ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು 9 ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದು, ವಿವಾಹ ವಾರ್ಷಿಕೋತ್ಸದ ಅಂಗವಾಗಿ ಕಡಲ ತೀರದಲ್ಲಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲ, ರಿಷಬ್ ಅವರು ಪತ್ನಿ ಹಾಗೂ ಮಕ್ಕಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ತಮ್ಮ ಇನ್ಸ್ಟಾ ಪೇಜ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಸುಂದರವಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಶೇಷವಾಗಿ ಕಡಲತೀರದಲ್ಲಿ ಮುದ್ದಿನ ಮಡದಿ ಪ್ರಗತಿಗೆ ಮುತ್ತಿಕ್ಕಿರುವ ಫೋಟೊ ಬಹಳ ಸುಂದರವಾಗಿ ಮೂಡಿಬಂದಿದೆ. ಒಟ್ಟು 8 ಫೋಟೋಗಳನ್ನು ಶೇರ್ ಮಾಡಿದ್ದು, ಪ್ರತಿ ಫೋಟೋಗಳಲ್ಲೂ ದಂಪತಿಗಳ ಪ್ರೀತಿ ವ್ಯಕ್ತವಾಗಿರುವುದು ಕಾಣಬಹುದು. ಈ ಸಂದರ್ಭದಲ್ಲಿ ಮಕ್ಕಳು ಸಹ ಗಾಗಲ್ಸ್ ಧರಿಸಿ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ.

ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕುಂದಾಪುರದಲ್ಲಿ ಮದುವೆ ಅದ್ಧೂರಿಯಾಗಿ ನಡೆದಿತ್ತು. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮದುವೆ ಬಳಿಕ ಸಿನಿಮಾ ರಂಗದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಪ್ರಗತಿ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಿದ್ದಾರೆ. ಪತಿಯ ಸಿನಿಮಾಗಳಲ್ಲಿ ಕಾಸ್ಟೂಮ್ ಡಿಸೈನರ್ ಇವರೇ.

ಅಂದಹಾಗೆ ರಿಷಭ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಫೆಬ್ರವರಿ 10 ರಂದು ತಮ್ಮ 9ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಆ ದಿನ ರಿಷಭ್, ಇಬ್ಬರ ಮುದ್ದಾದ ವಿಡಿಯೋ ಶೇರ್ ಮಾಡುವ ಮೂಲಕ ಪತ್ನಿಗೆ ಶುಭಾಶಯ ಕೋರಿದ್ದರು. ವಿಡಿಯೋ ಜೊತೆಗೆ ನನ್ನ ಸಂಗಾತಿಯಾಗಿ ಹೃದಯಕ್ಕೆ ಒಲವನ್ನು, ಸಾಧನೆಗೆ ವಿಶ್ವಾಸವನ್ನು, ನಾಳೆಗೆ ಭರವಸೆಯನ್ನು ತಂದವಳು ನೀನು. ಈ ಸಂಸಾರವೆಂಬ ಸಾರ್ಥಕತೆಯಲ್ಲಿ ನನ್ನ ಸಹನೆ, ಶಕ್ತಿ, ಸರ್ವಸ್ವಗಳಾಗಿ ಸದಾ ಜೊತೆಗಿರು ಎಂದು ಮುದ್ದಾಗಿ ಅಡಿಬರಹವನ್ನು ಸಹ ಬರೆದಿದ್ದರು.
ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಿಷಭ್ ಶೆಟ್ಟಿ ಪ್ರತಿ ಕೆಲಸದಲ್ಲೂ ಜೊತೆಯಾಗಿ ನಿಂತವರು ಪ್ರಗತಿ ಶೆಟ್ಟಿ. ಸದ್ಯ ಕರ್ನಾಟಕದಲ್ಲಿ ಜನಪ್ರಿಯ ಸೆಲೆಬ್ರಿಟಿ ಜೋಡಿಗಳಾಗಿರುವ ರಿಷಭ್ ಮತ್ತು ಪ್ರಗತಿ ಲವ್ ಸ್ಟೋರಿ ಬಗ್ಗೆ ಬಹಳಷ್ಟು ಜನರಿಗೆ ಕುತೂಹಲವಿದೆ. ‘ಉಳಿದವರು ಕಂಡಂತೆ’ ಸಿನಿಮಾ ನೋಡಿ ಪ್ರಗತಿ ಅವರು ರಕ್ಷಿತ್ ಶೆಟ್ಟಿ ಅಭಿಮಾನಿಯಾಗಿದ್ದರು. ಹಾಗಾಗಿ ಸ್ನೇಹಿತರ ಜೊತೆ ರಿಕ್ಕಿ ಸಿನಿಮಾ ನೋಡೋದಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿ ಥಿಯೇಟರ್ ಗೆ ಚಿತ್ರತಂಡ ವಿಸಿಟ್ ಮಾಡಿತ್ತು. ಅದೇ ಸಮಯದಲ್ಲಿ ಪ್ರಗತಿಗೆ ಇವರು ರಿಕ್ಕಿ ಸಿನಿಮಾದ ನಿರ್ದೇಶಕರು ಅನ್ನೋದು ಗೊತ್ತಾಗಿದೆ. ಎಲ್ಲರಂತೆ ಪ್ರಗತಿ ಸಹ ಫೋಟೊ ತೆಗೆಸಿಕೊಂಡಿದ್ದರು.

ಆಗ ರಿಷಬ್ ಶೆಟ್ಟಿ ಕೂಡ ಕುಂದಾಪುರದವರು ಅನ್ನೋದು ಗೊತ್ತಾಗಿ, ಕರಾವಳಿ ಜನ ಸಿನಿಮಾದಲ್ಲಿ ಇರೋದು ಖುಷಿ ಕೊಟ್ಟಿದೆ ಎಂದಿದ್ದಾರೆ ಪ್ರಗತಿ. ಆ ನಂತರ ಫೇಸ್ಬುಕ್ನಲ್ಲಿ ಪ್ರಗತಿಯವರನ್ನು ಹುಡುಕಿ ರಿಷಬ್ ಶೆಟ್ಟಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ಬಳಿಕ ಆ ಪರಿಚಯ ಪ್ರೀತಿಗೆ ತಿರುಗಿತ್ತು. ಇದಾದ ನಂತರ ಒಂದೇ ವರ್ಷದಲ್ಲಿ ಪ್ರಪೋಸ್ ಮಾಡಿ, ಮನೆಯವರನ್ನು ಒಪ್ಪಿಸಿ ಆ ವರ್ಷವೇ ಮದುವೆ ಕೂಡ ಆಗಿದ್ದರು ರಿಷಭ್ ಶೆಟ್ಟಿ. ಅಲ್ಲಿಂದ ಇಲ್ಲಿವರೆಗೆ ಈ ಜೋಡಿಯ ಜೀವನ ಮೇಡ್ ಫಾರ್ ಈಚ್ ಅದರ್ ಎನ್ನುವಂತೆ ಸುಂದರವಾಗಿದೆ.