ಸ್ಟಾರ್ ನಟರ ಅಭಿಮಾನಿಗಳು ವಿವಿಧ ರೀತಿಯಲ್ಲಿ ತಮ್ಮ ಅಭಿಮಾನವನ್ನು ತೋರಿಸಲು ಪ್ರಯತ್ನಿಸುತ್ತಾರೆ. ಇದೀಗ ಕರ್ನಾಟಕ ರತ್ನ, ಕರುನಾಡಿನ ಅಪ್ಪು ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಯೊಬ್ಬರು ವಿಭಿನ್ನವಾಗಿ ಅಭಿಮಾನ ಮೆರೆದಿದ್ದಾರೆ. ರಾಯಚೂರು ಮೂಲದ ರೈತರೊಬ್ಬರು ಅಕ್ಟೋಬರ್ 29ಕ್ಕೆ ಪವರ್ ಸ್ಟಾರ್ ಪುನೀತ್ರಾಜ್ ಕುಮಾರ್ ಅವರ ಎರಡನೇ ವರ್ಷದ ಶ್ರದ್ಧಾಂಜಲಿ ಇರುವ ಕಾರಣ ವಿಶಿಷ್ಟ ಕಲೆಯ ಮೂಲಕ ನೆಚ್ಚಿನ ನಟನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ರಾಯಚೂರು ಜಿಲ್ಲೆಯ ಶ್ರೀನಿವಾಸ್ ಕ್ಯಾಂಪ್ ನ ವಿಕಲಚೇತನ ರೈತ ಕರ್ರಿ ಸತ್ಯನಾರಾಯಣ ಎಂಬ ಅಪ್ಪು ಅವರ ಅಭಿಮಾನಿ 3 ತಳಿಯ ಭತ್ತದ ಬೀಜಗಳನ್ನ ಬಳಸಿ ವಿನೂತನ ಅಪ್ಪು ಭಾವಚಿತ್ರ ಬಿಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಆಂಧ್ರ ಮೂಲದ ಕರ್ರಿ ಸತ್ಯನಾರಾಯಣ ಅವರ ಆರು ಎಕರೆ ಗದ್ದೆಯಲ್ಲಿ, ಎರಡು ಎಕರೆ ಪ್ರದೇಶವನ್ನು ಅಪ್ಪುವಿನ ಭಾವಚಿತ್ರಕ್ಕಾಗಿಯೇ ಮೀಸಲು ಇಟ್ಟಿದ್ದಾರೆ.
ಗುಜರಾತ್ ರಾಜ್ಯದ ಗೋಲ್ಡನ್ ರೋಸ್ ಹಾಗೂ ತೆಲಂಗಾಣದ ಕಾಲಾ ಪಟ್ಟಿ, ಮತ್ತು ಕರ್ನಾಟಕದ ಲೋಕಲ್ ತಳಿಯಾಗಿರುವ ಸೋನಾಮಸೂರಿ ಭತ್ತದ ಬೀಜಗಳನ್ನ ಬಳಸಿ ರೈತರೊಬ್ಬರು ಅಪ್ಪು ಭಾವಚಿತ್ರ ಅರಳುವಂತೆ ಮಾಡಿದ್ದಾರೆ. ಆ ಮೂಲಕ ಅಪ್ಪು ಅವರ ಎರಡನೇ ಶ್ರದ್ಧಾಂಜಲಿಗೆ ಅಭಿಮಾನಿಗಳಿಗೆ ವಿಶೇಷವಾಗಿ ನಮನ ಸಲ್ಲಿಸುತ್ತಿದ್ದಾರೆ.ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ರೈತನ ಅಭಿಮಾನಕ್ಕೆ ಕನ್ನಡಿಗರು ಫಿದಾ ಆಗಿದ್ದಾರೆ.