ಮಠ ಸಿನಿಮಾ ಮೂಲಕ ನಿರ್ದೇಶಕನಾಗಿ ಚಂದನವನದಲ್ಲಿ ಗುರುತಿಸಿಕೊಂಡಿದ್ದ ಗುರುಪ್ರಸಾದ್ ಅವರು ಇಹಲೋಕ ತ್ಯಜಿಸಿರುವ ವಿಚಾರ ನಿನ್ನೆಯಷ್ಟೇ ಹೊರಬಂದಿತು. ಆದರೆ ಇವರು ಕೆಲ ದಿನಗಳ ಮೊದಲೇ ತಮ್ಮ ಅಪಾರ್ಟ್ಮೆಂಟ್ ನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮಾಹಿತಿ ಸಿಕ್ಕಿತ್ತು. ಇವರ ಜೊತೆಗೆ ಕೆಲಸ ಮಾಡಿರುವ ಹಲವು ಕಲಾವಿದರು ಹಾಗೂ ತಂತ್ರಜ್ಞರು ಗುರುಪ್ರಸಾದ್ ಅವರ ಬಗ್ಗೆ ಅನೇಕ ವಿಚಾರಗಳನ್ನು ತಿಳಿಸಿದ್ದಾರೆ.
ಮಾಯಾಮೃಗ, ಮನ್ವಂತರ, ಮಗಳು ಜಾನಕಿ ಇಂಥ ಅದ್ಭುತ ಧಾರಾವಾಹಿಗಳನ್ನು ಕಿರುತೆರೆಗೆ ನೀಡಿದ ನಿರ್ದೇಶಕ ಟಿ. ಎನ್. ಸೀತಾರಾಮ್ ಅವರು ಗುರುಪ್ರಸಾದ್ ಅವರ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. “23 ವರ್ಷದ ಹಿಂದೆ ನಾನು ಮನ್ವಂತರ ಎನ್ನುವ ಧಾರಾವಾಹಿ ಮಾಡಿದಾಗ ಸಹ ನಿರ್ದೇಶಕರಲ್ಲಿ ಒಬ್ಬರು ಈ ಗುರುಪ್ರಸಾದ್. ಅತ್ಯಂತ ಪ್ರತಿಭಾವಂತ ಬರಹಗಾರ. ನಗು ಅವನ ಬ್ರಾಂಡ್ ಮಾರ್ಕ್. ಅವನಿಗೆ ನಗಲು ಒಂದು ನೆಪ ಬೇಕಿರುತ್ತಿತ್ತು ಅಷ್ಟೇ. ಪೂರ್ಣ ಕಾರಣ ಬೇಕಿರಲಿಲ್ಲ. ಯಾವಾಗಲೂ ಈ ಚಿತ್ರದಲ್ಲಿ ಇರುವಂತೆಯೇ ಇರುತ್ತಿದ್ದ. ತಮಾಷೆ ಪ್ರಿಯನಾದ ಈ ಗುರು ‘ಬದುಕು ಎನ್ನುವುದು ಒಂದು ನಗೆಯ ಮೆರವಣಿಗೆಯಾಗ ಬೇಕು ಸಾರ್’ ಎಂದು ಹೇಳುತ್ತಿದ್ದ.

ಅದೇ ಸಮಯದಲ್ಲೇ ರಘು ಸಮರ್ಥ, ರಮೇಶ್ ಇಂದಿರಾ, ಮಧು ಚಂದ್ರ ಮುಂತಾದವರು ಭೂಮಿಕಾ ನಿರ್ದೇಶನ ತಂಡದಲ್ಲಿ ಇದ್ದರು
ಮನ್ವಂತರದ ನಂತರ ಅವನು ಚಿತ್ರ ನಿರ್ದೇಶನದ ಕಡೆ ಹೊರಟುಬಿಟ್ಟ. ಮಠ ಎನ್ನುವ ಚಿತ್ರ ನಿರ್ದೇಶಿಸಿ ಮಠಗುರು ಎಂದು ಖ್ಯಾತನಾಗಿದ್ದ.ನಾನು ಧಾರಾವಾಹಿಗಳ ದಾರಿಯಲ್ಲೇ ಇದ್ದು ಮುಕ್ತ, ಮುಕ್ತ ಮುಕ್ತ, ಮಗಳು ಜಾನಕಿ,, ಮುಂತಾದ ಧಾರಾವಾಹಿ ಮಾಡುತ್ತಿದ್ದ. ಗುರು ಚಿತ್ರರಂಗದಲ್ಲಿ ಖ್ಯಾತ ನಾಗುತ್ತಾ ಹೋದ.
ನಂತರ ನನ್ನ ಅವನ ಭೇಟಿ ತುಂಬಾ ವಿರಳವಾಗುತ್ತಾ ಹೋಯಿತು. ಎಂದಾದರೂ ಫೋನ್ ನಲ್ಲಿ ಮಾತನಾಡಲು ಸಿಕ್ಕಿದಾಗ ನಿಮಿಷಕ್ಕೆ ಹತ್ತು ಸಾರಿ ನಗುತ್ತಾ ಸಂಭ್ರಮಿಸುತ್ತಿದ್ದ. ಅವನ “ಎರಡನೆಯ ಸಲ” ಎನ್ನುವ ಚಿತ್ರ ನೋಡಲು ಒಮ್ಮೆ ನನ್ನನ್ನು ಕರೆದಿದ್ದ.ಅವನ ತಂಡದವರನ್ನೆಲ್ಲ ಅಲ್ಲಿ ಭೇಟಿ ಮಾಡಿದ್ದೆ. ಆ ಚಿತ್ರ ನನಗೆ ಅಷ್ಟಾಗಿ ಇಷ್ಟವಾಗಿರಲಿಲ್ಲ. ಅದನ್ನು ಅವನಿಗೆ ಹೇಳಿದಾಗ ಜೋರಾಗಿ ನಕ್ಕಿದ್ದ. ಆ ನಗುವಿನ ಅರ್ಥ ನನಗೆ ಹೊಳೆಯಲಿಲ್ಲ

ಐದಾರು ವರ್ಷದಿಂದ ಈಚೆಗೆ ಫೋನ್ ಕೂಡಾ ಇರಲಿಲ್ಲ. ಸಿನಿಮಾ ನಿರ್ದೇಶನದ ಬಗ್ಗೆ, ನಿರ್ಮಾಣದ ಬಗ್ಗೆ ಅತ್ಯಂತ ಮಹತ್ವಾಕಾಂಕ್ಷೆ ಗಳನ್ನೂ, ಕನಸುಗಳನ್ನೂ ಹೊತ್ತಿದ್ದ. ಜಾಣರಾಗದಿದ್ದರೆ ಈ ಸಿನಿಮಾ ಎನ್ನುವುದು ತನ್ನ ಮರಳ ಸುಳಿಗಳೊಳಗೆ ಸೃಷ್ಟಿಶೀಲರನ್ನು ಎಳೆದುಕೊಂಡು ಮುಗಿಸುವುದನ್ನು ನಾನು ಅನೇಕ ಬಾರಿ ಕಂಡಿದ್ದೇನೆ
ಗುರು ಪ್ರಸಾದ ನಿಗೂ ಹಾಗೇ ಆಗಿರಬೇಕು. ಬದುಕು ಒಂದು ನಗೆಯ ಮೆರವಣಿಗೆ ಎನ್ನುತ್ತಿದ್ದವನು ಇಂದು ಆತ್ಮಹತ್ಯೆ ಮಾಡಿಕೊಂಡ ಎಂದು ಕೇಳಿ ದಿಗ್ಭ್ರಮೆ ಆಯಿತು.
ಹೀಗೆ ನಗುತ್ತಿದ್ದವನು ಹಾಗೆ ಹೋಗಿಬಿಟ್ಟ. ಈ ಬದುಕಿನ ನಿರರ್ಥಕತೆ ನನ್ನನ್ನು ವಿಷಣ್ಣನನ್ನಾಗಿ ಮಾಡುತ್ತಿದೆ. ಅವನ ಹತ್ತಿರದವರಿಗೆ ಅವನ ಸಾವಿನ ನೋವನ್ನು ಸಹಿಸಿಕೊಳ್ಳುವ ಶಕ್ತಿ ಬರಲಿ ಎಂಬ ಹಾರೈಕೆ ನನ್ನದು..” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ ನಿರ್ದೇಶಕ ಸೀತಾರಾಮ್ ಅವರು.