ತ್ರಿವಿಕ್ರಂ ಅವರಿಗೆ ಭಾರಿ ಬೇಡಿಕೆ ಇದೆ. ಬಿಗ್ ಬಾಸ್ ಶೋ ಇಂದ ಒಳ್ಳೆಯ ಜನಪ್ರಿಯತೆ ಮತ್ತು ಜನರ ಪ್ರೀತಿ ಎರಡು ಕೂಡ ಸಿಕ್ಕಿದೆ. ಈ ವರೆಗು ತ್ರಿವಿಕ್ರಂ ಅವರು ಬೆಳೆದು ಬಂದ್ ಹಾದಿ ಸುಲಭದ್ದಂತು ಅಲ್ಲ. ಬಹಳ ಕಷ್ಟಪಟ್ಟು, ಹಲವು ಕನಸುಗಳನ್ನು ಕಾರಣಾಂತರಗಳಿಂದ ತ್ಯಾಗ ಮಾಡಿ, ನಟನೆ ಶುರು ಮಾಡಿ, ಇಂದು ಬಿಗ್ ಬಾಸ್ ರನ್ನರ್ ಅಪ್ ಆಗಿದ್ದಾರೆ. ತ್ರಿವಿಕ್ರಂ ಈಗ ಸಿನಿಮಾ ಮಾಡೋ ಕನಸ್ಸನ್ನು ಸಹ ಕಂಡಿದ್ದಾರೆ. ಶೀಘ್ರದಲ್ಲೇ ಹೀರೋ ಆಗಿ ತ್ರಿವಿಕ್ರಂ ಅವರು ಸಿನಿಮಾದಲ್ಲಿ ನಟಿಸಬಹುದು ಎಂದು ಸಹ ಹೇಳಲಾಗುತ್ತಿದೆ. ಇದೆಲ್ಲದರ ನಡುವೆ ತ್ರಿವಿಕ್ರಂ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರು ಜೊತೆಯಾಗಿ ಸಿನಿಮಾ ಮಾಡಬೇಕಿತ್ತು ಎನ್ನುವ ಸುದ್ದಿ ಒಂದು ಕೇಳಿಬಂದಿದ್ದು, ಅದಕ್ಕೆ ಸಂಬಂಧಿಸಿದ ಒಂದು ಫೋಟೋ ಸಹ ವೈರಲ್ ಆಗಿದೆ. ಹಾಗಿದ್ದರೆ ತ್ರಿವಿಕ್ರಂ ಅವರು ಸಿನಿಮಾಗೆ ಬಂದಿದ್ದು ಯಾಕೆ?
ನಟ ತ್ರಿವಿಕ್ರಂ ಹೆಚ್ಚಿನ ಜನರಿಗೆ ಪರಿಚಯ ಇರುವುದು ಪದ್ಮಾವತಿ ಧಾರಾವಾಹಿ ಮೂಲಕ. ಕಲರ್ಸ್ ಕನ್ನಡ ವಾಹಿನಿಯ ಪದ್ಮಾವತಿ ಧಾರಾವಾಹಿಯಲ್ಲಿ ಹೀರೋ ಸಾಮ್ರಾಟ್ ಪಾತ್ರದಲ್ಲಿ ನಟಿಸಿದ್ದರು ತ್ರಿವಿಕ್ರಂ. ಈ ಪಾತ್ರ ಮತ್ತು ಧಾರಾವಾಹಿ ಎರಡು ಕೂಡ ಅವರಿಗೆ ಒಳ್ಳೆಯ ಬ್ರೇಕ್ ನೀಡಿತ್ತು. ಪದ್ಮಾವತಿ ನಂತರ ತ್ರಿವಿಕ್ರಂ ಅವರು ಕಾಣಿಸಿಕೊಂಡಿದ್ದು ಬಿಗ್ ಬಾಸ್ ಶೋನಲ್ಲಿ. ಆದರೆ ಇವರ ಜೀವನ ಇಷ್ಟೇ ಸುಲಭವಾಗಿ ಅಂತು ಇರಲಿಲ್ಲ. ಹಾರ್ಡ್ ವರ್ಕಿಂಗ್ ಹುಡುಗ ತ್ರಿವಿಕ್ರಂ ತುಂಬಾ ಕಷ್ಟಪಟ್ಟು ಇಲ್ಲಿಯವರೆಗು ಬೆಳೆದು ಬಂದಿದ್ದಾರೆ..ಇವರ ಜೀವನದ ಹಾದಿ ಸಹ ಸುಲಭವಾಗಿ ಅಂತು ಇರಲಿಲ್ಲ. ತ್ರಿವಿಕ್ರಂ ಅವರು ಅಂದುಕೊಂಡಿದ್ದೆ ಬೇರೆ. ಅವರ ಜೀವನದಲ್ಲಿ ಆಗಿದ್ದೇ ಬೇರೆ. ಪ್ರತಿಯೊಂದು ಹಂತದಲ್ಲೂ ಅಂದುಕೊಂಡಿದ್ದಕ್ಕಿಂತ ಬೇರೆಯೇ ನಡೆದು, ಇಂದು ಬೇರೆ ರೀತಿಯಲ್ಲೇ ಇದ್ದಾರೆ.

ತ್ರಿವಿಕ್ರಂ ಅವರು ಓದಿದ್ದು ಎಂಬಿಎ. ಆದರೆ ಇವರಿಗೆ ಪ್ರೈವೇಟ್ ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಮಾಡುವುದಕ್ಕೆ ಇಷ್ಟವಿರಲಿಲ್ಲ, ಆಸಕ್ತಿ ಸಹ ಇರಲಿಲ್ಲ. ಇನ್ನು ಚಿಕ್ಕ ವಯಸ್ಸಿನಿಂದಲು ಕ್ರಿಕೆಟರ್ ಆಗಬೇಕು ಎಂದುಕೊಂಡಿದ್ದ ತ್ರಿವಿಕ್ರಂ ಅವರು 8 ವರ್ಷಗಳ ಸಮಯವನ್ನು ಕ್ರಿಕೆಟ್ ಗಾಗಿ ಮೀಸಲು ಇಟ್ಟಿದ್ದರು. ರಣಜಿ ಟ್ರೋಫಿಗೆ ಆಯ್ಕೆಯಾಗಿ, ದೇಶಕ್ಕಾಗಿ ಕ್ರಿಕೆಟ್ ಆಡಬೇಕು ಎನ್ನುವ ಕನಸನ್ನು ಕಂಡಿದ್ದರು. ಆದರೆ ಆ ವೇಳೆ ಅಪಘಾತದಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡು, ಕ್ರಿಕೆಟ್ ಆಡಲು, ಕ್ರಿಕೆಟ್ ನಲ್ಲಿ ಕೆರಿಯರ್ ಮುಂದುವರೆಸಲು ಸಾಧ್ಯವಾಗಲಿಲ್ಲ. ಕ್ರಿಕೆಟರ್ ಆಗಬೇಕು ಎಂದುಕೊಂಡಿದ್ದ ಆಸೆ ಅಲ್ಲಿಗೆ ನಿಂತು ಹೋಯಿತು. ಬಳಿಕ ಇವರಿಗೆ ನಟನೆಯಲ್ಲಿ ಆಸಕ್ತಿ ಇತ್ತು, ಸಿನಿಮಾದಲ್ಲಿ ಹೀರೋ ಆಗಿ ಮಿಂಚಬೇಕು ಎನ್ನುವ ಆಸೆ ಕೂಡ ಇತ್ತು. ಇವರು ಹೀರೋ ಆಗಿ ಒಂದು ಸಿನಿಮಾ ಕೂಡ ಸೆಟ್ಟೇರಿತ್ತು..

ಆದರೆ ಆ ಸಿನಿಮಾ ಮುಂದುವರೆಯಲಿಲ್ಲ, ಶೂಟಿಂಗ್ ಶುರುವಾಗುವ ಮೊದಲೇ ಅರ್ಧಕ್ಕೆ ನಿಂತು ಹೋಯಿತು. ಈ ಸಿನಿಮಾದಲ್ಲೇ ರಶ್ಮಿಕಾ ಮಂದಣ್ಣ ಅವರು ನಾಯಕಿಯಾಗಿ ನಟಿಸಬೇಕಿತ್ತು ಎನ್ನಲಾಗಿದೆ. ಇದು ಕಿರಿಕ್ ಪಾರ್ಟಿ ಸಿನಿಮಾಗೆ ರಶ್ಮಿಕಾ ಅವರು ಆಯ್ಕೆ ಆಗುವುದಕ್ಕಿಂತ ಮೊದಲೇ ನಡೆದಿರುವ ಘಟನೆ. ಒಂದು ಸಂದರ್ಶನದಲ್ಲಿ ರಶ್ಮಿಕಾ ಅವರು ಸಹ ಈ ಬಗ್ಗೆ ಮಾತನಾಡಿದ ಹಾಗಿತ್ತು. ಸಿನಿಮಾ ಹೆಸರು, ಹೀರೋ ಯಾರು ಎನ್ನುವುದನ್ನು ರಿವೀಲ್ ಮಾಡಿರಲಿಲ್ಲ. ಆದರೆ ತಾವು ಒಂದು ಸಿನಿಮಾಗೆ ಆಯ್ಕೆಯಾಗಿ ಆ ಸಿನಿಮಾ ನಿಂತು ಹೋಗಿ, ಕೆಲ ಸಮಯದ ನಂತರ ಕಿರಿಕ್ ಪಾರ್ಟಿ ಗೆ ಆಡಿಷನ್ ಕಾಲ್ ಬಂದಾಗ ಪ್ರಾಂಕ್ ಕಾಲ್ ಅಂದುಕೊಂಡಿದ್ದಾಗಿ ರಶ್ಮಿಕಾ ಸಹ ಹೇಳಿದ್ದರು. ಹಾಗಾಗಿ ಈ ಸಿನಿಮಾ ಸುದ್ದಿ ನಿಜವು ಇರಬಹುದು. ಆದರೆ ಸ್ಪಷ್ಟನೆ ಅಂತು ಇಲ್ಲ. ಒಟ್ಟಿನಲ್ಲಿ ರಶ್ಮಿಕಾ ಜೊತೆಗೆ ಹೀರೋ ಆಗಿ ಡೆಬ್ಯು ಅಗಬೇಕಿತ್ತು, ಅದು ಸಹ ಅರ್ಧಕ್ಕೆ ನಿಂತಿತು.
ಒಂದಷ್ಟು ನಿರ್ದೇಶಕರ ಮತ್ತು ನಿರ್ಮಾಪಕರ ಬಳಿ ತಮಗೆ ಆಕ್ಟಿಂಗ್ ಗೆ ಅವಕಾಶ ಕೊಡುವಂತೆ ಕೇಳಿಕೊಂಡಾಗ, ಎಲ್ಲರೂ ಇವರನ್ನು ನಿಂದಿಸಿದ್ದರಂತೆ. ನಿನಗೆ ಮಾರ್ಕೆಟ್ ವ್ಯಾಲ್ಯೂ ಇಲ್ಲ, ನೀನು ಸಿನಿಮಾ ಮಾಡಿದರೆ ನೋಡೋಕೆ ಯಾರು ಬರೋದಿಲ್ಲ ಎಂದು ಅವಮಾನ ಮಾಡಿ ಕಳಿಸುತ್ತಿದ್ದರಂತೆ. ಪ್ರೇಮ ಬರಹ, ರಂಗನಾಯಕಿ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ತ್ರಿವಿಕ್ರಂ ನಟಿಸಿದ್ದಾರೆ. ಅದೆಲ್ಲದರಲ್ಲೂ ಇವರು ನಟಿಸಿರುವುದು ಸಣ್ಣಪುಟ್ಟ ಪಾತ್ರಗಳಲ್ಲಿ. ಯಾವುದು ಒಳ್ಳೆಯ ಪಾತ್ರಗಳು ಸಿನಿಮಾ ಇಂದ ಇವರಿಗೆ ಸಿಗಲೇ ಇಲ್ಲ. ಇಷ್ಟೇ ಅಲ್ಲದೇ, ತ್ರಿವಿಕ್ರಂ ಅವರು ಒಂದು ಸಮಯದಲ್ಲಿ ತಾನು ಸೆಲೆಬ್ರಿಟಿ ಆಗುವುದಕ್ಕೆ ಸಾಧ್ಯ ಆಗಲಿಲ್ಲ ಎಂದರೂ ಸೆಲೆಬ್ರಿಟಿ ಟ್ರೇನರ್ ಆಗ್ತೀನಿ ಎಂದು ಜಿಮ್ ನಲ್ಲಿ ಟ್ರೇನರ್ ಆಗಿ ಸಹ ಕೆಲಸ ಮಾಡಿದ್ದಾರೆ. ಈ ಕೆಲಸ ಮಾಡುವ ವೇಳೆ ಅವರಿಗೆ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಸಣ್ಣದೊಂದು ಪಾತ್ರದಲ್ಲಿ ನಟಿಸಿದ್ದರು..

ಬಳಿಕ ಕಲರ್ಸ್ ಕನ್ನಡದ ಪದ್ಮಾವತಿ ಧಾರಾವಾಹಿಯ ಹೀರೋ ಆಗಿ, ಸೂಪರ್ ಸ್ಟಾರ್ ಸಾಮ್ರಾಟ್ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಈ ಧಾರಾವಾಹಿ ಇಂದ ಸಿಕ್ಕ ಹೆಸರು, ಸಿಸಿಎಲ್ ನಲ್ಲಿ ಕ್ರಿಕೆಟ್ ಆಡುವ ಅವಕಾಶವನ್ನು ನೀಡಿತು..ಸುದೀಪ್ ಅವರ ಜೊತೆಗೆ ಸಿಸಿಎಲ್ ನಲ್ಲಿ ಕ್ರಿಕೆಟ್ ಆಡಿದ್ದಾರೆ ತ್ರಿವಿಕ್ರಂ. ಒಂದು ರೀತಿ ಕಳೆದುಕೊಂಡ ಎಲ್ಲವನ್ನು ಸಹ ಮತ್ತೆ ಪಡೆದುಕೊಂಡಿದ್ದಾರೆ. ಒಂದೊಂದೇ ಒಳ್ಳೆಯ ಅವಕಾಶಗಳು ಬರುವುದಕ್ಕೆ ಶುರುವಾಗಿದೆ. ಇದೆಲ್ಲದರ ನಂತರ ಬಿಗ್ ಬಾಸ್ ಗೆ ಬರುವ ಅವಕಾಶ ಸಿಕ್ಕಿತ್ತು, ಸೀಸನ್ 10ರಲ್ಲಿ ಕಾರಣಾಂತರಗಳಿಂದ ತ್ರಿವಿಕ್ರಂ ಅವರು ಬರುವುದಕ್ಕೆ ಸಾಧ್ಯ ಆಗಲಿಲ್ಲ. ಆದರೆ ಈ ಸೀಸನ್ ಗೆ ಬಂದು ಭರವಸೆಯ ಸ್ಪರ್ಧಿಯಾಗಿ ಜನರಿಗೆ ತುಂಬಾ ಇಷ್ಟವಾದರು. ಇವರ ವ್ಯಕ್ತಿತ್ವವನ್ನು ಜನರು ಇಷ್ಟಪಡುವುದಕ್ಕೆ ಶುರು ಮಾಡಿದರು. ತ್ರಿವಿಕ್ರಂ ಬಹಳ ಸ್ಟ್ರಾಂಗ್ ಸ್ಪರ್ಧಿ ಎಂದು ಎಲ್ಲರೂ ಹೇಳಿದ್ದಿದೆ.

ಬಿಬಿಕೆ11 ನಲ್ಲಿ ತ್ರಿವಿಕ್ರಂ ಅವರೇ ವಿನ್ನರ್ ಆಗುತ್ತಾರೆ ಎನ್ನುವ ನಿರೀಕ್ಷೆ ಹಲವರಲ್ಲಿ ಇತ್ತು. ಆದರೆ ತ್ರಿವಿಕ್ರಂ ಅವರು ಮೊದಲ ರನ್ನರ್ ಅಪ್ ಆಗಿದ್ದು, ಹನುಮಂತ ವಿನ್ನರ್ ಆದರು. ಆದರೆ ತ್ರಿವಿಕ್ರಂ ಅವರಿಗೆ ಜನರಿಂದ ಪ್ರೀತಿ, ಜನಪ್ರಿಯತೆ ಇದೆಲ್ಲವೂ ಸಿಕ್ಕಿದೆ. ಇನ್ನು ನಾಯಕನಾಗಿ ಬೆಳ್ಳಿ ಪರದೆಗೆ ಎಂಟ್ರಿ ಕೊಡುವ ದಿನಗಳು ಹತ್ತಿರದಲ್ಲೇ ಇದೆ ಎಂದು ಹೇಳಲಾಗುತ್ತಿದೆ. ಬಹುಶಃ ಅಂದು ರಶ್ಮಿಕಾ ಅವರ ಜೊತೆಗೆ ಹೀರೋ ಆಗಿ ಸಿನಿಮಾ ಮಾಡಿದ್ದರೆ ಈಗ ತ್ರಿವಿಕ್ರಂ ಅವರಿಗೆ ಬೇಡಿಕೆ ಮತ್ತು ಜನಪ್ರಿಯತೆ ಇನ್ನು ಹೆಚ್ಚಿನ ಮಟ್ಟದಲ್ಲಿ ಇರುತ್ತಿತ್ತೋ ಏನೋ, ಆದರೆ ಈಗ ಎಲ್ಲವೂ ಸ್ವಲ್ಪ ನಿಧಾನವೇ ಆದರು ಒಳ್ಳೆಯ ರೀತಿಯಲ್ಲಿ ಸಾಗುತ್ತಿದೆ. ಇನ್ನುಮುಂದೆ ಇವರಿಗೆ ಎಲ್ಲವೂ ಒಳ್ಳೆಯದೇ ಆಗಲಿ ಅಂತಿದ್ದಾರೆ ಫ್ಯಾನ್ಸ್.