ಡಿಸಿಎಂ ಡಿಕೆ ಶಿವಕುಮಾರ್ ಗೆ ಶತಾಯ ಗತಾಯ ಸಿಎಂ ಸ್ಥಾನ ಪಡೆಯಲೇ ಬೇಕು ಅನ್ನೋ ಹಂಬಲ ಇದೆ. ಅದಕ್ಕೆ ಬೇಕಾದ ಎಲ್ಲಾ ಪ್ರಯತ್ನಗಳನ್ನೂ ಅವರು ಮಾಡುತ್ತಿದ್ದಾರೆ. ಆಗಿಂದಾಗಲೇ ಬೆಂಬಲಿಗರ ಬಳಿ ಹೇಳಿಕೆಗಳನ್ನ ಕೊಡಿಸುತ್ತಲೇ ಇದ್ದಾರೆ. ಹೋದಲ್ಲಿ ಬಂದಲ್ಲಿ ಮುಂದಿನ ಸಿಎಂ ಡಿಕೆ ಶಿವಕುಮಾರ್ ಅನ್ನೋ ಜೈಕಾರಗಳು ಬರುತ್ತಲೇ ಇವೆ. ಇದೆಲ್ಲವೂ ಸರಿ ಅಲ್ಲ, ಸಿಎಂ ಕುರ್ಚಿ ಖಾಲಿ ಇಲ್ಲ ಅಂತಲೂ ಅವರೇ ಹೇಳುತ್ತಾರೆ. ಇದೊಂತರ ಮಗಯ ಚಿವುಟಿ ಅಳಿಸೋದು ಅವರೇ, ತೊಟ್ಟಿಲು ತೂಗಿ ಮಗುವನ್ನ ಸುಮ್ಮನಾಗಿಸೋದು ಅವರೇ ಎನ್ನುವಂತಾಗಿದೆ.
ಸದ್ಯ ಇಷ್ಟು ದಿನ ಸಿಎಂ ಕುರ್ಚಿ ಖಾಲಿ ಇಲ್ಲ. ಸಿಎಂ ಹೆಸರು ತೆಗೆದುಕೊಂಡು ಅಪಪ್ರಚಾರ ಮಾಡಬೇಡಿ ಎಂದೆಲ್ಲಾ ಹೇಳುತ್ತಿದ್ದ ಡಿಕೆ ಶಿವಕುಮಾರ್, ಈಗ ಅವರೇ ನೀಡಿರೋ ಒಂದು ಹೇಳಿಕೆ ಕುತೂಹಲದ ಜೊತೆಗೆ ಚರ್ಚೆಗೂ ಗ್ರಾಸವಾಗುತ್ತಿದೆ. ಅಂತದ್ದೇನಪ್ಪ ಹೇಳಿಕೆ ಕೊಟ್ರು ಅಂತೀರಾ..? ಹಾ ಅಂತದ್ದೇ ಹೇಳಿಕೆಯನ್ನ ಡಿಕೆ ಶಿವಕುಮಾರ್ ನಿನ್ನೆ ನೀಡಿದ್ದಾರೆ. ಈ ಹೇಳಿಕೆ ಹೊಸ ಪ್ರಶ್ನೆಗಳನ್ನ ಹುಟ್ಟು ಹಾಕುವಂತೆ ಮಾಡಿದೆ. ಸಿಎಂ ಕುರ್ಚಿ ಖಾಲಿ ಇಲ್ಲ ಅನ್ನುತ್ತಲೇ ಸಿಎಂ ಕುರ್ಚಿ ಮೇಲೆ ಟವೆಲ್ ಹಾಕುವ ಕೆಲಸ ಡಿಕೆ ಮಾಡ್ತಾ ಇದ್ದಾರೆ ಅನ್ನೋದು ಸ್ಪಷ್ಟ ಆಗುತ್ತಿದೆ.

ಕಾಂಗ್ರೆಸ್ ಪಕ್ಷ ೧೩೫ ಸ್ಥಾನ ಪಡೆದು ಪೂರ್ಣಪ್ರಮಾಣದ ಸರ್ಕಾರ ಅಧಿಕಾರಕ್ಕೆ ಬಂದರೂ ಸಿಎಂ ಆಯ್ಕೆ ವಿಳಂಭ ಆಗಿತ್ತು. ಅದಕ್ಕೆ ಕಾರಣ ಇದೇ ಡಿಕೆ ಶಿವಕುಮಾರ್. ಪಕ್ಷಕ್ಕಾಗಿ ತನು ಧನ ಮನ ಎಲ್ಲಾ ಅರ್ಪಿಸಿದ್ದೇನೆ. ನನಗೆ ಸಿಎಂ ಪಟ್ಡ ಬೇಕೇ ಬೇಕು ಅಂತ ಹೈ ಕಮಾಂಡ್ ಮುಂದೆ ಹೋಗಿ ಕುಳಿತಿದ್ದ ಡಿಕೆ ಶಿವಕುಮಾರ್ ರನ್ನ ಸಮಾಧಾನ ಮಾಡಿ ಕಳಿಸಿದ್ದರಂತೆ ಹೈ ಕಮಾಂಡ್. ಹಾಗಂತ ಡಿಕೆ ಶಿವಕುಮಾರ್ ಸುಮ್ಮನೆ ವಾಪಸ್ ಬಂದಿರಲಿಲ್ಲ. ಬದಲಾಗಿ ಒಂದು ಒಪ್ಪಂದ ಮಾಡಿಕೊಂಡೇ ಬಂದಿದ್ದರು ಎನ್ನಲಾಗಿತ್ತು. ಅದೇ ಪವರ್ ಶೇರಿಂಗ್… ಎರಡೂವರೆ ವರ್ಷದ ಬಳಿಕ ಸಿಎಂ ಸ್ಥಾನ ತಮಗೆ ಕೊಡಬೇಕು ಅನ್ನೋ ಒಪ್ಪಂದ ಆಗಿತ್ತು ಎಂದು ಹೇಳಲಾಗಿತ್ತು. ಇದು ನಾಲ್ಕು ಜನ, ನಾಲ್ಕು ಗೋಡೆ ಮಧ್ಯೆ ಆಗಿದ್ದರಿಂದ ಬಹಿರಂಗ ಆಗಿಲ್ಲ ಎನ್ನಲಾಗುತ್ತಿತ್ತು. ಆದರೆ ಇತ್ತೀಚೆಗೆ ಮಾಧ್ಯಮ ಒಂದರ ಸಂದರ್ಶನದಲ್ಲಿ ಡಿಕೆ ನೀಡಿದ್ದ ಹೇಳಿಕೆ ಇಲ್ಲಿಯವರೆಗೂ ಚರ್ಚೆಗಳ ಮೇಲೆ ಚರ್ಚೆ ನಡೆಯುವಂತೆ ಮಾಡಿದೆ. ನಮ್ಮ ನಡುವೆ ಕೆಲವು ಒಪ್ಪಂದಗಳಾಗಿವೆ. ಅದರಂತೆ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ ಎಂಬ ಹೇಳಿಕೆ ರಾಜ್ಯ ಕಾಂಗ್ರೆಸ್ ನಲ್ಲಿ ಹೊಸ ಸಂಚಲನ ಮೂಡಿಸಿತ್ತು.
ಡಿಕೆ ಶಿವಕುಮಾರ್ ಪ್ರತಿ ಹೇಳಿಕೆ ಹಿಂದೆಯೂ ಒಂದೊಂದು ಅರ್ಥ ಇದೆ. ಎಲ್ಲಂದರಲ್ಲಿ ಮಾತನಾಡೋಕೆ ಅವರೇನು ಬೇರೆ ನಾಯಕರ ರೀತಿ ಅಲ್ಲ. ಮಾತನಾಡಿದರೆ ಮುಂದೇನಾಗಬಹುದು ಅನ್ನೋ ಬುದ್ದಿವಂತಿಕೆಯ ಚತುರ. ಹಾಗಾಗಿಯೇ ಅಂದು ಮಾಧ್ಯಮದ ಮುಂದೆ ಸಂದರ್ಶನದಲ್ಲಿ ಆ ಹೇಳಿಕೆ ನೀಡಿದ್ದು. ಆದರೆ ಈಗ ಅವರ ಅದೇ ದಾಟಿಯ ಮತ್ತೊಂದು ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ನಿನ್ನೆ ಬೆಂಗಳೂರು ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಸಮಾವೇಶದಲ್ಲಿ ಶಿವಕುಮಾರ್ ಭಾಗವಹಿಸಿದ್ದರು. ಈ ವೇಳೆ ಹಳೆಯ ಪಿಂಚಣಿ ವಿಚಾರವಾಗಿ ಅವರ ವೇದಿಕೆ ಮೇಲೆ ಮಾತನಾಡುವ ವೇಳೆಯಲ್ಲಿ, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಓಪಿಎಸ್ ಬಗ್ಗೆ ನಾವು ಭರವಸೆ ನೀಡಿದ್ದೆವು. ಅದರಂತೆ ಅದನ್ನು ಜಾರಿಗೆ ತರಲು ಬದ್ದರಾಗಿದ್ದೇವೆ. ನೀವು ಬಿಟ್ಟರೂ ಈ ವಿಚಾರವನ್ನು ನಾವು ಬಿಡುವುದಿಲ್ಲ. ಆದರೆ ಸ್ವಲ್ಪ ತಾಳ್ಮೆಯಿರಲಿ ಎಂದಿದ್ದಾರೆ. ಇಷ್ಟಕ್ಕೆ ಡಿಕೆ ಶಿವಕುಮಾರ್ ಸುಮ್ಮನಾಗಿಲ್ಲ. ಮುಂದುವರೆದು ಮಾತನಾಡಿರೋ ಅವರು, ಆರೋಗ್ಯ ಗಟ್ಟಿಯಾಗಿದೆ. ಇನ್ನೂ ಎಂಟತ್ತು ವರ್ಷ ರಾಜಕೀಯದಲ್ಲಿ ಇರುತ್ತೇನೆ ಎಂದಿದ್ದಾರೆ.
ನಾನು ಮುಂದಿನ ಬಾರಿ ಚುನಾವಣೆಗೆ ನಿಂತಾಗ, ನನ್ನ ನಾಯಕತ್ವದಲ್ಲಿ ನಡೆದಾಗ ದಯವಿಟ್ಟು ಜೈಕಾರ ಅನ್ನೋ ಪದವನ್ನು ಉಪಯೋಗಿಸಿ. ನಾನು ವಿಧಾನಸೌಧದಲ್ಲಿ ಇರುವವನೇ. ನಾನು ಇನ್ನು ಎಂಟತ್ತು ವರ್ಷ ಬಿಟ್ಟು ಹೋಗುವುದಿಲ್ಲ. ನನ್ನ ಆರೋಗ್ಯ ಇನ್ನೂ ಗಟ್ಟಿಯಾಗಿದೆ. ನನ್ನ ಮೇಲೆ ನಂಬಿಕೆಯಿಡಿ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಅವರ ಮಾರ್ಮಿಕ ನುಡಿ ಈಗ ಹಲವಾರು ಅರ್ಥ ನೀಡುತ್ತಿದೆ. ಎಲ್ಲೆಂದರಲ್ಲಿ ಏನೇನೋ ಮಾತನಾಡಲು ಡಿಕೆ ಶಿವಕುಮಾರ್ ಸಾಮಾನ್ಯ ನಾಯಕ ಅಲ್ಲ. ಗುರಿ ಇಟ್ಟು ಹೊಡೆಯೋದು ಅನ್ನೋ ಹಾಗೆ ಸಮಯ ಹಾಗೂ ಸಂದರ್ಭ ನೋಡಿಯೇ ಮಾತನಾಡಿರುತ್ತಾರೆ.
ಸದ್ಯ ಅವರ ಈ ಒಂದು ಮಾತು ಈಗ ನಾನಾ ಅರ್ಥ ಕಲ್ಪಿಸುವಂತೆ ಮಾಡಿದೆ. ಆರೋಗ್ಯ, ಎಂಟತ್ತು ವರ್ಷದ ರಾಜಕೀಯ ಮಾತು ಎಲ್ಲವನ್ನು ನೋಡ್ತಾ ಇದ್ರೆ, ಡಿಕೆ ಶಿವಕುಮಾರ್ ಸಿಎಂ ಕನಸಿಗೆ ಇನ್ನಷ್ಟು ಪುಷ್ಟಿ ನೀಡುತ್ತಿದೆ. ಅಧಿಕಾರ ಮಾಡಬೇಕು ಎಂದರೆ ಆರೋಗ್ಯ ಸರಿ ಇರಬೇಕು ಅನ್ನೋ ರೀತಿಯಲ್ಲಿ ಏನಾದ್ರೂ ಮಾತನಾಡಿದ್ರಾ..? ಗೊತ್ತಿಲ್ಲ. ಅಥವಾ ಅವರ ಈ ಒಂದು ಹೇಳಿಕೆ ಸಿಎಂ ಆರೋಗ್ಯದ ಕುರಿತು ಆಗಿರಬಹುದು. ಅದೇನೆ ಇದ್ರೂ ಆಗ್ಗಾಗ್ಗೆ ಈ ರೀತಿಯಾದಂತಹ ಹೇಳಿಕೆಗಳು ಚರ್ಚೆ ಹುಟ್ಟು ಹಾಕ್ತಾ ಇರೋದಂತೂ ಸತ್ಯ.



