ನಟಿ ರಕ್ಷಿತಾ ಪ್ರೇಮ್ ತನ್ನ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಅವರು ಶೋ ಬಿಟ್ಟಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸ್ವತಃ ರಕ್ಷಿತಾ ಪ್ರೇಮ್, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಇನ್ನು ಮುಂದೆ ನಾನು ಶೋ ಅನ್ನು ಮುಂದುವರಿಸುವುದಿಲ್ಲ ಎಂದು ರಿಯಾಲಿಟಿ ಶೋಗಳಿಗೆ ರಕ್ಷಿತಾ ಗುಡ್ಬೈ ಹೇಳಿದ್ದಾರೆ.
ಕನ್ನಡದ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದ ನಟಿ ರಕ್ಷಿತಾ, ಇನ್ನು ಮುಂದೆ ನಾನು ಅದನ್ನು ಮುಂದುವರಿಸುವುದಿಲ್ಲ ಎಂದು ಹೇಳಿದ್ದಾರೆ. ‘ಕಾಮಿಡಿ ಕಿಲಾಡಿಗಳು’ ಶೋಗೆ ರಕ್ಷಿತಾ ಬದಲು ತಾರಾ ಎಂಟ್ರಿ ಕೊಟ್ಟಿದ್ದಾರೆ.

ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಶೋನ ಹೊಸ ಪ್ರೋಮೋನಲ್ಲಿ ಯೋಗರಾಜ್ ಭಟ್, ಜಗ್ಗೇಶ್ ಅವರ ಜೊತೆಗೆ ನಟಿ ತಾರಾ ಸಹ ಕಾಣಿಸಿಕೊಂಡರು. ಕಳೆದ ಕೆಲವಾರು ವರ್ಷಗಳಿಂದಲೂ “ಕಾಮಿಡಿ ಕಿಲಾಡಿಗಳು” ಹಾಗೂ “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್” ಇದರಲ್ಲಿ ರಕ್ಷಿತಾ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು. ಈ ಶೋಗಳ ಹಲವು ಸೀಸನ್ಗಳಲ್ಲಿಯೂ ಸತತವಾಗಿ ರಕ್ಷಿತಾ ಅವರೇ ಜಡ್ಜ್ ಆಗಿದ್ದರು. ಆದರೆ ಈಗ ಹಠಾತ್ತನೆ ಅವರ ಸ್ಥಾನಕ್ಕೆ ತಾರಾ ಬಂದಿರುವುದು ಅಭಿಮಾನಿಗಳಿಗೆ ಆಶ್ಚರ್ಯ ತಂದಿತ್ತು.
ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿರುವ ರಕ್ಷಿತಾ ಪ್ರೇಮ್, ‘ಸುದ್ದಿ ಹಬ್ಬಿಸುತ್ತಿರುವವರ ಹಾಗೂ ನನ್ನ ಟ್ಯಾಗ್ ಮಾಡಿ ನೀವೇಕೆ ಒಂದು ನಿರ್ದಿಷ್ಟ ಚಾನೆಲ್ನ, ಒಂದು ನಿರ್ದಿಷ್ಟ ಶೋನಲ್ಲಿ ಇಲ್ಲ ಎಂದು ಕೇಳುತ್ತಿರುವವರ ಗಮನಕ್ಕಾಗಿ ಈ ಸುದ್ದಿ ಹಂಚಿಕೊಳ್ಳುತ್ತಿದ್ದೇನೆ. ಕಳೆದ ಒಂಬತ್ತು ವರ್ಷಗಳಿಂದಲೂ ಒಂದು ನಿರ್ದಿಷ್ಟ ಚಾನೆಲ್ನ, ನಿರ್ದಿಷ್ಟ ಶೋಗಳ ಭಾಗವಾಗಿದ್ದೆ, ಅದಕ್ಕಾಗಿ ಕೆಲಸ ಮಾಡಿದ್ದೆ. ಆದರೆ ನಾನು ಈಗ ಅದರ ಭಾಗವಲ್ಲ’ ಎಂದಿದ್ದಾರೆ.

‘ಜೀವನ ಬದಲಾಗಬೇಕು, ನಾನು ಸಹ ಹೊಸ ಸವಾಲುಗಳನ್ನು ಎದುರುಗೊಳ್ಳಬೇಕು, ಹೊಸದೇನನ್ನಾದರೂ ಪ್ರಯತ್ನಿಸಬೇಕು. ಹಾಗಾಗಿ ಇನ್ನು ಮುಂದೆ ನಾನು ಆ ಡ್ಯಾನ್ಸ್ ಶೋನ ಭಾಗವೂ ಸಹ ಆಗಿರುವುದಿಲ್ಲ. ಆ ಚಾನೆಲ್ನ ಭಾಗವೂ ಆಗಿರುವುದಿಲ್ಲ. ಇಷ್ಟು ವರ್ಷ ಜನರು ತೋರಿಸಿರುವ ಪ್ರೀತಿಗೆ ನಾನು ಋಣಿ. ಆದರೆ ಈಗ ಮುಂದುವರೆಯುವುದೇ ಸರಿಯಾದ ಆಯ್ಕೆ, ನಾನು ಮತ್ತೆ ನಿಮ್ಮ ಮುಂದೆ ಬಂದಾಗ ಅದೇ ಪ್ರೀತಿಯನ್ನು ನನ್ನ ಮೇಲೆ ತೋರಿಸುತ್ತೀರಿ ಎಂಬ ವಿಶ್ವಾಸ ಇದೆ’ ಎಂದು ರಕ್ಷಿತಾ ಹೇಳಿದ್ದಾರೆ.
ಎಂಟು ವರ್ಷಗಳ ಬಳಿಕ ಶೋಗಳಿಂದ ರಕ್ಷಿತಾ ಹೊರ ಬಂದಿದ್ದಾರೆ. ಆದರೆ ತಮ್ಮ ಪೋಸ್ಟ್ನಲ್ಲಿ ರಕ್ಷಿತಾ ಅವರು ಎರಡೂ ಶೋ ಹಾಗೂ ಚಾನೆಲ್ನ ಹೆಸರು ಸಹ ಉಲ್ಲೇಖಿಸದೇ ಇರುವುದು ಅಸಮಾಧಾನದಿಂದಲೇ ಶೋನಿಂದ ಹೊರಗೆ ಬಂದಿದ್ದಾರೆ ಎಂಬ ಸುಳಿವು ನೀಡುತ್ತಿದೆ.



