ಕಲಾವಿದರ ಬದುಕು ನಾವು ಅಂದುಕೊಂಡಷ್ಟು ಸುಲಭ ಅಲ್ಲ. ಒಬ್ಬೊಬ್ಬರ ಜರ್ನಿ ಒಂದೊಂದು ರೀತಿ, ಅವರವರ ಕಷ್ಟಗಳು ಅವರಿಗೆ ಮಾತ್ರ ಗೊತ್ತಿರುತ್ತದೆ. ಕಲಾವಿದರು ಅವಕಾಶ ಪಡೆದು, ಜನರ ಎದುರು ಕಲರ್ ಫುಲ್ ಆಗಿ ಕಾಣಿಸಿಕೊಂಡರೂ ಸಹ, ತೆರೆಯ ಹಿಂದೆ ನಾವು ಅಂದುಕೊಂಡ ಹಾಗೆ ಎಲ್ಲವೂ ಚೆನ್ನಾಗಿ ಇರುವುದಿಲ್ಲ. ಕಷ್ಟಗಳು ಯಾರನ್ನು ಯಾವಾಗ ಹೇಗೆ ಕಾಡುತ್ತದೆ ಎಂದು ಹೇಳೋದಕ್ಕೆ ಬರುವುದಿಲ್ಲ. ಇಂದು ಚೆನ್ನಾಗಿದ್ದ ಬದುಕು ನಾಳೆ ನಾವು ನಿರೀಕ್ಷೆಯೇ ಮಾಡದ ಹಾಗೆ ಕಷ್ಟಕ್ಕೆ ಸಿಲುಕಿಕೊಳ್ಳಬಹುದು. ಈ ರೀತಿ ಇದ್ದಾಗ ಬದುಕು ಕ್ಷಣಿಕ, ಇರುವಷ್ಟು ದಿವಸ ಎಲ್ಲರ ಜೊತೆಗೆ ಚೆನ್ನಾಗಿ ಇರಬೇಕು ಎಂದು ಅನ್ನಿಸುವುದು ಖಂಡಿತ. ಕೆಲವು ಕಲಾವಿದರು ಬಹಿರಂಗವಾಗಿ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ. ಇನ್ನು ಕೆಲವರು ಹೇಳೋದಿಲ್ಲ.
ಹೌದು, ಕೆಲವರಿಗೆ ಬದುಕು ಪೂರ್ತಿ ಕಷ್ಟವೇ ತುಂಬಿರುತ್ತದೆ. ಹೊರ ಜಗತ್ತಿಗೆ ಅದು ಗೊತ್ತೇ ಇರುವುದಿಲ್ಲ. ಕಲಾವಿದ ಆಗಬೇಕು ಅನ್ನೋ ಹಾದಿಯಲ್ಲಿ ಸಹ ಬಹಳ ಏಳು ಬೀಳುಗಳು, ಅವಮಾನಗಳು ಇದೆಲ್ಲವನ್ನೂ ಅನುಭವಿಸಿರುತ್ತಾರೆ. ಇದೆಲ್ಲದರ ಬಗ್ಗೆ ಸಾಮಾನ್ಯ ಜನರಾದ ನಮಗೆ ಗೊತ್ತೇ ಇರುವುದಿಲ್ಲ. ಇಂಥದ್ದೇ ಒಂದು ಘಟನೆ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಕಿರುತೆರೆಯ ನಟ ಶ್ರೀಧರ್ ಅವರು ಅನಾರೋಗ್ಯ ಸಮಸ್ಯೆ ಇಂದ ಬಳಲುತ್ತಿರುವ ವಿಚಾರ ನಮಗೆಲ್ಲ ಗೊತ್ತೇ ಇದೆ. ಇತ್ತೀಚೆಗೆ ಇವರ ವಿಷಯ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬಹಳಷ್ಟು ಕಲಾವಿದರು ಶ್ರೀಧರ್ ಅವರಿಗೆ ಸಪೋರ್ಟ್ ಮಾಡಿದರು, ಈಗಲೂ ಸಹ ಅವರ ಕಷ್ಟಕ್ಕೆ ಮಿಡಿದು ಸಹಾಯ ಮಾಡುತ್ತಿದ್ದಾರೆ. ಶ್ರೀಧರ್ ಅವರು ಬೇಗ ಹುಷಾರಾಗಲಿ ಅನ್ನೋದು ಎಲ್ಲರ ಆಶಯ.

ನೋಡಲು ಬಹಳ ಸುಂದರವಾಗಿದ್ದ ಶ್ರೀಧರ್ ಅವರು ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ, ಪಾರು, ಕಮಲಿ, ವಧು ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಇವರಿಗೆ ಅನಾರೋಗ್ಯ ಉಂಟಾಗಿ, ಗುರುತೇ ಸಿಗದಷ್ಟು ಬದಲಾಗಿ ಹೋಗಿದ್ದಾರೆ, ಆರ್ಥಿಕವಾಗಿ ಕಷ್ಟದಲ್ಲಿದ್ದು ಆದಷ್ಟು ಸಹಾಯ ಮಾಡಬೇಕು ಎಂದು ಎಲ್ಲರಲ್ಲಿ ಮನವಿ ಮಾಡಿಕೊಂಡಿದ್ದರು. ಶ್ರೀಧರ್ ಅವರಿಗೆ ಸಹಾಯ ಮಾಡಲು ಸಾಕಷ್ಟು ಕಲಾವಿದರು ಸಹ ಮುಂದೆ ಬಂದರು. ಕಮಲಿ ಧಾರಾವಾಹಿಯ ಅಂಕಿತ ಇವರ ಪೋಸ್ಟ್ ಮಾಡಿದ್ದರು. ನಟಿಯರಾದ ರೂಪ ಅಯ್ಯರ್, ಸಪ್ನಾ ದೀಕ್ಷಿತ್ ಸೇರಿದಂತೆ ಸಾಕಷ್ಟು ಕಲಾವಿದರು ಶ್ರೀಧರ್ ಅವರಿಗೆ ಸಹಾಯ ಮಾಡಿದ್ದಾರೆ.
ಇನ್ನು ಶ್ರೀಧರ್ ಅವರ ಬದುಕಿಗೆ ಈಗ ಅವರ ತಾಯಿ ವಾಪಸ್ ಬಂದಿರುವುದು ಸಮಾಧಾನಕರ ವಿಚಾರ ಆಗಿದೆ. ಹೌದು, ಶ್ರೀಧರ್ ಅವರು ಕುಟುಂಬದಿಂದ ದೂರವಿದ್ದರು, ಈಗ 30 ವರ್ಷಗಳ ನಂತರ ಶ್ರೀಧರ್ ಅವರ ತಾಯಿ ಮಗನನ್ನು ನೋಡುವುದಕ್ಕೆ ಬಂದಿದ್ದು, ಈಗ ಅವರ ತಾಯಿಯೇ ಜವಾಬ್ದಾರಿ ತೆಗೆದುಕೊಂಡು ಶ್ರೀಧರ್ ಅವರ ಆರೈಕೆ ಮಾಡುತ್ತಿದ್ದಾರೆ. ಇದರಿಂದ ಶ್ರೀಧರ್ ಅವರಿಗೆ ಸಹ ಬಹಳ ಸಹಾಯ ಆಗಿದೆ, ಮೊದಲಿನ ಹಾಗೆ ಆಗಬೇಕು, ಸಾಧನೆ ಮಾಡಬೇಕು ಅನ್ನೋ ಹುಮ್ಮಸ್ಸು, ಮತ್ತೆ ಶ್ರೀಧರ್ ಅವರಲ್ಲಿ ಮೂಡಿದೆ. ನಿಮ್ಮೆಲ್ಲರ ಎದುರು ಮತ್ತೆ ಮೊದಲಿನ ಹಾಗೆ ಬರುತ್ತೇನೆ ಎಂದು ಸಹ ಹೇಳಿದ್ದಾರೆ. ಇನ್ನು ಶ್ರೀಧರ್ ಅವರು ಇತ್ತೀಚೆಗೆ ತಮ್ಮ ತಾಯಿ ಮತ್ತು ತಮ್ಮಂದಿರ ಬಗ್ಗೆ, ತಮ್ಮ ಜೀವನದ ಬಗ್ಗೆ ಮಾತನಾಡಿದ್ದಾರೆ.

ಶ್ರೀಧರ್ ಅವರಿಗೆ 8 ವರ್ಷವಿದ್ದಾಗಲೇ ಅವರ ತಂದೆ ತೀರಿಹೋದರು, ಶ್ರೀಧರ್ ಮತ್ತು ಅವರ ತಮ್ಮಂದಿರನ್ನು ಅವರ ತಾಯಿಯೇ ಕಷ್ಟಪಟ್ಟು ನೋಡಿಕೊಳ್ಳುತ್ತಿದ್ದರು. ಮನೆಕೆಲಸಗಳನ್ನು ಮಾಡಿ ಮಕ್ಕಳನ್ನು ಬೆಳೆಸಿದರು. ಶ್ರೀಧರ್ ಅವರು ನಟ ಆಗಬೇಕು ಎಂದು 22 ವರ್ಷ ಇದ್ದಾಗ ಮನೆ ಬಿಟ್ಟು ಬಂದರಂತೆ, ಚಿತ್ರರಂಗಕ್ಕೆ ಬರಬೇಕು ಎಂದು ಬಹಳ ಕಷ್ಟಪಟ್ಟಿದ್ದಾರೆ. ಈಗ ಅವರಿಗೆ 50 ವರ್ಷ ತುಂಬುತ್ತಿದೆ. ಈ ನಡುವೆ ಅವರಿಗೆ ಮದುವೆಯಾಗಿ, ಹೆಂಡತಿ ಕೂಡ ಇವರಿಗೆ ಮೋಸ ಮಾಡಿ, ಇವರ ಬಳಿ ಇದ್ದ ಎಲ್ಲವನ್ನು ಎತ್ತಿಕೊಂಡು ಓಡಿ ಹೋದರು. ನಂತರ ಬಂದ ಎಲ್ಲಾ ಕಷ್ಟಗಳನ್ನು ಶ್ರೀಧರ್ ಒಂಟಿಯಾಗಿಯೇ ಎದುರಿಸುತ್ತಿದ್ದಾರೆ. ಈಗ ಈ ರೀತಿ ಅನಾರೋಗ್ಯ ಸಹ ಶುರುವಾಗಿ, ಹೆಚ್ಚು ಕಷ್ಟ ಅನುಭವಿಸುತ್ತಿದ್ದಾರೆ. ಈ ವೇಳೆ ಎಲ್ಲರೂ ಅವರಿಗೆ ಸಹಾಯ ಮಾಡಿದರು.
ಇನ್ನು ಈಗ ಕುಟುಂಬ ಸಹ ಅವರ ಜೊತೆಗೆ ಬಂದಿದೆ. ಹೌದು, ಶ್ರೀಧರ್ ಅವರ ತಾಯಿ ಈಗ ಬಂದಿದ್ದು, ಮಗನನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ. ಇನ್ನು ಶ್ರೀಧರ್ ಅವರ ತಮ್ಮಂದಿರು ಕೂಡ ಬಂದು ಹೋಗುತ್ತಿದ್ದಾರಂತೆ. ಈಗ ಶ್ರೀಧರ್ ಅವರಿಗೆ ಬದುಕಬೇಕು ಎಂದು ಮತ್ತೆ ಆಸೆ ಶುರುವಾಗಿದೆ. ಚೆನ್ನಾಗಿ ಆಗಿ, ಆರೋಗ್ಯ ಸುಧಾರಿಸಿಕೊಂಡು, ಅಮ್ಮನನ್ನು ತಮ್ಮಂದಿರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಆಸೆ ಶುರುವಾಗಿದೆಯಂತೆ. ಶ್ರೀಧರ್ ಅವರ ಮನಸ್ಥಿತಿಯಲ್ಲಿ ಆಗಿರುವ ಈ ಬದಲಾವಣೆ ಬಹಳ ಒಳ್ಳೆಯ ವಿಚಾರ ಆಗಿದ್ದು, ಇಷ್ಟು ವರ್ಷಗಳ ಕಾಲ ಇವರು ಪಟ್ಟಿರುವ ಎಲ್ಲಾ ಕಷ್ಟಗಳು ಕಳೆದು ಹೋಗಿ, ಮುಂದಿನ ಬದುಕು ಚೆನ್ನಾಗಿರಲಿ, ಇವರು ಬೇಗ ಹುಷಾರಾಗಲಿ ಎಂದು ನಾವು ಸಹ ಹಾರೈಸೋಣ.



