ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಪತ್ರ ಬರೆದಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ)-೨೦೨೦ ವಿರುದ್ಧದ ನಿಲುವನ್ನು ಮರುಪರಿಶೀಲಿಸುವಂತೆ ಕೇಳಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಈ ನೀತಿಯನ್ನು ಸಿದ್ಧಪಡಿಸಿದ್ದು ರಾಜಕೀಯದ ಚೌಕಟ್ಟಿನಿಂದ ಹೊರ ಬಂದು ಇದನ್ನು ವಿಶ್ಲೇಷಿಸಬೇಕಾಗಿ ಒತ್ತಾಯಿಸಿದ್ದಾರೆ.
ಎನ್ಇಪಿ ಎನ್ನುವುದು ಕೇವಲ ಶಿಕ್ಷಣ ನೀತಿಯಲ್ಲ. ನಮ್ಮಲ್ಲಿನ ಭಾಷಾ ಹಾಗೂ ಸಂಸ್ಕೃತಿಯ ವೈವಿದ್ಯತೆಯನ್ನು ಉಳಿಸಿ-ಬೆಳೆಸಿಕೊಳ್ಳುವುದರ ಜೊತೆಗೆ ಭಾರತೀಯ ಶಿಕ್ಷಣ ಮಟ್ಟವನ್ನು ಜಾಗತಿಕ ಶಿಕ್ಷಣದ ಸರಿಸಮಕ್ಕೆ ಕೊಂಡೊಯ್ಯಲು ಸಹಕಾರಿಯಾಗಲಿದೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ಇನ್ನೂ ಎನ್ಇಪಿ-೨೦೨೦ ಜಾರಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವವರಲ್ಲಿ ತಮಿಳುನಾಡು ಪ್ರಮುಖವಾಗಿದ್ದು, ಮುಖ್ಯವಾಗಿ ತ್ರಿಭಾಷಾ ಸೂತ್ರವನ್ನು ಖಂಡಿಸುತ್ತಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ಧರ್ಮೇಂದ್ರ ಪ್ರಧಾನ್, ಯಾವುದೇ ರಾಜ್ಯ ಅಥವಾ ಸಮುದಾಯದ ಮೇಲೆ ಯಾವುದೇ ಭಾಷೆಯನ್ನು ಹೇರುವ ಉದ್ದೇಶವಿಲ್ಲ ಎಂಬುದರ ಮೂಲಕ ಭಾಷಾ ಸ್ವಾತಂತ್ರ್ಯವೇ ಈ ನೀತಿಯ ಮೂಲ ತತ್ವವೆಂದು ತಿಳಿಸಿದ್ದಾರೆ. ಜೊತೆಗೆ ತಮಿಳು ಭಾಷೆಯನ್ನು ಉಳಿಸಿ-ಬೆಳೆಸಲು ಕೇಂದ್ರ ಸರ್ಕಾರ ಕೈಗೊಂಡಿರುವ ಕಾರ್ಯಗಳ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೆ ಸರಿಸಿ ಎನ್ಇಪಿಯಿಂದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಆಗಬಹುದಾದ ಲಾಭ ಹಾಗೂ ಸಿಗಬಹುದಾದ ಹೇರಳ ಅವಕಾಶಗಳ ಬಗ್ಗೆ ಚಿಂತಿಸಬೇಕಾಗಿದೆ. ಆದ್ದರಿಂದ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಮತ್ತೊಮ್ಮೆ ತಮ್ಮ ನಿಲುವನ್ನು ಮರುಪರಿಶೀಲಿಸುವಂತೆ ಕರೆ ನೀಡಿ ಧರ್ಮೇಂದ್ರ ಪ್ರಧಾನ್ ಪತ್ರ ಬರೆದಿದ್ದಾರೆ.ಈ ಹಿಂದೆ ಎಂ.ಕೆ.ಸ್ಟಾಲಿನ್ ತಮಿಳುನಾಡಿಗೆ ಪ್ರತ್ಯೇಕ ಶಿಕ್ಷಣ ಚೌಕಟ್ಟಿನ ಬೇಡಿಕೆಯಿಟ್ಟಿದ್ದರು. ಹಾಗೆಯೇ, ಎನ್ಇಪಿ ನೀತಿಯನ್ನು ತೀವ್ರವಾಗಿ ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು. ಇದರ ಹಿನ್ನೆಲೆ ತಮಿಳುನಾಡು ಹಾಗೂ ಕೇಂದ್ರ ಸರ್ಕಾರದ ಮಧ್ಯ ತಿಕ್ಕಾಟ ಏರ್ಪಟ್ಟಿರುವ ನಡುವೆಯೇ ಶಿಕ್ಷಣ ಸಚಿವರಿಂದ ತಮಿಳುನಾಡು ಮುಖ್ಯಮಂತ್ರಿಗೆ ಪತ್ರ ರವಾನೆಯಾಗಿದೆ.
ಇದಕ್ಕೂ ಮುನ್ನ, ಎನ್ಇಪಿ ನೀತಿಯನ್ನು ಸ್ವೀಕರಿಸದ ಕಾರಣ ರಾಜ್ಯಕ್ಕೆ ಬಿಡುಗಡೆಯಾಗಬೇಕಿರುವ ಅನುದಾನವನ್ನು ಧರ್ಮೇಂದ್ರ ಪ್ರಧಾನ್ ತಡೆಹಿಡಿಯುವ ಮೂಲಕ ಬ್ಲಾಕ್ಮೇಲ್ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸ್ಟಾಲೀನ್ ಆರೋಪಿಸಿದ್ದರು.
ಇನ್ನೂ ವಾರಣಾಸಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿರುವ ಧರ್ಮೇಂದ್ರ ಪ್ರಧಾನ್, “ತಮಿಳುನಾಡು ಸಂವಿಧಾನವನ್ನು ಪಾಲಿಸಲೇಬೇಕಿದ್ದು, ತ್ರಿಭಾಷಾ ನೀತಿಯನ್ನು ಜಾರಿಗೆ ತರಬೇಕಿದೆ” ಎಂದು ಹೇಳಿರುವ ವೀಡಿಯೋವನ್ನು ಸ್ಟಾಲಿನ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊ೦ಡಿದ್ದಾರೆ. ಹಾಗೆಯೇ, ಇದಕ್ಕೆ ಪ್ರತಿಕ್ರಯಿಸಿದ್ದು, “ಭಾರತೀಯ ಸಂವಿಧಾನದಲ್ಲಿ ತ್ರಿಭಾಷ ನೀತಿಯನ್ನು ಕಡ್ಡಾಯಗೊಳಿಸಿರುವ ಯಾವುದಾದರೂ ಭಾಗವನ್ನು ಶಿಕ್ಷಣ ಸಚಿವರು ಉಲ್ಲೇಖಿಸಬಹುದೇ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಶಿಕ್ಷಣವು ಸಂವಿಧಾನದಲ್ಲಿ ಸಮಕಾಲಿನ ಪಟ್ಟಿಯಲ್ಲಿದ್ದು, ಕೇಂದ್ರ ಸರ್ಕಾರ ಇದರ ಮೇಲೆ ಏಕಸ್ವಾಮ್ಯತೆ ಸಾಧಿಸುವಂತಿಲ್ಲ. ತಮಿಳುನಾಡು ಇಂತಹ ಬ್ಲಾಕ್ಮೇಲ್ಗಳನ್ನು ಸಹಿಸುವುದಿಲ್ಲ” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.