂತ್, ವೈದ್ಯರನ್ನು ಕರೆಸಿ ಚೆಕಪ್ ಮಾಡಿಸುತ್ತಾನೆ. ಅವರು ಮಗುವನ್ನು ಕಳೆದುಕೊಂಡಿರುವುದರಿಂದ ಹೀಗೆ ವರ್ತಿಸುತ್ತಿದ್ದಾರೆ, ಅವರು ಬಹಳ ಇಷ್ಟಪಡುವ ಸ್ಥಳಕ್ಕೆ ಕರೆದುಕೊಂಡು ಹೋಗಿ ಎಂದು ಡಾಕ್ಟರ್ ಸಲಹೆ ನೀಡುತ್ತಾರೆ. ಜೊತೆಗೆ ಒಂದು ಮಾತ್ರೆಯನ್ನೂ ಬರೆದುಕೊಡುತ್ತಾರೆ.
ಜಾಹ್ನವಿಗೆ ನಿದ್ರೆ ಮಾತ್ರೆ ಕೊಟ್ಟು ಅವಳನ್ನು ಮಲಗಿಸಿ ನಂತರ ಅಜ್ಜಿಯನ್ನು ನೋಡಿಕೊಂಡು ಬರಬಹುದು ಎಂದು ಜಯಂತ್ ಪ್ಲ್ಯಾನ್ ಮಾಡುತ್ತಾನೆ. ಅದರಂತೆ ಹಾಲಿನಲ್ಲಿ ನಿದ್ರೆ ಮಾತ್ರೆ ಹಾಕಿ ಅದನ್ನು ಜಾಹ್ನವಿಗೆ ಕೊಡುತ್ತಾನೆ. ಹಾಲು ಕುಡಿಯುತ್ತಿದ್ದಂತೆ ಜಾನು ನಿದ್ರೆಗೆ ಜಾರುತ್ತಾಳೆ. ಇದೇ ಒಳ್ಳೆ ಸಮಯ, ಜಾನು ಎಚ್ಚರವಾಗುವಷ್ಟರಲ್ಲಿ ಅಜ್ಜಿ ನೋಡಿಕೊಂಡು ಬರೋಣ ಎಂದು ಜಯಂತ ರೆಡಿಯಾಗಿ ಮನೆ ಬಾಗಿಲು ತೆಗೆದರೆ ಅಲ್ಲಿ ಸಿದ್ದು-ಭಾವನಾ ನಿಂತಿರುವುದನ್ನು ನೋಡಿ ಶಾಕ್ ಆಗುತ್ತಾನೆ. ಇವರು ಈ ಸಮಯದಲ್ಲೆ ಬರಬೇಕಿತ್ತಾ ಎಂದು ಗೊಣಗುವ ಜಯಂತ, ಒಲ್ಲದ ಮನಸಿನಿಂದ ಅವರನ್ನು ಒಳಗೆ ಕರೆಯುತ್ತಾನೆ. ತಂಗಿ ಮಲಗಿದ್ದಾಳೆ ಎಂದು ತಿಳಿದ ಭಾವನಾ, ಅವಳನ್ನು ಎಬ್ಬಿಸುವುದು ಬೇಡ ಎಂದು ಅವಳ ಪಕ್ಕದಲ್ಲೇ ಮಲಗುತ್ತಾಳೆ.
ಬೆಳಗ್ಗೆ ಜಾಹ್ನವಿಗೆ ಎಚ್ಚರವಾದಾಗ ಪಕ್ಕದಲ್ಲಿ ಅಕ್ಕ ಭಾವನಾ ಇರುವುದನ್ನು ನೋಡಿ ಖುಷಿಪಡುತ್ತಾಳೆ. ಅಕ್ಕನನ್ನು ಅಪ್ಪಿಕೊಂಡು ಖುಷಿಪಡುತ್ತಾಳೆ. ನೀನು ಯಾವಾಗ ಬಂದೆ ಎನ್ನುತ್ತಾಳೆ. ನಾನು ನಿನ್ನೆ ರಾತ್ರಿಯೇ ಬಂದೆ, ನೀನು ಮಲಗಿದ್ದೆ, ಎಬ್ಬಿಸುವುದು ಬೇಡ ಎಂದು ಸುಮ್ಮನಾದೆ ಎಂದು ಭಾವನಾ ಹೇಳುತ್ತಾಳೆ. ಜಾನು ಇದ್ದಕ್ಕಿದ್ದಂತೆ ಅಳಲು ಶುರು ಮಾಡುತ್ತಾಳೆ. ಈಗಲೇ ಅಕ್ಕನ ಬಳಿ ಎಲ್ಲವನ್ನೂ ಹೇಳಿಕೊಳ್ಳಲಾ ಎಂದು ಯೋಚಿಸುತ್ತಾಳೆ. ಆದರೆ ಇದು ಸರಿಯಾದ ಸಮಯವಲ್ಲ ಎಂದು ಮನಸ್ಸು ಬದಲಿಸುತ್ತಾಳೆ. ನೀನು ಮೊದಲಿನಂತೆ ಇಲ್ಲ, ಮನಸ್ಸಿನಲ್ಲಿ ಏನೋ ಯೋಚಿಸುತ್ತಿದ್ದೀಯ ಎಂದು ಭಾವನಾ, ಜಾನುಗೆ ಕೇಳುತ್ತಾಳೆ. ಇಲ್ಲ ಅಕ್ಕ ಅಜ್ಜಿ ಇಷ್ಟು ದಿನ ಇಲ್ಲೇ ಇದ್ದರು, ದಿನವೂ ಅವರನ್ನು ನೋಡುತ್ತಿದ್ದೆ. ಆದರೆ ಈಗ ಮನೆಯಲ್ಲಿದ್ದಾರೆ, ಜೊತೆಗೆ ಅವರಿಗೆ ಪ್ರಜ್ಞೆ ಬಂದರೂ ಯಾವಾಗ ಮೊದಲಿನಂತೆ ಆಗುತ್ತಾರೋ ಎಂದು ಯೋಚಿಸಿ ಅಳುತ್ತಿದ್ದೇನೆ ಎನ್ನುತ್ತಾಳೆ.
ಇತ್ತ ಜಯಂತ್, ಸಿದ್ದೇಗೌಡನಿಗೆ ಕಾಫಿ ಕೊಟ್ಟು ಯೋಗಕ್ಷೇಮ ವಿಚಾರಿಸುತ್ತಾನೆ. ಅಕ್ಕ ತಂಗಿಯರು ಹೇಗೋ ಬಹಳ ದಿನಗಳ ನಂತರ ಜೊತೆಯಾಗಿ ಮಾತನಾಡುತ್ತಿದ್ದಾರೆ. ಈಗ ಸಿದ್ದೇಗೌಡನ ಜೊತೆ ಹೋಗಿ ಅಜ್ಜಿಯನ್ನು ನೋಡಿಕೊಂಡು ಬರಬಹುದು ಎಂದು ಪ್ಲ್ಯಾನ್ ಮಾಡಿ ಆ ವಿಚಾರವನ್ನು ಸಿದ್ದುಗೆ ಹೇಳುತ್ತಾನೆ. ಸರಿ ಹೋಗಿಬರೋಣ ಎಂದು ಸಿದ್ದು ಹೇಳಿ ನಂತರ ಮನಸ್ಸು ಬದಲಿಸುತ್ತಾನೆ. ನಾವು ಅಕ್ಕ-ತಂಗಿಯರನ್ನು ಬಿಟ್ಟು ಹೋಗುವುದು ಸರಿಯಲ್ಲ, ಅವರನ್ನೂ ಒಟ್ಟಿಗೆ ಕರೆದುಕೊಂಡು ಹೋಗೋಣ ಎನ್ನುತ್ತಾನೆ. ತಿಂಡಿ ತಿನ್ನುವಾಗ ಸಿದ್ದು, ವಿಚಾರವನ್ನು ಎಲ್ಲರಿಗೂ ಹೇಳುತ್ತಾನೆ. ನೀವು ಅಲ್ಲಿಗೆ ಹೋಗಲು ನಾನು ಬಿಡುವುದಿಲ್ಲ ಎಂದುಕೊಳ್ಳುವ ಜಾನು, ಈ ಸಮಯದಲ್ಲಿ ನನಗೆ ಜರ್ನಿ ಮಾಡಲು ಆಗುವುದಿಲ್ಲ. ಅಜ್ಜಿಗೆ ಯಾರೂ ಡಿಸ್ಟರ್ಬ್ ಮಾಡಬೇಡಿ ಎಂದು ಡಾಕ್ಟರ್ ಹೇಳಿದ್ದಾರೆ, ನಾವೆಲ್ಲರೂ ಒಟ್ಟಿಗೆ ಹೋಗುವುದು ಸರಿಯಲ್ಲ, ಅದರ ಬದಲಿಗೆ ವಿಡಿಯೋ ಕಾಲ್ ಮಾಡೋಣ ಎನ್ನುತ್ತಾಳೆ. ಅಜ್ಜಿಯನ್ನು ನೋಡಲು ಹೋಗುವ ಪ್ಲ್ಯಾನ್ ಪದೇ ಪದೆ ಫ್ಲಾಪ್ ಆಗುತ್ತಿರುವುದಕ್ಕೆ ಜಯಂತ್ ಸಿಟ್ಟಾಗುತ್ತಾನೆ.
ಸಿದ್ದೇಗೌಡ, ಮಾವನಿಗೆ ವಿಡಿಯೋ ಕಾಲ್ ಮಾಡುತ್ತಾನೆ. ಹೆಣ್ಣು ಮಕ್ಕಳು, ಅಳಿಯಂದಿರು ಒಟ್ಟಾಗಿ ಸೇರಿರುವುದನ್ನು ಕಂಡು ಶ್ರೀನಿವಾಸ್ ಖುಷಿಯಾಗುತ್ತಾನೆ. ನಾವೆಲ್ಲರೂ ಅಲ್ಲಿಗೆ ಬರಬೇಕೆಂದುಕೊಂಡಿದ್ದೇವೆ ಎಂದು ಸಿದ್ದೇಗೌಡ ಹೇಳಿದಾಗ ಶ್ರೀನಿವಾಸ್ ಬೇಡ ಎನ್ನುತ್ತಾನೆ. ಈಗಷ್ಟೇ ಅಜ್ಜಿಗೆ ಪ್ರಜ್ಞೆ ಬಂದಿದೆ. ಸ್ವಲ್ಪ ದಿನ ಕಳೆಯಲಿ, ನಾನು ಮನೆಗೆ ಹೋದ ಕೂಡಲೇ ವಿಡಿಯೋ ಕಾಲ್ ಮಾಡುವೆ ಎಂದು ಶ್ರೀನಿವಾಸ್ ಹೇಳುತ್ತಾನೆ. ಭಾವನಾ-ಸಿದ್ದೇಗೌಡ ಮನೆಗೆ ಹೊರಟು ನಿಲ್ಲುತ್ತಾರೆ. ಇನ್ನೂ ಒಂದೆರಡು ದಿನ ಇಲ್ಲೇ ಇದ್ದು ಹೋಗಿ ಎಂದು ಜಾಹ್ನವಿ ಮನವಿ ಮಾಡುತ್ತಾಳೆ. ನನಗೂ ಇರಲು ಇಷ್ಟ , ಮತ್ತೆ ಬರುತ್ತೇವೆ ಎಂದು ಭಾವನಾ, ತಂಗಿಗೆ ಸಮಾಧಾನ ಮಾಡುತ್ತಾಳೆ. ಜಯಂತ್ ಅಂತೂ, ಇವರು ಹೋದರೆ ಸಾಕು ಎಂದುಕೊಳ್ಳುತ್ತಾನೆ. ಅವರು ಕೆಲಸ ಬಿಟ್ಟು ಬಂದಿದ್ದಾರೆ, ಹೋಗಲಿ ಬಿಡು ಎಂದು ಹೆಂಡತಿಗೆ ಹೇಳುತ್ತಾನೆ. ಗಂಡನ ಬುದ್ಧಿ ತಿಳಿದಿರುವ ಜಾಹ್ನವಿ ಬೇಸರದಿಂದ ಅಕ್ಕ-ಭಾವನನ್ನು ಕಳಿಸಿಕೊಡುತ್ತಾಳೆ.
ಇತ್ತ ಹರೀಶ, ಡೂಪ್ಲಿಕೇಟ್ ಕೀ ಮಾಡಿಸಿ ಸಂತೋಷನಿಗೆ ತಂದುಕೊಡುತ್ತಾನೆ. ಅಜ್ಜಿ ಟ್ರಂಕ್ನಲ್ಲಿ ದುಡ್ಡು ಇದೆ ಎಂದು ತಿಳಿದು ಇಬ್ಬರೂ ಕುತೂಹಲದಿಂದಲೇ ಅದನ್ನು ತೆಗೆಯುತ್ತಾರೆ. ಆದರೆ ಅದರಲ್ಲಿ ಒಂದು ಸೀರೆ, ಫೋಟೋ ಬಿಟ್ಟರೆ ಮತ್ತೇನೂ ಇರುವುದಿಲ್ಲ. ಅದನ್ನು ನೋಡಿ ಇಬ್ಬರೂ ನಿರಾಶರಾಗುತ್ತಾರೆ. ಅಜ್ಜಿಯೂ ನಮಗೆ ಮೋಸ ಮಾಡಿದರು ಬಿಡು ಎಂದು ಇಬ್ಬರೂ ಒಬ್ಬರಿಗೊಬ್ಬರು ಸಮಾಧಾನ ಮಾಡಿಕೊಳ್ಳುತ್ತಾರೆ. ಹರೀಶ ಟ್ರಂಕನ್ನು ವಾಪಸ್ ಅಜ್ಜಿ ರೂಮ್ನಲ್ಲಿ ಇಡುತ್ತಾನೆ.
ಅಜ್ಜಿ ಟ್ರಂಕ್ ರಹಸ್ಯ ಏನು? ಮಾವನ ಮನೆಗೆ ಹೋಗಲು ಜಯಂತ್ ಬೇರೇನೂ ಪ್ಲ್ಯಾನ್ ಮಾಡುತ್ತಾನೆ? ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.



