ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಅಭಿಮಾನಿಗಳು ಹಾಗೂ ಚಿತ್ರರಂಗ ಕಂಬನಿ ಮಿಡಿಯುತ್ತಿದೆ. ಈಗಾಗಲೇ ಅವರ ಪಾರ್ಥೀವ ಶರೀರ ರಾಕೇಶ್ ನಿವಾಸ ತಲುಪಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅವರ ಸ್ನೇಹಿತರು ಆತನ ಗುಣಗಾನ ಮಾಡುತ್ತಲೇ ಕಣ್ಣೀರು ಹಾಕ್ತಾ ಇದ್ದಾರೆ. ಇದರ ಮಧ್ಯೆ ಇದ್ದ ಒಬ್ಬ ಮಗನನ್ನ ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.
ಸದಾ ನಕ್ಕು ನಗಿಸುತ್ತಲೇ ಇದ್ದ ರಾಕೇಶ್ ಇಂದು ಎಲ್ಲರ ಕಣ್ಣಲ್ಲಿ ನೀರುರಿಸಿ ಇಹಲೋಕ ತ್ಯಜಿಸಿದ್ದಾರೆ. ಬಾರದ ಲೋಕಕ್ಕೆ ಪಯಣ ಬೆಳೆಸಿರೋ ರಾಕೇಶ್ ಇನ್ನು ನೆನಪು ಮಾತ್ರ. ಆತ ಇದ್ದ ದಿನಗಳು, ಆತನ ಗುಣ, ಆತನ ಮಾತು ಎಲ್ಲವನ್ನೂ ನೆನೆದು ರಾಕೇಶ್ ಸ್ನೇಹಿತರು ಕಣ್ಣೀರಾಕುತ್ತಿದ್ದಾರೆ. ಅದರಲ್ಲೂ ಕಾಮಿಡಿ ಕಿಲಾಡಿ ಶೋನಲ್ಲಿದ್ದ ಸ್ನೇಹಿತರಂತೂ ಆತನ ಜೊತೆಗಿದ್ದ ಒಡನಾಟವನ್ನ ಹೇಳುತ್ತಾ ಅಳುತ್ತಿದ್ದಾರೆ.

ಕಾಮಿಡಿ ಕಿಲಾಡಿ ನಯನ ಕೂಡ ಅವರ ಜೊತೆಗಿನ ಬಾಂದವ್ಯ ಹೇಳಿದ್ದಾರೆ. ಇಂದು ಒಂದೊಳ್ಳೆ ಸ್ನೇಹಿತನನ್ನ ಕಳೆದುಕೊಂಡಿದ್ದೇನೆ. ಅಪ್ಪನ ತರ ಇದ್ದ, ಮಗನ ತರ ಇದ್ದ. ನಾವು ಯಾವತ್ತೂ ಯಾವ ಬಾಯಲ್ಲೂ ರಾಖಿ ಇಂತವನು ಅಂತವನು ಅಂತ ಕೇಳಲೇ ಇಲ್ಲ. ಅವನಿಗೆ ಒಂದೇ ಆಸೆ ಇದ್ದಿದ್ದು. ಅವನ ತಂಗಿ ಮದ್ವೆ. ಜೋರಾಗಿ ಮದುವೆ ಮಾಡಬೇಕು. ನಾನು ಮದುವೆ ಆಗದೇ ಇದ್ರು ನಡೆಯುತ್ತೆ ಅವಳ ಮದುವೆ ಮಾಡಬೇಕು. ದುಡ್ಡ ಅಂತ ಸಾಯ್ಬೇಡಿ. ಎಷ್ಟು ದಿನ ಇರ್ತೀವೋ ಅಷ್ಟು ದಿನ ಖುಷಿಯಾಗಿ ಇರಿ ಅಂತಿದ್ದ. ಇವತ್ತು ದೇವರ ಮೇಲೆ ಇದ್ದ ಒಂದಿಷ್ಟು ನಂಬಿಕೆನೂ ಹೋಯ್ತು ಅಂತ ಭಾವುಕರಾದ್ರು.
ಕಾಮಿಡಿ ಕಿಲಾಡಿ ಸ್ಪರ್ಧಿಯಾಗಿದ್ದ ವಾಣಿ ಆತ ಜೊತೆಗಿದ್ದ ದಿನ ನೆನೆದು ಕಣ್ಣೀರಾಕಿದ್ದಾರೆ. ವಾಣಿಗೆ ರಾಕೇಶ್ ಸ್ವೀಟು ಅಂತಲೇ ಕರೀತಿದ್ದರಂತೆ. ಇತ್ತೀಚೆಗೆ ಅವರಿಗಾಗಿದ್ದ ಆಕ್ಸಿಡೆಂಟ್ ಕುರಿತು ಮಾತನಾಡಿದ್ದು, ಆಸ್ಪತ್ರೆಯಲ್ಲಿ ಮಲಗಿದ್ದರೂ ಕಾಮಿಡಿ ಮಾಡಿದ್ದ. ನಾವೇ ಅಳುತ್ತಿದ್ದರೂ ಅಳಬೇಡ ಇಂತಹದನ್ನ ಎಕ್ಸಪೀರಿಯನ್ಸ್ ಮಾಡಬೇಕು ಎಂತಿದ್ದ. ಯಾರೇ ಕಲಾವಿದರು ಚೆನ್ನಾಗಿ ಆಕ್ಟ್ ಮಾಡಿದರೆ ಪ್ರೋತ್ಸಾಹ ಕೊಡ್ತಾ ಇದ್ದ. ಅವನ ಕಷ್ಟವನ್ನ ಎಂದೂ ಹೇಳ್ತಾ ಇರಲಿಲ್ಲ. ಅವನು ಅತ್ತಿದ್ದೂ ಎಂದೂ ನೋಡಿಲ್ಲ. ನಗು ನಗು ಅಷ್ಟೆ. ಬನ್ನಿ ನಮ್ಮೂರಿಗೆ ಗಮ್ಮತ್ ಮಾಡುವ ಎಂದಿದ್ದ ಈ ಪರಿಸ್ಥಿತಿಯಲ್ಲಿ ಬರ್ತೀವಿ ಎಂದುಕೊಂಡಿರಲಿಲ್ಲ ಅಂತ ಅಳುತ್ತಾ ಮಾತನಾಡಿದ್ದಾರೆ.

ಇನ್ನು ಶಿವರಾಜ್ ಕೆ ಆರ್ ಪೇಟೆ ಕೂಡ ರಾಕೇಶ್ ಗೆ ಒಳ್ಳೆ ಸ್ನೇಹಿತ. ಅವರೂ ಕೂಡ ಸ್ನೇಹಿತನ ಸ್ನೇಹದ ಬಗ್ಗೆ ಮಾತನಾಡಿದ್ದಾರೆ. ಮಂಗಳೂರಿಗೆ ಎಷ್ಟೇ ಕಾರ್ಯಕ್ರಮ ಆದರೂ ನಾನು ಬಂದಿರಲಿಲ್ಲ. ಆದರೆ ಇಂತದೊಂದು ಘಟನೆಗೆ ಬರಬೇಕಾಯ್ತು ಅಂತ ಬೇಸರ ಇದೆ. ಎಷ್ಟೇ ಶೋ ಸೀಸನ್ ಆದರೂ ನಾವು ಸ್ನೇಹಿತರೇ. ಈ ಕುಟುಂಬದ ಒಂದು ಕೂಸು ಇಲ್ಲದ ಹಾಗೆ ಆಗಿದೆ. ಅವನೇ ಮನೆಗೆ ಆಧಾರ ಸ್ಥಂಬವಾಗಿದ್ದ. ಆದರೆ ಈಗ ಅವನೇ ಇಲ್ಲ. ರಾಖಿ ಸ್ಥಾನದಲ್ಲಿ ನಾವೆಲ್ಲರೂ ಅವನ ಮನೆಗೆ ಇರ್ತೀವಿ ಅಂತ ಹೇಳಿದರು.



