ಸಿನಿಮಾ ರಂಗದವರು ರಾಜಕೀಯ ಪ್ರವೇಶ ಮಾಡುವುದು ಹೊಸದಲ್ಲ. ಅನೇಕರು ಹೀಗೆ ಬಂದು ಯಶಸ್ವಿ ಕೂಡ ಆಗಿದ್ದಾರೆ ಮತ್ತೊಂದಿಷ್ಟು ಜನ ಮುಗ್ಗರಿಸಿ ಬಿದ್ದಿದ್ದೂ ಇದೆ. ಅನೇಕರಿಗೆ ರಾಜಕೀಯ ಕೈ ಹಿಡಿದಿದೆ. ಮುನ್ನಡೆಸಿದೆ. ಆದರೆ ಕೆಲವರಂತೂ ಅತ್ತ ಸಿನಿಮಾವೂ ಇಲ್ಲ ಇತ್ತ ರಾಜಕೀಯವೂ ಇಲ್ಲ ಅನ್ನೋ ರೀತಿ ಆಗಿದೆ. ಈಗ ಮತ್ತೊಬ್ಬ ಸ್ಟಾರ್ ನಟ ಸಿನಿಮಾ ರಂಗದ ಜೊತೆ ರಾಜಕೀಯಕ್ಕೂ ಕಾಲಿಟ್ಟಿದ್ದಾರೆ. ಈಗಾಗಲೇ ಪಕ್ಷ ಘೋಷಣೆ ಮಾಡಿರುವ ಈ ನಟ ರಾಜಕೀಯ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.
ಹೌದು, ಮುಂದಿನ ವರ್ಷ ನಡೆಯುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ದಳಪತಿ ವಿಜಯ್ ತಯಾರಿ ನಡೆಸಿದ್ದಾರೆ. ಈಗಾಗಲೇ ಬೃಹತ್ ವೇದಿಕೆ ಮೇಲೆ ಲಕ್ಷಾಂತರ ಜನರ ಮುಂದೆ ತಮಿಳಗ ವೆಟ್ರಿ ಕಳಗಮ್ (TVK) ಎಂಬ ಪಕ್ಷ ಘೋಷಣೆ ಮಾಡಿದ್ದಾರೆ. ಪಕ್ಷ ಘೋಷಣೆ ಬಳಿಕ ಸಾಕಷ್ಟು ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಜೊತೆಗೆ ಧಾರ್ಮಿಕ ಕಾರ್ಯಕ್ರಮದಲ್ಲೂ ಭಾಗಿಯಾಗುತ್ತಿದ್ದಾರೆ

ಸದ್ಯ ರಂಜಾನ್ ಉಪವಾಸ ಶುರಯವಾಗಿದೆ. ಈ ಕಾರ್ಯದಲ್ಲಿ ವಿಜಯ್ ಭಾಗಿಯಾಗಿದ್ದಾರೆ. ನಿನ್ನೆ ರಾಯಪೆಟ್ಟಾ ವೈಎಂಸಿಎ ಕ್ರೀಡಾಂಗಣದಲ್ಲಿ ಇಫ್ತಾರ್ ಕೂಟ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ದಳಪತಿ ವಿಜಯ್ ಭಾಗಿಯಾಗಿದ್ದಾರೆ. ಅಷ್ಟೆ ಅಲ್ಲ ಟೋಪಿ ಹಾಕಿ ಪ್ರಾರ್ಥನಾ ಸಭೆಯಲ್ಲಿ ಕೂತಿದ್ದಾರೆ. ಮೂಲಗಳ ಪ್ರಕಾರ ಮುಂಜಾನೆಯಿಂದ ಅವರು ಉಪವಾಸ ಇದ್ದರು ಎನ್ನಲಾಗಿದೆ. ಪ್ರಾರ್ಥನಾ ಸಭೆ ಮುಗಿದ ಬಳಿಕ ಅಂದರೆ ರಾತ್ರಿ ಊಟ ಸೇವನೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಈ ಇಫ್ತಾರ್ ಕೂಟದಲ್ಲಿ ವಿಜಯ್ ಜೊತೆ ಹಲವು ಸ್ಥಳೀಯ ಮುಸ್ಲಿಂ ನಾಯಕರ ಜೊತೆಗೆ ಸುಮಾರು 3 ಸಾವಿರಕ್ಕೂ ಅಧಿಕ ಜನರು ಸೇರಿದ್ದರು ಎನ್ನಲಾಗಿದೆ.
ಸದ್ಯ ವಿಜಯ್ ಇಫ್ತಾರ್ ಕೂಟದಲ್ಲಿ ಭಾಗಿಯಾಗಿರೋ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇವೆ. ಅವರ ಈ ನಡೆಗೆ ಪರ ವಿರೋಧದ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿವೆ. ಮುಂದಿನ ಚುನಾವಣೆ ಇರೋದ್ರಿಂದ ಮತ ಬ್ಯಾಂಕ್ ಗಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಅನೇಕರು ಹೇಳುತ್ತಿದ್ದಾರೆ. ಮತ್ತೊಂದಿಷ್ಟು ಜನ ವಿಜಯ್ ನಡೆಗೆ ಸಮರ್ಥನೆ ಮಾಡಿಕೊಳ್ಳುವುದರ ಜೊತೆಗೆ ಬೆಂಬಲಿಸುತ್ತಿದ್ದಾರೆ.

ರಾಜಕೀಯ ಪ್ರವೇಶ ಎಂದ ಮೇಲೆ ಎಲ್ಲಾ ವರ್ಗದವರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಲು ವೇದಿಕೆ ಸಿದ್ದ ಮಾಡೋದು ಸಾಮಾನ್ಯ ವಿಚಾರ. ಅದರಂತೆ ವಿಜಯ್ ಕೂಡ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ತಪ್ಪಿಲ್ಲ ಅನ್ನೋದು ಅನೇಕರ ಮಾತು. ಮುಂಬರುವ ಚುನಾವಣೆಯಲ್ಲಿ ಯಾರೊಟ್ಟಿಗೂ ಕೈ ಜೋಡಿಸದೇ ಏಕಾಂಗಿ ಹೋರಾಟಕ್ಕೆ ವಿಜಯ್ ಮುಂದಾಗೋದು ಕನ್ಫರ್ಮ್ ಆಗಿದೆ. ಹೀಗಾಗಿ ಅನೇಕ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.
ಇತ್ತ ರಾಜಕೀಯದ ಜೊತೆ ಜೊತೆಗೆ ಸಿನಿಮಾದಲ್ಲೂ ಬ್ಯುಸಿ ಆಗಿದ್ದಾರೆ ದಳಪತಿ ವಿಜಯ್. ಜನ ನಾಯಗನ್ ಎಂಬ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ ಈ ಸಿನಿಮಾವನ್ನ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಈ ಚಿತ್ರಕ್ಕಾಗಿ ವಿಜಯ್ ಅವರು 250 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಆದಷ್ಟು ಬೇಗ ಸಿನಿಮಾ ಶೂಟಿಂಗ್ ಮುಗಿಯಲಿದೆಯಂತೆ.



