ನಮ್ಮ ಹಳ್ಳಿಯ ಹೆಸರು ಆಲೂರು. ಇದಕ್ಕೆ ಹೊಳೆ ಆಲೂರು, ಹಳೇ ಆಲೂರು ಎಂಬ ಹೆಸರುಗಳೂ ಇವೆ. ಸಾವಿರ ವರ್ಷಗಳಿಗೂ ಹೆಚ್ಚಿನ ಪೂರ್ವೇತಿಹಾಸವೂ ಇದಕ್ಕುಂಟು.
ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಕೇವಲ ಹತ್ತು ಕಿಲೋ ಮೀಟರುಗಳ ಅಂತರದಲ್ಲಿದೆ.
ಕೈ ಕೆಸರಾದರೆ ಬಾಯ್ಮೊಸರು – ತಲೆತಲಾಂತರದ ತನಕ ಎಂಬುದಕ್ಕೆ ಸಾಕ್ಷಿ ಈ ಊರು.
ಸುಮ್ಮನೇ ಹರಿದುಹೋಗಬಹುದಾದ ಹೊನ್ನೊಳೆ ಈಗಿನ ಸುವರ್ಣಾವತಿ ನದಿ ನೀರನ್ನು ಶ್ರಮಪಟ್ಟು ಸಾರ್ಥಕ ಸದ್ಬಳಕೆ ಮಾಡಿಕೊಂಡ ಊರಿದು. ಬಹಳ ದೂರದಿಂದ ನದಿನಾಲೆಗಳನ್ನು ನಿರ್ಮಿಸಿ ಈ ಊರಿಗೆ ನೀರುಣಿಸಿ ಬರಡು ಹಯನಾಗುವಂತೆ ಮಾಡಲಾಗಿದೆ. ಅದೂ ಸಾವಿರಾರು ವರ್ಷಗಳಿಂದ ನೀರು ಹಾಯಿಸಲ್ಪಟ್ಟರೂ ಜವುಗಾಗದಂತೆ, ಕಿಂಚಿತ್ ಸವಳು ಹಿಡಿಯದಂತೆ, ಅತ್ಯಂತ ವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಒಂದು ಹಂತಕ್ಕೆ ನೀರುಣಿಸುವ ಕಾಲುವೆಯೇ ಮತ್ತೊಂದು ಹಂತದ ಬಸಿಗಾಲುವೆಯಾಗಿ ಮಣ್ಣು ಕೆಡದಂತೆ ಕಾಪಾಡುವ ಸಂಜೀವಿನಿಯೂ ಆಗಿ (ನೀರುಣಿಸುವ/ಬಸಿಯುವ) ಎರಡೂ ಕೆಲಸ ನಿರ್ವಹಿಸುತ್ತಿದೆ.

ಇಲ್ಲಿನ ತೋಟಗಳು ‘ಪಟ’,’ಕಂಗು’ ಮತ್ತು ‘ತಲಾಣಿ’ ಉಳ್ಳಂತಹ ವಿಶೇಷ ವ್ಯವಸ್ಥೆಯಲ್ಲಿ ಬೆಳೆದುನಿಂತಿವೆ.
ಪಟ – ಮೂರು ಅಡಿ ಅಗಲದ ಒಂದಡಿಗಿಂತ ಎತ್ತರದ ಎಲ್ಲಾ ಕೃಷಿ ತ್ಯಾಜ್ಯಗಳನ್ನು ತನ್ನ ತಲೆ ಮೇಲೆ ಹೊತ್ತಂತಹ ಜಾಗ. ಇದು ಮುಚ್ಚಿಗೆಯೂ ಹೌದು. ಏರೋಬಿಕ್ ಚಟುವಟಿಕೆಗಳು ನಡೆಯುವ ತಾಣ.
ಕಂಗು – ಮೂರು ಅಡಿ ಅಗಲದ ಒಂದಡಿಗಿಂತ ಆಳದ
ನೀರು ಹರಿಸುವ ಜಾಗ. ಅನ್ ಏರೋಬಿಕ್ ಚಟುವಟಿಕೆಗಳ ತಾಣ.
ಪ್ರತಿ ಹದಿನೈದಿಪ್ಪತ್ತು ಅಡಿಗೊಂದರಂತೆ ಇರುವ ‘ತಲಾಣಿ’ ನೀರನ್ನು ಹಿಡಿದಿಡುತ್ತಾ ತೋಟಗಳೇ ಸ್ವಯಂ ಜಲಾನಯನ ಪ್ರದೇಶಗಳಾಗಿರುವಂತೆ ಅದ್ಭುತವಾಗಿ ಪರಿವರ್ತಿಸಿದ ಸರಳ ಕಟ್ಟಗಳು.

ಇಂತಲ್ಲಿ ಬಹು ಮಹಡಿ, ಬಹು ತಲೆಮಾರಿನ, ಬಹು ಬೆಳೆಗಳು ಸಂಯೋಜನೆಗೊಂಡಿದ್ದು; ಒಂದು ಊರು ಹೇಗೆ ನೂರ್ಕಾಲ ಬಾಳುತ್ತಾ ಬಂದಿದೆಯೋ ಹಾಗೇ ಇವೂ ಬಾಳುತ್ತಾ ಬಂದಿವೆ. ತೆಂಗು ಅಡಿಕೆ ಹಲಸು ಮಾವು ಕಿತ್ತಳೆ ಕೆತ್ತಿಂಬೆ ಮೋಸಂಬಿ ಹೇರಳೆ ತೇಗ ಬೀಟೆ ನೇರಳೆ ಸುರಗಿ ಸಂಪಿಗೆ ಬಾಳೆ ಕೋಳಿಕುಟುಮ ಒಂದೆಲಗ … ಹೀಗೆ ಸೂರ್ಯನ ಶಕ್ತಿ ನೆಲ ತಾಗಿ ಕಿಂಚಿತ್ ವ್ಯರ್ಥವಾಗದಂತೆ ಸ್ವಯಂ ಸದುಪಯೋಗಪಡಿಸಿಕೊಂಡು ಬೇರೆ ಯಾವುದೇ ಒಳಸುರಿಗಳೋ ರಸಾಯನಿಕಗಳೋ ಅನಗತ್ಯವಾಗಿಹೋಗುವಂತೆಯೂ ತಮಗೆ ಇನ್ನೂ ಸೋಂಕದಂತೆಯೂ ಸ್ವಾವಲಂಬಿಗಳಾಗಿ ಸಮೃದ್ಧವಾಗಿ ಬೆಳೆದು ಬಂದಿವೆ.

ಈ ಸ್ವಾವಲಂಬಿ ಪದ್ಧತಿಯ ಮಹತ್ವವನ್ನು ಇಂದಿನ ತಲೆಮಾರಿಗೆ ತಿಳಿ ಹೇಳಿ ಉಳಿಸಿ ಬೆಳೆಸಲು ‘ಆಲೂರು ಅಗ್ರಿ ಕಾಮನ್ವೆಲ್ತ್ ಪ್ರೈವೇಟ್ ಲಿಮಿಟೆಡ್’ ಎಂಬ ಸಂಸ್ಥೆಯನ್ನು ಹೊಸದಾಗಿ ಹುಟ್ಟುಹಾಕಲಾಗಿದೆ.
ಈ ಸಂಸ್ಥೆಯೂ ಸ್ವಾವಲಂಬಿಯಾಗಿರಲು ತಾನೂ ದುಡಿಯಬೇಕಿದೆ. ಅದಕ್ಕಾಗಿ ಮೊದಲು ಇಲ್ಲಿ ಲಭ್ಯವಿರುವ ಕೊಬ್ಬರಿ ಬಳಸಿ ಎಣ್ಣೆ ತಯಾರಿಸಲು ಗಾಣ ಹಾಕುವ ಚಿಂತನೆಯಿದೆ. ಅಡಿಕೆ ಸಂಸ್ಕರಣೆ ಮೂಲಕವೂ ತನ್ನ ಆದಾಯ ಪಡೆಯಲಿಚ್ಚಿಸಿದೆ. ನೀರಾ ಮತ್ತು ಅದರ ಮೌಲ್ಯವರ್ಧನೆಯಲ್ಲದೇ ಮಾವು ಹಲಸು ಬಾಳೆ ಇತ್ಯಾದಿ ಲಭ್ಯ ವಸ್ತುಗಳನ್ನು ಸಹ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಲಿದೆ.
ಸೆಂಟರ್ ಆಫ಼್ ಎಕ್ಸಲೆನ್ಸ್
ಹಾಗೆಯೇ ಆಸಕ್ತ ರೈತರಿಗೆ ಉಚಿತ ಊಟ ವಸತಿ ದಿನಭತ್ಯೆ ಸಮೇತ ಮೌಲ್ಯವರ್ಧನೆ ಬಗ್ಗೆ ತರಬೇತಿ ನೀಡುವ ಕೈಂಕರ್ಯವನ್ನೂ ಕೈಗೆತ್ತಿಕೊಳ್ಳಬೇಕಿದೆ.
ಈ ಸತ್ಕಾರ್ಯಕ್ಕೆ ಸಹಕಾರ ನೀಡುತ್ತಿರುವ ಎಲ್ಲರಿಗೂ ಧನ್ಯವಾದಗಳು.
ಎ ವಿ ಮೂರ್ತಿ @ ಆಲೂರು ಮೂರ್ತಿ