ಕರ್ನಾಟಕ ರಾಜ್ಯದ ಪ್ರಗತಿಪರ ಮುಖ್ಯಮಂತ್ರಿ ಎನಿಸಿಕೊಂಡಿರುವ ಸಿದ್ದರಾಮಯ್ಯ ಅವರ ಜೀವನ ನಿಜಕ್ಕೂ ಸ್ಪೂರ್ತಿದಾಯಕ. ಬಡತನದಲ್ಲಿ ಹುಟ್ಟಿ, ರಾಜ್ಯದ ಮುಖ್ಯಮಂತ್ರಿಯಾಗುವ ತನಕ ಸಿದ್ದರಾಮಯ್ಯ ಅವರು ನಡೆದು ಬಂದ ಹಾದಿ ಬಲು ರೋಚಕ. ತಮ್ಮ ವರ್ಚಸ್ಸಿನಿಂದ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿರುವ ಸಿದ್ದರಾಮಯ್ಯ ಅವರ ಜೀವನ ಸದ್ಯ ತೆರೆಗೆ ಬರಲು ಸಜ್ಜಾಗುತ್ತಿದೆ. ಈ ಬಗೆಗಿನ ವರದಿ ಇಲ್ಲಿದೆ ನೋಡಿ.

ತೆರೆಗೆ ಬರಲಿರುವ ಸಿದ್ದರಾಮಯ್ಯ ಅವರ ಬಯೋಪಿಕ್ ನಲ್ಲಿ ಸಿದ್ದರಾಮಯ್ಯ ಅವರ ಪಾತ್ರವನ್ನು ದಕ್ಷಿಣ ಭಾರತದ ಖ್ಯಾತ ನಟ ವಿಜಯ್ ಸೇತುಪತಿ ನಿರ್ವಹಿಸಲಿದ್ದಾರೆ. ಈಗಾಗಲೇ ಚಿತ್ರತಂಡ ಸೇತುಪತಿಯವರನ್ನು ಸಂಪರ್ಕಿಸಿದ್ದು, ಬಯೋಪಿಕ್ ನಲ್ಲಿ ನಟಿಸಲು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರು ತಮ್ಮ ಜೀವನದಲ್ಲಿ ಲಾಯರ್ ಆಗಿ ಪ್ರಾಕ್ಟಿಸ್ ಮಾಡುತ್ತಿದ್ದ ಸಮಯದಿಂದ, ಈಗಿನ ಮುಖ್ಯಮಂತ್ರಿಯಾಗಿರುವ ತನಕದ ವಿಚಾರ ಬಯೋಪಿಕ್ ನಲ್ಲಿ ಇರಲಿದ್ದು, ಇದನ್ನು ವಿಜಯ್ ಸೇತುಪತಿ ನಿರ್ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದರೊಂದಿಗೆ ಬಯೋಪಿಕ್ ನಲ್ಲಿ ಸಿದ್ದರಾಮಯ್ಯ ಅವರ ಪೂರ್ಣ ಜೀವನವನ್ನು ಚಿತ್ರತಂಡ ತೋರಿಸಲು ತಯಾರಿ ನಡೆಸಿದ್ದು, ಸಿದ್ದರಾಮಯ್ಯ ಅವರ ಬಾಲ್ಯ ಹಾಗೂ ಪ್ರೌಡಾವಸ್ಥೆಯ ಪಾತ್ರಕ್ಕೆ ಹೊಸ ಕಲಾವಿದನನ್ನು ಆಯ್ಕೆ ಮಾಡಿಕೊಳ್ಳಲಿದೆ ಎನ್ನಲಾಗಿದೆ. ಗೌರಿಬಿದನೂರು ಮೂಲದ ಸತ್ಯ ರತ್ನಂ ಎಂಬವರು ಈ ಬಯೋಪಿಕ್ ನಿರ್ದೇಶನ ಮಾಡುತ್ತಿದ್ದು, ಸದ್ಯ ಫ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಜೊತೆಗೆ ಶಶಾಂಕ್ ಶೇಷಗಿರಿ ಸಂಗೀತ ನೀಡುತ್ತಿದ್ದಾರೆ.