ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅವರು ಥಾಯ್ಲೆಂಡ್ ಪ್ರವಾಸದಲ್ಲಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದು, ಸದ್ಯ ವಿಜಯ ರಾಘವೇಂದ್ರ ಸೇರಿದಂತೆ ಕುಟುಂಬದ ಮುಖ್ಯಸ್ಥರು ಥಾಯ್ಲೆಂಡ್ ಪ್ರಯಾಣ ಬೆಳೆಸಿದ್ದಾರೆ. ವಿದೇಶದಲ್ಲಿಯೇ ಸ್ಪಂದನಾ ಮರಣೋತ್ತರ ಪರೀಕ್ಷೆ ನಡೆದಿದ್ದು, ಮಧ್ಯಾಹ್ನದ ವೇಳೆ ಸ್ಪಂದನಾ ಮೃತದೇಹ ಕುಟುಂಬಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ. ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ಮೃತದೇಹ ವಿಜಯ್ ರಾಘವೇಂದ್ರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ತಿಳಿದು ಬಂದಿದೆ.

ಇಂದು ಸಂಜೆ 7 ಗಂಟೆಗೆ ಥಾಯ್ಲೆಂಡ್ ನಿಂದ ಸ್ಪಂದನಾ ಪಾರ್ಥಿವ ಶರೀರ ರವಾನಿಸಲಾಗುವುದು. ರಾತ್ರಿ 1 ಗಂಟೆಯ ಹೊತ್ತಿಗೆ ಮೃತದೇಹ ಬೆಂಗಳೂರು ತಲುಪುವ ನಿರೀಕ್ಷೆ ಇದೆ. ಆಗಸ್ಟ್ 9ರಂದು ಅಂದರೆ ನಾಳೆ ಮಧ್ಯಾಹ್ನ ಹರಿಶ್ಚಂದ್ರ ಘಾಟ್ ನಲ್ಲಿ ಸ್ಪಂದನಾ ಅಂತ್ಯಕ್ರಿಯೆ ನಡೆಯಲಿದೆ. ಸ್ಪಂದನಾ ಅವರ ತಂದೆ ಬಿ.ಕೆ.ಶಿವರಾಂ ಮನೆಯಲ್ಲಿ ನಾಳೆ ಮಧ್ಯಾಹ್ನದವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
2007ರಲ್ಲಿ ವಿಜಯ ರಾಘವೇಂದ್ರ ಹಾಗೂ ಸ್ಪಂದನಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ವಿಜಯ್ ಅವರಂತೆಯೇ ಸ್ಪಂದನಾ ಕೂಡ ಉತ್ತಮ ಸೊಸೆ, ಅತ್ತಿಗೆ, ಪತ್ನಿ ಹಾಗೂ ತಾಯಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ ಇದೀಗ ಸ್ಪಂದನಾ ಹೃದಯಾಘಾತದಿಂದ ಮೃತಪಟ್ಟಿದ್ದು, ಹುಟ್ಟೂರಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಆಗಸ್ಟ್ 9 ರಂದು ಅವರ ಅಂತ್ಯಕ್ರಿಯೆ ನಡೆಯಲಿದೆ.



