ಹೌದು, ದಕ್ಷಿಣ ಭಾರತದ ಸಿನಿ ರಂಗದ ಸ್ಟಾರ್ ನಟರಾದ ಕಮಲ ಹಾಸನ್ ಹಾಗೂ ಪ್ರಭಾಸ್ ಒಂದೇ ಸಿನಿಮಾದಲ್ಲಿ ನಟಿಸಲಿದ್ದು ಚಿತ್ರಕ್ಕೆ ‘ಪ್ರಾಜೆಕ್ಟ್ ಕೆ’ ಎಂದು ಹೆಸರಿಡಲಾಗಿದೆ. ಕಮಲ ಹಾಸನ್ ಈ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ದಿನಗಳಿಂದ ಓಡಾಡುತ್ತಲೆ ಇತ್ತು. ಸದ್ಯ, ಈ ವಿಚಾರವನ್ನು ಬಹಿರಂಗ ಪಡಿಸಿದ್ದು, ಕಮಲ ಹಾಸನ್ ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸುತ್ತಿರುವುದು ಪಕ್ಕಾ ಆಗಿದೆ.

ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ತೆಲುಗು ಸೇರಿದಂತೆ ತಮಿಳು, ಕನ್ನಡ, ಮಲೆಯಾಳಂ, ಹಿಂದಿ ಭಾಷೆಯಲ್ಲಿ ತಯಾರಾಗುತ್ತಿದೆ.ಈ ಬಗ್ಗೆ ಟ್ವೀಟ್ ಮಾಡಿರುವ ಕಮಲ್, ‘ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ನಟಿಸುತ್ತಿರುವುದು ಖುಷಿ ತಂದಿದೆ’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಬಿಗ್ ಬಿ ಅಮಿತಾಭ್ ಬಚ್ಚನ್, ‘ನಿಮ್ಮ ಜೊತೆಗೆ ಕೆಲಸ ಮಾಡುವುದೇ ಒಳ್ಳೆಯ ಅನುಭವ. ಪ್ರಾಜೆಕ್ಟ್ ಕೆ ತಂಡಕ್ಕೆ ಸ್ವಾಗತ’ ಎಂದು ಬರೆದುಕೊಂಡಿದ್ದಾರೆ.
‘ಪ್ರಾಜೆಕ್ಟ್ ಕೆ’ ಸಿನಿಮಾವನ್ನು ‘ಮಹಾನಟಿ’ ಚಿತ್ರದ ನಿರ್ದೇಶಕ ನಾಗ್ ಅಶ್ವಿನ್ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ನಾಯಕನಾಗಿ ಪ್ರಭಾಸ್, ಖಳನಾಯಕನಾಗಿ ಕಮಲ್ ಹಾಸನ್ ನಟಿಸುತ್ತಿದ್ದಾರೆ. ಇನ್ನುಳಿದಂತೆ ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಭಾರತೀಯ ಚಿತ್ರರಂಗದ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿ ನಟಿಸುತ್ತಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಈ ಅದ್ದೂರಿ ವೆಚ್ಚದ ಸಿನಿಮಾ ಮುಂದಿನ ವರ್ಷದ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಇದೆ.